• Sitemap
  • Advance Search
Technology

ಭಾರತದ ಪರಮಾಣು ಪಯಣದಲ್ಲಿ ಒಂದು ಹೊಸ ಅಧ್ಯಾಯ

प्रविष्टि तिथि: 07 APR 2026 17:41 PM

ಸ್ವದೇಶಿ ನಿರ್ಮಿತ 500 ಮೆಗಾವ್ಯಾಟ್e ವೇಗದ ಬ್ರೀಡರ್ ರಿಯಾಕ್ಟರ್ ಮೊದಲ ಬಾರಿಗೆ ಕ್ರಿಟಿಕಾಲಿಟಿ ಸ್ಥಿತಿಯನ್ನು ತಲುಪಿದೆ

ಪೀಠಿಕೆ

ಭಾರತವು ತನ್ನ ಪರಮಾಣು ಇಂಧನ ಯೋಜನೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದೆ. ತಮಿಳುನಾಡಿನ ಕಲ್ಪಾಕ್ಕಂನಲ್ಲಿ ಸಂಪೂರ್ಣ ಸ್ವದೇಶಿ ವಿನ್ಯಾಸ ಮತ್ತು ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್, 2026ರ ಏಪ್ರಿಲ್ 6ರಂದು ಯಶಸ್ವಿಯಾಗಿ ತನ್ನ ಮೊದಲ 'ಕ್ರಿಟಿಕಾಲಿಟಿ' ಸ್ಥಿತಿಯನ್ನು ತಲುಪಿದೆ. ಇದು ಸುಸ್ಥಿರ ಪರಮಾಣು ಸರಣಿ ಪ್ರಕ್ರಿಯೆಯ ಆರಂಭವನ್ನು ಸೂಚಿಸುತ್ತದೆ. ಈ ಪಿಎಫ್‌ಬಿಆರ್‌ ಯೋಜನೆಯು 500 ಮೆಗಾವ್ಯಾಟ್e (ಮೆಗಾವ್ಯಾಟ್ ಎಲೆಕ್ಟ್ರಿಕಲ್) ಸಾಮರ್ಥ್ಯದ ರಿಯಾಕ್ಟರ್ ಆಗಿದ್ದು, ಇದನ್ನು ಕಲ್ಪಾಕ್ಕಂ ಪರಮಾಣು ಸಂಕೀರ್ಣದಲ್ಲಿ ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ನಿಯಮಿತ ನಿರ್ಮಿಸಿದೆ.

ಈ ಸಾಧನೆಯೊಂದಿಗೆ, ಭಾರತವು ತನ್ನ ಮೂರು ಹಂತದ ಪರಮಾಣು ಶಕ್ತಿ ಯೋಜನೆಯ ಎರಡನೇ ಹಂತಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಇದು ಭಾರತದ ಪರಮಾಣು ಯೋಜನೆಯ ಪಿತಾಮಹ ಡಾ. ಹೋಮಿ ಜಹಾಂಗೀರ್ ಭಾಭಾ ಅವರು ಕಂಡಿದ್ದ ದಿವ್ಯ ದರ್ಶನವಾಗಿದೆ. ಈ ಮೈಲಿಗಲ್ಲು ಜಾಗತಿಕವಾಗಿಯೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ರಿಯಾಕ್ಟರ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ, ರಷ್ಯಾದ ನಂತರ ವಾಣಿಜ್ಯಿಕವಾಗಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ನಿರ್ವಹಿಸುವ ವಿಶ್ವದ ಕೇವಲ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.

ಈ ಸಾಧನೆಯು ಪರಮಾಣು ಇಂಧನ ಇಲಾಖೆಯ ನೇತೃತ್ವದಲ್ಲಿ ದಶಕಗಳ ಕಾಲ ನಡೆದ ವೈಜ್ಞಾನಿಕ ಪರಿಶ್ರಮಕ್ಕೆ ಸಂದ ಜಯವಾಗಿದೆ. ಇದು ಭಾರತದ ಸ್ವಚ್ಛ ಇಂಧನ ಪಯಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದು, ವಿಶ್ವಾಸಾರ್ಹ ಮತ್ತು ಕಡಿಮೆ ಇಂಗಾಲದ ವಿದ್ಯುತ್ ಉತ್ಪಾದನೆಗೆ ದೇಶದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಅಷ್ಟೇ ಅಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದಂತೆ 2070ರ ವೇಳೆಗೆ 'ನೆಟ್ ಝೀರೋ' ಹೊರಸೂಸುವಿಕೆಯ ಗುರಿಯನ್ನು ತಲುಪಲು ಇದು ಭಾರತಕ್ಕೆ ಮತ್ತಷ್ಟು ಬಲ ನೀಡಲಿದೆ.

ಕ್ರಿಟಿಕಾಲಿಟಿ ಎಂದರೇನು?

ಕ್ರಿಟಿಕಾಲಿಟಿ ಎನ್ನುವುದು ಸುಸ್ಥಿರ ಮತ್ತು ನಿಯಂತ್ರಿತ ಪರಮಾಣು ವಿದಳನ ಸರಣಿ ಪ್ರಕ್ರಿಯೆಯು ಪ್ರಾರಂಭವಾಗುವ ಹಂತವಾಗಿದೆ. ಈ ಹಂತದಲ್ಲಿ, ವಿದಳನದಿಂದ ಉತ್ಪತ್ತಿಯಾಗುವ ನ್ಯೂಟ್ರಾನ್‌ಗಳ ಸಂಖ್ಯೆಯು ಹೀರಲ್ಪಡುವ ಮತ್ತು ಸೋರಿಕೆಯಾಗುವ ನ್ಯೂಟ್ರಾನ್‌ಗಳ ಸಂಖ್ಯೆಗೆ ಸಮನಾಗಿರುತ್ತದೆ, ಇದು ಸ್ಥಿರವಾದ ಶಕ್ತಿಯ ಉತ್ಪಾದನೆಗೆ ಕಾರಣವಾಗುತ್ತದೆ. ಇದು ಯೋಜನೆಯು ನಿರ್ಮಾಣ ಹಂತದಿಂದ ಕಾರ್ಯಾಚರಣೆಯ ಹಂತಕ್ಕೆ ಬದಲಾಗುವುದನ್ನು ಸೂಚಿಸುತ್ತದೆ ಮತ್ತು ಶಾಖ ಹಾಗೂ ಅಂತಿಮವಾಗಿ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ ಇದು ಮೊದಲ ಅತ್ಯಗತ್ಯ ಹೆಜ್ಜೆಯಾಗಿದೆ.

ಭಾರತದ ಮೂರು ಹಂತದ ಪರಮಾಣು ಶಕ್ತಿ ಯೋಜನೆಯ ಅವಲೋಕನ

ಭಾರತವು ಸೀಮಿತ ಯುರೇನಿಯಂ ನಿಕ್ಷೇಪಗಳನ್ನು ಹೊಂದಿದ್ದರೂ, ವಿಶ್ವದ ಅತಿದೊಡ್ಡ ಥೋರಿಯಂ ನಿಕ್ಷೇಪಗಳಲ್ಲಿ ಒಂದನ್ನು ಹೊಂದಿದೆ. ಈ ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಮಾಡಲು, ಪರಮಾಣು ಇಂಧನ ಇಲಾಖೆಯು 'ಬಂದ್ ಪರಮಾಣು ಇಂಧನ ಚಕ್ರ'ದ ಆಧಾರದ ಮೇಲೆ ಮೂರು ಹಂತದ ಪರಮಾಣು ಶಕ್ತಿ ಯೋಜನೆಯನ್ನು ವಿನ್ಯಾಸಗೊಳಿಸಿದೆ. ದೇಶೀಯ ಫಿಸೈಲ್ ಸಂಪನ್ಮೂಲಗಳನ್ನು ಹಂತಹಂತವಾಗಿ ವೃದ್ಧಿಸುವುದು ಮತ್ತು ದೀರ್ಘಕಾಲದ ಇಂಧನ ಸ್ವಾವಲಂಬನೆಯನ್ನು ಸಾಧಿಸುವುದು ಇದರ ಗುರಿಯಾಗಿದೆ.

  • ಹಂತ 1: ಒತ್ತಡದ ಭಾರಜಲ ರಿಯಾಕ್ಟರ್ಗಳು ನೈಸರ್ಗಿಕ ಯುರೇನಿಯಂ ಅನ್ನು ಪಿಎಚ್‌ಡಬ್ಲುಆರ್‌ಗಳಲ್ಲಿ ವಿದ್ಯುತ್ ಉತ್ಪಾದಿಸಲು ಇಂಧನವಾಗಿ ಬಳಸಲಾಗುತ್ತದೆ. ಈ ರಿಯಾಕ್ಟರ್‌ಗಳಿಂದ ಹೊರಬರುವ ಬಳಸಿದ ಇಂಧನವು ಪ್ಲುಟೋನಿಯಂ ಅನ್ನು ಉತ್ಪಾದಿಸುತ್ತದೆ, ಇದು ಮುಂದಿನ ಹಂತಕ್ಕೆ ಪ್ರಾಥಮಿಕ ಇನ್ಪುಟ್ ಆಗುತ್ತದೆ.
  • ಹಂತ 2: ಫಾಸ್ಟ್ ಬ್ರೀಡರ್ ರಿಯಾಕ್ಟರ್ಗಳು ಮೊದಲ ಹಂತದಿಂದ ಪಡೆದ ಪ್ಲುಟೋನಿಯಂ ಅನ್ನು ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳಲ್ಲಿ ಇಂಧನವಾಗಿ ಬಳಸಲಾಗುತ್ತದೆ, ಇವು ತಾವು ಬಳಸುವುದಕ್ಕಿಂತ ಹೆಚ್ಚಿನ ಇಂಧನವನ್ನು ಉತ್ಪಾದಿಸುತ್ತವೆ. ಕಲ್ಪಾಕ್ಕಂನಲ್ಲಿರುವ ಪಿಎಫ್‌ಬಿಆರ್‌ ಭಾರತವು ಈ ಹಂತಕ್ಕೆ ಪ್ರವೇಶಿಸಿರುವುದನ್ನು ಸೂಚಿಸುತ್ತದೆ. ಈ ರಿಯಾಕ್ಟರ್‌ಗಳನ್ನು ಥೋರಿಯಂನಿಂದ ಯುರೇನಿಯಂ-233 ಅನ್ನು ಉತ್ಪಾದಿಸಲು ಬಳಸಲಾಗುತ್ತದೆ, ಇದು ಮೂರನೇ ಹಂತಕ್ಕೆ ಅಡಿಪಾಯ ಹಾಕುತ್ತದೆ.
  • ಹಂತ 3: ಥೋರಿಯಂ ಆಧಾರಿತ ರಿಯಾಕ್ಟರ್ಗಳು ಈ ಹಂತವು ಎರಡನೇ ಹಂತದಲ್ಲಿ ಉತ್ಪತ್ತಿಯಾದ ಯುರೇನಿಯಂ-233 ಅನ್ನು ಇಂಧನವಾಗಿ ಬಳಸಿಕೊಂಡು ಭಾರತದ ಬೃಹತ್ ಥೋರಿಯಂ ನಿಕ್ಷೇಪಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುತ್ತದೆ. ಥೋರಿಯಂ ಅನ್ನು ಪ್ರಾಯೋಗಿಕವಾಗಿ ಬೃಹತ್ ಇಂಧನ ಮೂಲವೆಂದು ಪರಿಗಣಿಸಲಾಗಿದೆ ಮತ್ತು ಈ ಹಂತವು ಭಾರತದ ದೀರ್ಘಕಾಲೀನ ಇಂಧನ ಭದ್ರತೆಗೆ ಪ್ರಮುಖವಾಗಿದೆ.

ಪ್ರತಿಯೊಂದು ಹಂತವು ಮುಂದಿನ ಹಂತಕ್ಕೆ ಪೂರಕವಾಗಿದ್ದು, ಭಾರತದ ಪರಮಾಣು ಯೋಜನೆಯನ್ನು ವಿಶ್ವದ ಅತ್ಯಂತ ದೂರದೃಷ್ಟಿಯ ಇಂಧನ ತಂತ್ರಗಳಲ್ಲಿ ಒಂದನ್ನಾಗಿ ಮಾಡಿದೆ.

ಪಿಎಫ್ಬಿಆರ್‌: ಒಂದು ಅವಲೋಕನ

ಪಿಎಫ್‌ಬಿಆರ್‌ ದಶಕಗಳ ಕಾಲ ನಡೆದ ಸ್ವದೇಶಿ ಸಂಶೋಧನೆ, ವಿನ್ಯಾಸ ಮತ್ತು ಎಂಜಿನಿಯರಿಂಗ್‌ ಅನ್ನು ಪ್ರತಿನಿಧಿಸುತ್ತದೆ. ಇದರ ತಂತ್ರಜ್ಞಾನವನ್ನು ಪರಮಾಣು ಇಂಧನ ಇಲಾಖೆಯ ಅಡಿಯಲ್ಲಿರುವ ಸಂಶೋಧನಾ ಕೇಂದ್ರವಾದ ಇಂದಿರಾ ಗಾಂಧಿ ಪರಮಾಣು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ.

  • ಇಂಧನ ಮತ್ತು ವಿನ್ಯಾಸ: ಸಾಂಪ್ರದಾಯಿಕ ಥರ್ಮಲ್ ರಿಯಾಕ್ಟರ್‌ಗಳಿಗಿಂತ ಭಿನ್ನವಾಗಿ, ಪಿಎಫ್‌ಬಿಆರ್‌ ಯುರೇನಿಯಂ-ಪ್ಲುಟೋನಿಯಂ ಮಿಶ್ರಿತ ಆಕ್ಸೈಡ್ ಇಂಧನವನ್ನು ಬಳಸುತ್ತದೆ. ಇಲ್ಲಿ ಬಳಸಲಾಗುವ ಫಿಸೈಲ್ (ವಿದಳನಕಾರಿ) ವಸ್ತುವನ್ನು 'ಒತ್ತಡದ ಭಾರಜಲ ರಿಯಾಕ್ಟರ್‌ಗಳ' ಬಳಸಿದ ಇಂಧನವನ್ನು ಮರುಸಂಸ್ಕರಿಸುವ ಮೂಲಕ ಪಡೆಯಲಾಗುತ್ತದೆ, ಇದು ಮೊದಲ ಹಂತದ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.
  • ಬಳಸುವುದಕ್ಕಿಂತ ಹೆಚ್ಚಿನ ಇಂಧನ ಉತ್ಪಾದನೆ:ಪಿಎಫ್ಬಿರ್ ನ ತಿರುಳು ಯುರೇನಿಯಂ-238 ರ ಹೊದಿಕೆಯಿಂದ ಆವೃತವಾಗಿದೆ. ವೇಗದ ನ್ಯೂಟ್ರಾನ್‌ಗಳು ಈ ಫಲವತ್ತಾದ ವಸ್ತುವನ್ನು ವಿದಳನಕಾರಿ ಪ್ಲುಟೋನಿಯಂ-239 ಆಗಿ ಪರಿವರ್ತಿಸುತ್ತವೆ, ಇದರಿಂದಾಗಿ ರಿಯಾಕ್ಟರ್ ತಾನು ಬಳಸುವುದಕ್ಕಿಂತ ಹೆಚ್ಚಿನ ಇಂಧನವನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ.
  • ಮೂರನೇ ಹಂತಕ್ಕೆ ಸೇತುವೆ : ಈ ರಿಯಾಕ್ಟರ್ ಅನ್ನು ಅಂತಿಮವಾಗಿ ತನ್ನ ಹೊದಿಕೆಯಲ್ಲಿ ಥೋರಿಯಂ-232 ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. 'ಟ್ರಾನ್ಸ್‌ಮ್ಯುಟೇಶನ್' ಪ್ರಕ್ರಿಯೆಯ ಮೂಲಕ, ಥೋರಿಯಂ-232 ಅನ್ನು ಯುರೇನಿಯಂ-233 ಆಗಿ ಪರಿವರ್ತಿಸಲಾಗುತ್ತದೆ. ಈ ಯುರೇನಿಯಂ-233 ಭಾರತದ ಮೂರನೇ ಹಂತದ ಥೋರಿಯಂ ಆಧಾರಿತ ಪರಮಾಣು ಇಂಧನಕ್ಕೆ ಶಕ್ತಿಯನ್ನು ನೀಡುವ ಇಂಧನವಾಗಿದೆ.
  • ಬಂದ್ ಇಂಧನ ಚಕ್ರ: ಪಿಎಫ್‌ಬಿಆರ್‌ ನಿಂದ ಉತ್ಪತ್ತಿಯಾಗುವ ಬಳಸಿದ ಇಂಧನವನ್ನು ಮರುಸಂಸ್ಕರಿಸಿ ಮತ್ತೆ ರಿಯಾಕ್ಟರ್‌ಗೆ ಮರುಬಳಕೆ ಮಾಡಲಾಗುತ್ತದೆ. ಇದು ಎರಡನೇ ಹಂತದ ಇಂಧನ ಚಕ್ರವನ್ನು ಪೂರ್ಣಗೊಳಿಸುತ್ತದೆ ಮತ್ತು ಮೂರನೇ ಹಂತದಲ್ಲಿ ಭಾರತದ ಹೇರಳವಾದ ಥೋರಿಯಂ ನಿಕ್ಷೇಪಗಳನ್ನು ಬೃಹತ್ ಪ್ರಮಾಣದಲ್ಲಿ ಬಳಸಲು ದಾರಿ ಮಾಡಿಕೊಡುತ್ತದೆ.

ಭಾರತದ ಪ್ರಸ್ತುತ ಪರಮಾಣು ಶಕ್ತಿ ಭೂದೃಶ್ಯ

ಭಾರತದ ಪರಮಾಣು ಇಂಧನ ಯೋಜನೆಯು ದೇಶದ ಒಟ್ಟಾರೆ ವಿದ್ಯುತ್ ಉತ್ಪಾದನೆಯಲ್ಲಿ ಸ್ಥಿರವಾದ ಅಸ್ತಿತ್ವವನ್ನು ಕಾಯ್ದುಕೊಂಡಿದೆ. ಮುಂಬರುವ ವರ್ಷಗಳಲ್ಲಿ ಗಮನಾರ್ಹ ವಿಸ್ತರಣೆಯ ಯೋಜನೆಯೊಂದಿಗೆ ಇದು ಈಗ ಒಂದು ನಿರ್ಣಾಯಕ ಘಟ್ಟದಲ್ಲಿದೆ.

  • ಸ್ಥಾಪಿತ ಸಾಮರ್ಥ್ಯ: ಭಾರತದ ಪ್ರಸ್ತುತ ಪರಮಾಣು ಸಾಮರ್ಥ್ಯವು 8.78 ಗಿಗಾವ್ಯಾಟ್ ಆಗಿದೆ. 2024-25ರಲ್ಲಿ, ದೇಶಾದ್ಯಂತ ಇರುವ ಪರಮಾಣು ವಿದ್ಯುತ್ ಸ್ಥಾವರಗಳು 56,681 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಉತ್ಪಾದಿಸಿವೆ.
  • ಸ್ಥಿರ ಕೊಡುಗೆ: ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪರಮಾಣು ಶಕ್ತಿಯು ಸತತವಾಗಿ ಸುಮಾರು 3% ರಷ್ಟು ಪಾಲನ್ನು ಹೊಂದಿದೆ. 2024-25ರಲ್ಲಿ ಇದರ ಪಾಲು 3.1% ರಷ್ಟಿತ್ತು.
  • ಯೋಜಿತ ವಿಸ್ತರಣೆ : ಮುಂಬರುವ ವರ್ಷಗಳಲ್ಲಿ ಭಾರತದ ಪರಮಾಣು ಸಾಮರ್ಥ್ಯವು ಸುಮಾರು 3 ಪಟ್ಟು ಹೆಚ್ಚಾಗಲಿದೆ. ಸ್ವದೇಶಿ 700 ಮೆಗಾವ್ಯಾಟ್ ರಿಯಾಕ್ಟರ್‌ಗಳು ಮತ್ತು ಅಂತರಾಷ್ಟ್ರೀಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ 1,000 ಮೆಗಾವ್ಯಾಟ್ ರಿಯಾಕ್ಟರ್‌ಗಳ ಮೂಲಕ, ಸ್ಥಾಪಿತ ಸಾಮರ್ಥ್ಯವು 2031-32ರ ವೇಳೆಗೆ 22.38 ಗಿಗಾವ್ಯಾಟ್ ತಲುಪುವ ನಿರೀಕ್ಷೆಯಿದೆ.
  • ಅಂತರಾಷ್ಟ್ರೀಯ ಸಹಕಾರ: ಶಾಂತಿಯುತ ಉದ್ದೇಶಗಳಿಗಾಗಿ ನಾಗರಿಕ ಪರಮಾಣು ಸಹಕಾರದ ಕುರಿತು ಭಾರತವು 18 ದೇಶಗಳೊಂದಿಗೆ ಅಂತರ-ಸರ್ಕಾರಿ ಒಪ್ಪಂದಗಳಿಗೆ ಸಹಿ ಹಾಕಿದೆ. ಇದು ಭಾರತದ ಪರಮಾಣು ಯೋಜನೆಯ ಮೇಲೆ ಜಾಗತಿಕವಾಗಿ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಫಲಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ಅಂಕಿಅಂಶಗಳು ಒಂದು ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಪರಮಾಣು ಶಕ್ತಿಯು ಇನ್ನು ಮುಂದೆ ಭಾರತದಲ್ಲಿ ಕೇವಲ ಪೂರಕ ಶಕ್ತಿಯ ಮೂಲವಾಗಿ ಉಳಿದಿಲ್ಲ. ಇದು ದೇಶದ ಸ್ವಚ್ಛ ಇಂಧನದ ಭವಿಷ್ಯದ ಬುನಾದಿಯಾಗುತ್ತಿದೆ.

ದೀರ್ಘಕಾಲೀನ ಮಿಷನ್

ಭಾರತವು ತನ್ನ ಒಟ್ಟಾರೆ ಇಂಧನ ಬಳಕೆಯಲ್ಲಿ ಪರಮಾಣು ಶಕ್ತಿಗೆ ಗಮನಾರ್ಹವಾದ ದೊಡ್ಡ ಪಾತ್ರವನ್ನು ನೀಡಲು ಗುರಿ ಇಟ್ಟುಕೊಂಡಿದೆ. ಕೇಂದ್ರ ಬಜೆಟ್ 2025-26ರಲ್ಲಿ ಘೋಷಿಸಲಾದ 'ಪರಮಾಣು ಇಂಧನ ಮಿಷನ್' ಅಡಿಯಲ್ಲಿ, 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಮಿಷನ್ 2070ರ ವೇಳೆಗೆ 'ನೆಟ್ ಝೀರೋ' ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಭಾರತದ ವಿಶಾಲ ಗುರಿಗೂ ಬೆಂಬಲ ನೀಡುತ್ತದೆ.

ಭಾರತವು ಪರಮಾಣು ಶಕ್ತಿಯನ್ನು ಏಕೆ ವಿಸ್ತರಿಸಬೇಕು?

ಭಾರತದ ಇಂಧನ ಬೇಡಿಕೆಗಳು ವೇಗವಾಗಿ ಬೆಳೆಯುತ್ತಿವೆ ಮತ್ತು ಸ್ವಚ್ಛ ಇಂಧನದ ಕುರಿತಾದ ಅದರ ಬದ್ಧತೆಗಳು ಅಚಲವಾಗಿವೆ. ಪರಮಾಣು ಶಕ್ತಿಯು ದಿನದ 24 ಗಂಟೆಯೂ ಲಭ್ಯವಿರುವ 'ಬೇಸ್ ಲೋಡ್' ವಿದ್ಯುತ್ ಮೂಲವಾಗಿದೆ ಮತ್ತು ಇದರ ಜೀವಿತಾವಧಿಯ ಹೊರಸೂಸುವಿಕೆಯು ಜಲವಿದ್ಯುತ್ ಮತ್ತು ಗಾಳಿ ಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳಿಗೆ ಸಮಾನವಾಗಿದೆ. ಡೇಟಾ ಸೆಂಟರ್‌ಗಳು, ಸುಧಾರಿತ ಕೈಗಾರಿಕೆಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ನಿರಂತರ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಇದು ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಆದ್ದರಿಂದ, ಪರಮಾಣು ಸಾಮರ್ಥ್ಯವನ್ನು ವಿಸ್ತರಿಸುವುದು ಕೇವಲ ಒಂದು ಆಯಕಟ್ಟಿನ ಆಯ್ಕೆಯಲ್ಲ, ಬದಲಿಗೆ ಭಾರತದ ದೀರ್ಘಕಾಲೀನ ಇಂಧನ ಭದ್ರತೆ ಮತ್ತು ಸ್ವಚ್ಛ ಇಂಧನ ಪರಿವರ್ತನೆಗೆ ಒಂದು ಪ್ರಾಯೋಗಿಕ ಅಗತ್ಯವಾಗಿದೆ.

ಈ ದೃಷ್ಟಿಕೋನವನ್ನು ಮುಂದುವರಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ:

  • ಹಣಕಾಸಿನ ಬದ್ಧತೆ: 'ಪರಮಾಣು ಇಂಧನ ಮಿಷನ್' ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿಯೋಜನೆಗಾಗಿ ₹20,000 ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಇದು ಸ್ವದೇಶಿ ಪರಮಾಣು ತಂತ್ರಜ್ಞಾನದಲ್ಲಿ ದೀರ್ಘಕಾಲೀನ ಹೂಡಿಕೆಯ ಗಂಭೀರ ಸಂಕೇತವಾಗಿದೆ.
  • ಎಸ್ಎಂಆರ್ಗುರಿ: ಭಾರತದ ಸ್ವಚ್ಛ ಮತ್ತು ವಿಶ್ವಾಸಾರ್ಹ ಇಂಧನ ಮಾರ್ಗಸೂಚಿಯನ್ನು ಬಲಪಡಿಸಲು, 2033ರ ವೇಳೆಗೆ ಕನಿಷ್ಠ ಐದು ಸ್ವದೇಶಿ ವಿನ್ಯಾಸದ ಎಸ್‌ಎಂಆರ್‌ಗಳು ಕಾರ್ಯಾರಂಭ ಮಾಡಲಿವೆ.
  • ಬಿಎಆರ್ಸಿ ಉಪಕ್ರಮಗಳು: ಭಾಭಾ ಪರಮಾಣು ಸಂಶೋಧನಾ ಕೇಂದ್ರವು ಮುಂದಿನ ಪೀಳಿಗೆಯ ರಿಯಾಕ್ಟರ್ ವಿನ್ಯಾಸಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಇದರಲ್ಲಿ 200 ಮೆಗಾವ್ಯಾಟ್e ಸಾಮರ್ಥ್ಯದ ಭಾರತ್ ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್ (BSMR-200), 55 ಮೆಗಾವ್ಯಾಟ್e ಸಾಮರ್ಥ್ಯದ SMR-55 ಮತ್ತು ಹೈಡ್ರೋಜನ್ ಉತ್ಪಾದನೆಗಾಗಿ ವಿನ್ಯಾಸಗೊಳಿಸಲಾದ 5 ಮೆಗಾವ್ಯಾಟ್th ವರೆಗಿನ ಹೈ-ಟೆಂಪರೇಚರ್ ಗ್ಯಾಸ್-ಕೂಲ್ಡ್ ರಿಯಾಕ್ಟರ್‌ಗಳು ಸೇರಿವೆ.
  • ಶಾಂತಿ ಕಾಯ್ದೆ, 2025: ಈ ಮಿಷನ್‌ಗೆ ಬೆಂಬಲ ನೀಡಲು ಸರ್ಕಾರವು ' ಸಸ್ಟೈನಬಲ್ ಹಾರ್ನೆಸಿಂಗ್ ಅಂಡ್ ಅಡ್ವಾನ್ಸ್ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಆಕ್ಟ್, 2025' ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ಭಾರತದ ಪರಮಾಣು ಕಾನೂನು ಚೌಕಟ್ಟನ್ನು ಬಲಪಡಿಸುತ್ತದೆ ಮತ್ತು ಆಧುನೀಕರಿಸುತ್ತದೆ. ಇದು ನಿಯಂತ್ರಕ ಮೇಲ್ವಿಚಾರಣೆಯ ಅಡಿಯಲ್ಲಿ ಪರಮಾಣು ವಲಯದಲ್ಲಿ ಸೀಮಿತ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡುತ್ತದೆ, ಆ ಮೂಲಕ ಸಹಯೋಗ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.

ಭಾರತದ ದೀರ್ಘಕಾಲೀನ ಪರಮಾಣು ದೃಷ್ಟಿಕೋನವು ಮಹತ್ವಾಕಾಂಕ್ಷೆಯಿಂದ ಕೂಡಿದೆ. ನೀತಿ ಬೆಂಬಲ, ಮೀಸಲಾದ ಧನಸಹಾಯ ಮತ್ತು ಸ್ವದೇಶಿ ಸಂಶೋಧನೆಯನ್ನು ಕೇಂದ್ರವಾಗಿಟ್ಟುಕೊಂಡು, ದೇಶವು ಸ್ವಾವಲಂಬಿ ಮತ್ತು ಜಾಗತಿಕವಾಗಿ ಮಹತ್ವದ ಪರಮಾಣು ಭವಿಷ್ಯವನ್ನು ನಿರ್ಮಿಸುತ್ತಿದೆ.

ಉಪಸಂಹಾರ

ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ನಲ್ಲಿ 'ಕ್ರಿಟಿಕಾಲಿಟಿ' ಸಾಧಿಸಿರುವುದು ಕೇವಲ ಒಂದು ತಾಂತ್ರಿಕ ಮೈಲಿಗಲ್ಲು ಮಾತ್ರವಲ್ಲ. ಇದು ಭಾರತದ ದೀರ್ಘಕಾಲದ ಪರಮಾಣು ದೃಷ್ಟಿಕೋನದ ಪರಿಪಕ್ವತೆ ಮತ್ತು ಅದರ ಸ್ವದೇಶಿ ಸಾಮರ್ಥ್ಯದ ಬಲವನ್ನು ಪ್ರತಿಫಲಿಸುತ್ತದೆ. ಸೀಮಿತ ಯುರೇನಿಯಂ ಸಂಪನ್ಮೂಲಗಳಿಂದ ಹಿಡಿದು ಥೋರಿಯಂ ಚಾಲಿತ ಭವಿಷ್ಯದವರೆಗೆ, ಭಾರತದ ಮೂರು ಹಂತದ ಯೋಜನೆಯು ಈಗ ವಿನ್ಯಾಸದಿಂದ ವಿತರಣೆಯತ್ತ ಸ್ಥಿರವಾಗಿ ಸಾಗುತ್ತಿದೆ. ಕಲ್ಪಾಕ್ಕಂ ಪರಮಾಣು ಸಂಕೀರ್ಣದ ಪ್ರಗತಿಯು ಸುಧಾರಿತ ರಿಯಾಕ್ಟರ್ ತಂತ್ರಜ್ಞಾನಗಳ ಮೇಲಿನ ವಿಶ್ವಾಸವನ್ನು ಉಲ್ಲೇಖಿಸುತ್ತದೆ ಮತ್ತು ಈ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಪರಮಾಣು ಇಂಧನ ಇಲಾಖೆಯಂತಹ ಸಂಸ್ಥೆಗಳ ಪಾತ್ರವನ್ನು ಬಲಪಡಿಸುತ್ತದೆ. ಸಾಮರ್ಥ್ಯ ವಿಸ್ತರಣೆಯಾಗಿ ಹೊಸ ತಂತ್ರಜ್ಞಾನಗಳು ರೂಪುಗೊಳ್ಳುತ್ತಿದ್ದಂತೆ, ಪರಮಾಣು ಶಕ್ತಿಯು ಭಾರತದ ಇಂಧನ ಮಿಶ್ರಣದಲ್ಲಿ ಹೆಚ್ಚು ಪ್ರಮುಖ ಪಾತ್ರ ವಹಿಸಲು ಸಿದ್ಧವಾಗಿದೆ. ಆದ್ದರಿಂದ, ಈ ಕ್ಷಣವು ಸಾಧನೆ ಮತ್ತು ಮಹತ್ವದ ತಿರುವು ಎರಡೂ ಆಗಿದ್ದು, ಇಂಧನ ಭದ್ರತೆ, ತಾಂತ್ರಿಕ ಸ್ವಾವಲಂಬನೆ ಮತ್ತು 2070ರ 'ನೆಟ್ ಝೀರೋ' ಬದ್ಧತೆಯತ್ತ ದೇಶದ ಹಾದಿಯನ್ನು ಬಲಪಡಿಸುತ್ತದೆ.

References:

Department of Atomic Energy:

 

PIB Backgrounders:


Click here to see pdf

 

*****

(तथ्य सामग्री आईडी: 150619) आगंतुक पटल : 15


Provide suggestions / comments
इस विश्लेषक को इन भाषाओं में पढ़ें : English , English , हिन्दी