• Sitemap
  • Advance Search
Social Welfare

ಬಲವಾದ ಕಾನೂನು, ಸುರಕ್ಷಿತ ಪರೀಕ್ಷೆಗಳು: ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಕುಣಿಕೆ ಬಿಗಿಗೊಳಿಸಿದ ಭಾರತ

प्रविष्टि तिथि: 31 JUL 2026 11:53 AM

 

ಕಠಿಣ ಜೈಲು ಶಿಕ್ಷೆಗಳು, ವಿಶೇಷ ಕಾರ್ಯಪಡೆಗಳು, ತ್ವರಿತ ನ್ಯಾಯಾಲಯಗಳು

ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ಸಾಧನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ರ ಪ್ರಕಾರ ಪರೀಕ್ಷಾ ವಂಚನೆಗೆ ಜೈಲು ಶಿಕ್ಷೆ ಮತ್ತು ದಂಡದ ಮೊತ್ತವನ್ನು ತೀವ್ರವಾಗಿ ಹೆಚ್ಚಿಸಲಾಗಿದೆ. ಇದು ತನಿಖೆಗಾಗಿ ವಿಶೇಷ ಕಾರ್ಯಪಡೆಗಳನ್ನು ಸೇರಿಸುತ್ತದೆ, ತ್ವರಿತ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಕಡ್ಡಾಯಗೊಳಿಸುತ್ತದೆ ಮತ್ತು ವಿದ್ಯಾರ್ಥಿಗಳನ್ನು ರಕ್ಷಿಸಲು 2024ರ ಕಾಯ್ದೆಯನ್ನು ಬಲಪಡಿಸುವ ಮೂಲಕ ಸಮಯಕ್ಕೆ ಬದ್ಧವಾದ ಮೇಲ್ಮನವಿ ಪ್ರಕ್ರಿಯೆಯನ್ನು ಸೃಷ್ಟಿಸುತ್ತದೆ.

ದೇಶದಲ್ಲಿ ಪ್ರತಿವರ್ಷ ಲಕ್ಷಾಂತರ ಯುವಕರು ಉತ್ತಮ ಭವಿಷ್ಯದ ನ್ಯಾಯಯುತ ಅವಕಾಶವನ್ನು ಆಶಿಸಿ ಸರ್ಕಾರಿ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಅಥವಾ ಜಾಲವೊಂದು ಫಲಿತಾಂಶಗಳನ್ನು ತಿರುಚಿದಾಗ, ಮುರಿಯುವುದು ಕೇವಲ ಒಂದು ನಿಯಮವಲ್ಲ. ಅದು ಪ್ರಾಮಾಣಿಕ ವಿದ್ಯಾರ್ಥಿಯ ಕಠಿಣ ಪರಿಶ್ರಮ ಮತ್ತು ನಂಬಿಕೆ.

ಆ ನಂಬಿಕೆಯನ್ನು ರಕ್ಷಿಸಲು, ಸಂಸತ್ತು ಪರೀಕ್ಷಾ ವಂಚನೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಂಘಟಿತ ಪರೀಕ್ಷಾ ವಂಚನೆಯ ವಿರುದ್ಧ ಭಾರತದ ಮೊದಲ ಮೀಸಲು ಕಾನೂನಾದ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ಸಾಧನಗಳ ತಡೆಗಟ್ಟುವಿಕೆ) ಕಾಯ್ದೆ, 2024 ಅನ್ನು ಅಂಗೀಕರಿಸಿತು. ಈಗ, ಈ ಕಾನೂನನ್ನು ಇನ್ನಷ್ಟು ಬಲಪಡಿಸಲು ಸರ್ಕಾರವು ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ಸಾಧನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಅನ್ನು ಮಂಡಿಸಿದೆ. ಈ ಮಸೂದೆಯು ಶಿಕ್ಷೆಗಳನ್ನು ಹೆಚ್ಚಿಸುತ್ತದೆ, ತನಿಖೆ ಮತ್ತು ವಿಚಾರಣೆಯನ್ನುತ್ವರಿತಗೊಳಿಸುತ್ತದೆ ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸ್ಪಷ್ಟ ಮಾರ್ಗವನ್ನು ನೀಡುತ್ತದೆ.

ಈ ತಿದ್ದುಪಡಿ ಯಾಕೆ ಅಗತ್ಯವಾಗಿತ್ತು

2024ರ ಕಾಯ್ದೆಯು ಭಾರತಕ್ಕೆ ಬಲವಾದ ಅಡಿಪಾಯವನ್ನು ನೀಡಿತು. ಆದರೆ ಇತ್ತೀಚಿನ ವರ್ಷಗಳಲ್ಲಿಯೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ಪ್ರಕರಣಗಳು ಕಂಡುಬಂದಿವೆ, ಇದು ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ನ್ಯಾಯಸಮ್ಮತತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ. 2026ರ ಮಸೂದೆಯು ಇದಕ್ಕೆ ನೇರವಾಗಿ ಪ್ರತಿಕ್ರಿಯಿಸುತ್ತದೆ. ಇದು ಶಿಕ್ಷೆಗಳನ್ನು ತೀವ್ರಗೊಳಿಸುತ್ತದೆ ಇದರಿಂದ ಅವು ನಿಜವಾದ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ, ಮತ್ತು ಇದು ವೇಗವಾದ, ಕಾಲಮಿತಿಯ ತನಿಖೆ ಮತ್ತು ವಿಚಾರಣಾ ವ್ಯವಸ್ಥೆಯನ್ನು ನಿರ್ಮಿಸುತ್ತದೆ, ಇದರಿಂದ ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆಯಾಗುತ್ತದೆ ಮತ್ತು ವಿದ್ಯಾರ್ಥಿಗಳು ಬೇಗನೆ ಪರಿಹಾರವನ್ನು ಪಡೆಯುತ್ತಾರೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆ

ಮಸೂದೆಯಲ್ಲಿನ ಅತ್ಯಂತ ಸ್ಪಷ್ಟವಾದ ಬದಲಾವಣೆಯೆಂದರೆ ಶಿಕ್ಷೆ. ಪರೀಕ್ಷಾ ವಂಚನೆಗಾಗಿ ವ್ಯಕ್ತಿಗಳು, ಸೇವಾ ಪೂರೈಕೆದಾರರು ಮತ್ತು ಸಂಘಟಿತ ಜಾಲಗಳನ್ನು ನಡೆಸುವವರಿಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಒಟ್ಟಾರೆಯಾಗಿ ತೀವ್ರವಾಗಿ ಹೆಚ್ಚಿಸಲಾಗಿದೆ.

ನಿಬಂಧನೆ

ಹಿಂದಿನ ಸ್ಥಿತಿ (2024ರ ಕಾಯ್ದೆ)

ಈಗ ಏನೆಲ್ಲಾ ಬದಲಾವಣೆಗಳು (2026ರ ಮಸೂದೆ)

ವೈಯಕ್ತಿಕ ಅಪರಾಧಿಗಳು (ವಿಭಾಗ 10)

3 ರಿಂದ 5 ವರ್ಷಗಳ ಜೈಲು ಶಿಕ್ಷೆ, ಜೊತೆಗೆ ₹10 ಲಕ್ಷದವರೆಗೆ ದಂಡ.

5 ರಿಂದ 10 ವರ್ಷಗಳ ಜೈಲು ಶಿಕ್ಷೆ, ಜೊತೆಗೆ ₹50 ಲಕ್ಷದವರೆಗೆ ದಂಡ.

ಸೇವಾ ಪೂರೈಕೆದಾರರು (ವಿಭಾಗ 10)

₹1 ಕೋಟಿಯವರೆಗೆ ದಂಡ ಮತ್ತು ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ನಡೆಸದಂತೆ 4 ವರ್ಷಗಳ ನಿಷೇಧ.

₹5 ಕೋಟಿಯವರೆಗೆ ದಂಡ ಮತ್ತು ಯಾವುದೇ ಸಾರ್ವಜನಿಕ ಪರೀಕ್ಷೆಯನ್ನು ನಡೆಸದಂತೆ 8 ವರ್ಷಗಳ ನಿಷೇಧ.

ನಿರ್ದೇಶಕರು ಮತ್ತು ಹಿರಿಯ ನಿರ್ವಹಣೆಯನ್ನು ಜವಾಬ್ದಾರರನ್ನಾಗಿ ಮಾಡುವುದು (ವಿಭಾಗ 10)

3 ರಿಂದ 10 ವರ್ಷಗಳ ಜೈಲು ಶಿಕ್ಷೆ, ಜೊತೆಗೆ ₹1 ಕೋಟಿ ದಂಡ.

5 ರಿಂದ 10 ವರ್ಷಗಳ ಜೈಲು ಶಿಕ್ಷೆ, ಜೊತೆಗೆ ₹5 ಕೋಟಿ ದಂಡ.

ಸಂಘಟಿತ ಅಪರಾಧ ಮತ್ತು ಪರೀಕ್ಷಾ-ವಂಚನೆ ಸಿಂಡಿಕೇಟ್ (ವಿಭಾಗ 11)

5 ರಿಂದ 10 ವರ್ಷಗಳ ಜೈಲು ಶಿಕ್ಷೆ, ಜೊತೆಗೆ ಕನಿಷ್ಠ ₹1 ಕೋಟಿ ದಂಡ.

7 ರಿಂದ 10 ವರ್ಷಗಳ ಜೈಲು ಶಿಕ್ಷೆ, ಜೊತೆಗೆ ಕನಿಷ್ಠ ₹10 ಕೋಟಿ ದಂಡ.

ವೇಗವಾದ ಮತ್ತು ಹೆಚ್ಚು ಕೇಂದ್ರೀಕೃತವಾದ ತನಿಖೆ

2024ರ ಕಾಯ್ದೆಯಡಿಯಲ್ಲಿ, ಪ್ರಕರಣಗಳ ತನಿಖೆಯನ್ನು ಕನಿಷ್ಠ ಉಪ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯ ಪೊಲೀಸ್ ಅಧಿಕಾರಿಯು ನಡೆಸುತ್ತಿದ್ದರು ಮತ್ತು ಕೇಂದ್ರ ಸರ್ಕಾರವು ಒಂದು ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ಕೂಡ ಹಸ್ತಾಂತರಿಸಬಹುದಾಗಿತ್ತು. 2026ರ ಮಸೂದೆಯು ಮತ್ತೊಂದು ಆಯ್ಕೆಯನ್ನು ಸೇರಿಸುತ್ತದೆ: ಕೇಂದ್ರ ಸರ್ಕಾರವು ಈಗ ಪರೀಕ್ಷಾ ವಂಚನೆ ಪ್ರಕರಣಗಳನ್ನು ತನಿಖೆ ಮಾಡಲು ಮೀಸಲಾದ ವಿಶೇಷ ಕಾರ್ಯಪಡೆಯನ್ನು ರಚಿಸಬಹುದು. ಒಮ್ಮೆ ಒಂದು ಪ್ರಕರಣಕ್ಕಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿದರೆ, ಆ ಪ್ರಕರಣದ ತನಿಖೆಯನ್ನು ಆ ಸಮಿತಿಯೇ ಮಾತ್ರ ನಡೆಸುತ್ತದೆ, ಇದರಿಂದ ಜವಾಬ್ದಾರಿಯು ಸ್ಪಷ್ಟವಾಗಿ ಮತ್ತು ಕೇಂದ್ರೀಕೃತವಾಗಿರುತ್ತದೆ.

ಈ ಮಸೂದೆಯು ಮೊದಲ ಬಾರಿಗೆ ತನಿಖೆಗೆ ಒಂದು ಕಾಲಮಿತಿಯನ್ನು ವಿಧಿಸುತ್ತದೆ. ತನಿಖೆ ನಡೆಸುತ್ತಿರುವವರು ಯಾರೇ ಆಗಿರಲಿ - ಪೊಲೀಸ್ ಅಧಿಕಾರಿಯಾಗಿರಲಿ, ಕೇಂದ್ರ ತನಿಖಾ ಸಂಸ್ಥೆಯಾಗಿರಲಿ ಅಥವಾ ವಿಶೇಷ ಕಾರ್ಯಪಡೆಯಾಗಿರಲಿ - ಅವರು ಎರಡು ತಿಂಗಳೊಳಗೆ ತನಿಖೆಯನ್ನು ಮುಗಿಸಬೇಕು. ಈ ಎರಡು ತಿಂಗಳ ಅವಧಿಯು, ಪೊಲೀಸರು ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಿದ ದಿನದಿಂದ, ಅಥವಾ ಕೇಂದ್ರ ತನಿಖಾ ಸಂಸ್ಥೆಗೆ ಪ್ರಕರಣವನ್ನು ಶಿಫಾರಸು ಮಾಡಿದ ದಿನದಿಂದ, ಅಥವಾ ವಿಶೇಷ ಕಾರ್ಯಪಡೆಯನ್ನು ಅಧಿಸೂಚಿಸಿದ ದಿನದಿಂದ (ಯವುದು ಅನ್ವಯಿಸುತ್ತದೆಯೋ ಅದರಿಂದ) ಪ್ರಾರಂಭವಾಗುತ್ತದೆ.

ಹೊಸ ವಿಶೇಷ ತ್ವರಿತ ನ್ಯಾಯಾಲಯಗಳು

ಮಸೂದೆಯಲ್ಲಿನ ಅತ್ಯಂತ ದೊಡ್ಡ ಸೇರ್ಪಡೆಗಳಲ್ಲಿ ಒಂದೆಂದರೆ, ಸೆಷನ್ಸ್ ನ್ಯಾಯಾಲಯವನ್ನು ವಿಶೇಷ ತ್ವರಿತ ನ್ಯಾಯಾಲಯವಾಗಿ (Special Fast Track Court) ಗೊತ್ತುಪಡಿಸುವುದು. ಪರೀಕ್ಷಾ ವಂಚನೆ ಪ್ರಕರಣಗಳ ವಿಚಾರಣೆಗಾಗಿ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು, ಸಂಬಂಧಿತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಸಮಾಲೋಚನೆಯೊಂದಿಗೆ ಸೆಷನ್ಸ್ ನ್ಯಾಯಾಲಯವನ್ನು ವಿಶೇಷ ತ್ವರಿತ ನ್ಯಾಯಾಲಯವಾಗಿ ಗೊತ್ತುಪಡಿಸಬೇಕಾಗುತ್ತದೆ.

  • ಈ ನ್ಯಾಯಾಲಯಗಳು ಅನಗತ್ಯ ವಿರಾಮಗಳಿಲ್ಲದೆ ಪ್ರತಿದಿನ ಪ್ರಕರಣಗಳ ವಿಚಾರಣೆ ನಡೆಸಬೇಕು.
  • ಚಾರ್ಜ್‌ಶೀಟ್ ಸಲ್ಲಿಕೆಯಾದ 3 ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳಬೇಕು.
  • ಈ ತಿದ್ದುಪಡಿಯು ಜಾರಿಗೆ ಬರುವ ದಿನದಂದು ಇತರ ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಪ್ರಕರಣಗಳನ್ನು ಈ ಹೊಸ ವಿಶೇಷ ತ್ವರಿತ ನ್ಯಾಯಾಲಯಗಳಿಗೆ ವರ್ಗಾಯಿಸಲಾಗುತ್ತದೆ ಮತ್ತು ವರ್ಗಾವಣೆಯಾದ 3 ತಿಂಗಳೊಳಗೆ ಅವುಗಳನ್ನು ಪೂರ್ಣಗೊಳಿಸಬೇಕು.
  • ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಈ ಪ್ರಕರಣಗಳನ್ನು ವಾದಿಸಲು ಮೀಸಲಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ಸಹ ನೇಮಿಸುತ್ತದೆ.
  • ಅಪರಾಧಿಯು ಭಾರತೀಯ ನ್ಯಾಯ ಸಂಹಿತೆ ಅಥವಾ ಯಾವುದೇ ಇತರ ಕಾನೂನಿನಡಿಯಲ್ಲಿ ಇತರ ಸಂಬಂಧಿತ ಆರೋಪಗಳನ್ನು ಎದುರಿಸುತ್ತಿದ್ದರೆ, ವಿಶೇಷ ತ್ವರಿತ ನ್ಯಾಯಾಲಯವು ಪ್ರಕರಣವನ್ನು ಬಹು ನ್ಯಾಯಾಲಯಗಳಿಗೆ ಕಳುಹಿಸುವ ಬದಲು ಒಂದೇ ವಿಚಾರಣೆಯಲ್ಲಿ ಆ ಆರೋಪಗಳನ್ನು ಒಟ್ಟಿಗೆ ವಿಚಾರಣೆ ಮಾಡುತ್ತದೆ.

ಒಟ್ಟಾರೆಯಾಗಿ, ಇದರರ್ಥ ಪರೀಕ್ಷಾ ವಂಚನೆ ಪ್ರಕರಣವು ಇನ್ನು ಮುಂದೆ ವರ್ಷಗಟ್ಟಲೆ ನನೆಗುದಿಗೆ ಬರುವುದಿಲ್ಲ. ಇದು ತನಿಖೆಯಿಂದ ವಿಚಾರಣೆಯವರೆಗೆ ಮೀಸಲಾದ, ಗಡುವುಬದ್ಧ ವ್ಯವಸ್ಥೆಯ ಮೂಲಕ ಸಾಗುತ್ತದೆ.

ಅಪೀಲು ಸಲ್ಲಿಸುವ ಸ್ಪಷ್ಟ ಹಕ್ಕು

ವಿಶೇಷ ತ್ವರಿತ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ (ಅಪೀಲು) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಮಸೂದೆಯು ಮೊದಲ ಬಾರಿಗೆ ಸ್ಪಷ್ಟಪಡಿಸುತ್ತದೆ.

    • ಸಾಮಾನ್ಯ ಮಧ್ಯಂತರ ಆದೇಶಗಳನ್ನು ಹೊರತುಪಡಿಸಿ, ಯಾವುದೇ ತೀರ್ಪು, ಶಿಕ್ಷೆ ಅಥವಾ ಆದೇಶದ ವಿರುದ್ಧದ ಮೇಲ್ಮನವಿಯು ಹೈಕೋರ್ಟ್‌ಗೆ ಹೋಗುತ್ತದೆ.
    • ಇದನ್ನು ಇಬ್ಬರು ನ್ಯಾಯಮೂರ್ತಿಗಳ ಪೀಠವು ವಿಚಾರಣೆ ನಡೆಸುತ್ತದೆ ಮತ್ತು ಹೈಕೋರ್ಟ್ ಮೇಲ್ಮನವಿ ಸ್ವೀಕರಿಸಿದ 3 ತಿಂಗಳೊಳಗೆ ಅದನ್ನು ವಿಲೇವಾರಿ ಮಾಡಲು ಪ್ರಯತ್ನಿಸಬೇಕು.
    •  ಜಾಮೀನು ಮಂಜೂರು ಮಾಡುವ ಅಥವಾ ನಿರಾಕರಿಸುವ ಆದೇಶದ ವಿರುದ್ಧವೂ ನೇರವಾಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು.
    •  ಮೇಲ್ಮನವಿಯನ್ನು ಸಾಮಾನ್ಯವಾಗಿ 30 ದಿನಗಳೊಳಗೆ ಸಲ್ಲಿಸಬೇಕು. ಹೈಕೋರ್ಟ್ ಸಮಂಜಸವಾದ ಕಾರಣಕ್ಕಾಗಿ ವಿಳಂಬವನ್ನು ಅನುಮತಿಸಬಹುದು, ಆದರೆ 90 ದಿನಗಳ ನಂತರ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ.
  • ಈ ಹೈಕೋರ್ಟ್ ಮಾರ್ಗವನ್ನು ಹೊರತುಪಡಿಸಿ, ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಅಂತಿಮವಾಗಿರಿಸಲು ವಿಶೇಷ ತ್ವರಿತ ನ್ಯಾಯಾಲಯದ ಆದೇಶದ ವಿರುದ್ಧ ಬೇರೆ ಯಾವುದೇ ನ್ಯಾಯಾಲಯದಲ್ಲಿ ಬೇರೆ ಯಾವುದೇ ಮೇಲ್ಮನವಿ ಅಥವಾ ಮರುಪರಿಶೀಲನೆ ಸಲ್ಲಿಸಲು ಸಾಧ್ಯವಿಲ್ಲ.

ಇದು ಆರೋಪಿ ಮತ್ತು ಪ್ರಾಸಿಕ್ಯೂಷನ್ ಎರಡಕ್ಕೂ ಉನ್ನತ ನ್ಯಾಯಾಲಯಕ್ಕೆ ನ್ಯಾಯಸಮ್ಮತವಾದ ಆದರೆ ಕಾಲಮಿತಿಯ ಮಾರ್ಗವನ್ನು ಒದಗಿಸುತ್ತದೆ, ಇದರಿಂದ ಯಾವುದೇ ಹಂತದಲ್ಲಿಯೂ ನ್ಯಾಯವು ಅನಂತವಾಗಿ ವಿಳಂಬವಾಗುವುದಿಲ್ಲ.

ಇದು ವಿದ್ಯಾರ್ಥಿಗಳಿಗೆ ಏನು ಅರ್ಥೈಸುತ್ತದೆ

ಒಟ್ಟಾಗಿ ನೋಡಿದಾಗ, ಈ ಬದಲಾವಣೆಗಳು ಒಂದೇ ಒಂದು ಸಂದೇಶವನ್ನು ಸಾರುತ್ತವೆ: ಪರೀಕ್ಷಾ ವಂಚನೆ ಮಾಡುವವರಿಗೆ ಇದು ದೊಡ್ಡ ಮಟ್ಟದಲ್ಲಿ ನಷ್ಟವನ್ನುಂಟು ಮಾಡುತ್ತದೆ ಮತ್ತು ಇದನ್ನು ಬಹಳ ವೇಗವಾಗಿ ಪತ್ತೆಹಚ್ಚಿ, ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗುತ್ತದೆ. ಸರ್ಕಾರಿ ಪರೀಕ್ಷೆಗೆ ಪ್ರಾಮಾಣಿಕವಾಗಿ ಸಿದ್ಧತೆ ನಡೆಸುವ ವಿದ್ಯಾರ್ಥಿಯು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನಾ ಜಾಲಗಳನ್ನು ಕಠಿಣವಾಗಿ ಹತ್ತಿಕ್ಕಲಾಗುತ್ತದೆ ಹಾಗೂ ಅಗತ್ಯವಿದ್ದಾಗ ನ್ಯಾಯವು ದೊರೆಯಲು ವರ್ಷಗಳು ಬೇಕಾಗುವುದಿಲ್ಲ ಎಂಬ ಹೆಚ್ಚಿನ ವಿಶ್ವಾಸವನ್ನು ಹೊಂದಬಹುದು.

ಯುವಜನರು ತಮ್ಮ ಭವಿಷ್ಯಕ್ಕಾಗಿ ಅವಲಂಬಿಸಿರುವ ಭಾರತದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿ, ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿಸಲು ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯದ ಸಾಧನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026 ಯು 2024ರ ಕಾಯ್ದೆಯ ಅಡಿಪಾಯದ ಮೇಲೆ ರೂಪುಗೊಂಡಿದೆ.

References:

Click here to see PDF

 

*****

 

(तथ्य सामग्री आईडी: 150807) आगंतुक पटल : 7


Provide suggestions / comments
इस विश्लेषक को इन भाषाओं में पढ़ें : English , हिन्दी , Telugu , Bengali , Malayalam , Assamese