Infrastructure
ವಿದ್ಯುತ್ (ತಿದ್ದುಪಡಿ) ಮಸೂದೆ, 2025ರ ಬಗ್ಗೆ ಪುನರಾವರ್ತಿತ ಪ್ರಶ್ನೆಗಳು
Posted On:
30 OCT 2025 19:12 PM
ವಿದ್ಯುತ್ (ತಿದ್ದುಪಡಿ) ಮಸೂದೆ, 2025 ಒಂದು ಪ್ರಗತಿಪರ ಸುಧಾರಣೆಯಾಗಿದ್ದು, ಆರ್ಥಿಕ ಶಿಸ್ತು, ಆರೋಗ್ಯಕರ ಸ್ಪರ್ಧೆ ಮತ್ತು ಹೆಚ್ಚಿದ ದಕ್ಷತೆಯ ಮೂಲಕ ವಿದ್ಯುತ್ ವಿತರಣಾ ವಲಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇದು ವಿಕಸಿತ ಭಾರತ@ 2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ಭವಿಷ್ಯಕ್ಕೆ ಸಿದ್ಧವಾದ ವಿದ್ಯುತ್ ವಲಯಕ್ಕೆ ಬುನಾದಿ ಹಾಕುತ್ತದೆ. ಅದೇ ಸಮಯದಲ್ಲಿ, ಇದು ರೈತರು ಮತ್ತು ಇತರ ಅರ್ಹ ಗ್ರಾಹಕರಿಗೆ ಸಹಾಯಧನ ನೀಡುವ ಸುಂಕಗಳನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ. ರಾಜ್ಯ ಸರ್ಕಾರಗಳು ಕಾಯಿದೆಯ ಸೆಕ್ಷನ್ 65ರ ಅಡಿಯಲ್ಲಿ ಈ ಸಹಾಯಧನಗಳನ್ನು ಮುಂದುವರೆಸಬಹುದು.
ಈ ಮಸೂದೆಯು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳ ಮೇಲ್ವಿಚಾರಣೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸರ್ಕಾರಿ ಮತ್ತು ಖಾಸಗಿ ವಿತರಣಾ ಕಂಪನಿಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುತ್ತದೆ. ಇದರರ್ಥ ಗ್ರಾಹಕರಿಗೆ ಉತ್ತಮ ಸೇವೆ, ಹೆಚ್ಚಿನ ದಕ್ಷತೆ ಮತ್ತು ನಿಜವಾದ ಆಯ್ಕೆ ಲಭ್ಯವಾಗುತ್ತದೆ. ಇದು ಸರ್ಕಾರಿ ಮತ್ತು ಖಾಸಗಿ ಯುಟಿಲಿಟಿಗಳು ಕಾರ್ಯಕ್ಷಮತೆಯ ಮೇಲೆ ಸ್ಪರ್ಧಿಸಲು ಸಹಾಯ ಮಾಡುತ್ತದೆ, ಏಕಸ್ವಾಮ್ಯದ ಪೂರೈಕೆಯನ್ನು ದಕ್ಷ, ಉತ್ತರದಾಯಿ ಮತ್ತು ಗ್ರಾಹಕ-ಸ್ನೇಹಿ ಸೇವೆಗಳನ್ನಾಗಿ ಪರಿವರ್ತಿಸುತ್ತದೆ.
ಸ್ಪರ್ಧೆಯು ರೈತರಿಗೆ ಅಥವಾ ಸಾಮಾನ್ಯ ಗ್ರಾಹಕರಿಗೆ ವಿದ್ಯುತ್ ವೆಚ್ಚವನ್ನು ಹೆಚ್ಚಿಸುತ್ತದೆಯೇ?
ವಿದ್ಯುತ್ ಪೂರೈಕೆಯಲ್ಲಿ ದಕ್ಷತೆ ಮತ್ತು ಉತ್ತರದಾಯಿತ್ವವನ್ನು ಸುಧಾರಿಸುವುದರಿಂದ, ಸ್ಪರ್ಧೆಯು ಒಟ್ಟಾರೆ ವಿದ್ಯುತ್ ಪೂರೈಕೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
ವಿತರಣಾ ಮಾರ್ಗಗಳು ಮತ್ತು ಉಪ-ಕೇಂದ್ರಗಳ ಅನಗತ್ಯ ನಕಲು ಆಗುವುದನ್ನು ಹಂಚಿಕೆಯ ನೆಟ್‌ವರ್ಕ್ ಬಳಕೆಯು ತಪ್ಪಿಸುತ್ತದೆ. ಏಕಸ್ವಾಮ್ಯದ ವಿದ್ಯುತ್ ಪೂರೈಕೆ ಮಾದರಿಯಲ್ಲಿ, ತಾಂತ್ರಿಕ ಮತ್ತು ವಾಣಿಜ್ಯ ನಷ್ಟಗಳು ಹೆಚ್ಚಿರುತ್ತವೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಒಂದೇ ಶೀರ್ಷಿಕೆಯಡಿಯಲ್ಲಿ ವಿಲೀನಗೊಳಿಸಲಾಗುತ್ತದೆ, ಇದು ದಕ್ಷತೆ ಇಲ್ಲದಿರುವಿಕೆ ಮತ್ತು ವಿದ್ಯುತ್ ಕಳ್ಳತನವನ್ನು ಮರೆಮಾಚುತ್ತದೆ. ರಾಜ್ಯ ಸರ್ಕಾರಗಳು ರೈತರು ಅಥವಾ ಗೃಹಬಳಕೆದಾರರಂತಹ ವಿಭಾಗಗಳಿಗೆ ಸಹಾಯಧನ ನೀಡುವ ವಿದ್ಯುತ್ ಅನ್ನು ಒದಗಿಸಿದಾಗ, ಈ ಸಬ್ಸಿಡಿ ಹೊರೆಯಲ್ಲಿ ಉದ್ದೇಶಿತ ಸಾಮಾಜಿಕ ಬೆಂಬಲ ಮಾತ್ರವಲ್ಲದೆ, ಏಕಸ್ವಾಮ್ಯದ ಕಾರ್ಯಾಚರಣೆಯ ವೆಚ್ಚವೂ ಸೇರಿರುತ್ತದೆ.
ಹಂಚಿಕೆಯ ನೆಟ್‌ವರ್ಕ್ ಬಳಕೆಯನ್ನು ಸಕ್ರಿಯಗೊಳಿಸುವ ಮತ್ತು ಸ್ಪರ್ಧೆಗೆ ಅನುಕೂಲ ಕಲ್ಪಿಸುವ ಮೂಲಕ, ಈ ಸುಧಾರಣೆಗಳು ನಷ್ಟವನ್ನು ಕಡಿಮೆ ಮಾಡುತ್ತವೆ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಪರಿಣಾಮಕಾರಿ ಸಬ್ಸಿಡಿ ಹೊರೆಯನ್ನು ತಗ್ಗಿಸುತ್ತವೆ, ಆದರೆ ಗ್ರಾಹಕರು ಪಾವತಿಸುವ ಸಹಾಯಧನದ ಸುಂಕಗಳನ್ನು ಬದಲಾಯಿಸುವುದಿಲ್ಲ.
ವೆಚ್ಚ-ಪ್ರತಿಫಲಿತ ಸುಂಕಗಳು ರೈತರು ಮತ್ತು ಬಡವರಿಗೆ ವಿದ್ಯುತ್ ಅನ್ನು ಕೈಗೆಟುಕುವಂತೆ ಮಾಡುತ್ತವೆಯೇ?
ವೆಚ್ಚ-ಪ್ರತಿಫಲಿತ ಸುಂಕಗಳು ವಿತರಣಾ ಕಂಪನಿಗಳ ಸಾಲದ ಚಕ್ರವನ್ನು ಮುರಿಯಲು ಸಹಾಯ ಮಾಡುತ್ತವೆ. ಇದರಿಂದಾಗಿ ವಿಶ್ವಾಸಾರ್ಹ ಸೇವೆ, ಸಮಯೋಚಿತ ನಿರ್ವಹಣೆ ಮತ್ತು ವಿತರಣಾ ನೆಟ್‌ವರ್ಕ್ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಸಾಧ್ಯವಾಗುತ್ತದೆ. ತಯಾರಿಕಾ ಕೈಗಾರಿಕೆಗಳು, ರೈಲ್ವೆಗಳು ಮತ್ತು ಮೆಟ್ರೋಗಳ ಮೇಲಿನ ಕ್ರಾಸ್-ಸಬ್ಸಿಡಿಯನ್ನು ತೆಗೆದುಹಾಕುವುದರಿಂದ, ಅವುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಮತ್ತು ಉದ್ಯೋಗ ಸೃಷ್ಟಿಗೆ ಸಹಾಯವಾಗುತ್ತದೆ. ಇಲ್ಲಿ, ಗುಪ್ತ ಕ್ರಾಸ್-ಸಬ್ಸಿಡಿಗಳ ಬದಲಿಗೆ (ಕಾಯಿದೆಯ ಸೆಕ್ಷನ್ 65ರ ಅಡಿಯಲ್ಲಿ) ಪಾರದರ್ಶಕ ಮತ್ತು ಬಜೆಟ್‌ನಲ್ಲಿರುವ ಸಬ್ಸಿಡಿಗಳನ್ನು ಜಾರಿಗೆ ತರಲಾಗುತ್ತದೆ, ಇದು ರೈತರು ಮತ್ತು ಬಡವರಂತಹ ದುರ್ಬಲ ಗ್ರಾಹಕರನ್ನು ರಕ್ಷಿಸುತ್ತದೆ.
ಸ್ಪರ್ಧೆಯು ನೆಟ್ವರ್ಕ್ (ವೀಲಿಂಗ್) ಶುಲ್ಕಗಳ ಕಡಿಮೆ ಪಾವತಿಗೆ ಕಾರಣವಾಗುತ್ತದೆಯೇ?
ಪ್ರಸ್ತಾವಿತ ಮಸೂದೆಯ ಅಡಿಯಲ್ಲಿ, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ವೆಚ್ಚ-ಪ್ರತಿಫಲಿತ ವೀಲಿಂಗ್ ಶುಲ್ಕಗಳನ್ನು ನಿಗದಿಪಡಿಸುತ್ತವೆ. ಸರ್ಕಾರಿ ಅಥವಾ ಖಾಸಗಿ ಎಂಬ ಭೇದವಿಲ್ಲದೆ, ಎಲ್ಲಾ ವಿತರಣಾ ನೆಟ್‌ವರ್ಕ್ ಬಳಕೆದಾರರು ಈ ನಿಯಂತ್ರಿತ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಸಂಗ್ರಹಿಸಿದ ಈ ಶುಲ್ಕಗಳನ್ನು ನಂತರ ನೆಟ್‌ವರ್ಕ್ ಮಾಲೀಕತ್ವದ ಆಧಾರದ ಮೇಲೆ ಪರವಾನಗಿದಾರರ ನಡುವೆ ನ್ಯಾಯಯುತವಾಗಿ ಹಂಚಲಾಗುತ್ತದೆ. ಇದು ಯುಟಿಲಿಟಿಗಳಿಗೆ ವೇತನ, ನಿರ್ವಹಣೆ ಮತ್ತು ನೆಟ್‌ವರ್ಕ್ ವಿಸ್ತರಣೆಗಾಗಿ ಸಾಕಷ್ಟು ಹಣವನ್ನು ಖಚಿತಪಡಿಸುತ್ತದೆ.
ದೇಶದಲ್ಲಿ ಈಗಾಗಲೇ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಯ ಯಶಸ್ವಿ ಮಾದರಿ ಇದೆ, ಇದು ಹಂಚಿಕೆಯ ಮೂಲಸೌಕರ್ಯದ ಮೇಲೆ ಕಾರ್ಯನಿರ್ವಹಿಸುತ್ತದೆ. ಪ್ರಸರಣ ಸೇವಾ ಪೂರೈಕೆದಾರರು, ಉದಾಹರಣೆಗೆ ಪವರ್‌ಗ್ರಿಡ್ ಮತ್ತು ಖಾಸಗಿ ಕಂಪನಿಗಳು, ಎರಡೂ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ ಮೇಲ್ವಿಚಾರಣೆಯಲ್ಲಿ ಐಎಸ್‌ಟಿಎಸ್ ಆಸ್ತಿಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸ್ಪರ್ಧಿಸುತ್ತವೆ. ಬಳಕೆದಾರರು ಮಾಸಿಕ ಪಾವತಿಗಳನ್ನು ಮಾಡುತ್ತಾರೆ ಮತ್ತು ನಂತರ ಅದನ್ನು ಟಿಎಸ್‌ಪಿಗಳಿಗೆ ನ್ಯಾಯಯುತವಾಗಿ ಪುನರ್ವಿತರಣೆ ಮಾಡಲಾಗುತ್ತದೆ. ಈ ಮಾದರಿಯು ಐಎಸ್‌ಟಿಎಸ್ ನಿರ್ಮಿಸುವ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡಿದೆ, ಅದೇ ಸಮಯದಲ್ಲಿ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡಿದೆ.
ಇದು ಸರ್ಕಾರಿ ಡಿಸ್ಕಾಮ್ಗಳನ್ನು ಕೊನೆಗೊಳಿಸುತ್ತದೆಯೇ ಅಥವಾ ಖಾಸಗಿ ಕಂಪನಿಗಳಿಗೆ ಚೆರ್ರಿ-ಪಿಕಿಂಗ್ಗೆ ಅವಕಾಶ ನೀಡುತ್ತದೆಯೇ?
ಸರ್ಕಾರಿ ವಿತರಣಾ ಕಂಪನಿಗಳು ನಿಯಂತ್ರಿತ, ಸಮಾನ ಅವಕಾಶದ ವಾತಾವರಣದಲ್ಲಿ ಖಾಸಗಿ ಪರವಾನಗಿದಾರರೊಂದಿಗೆ ಕಾರ್ಯಾಚರಣೆಯನ್ನು ಮುಂದುವರಿಸುತ್ತವೆ. ಸ್ಪರ್ಧೆಯು ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ದಕ್ಷತೆ ಮತ್ತು ಸೇವೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ ಅನುಭವವು, ನಿಯಂತ್ರಿತ ಸ್ಪರ್ಧೆಯು ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ನೆಟ್‌ವರ್ಕ್‌ನ ಕ್ಷಿಪ್ರ ವಿಸ್ತರಣೆಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಉಲ್ಲೇಖಿಸುತ್ತದೆ.
ಪ್ರತಿ ವಿತರಣಾ ಪರವಾನಗಿಯು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ನಿಗದಿಪಡಿಸಿದ ವಿತರಣಾ ಪ್ರದೇಶದೊಳಗಿನ ಎಲ್ಲಾ ಗ್ರಾಹಕರನ್ನು ಒಳಗೊಂಡಿರುತ್ತದೆ – ಇದು ಸಂಪೂರ್ಣ ಮಹಾನಗರ ಪಾಲಿಕೆ, ಅಥವಾ ಪಕ್ಕದ ಮೂರು ಜಿಲ್ಲೆಗಳು, ಅಥವಾ ಸೂಕ್ತ ಸರ್ಕಾರದಿಂದ ನಿರ್ದಿಷ್ಟವಾಗಿ ಸೂಚಿಸಲ್ಪಟ್ಟರೆ ಅದಕ್ಕಿಂತ ಸಣ್ಣ ಪ್ರದೇಶವೂ ಆಗಿರಬಹುದು. ಈ ಎಲ್ಲಾ ಪ್ರದೇಶಗಳನ್ನು ಎಸ್‌ಇಆರ್‌ಸಿಗಳು ನಿಯಂತ್ರಿಸುತ್ತವೆ.
ನಿಯಂತ್ರಕರು ಎಲ್ಲಾ ವಿತರಣಾ ಪರವಾನಗಿದಾರರಿಗೆ ವೆಚ್ಚ-ಪ್ರತಿಫಲಿತ ಸುಂಕಗಳನ್ನು ನಿಗದಿಪಡಿಸುತ್ತಾರೆ. ಸಾರ್ವತ್ರಿಕ ಸೇವಾ ಕಟ್ಟುಪಾಡು ಎಲ್ಲಾ ಪರವಾನಗಿದಾರರಿಗೆ ಅನ್ವಯಿಸುತ್ತದೆ. ಇದರರ್ಥ ಪ್ರತಿ ಪೂರೈಕೆದಾರರು ತಮ್ಮ ಪ್ರದೇಶದಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲಾ ಗ್ರಾಹಕರಿಗೆ ಸೇವೆ ಸಲ್ಲಿಸಬೇಕು. ಹೆಚ್ಚುವರಿಯಾಗಿ, ಸಹಾಯಧನ ಪಡೆಯುವ ಗ್ರಾಹಕರಿಗೆ (ಉದಾಹರಣೆಗೆ, ರೈತರು, ಬಡ ಕುಟುಂಬಗಳು) ಸೇವೆ ಸಲ್ಲಿಸುವ ವಿತರಣಾ ಪರವಾನಗಿದಾರರು ರಾಜ್ಯ ಸಬ್ಸಿಡಿಗಳನ್ನು ಪಡೆಯುತ್ತಾರೆ. ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಂದ ನಿರ್ದಿಷ್ಟವಾಗಿ ವಿನಾಯಿತಿ ಪಡೆದ ದೊಡ್ಡ ಗ್ರಾಹಕರನ್ನು ಹೊರತುಪಡಿಸಿ, ರೈತರು ಮತ್ತು ಗೃಹಬಳಕೆದಾರರು ಸೇರಿದಂತೆ ಎಲ್ಲಾ ಗ್ರಾಹಕರಿಗೂ ಯುಎಸ್‌ಒ ಅನ್ವಯವಾಗುತ್ತದೆ.
ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ಕಾರ್ಯಕ್ಷಮತೆಯ ಮಾನದಂಡಗಳನ್ನು ಜಾರಿಗೊಳಿಸುತ್ತವೆ. ಇವುಗಳಲ್ಲಿ ವಿಶ್ವಾಸಾರ್ಹತೆ, ವೋಲ್ಟೇಜ್, ಮತ್ತು ವಿದ್ಯುತ್ ಕಡಿತದ ಆವರ್ತನ ಗಳಂತಹ ವಿಷಯಗಳು ಸೇರಿವೆ. ಈ ಮಾನದಂಡಗಳನ್ನು ಪಾಲಿಸದಿದ್ದರೆ, ಎಸ್‌ಇಆರ್‌ಸಿಗಳು ದಂಡ ವಿಧಿಸಬಹುದು ಅಥವಾ ಪರವಾನಗಿಗಳನ್ನು ರದ್ದುಗೊಳಿಸಬಹುದು.
ಈ ಮಸೂದೆಯು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ, ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ, ಕಾಯಿದೆಯ ಅಡಿಯಲ್ಲಿ ಪ್ರಸ್ತುತ ಮುಕ್ತ ಪ್ರವೇಶಕ್ಕೆ ಅರ್ಹರಾಗಿರುವ ದೊಡ್ಡ ಗ್ರಾಹಕರಿಗೆ (1 MW ಗಿಂತ ಹೆಚ್ಚು) ಸಾರ್ವತ್ರಿಕ ಸೇವಾ ಕಟ್ಟುಪಾಡನ್ನು ತೆಗೆದುಹಾಕಲು ಅನುಮತಿ ನೀಡುತ್ತದೆ. ಈ ದೊಡ್ಡ ಗ್ರಾಹಕರು ವಿತರಣಾ ಕಂಪನಿಗಳ ಬೆಂಬಲವಿಲ್ಲದೆ, ಮುಕ್ತ ಪ್ರವೇಶದ ಮೂಲಕ ತಮ್ಮದೇ ಆದ ವಿದ್ಯುತ್ ಅನ್ನು ಪಡೆಯಬಹುದು. ಒಂದು ವೇಳೆ ಅಗತ್ಯವಿದ್ದರೆ, ವಿತರಣಾ ಪರವಾನಗಿದಾರರು ಕೊನೆಯ ಆಶ್ರಯದ ಪೂರೈಕೆದಾರರಾಗಿ ನಷ್ಟವನ್ನು ಅನುಭವಿಸದೆಯೇ, ಪೂರೈಕೆಯ ವೆಚ್ಚಕ್ಕಿಂತ ಹೆಚ್ಚುವರಿ ದರದಲ್ಲಿ ವಿದ್ಯುತ್ ಅನ್ನು ಒದಗಿಸುತ್ತಾರೆ.
ಈ ರೀತಿ, ಈ ಚೌಕಟ್ಟು ನ್ಯಾಯಯುತ ಸ್ಪರ್ಧೆ, ಸಂಪೂರ್ಣ ವ್ಯಾಪ್ತಿ, ಮತ್ತು ಎಲ್ಲಾ ಪರವಾನಗಿದಾರರಿಗೆ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ.
ಈ ಮಸೂದೆಯು ಅಧಿಕಾರವನ್ನು ಕೇಂದ್ರೀಕರಿಸುತ್ತದೆಯೇ ಅಥವಾ ರಾಜ್ಯದ ಸ್ವಾಯತ್ತತೆಯನ್ನು ನಾಶಪಡಿಸುತ್ತದೆಯೇ?
ವಿದ್ಯುತ್ ವಿಷಯವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ, ಕೇಂದ್ರ ಮತ್ತು ರಾಜ್ಯಗಳು ಎರಡೂ ಕಾನೂನುಗಳನ್ನು ರಚಿಸಲು ಅಧಿಕಾರ ಹೊಂದಿರುತ್ತವೆ. ಈ ಮಸೂದೆಯು ಈ ಎರಡೂ ಸರ್ಕಾರದ ಹಂತಗಳ ನಡುವೆ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಸುಧಾರಣೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ.
ಪ್ರಸ್ತಾವಿತ ವಿದ್ಯುತ್ ಪರಿಷತ್ ನೀತಿಗಳ ಕುರಿತು ಸಮ್ಮತಿ ನಿರ್ಮಿಸಲು ಒಂದು ಸಮಾಲೋಚನಾ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಅದೇ ಸಮಯದಲ್ಲಿ, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು ಎಂದಿನಂತೆ ಸುಂಕಗಳನ್ನು ನಿರ್ಧರಿಸುವುದು, ಪರವಾನಗಿಗಳನ್ನು ನೀಡುವುದು ಮತ್ತು ರಾಜ್ಯದೊಳಗಿನ ಚಟುವಟಿಕೆಗಳನ್ನು ನಿಯಂತ್ರಿಸುವುದನ್ನು ಮುಂದುವರಿಸುತ್ತವೆ.
ಈ ಮಸೂದೆಯು ಈ ರೀತಿಯಾಗಿ ಒಕ್ಕೂಟದ ಸಮತೋಲನವನ್ನು ಕಾಪಾಡುತ್ತದೆ, ಸಹಕಾರ ಆಡಳಿತವನ್ನು ಉತ್ತೇಜಿಸುತ್ತದೆ, ಮತ್ತು ವಿದ್ಯುತ್ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಒಂದು ಬಲವಾದ ಚೌಕಟ್ಟನ್ನು ಬಲಪಡಿಸುತ್ತದೆ.
*****
(Factsheet ID: 150444)
Visitor Counter : 3
Provide suggestions / comments