Technology
ಭಾರತದ ಬಾಹ್ಯಾಕಾಶ ಸಾರ್ವಭೌಮತ್ವವನ್ನು ಬಲಪಡಿಸುವುದು
प्रविष्टि तिथि:
14 AUG 2026 16:18 PM
ನಾವೀನ್ಯತೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವುದು
ಬಾಹ್ಯಾಕಾಶ ನಾಯಕತ್ವದತ್ತ ಭಾರತದ ಹೆಜ್ಜೆ
ಭಾರತದ ಬಾಹ್ಯಾಕಾಶ ಪಯಣವು ಮೂಲಭೂತ ಸಾಮರ್ಥ್ಯಗಳನ್ನು ನಿರ್ಮಿಸುವುದರಿಂದ ಹಿಡಿದು ಮುಂದುವರಿದ, ಜಾಗತಿಕವಾಗಿ ಸ್ಪರ್ಧಾತ್ಮಕ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಒದಗಿಸುವವರೆಗೆ ವಿಕಸನಗೊಂಡಿದೆ. ಕಳೆದ ದಶಕದಲ್ಲಿ, ಸುಧಾರಣೆಗಳು ಈ ಕ್ಷೇತ್ರವನ್ನು ಖಾಸಗಿ ಉದ್ಯಮಗಳು, ಸ್ಟಾರ್ಟ್ಅಪ್ಗಳು ಮತ್ತು ಜಾಗತಿಕ ಸಹಭಾಗಿತ್ವಗಳಿಗೆ ಮುಕ್ತಗೊಳಿಸಿವೆ. ಭಾರತವು ಈಗ ಉಡಾವಣಾ ವ್ಯವಸ್ಥೆಗಳು, ಉಪಗ್ರಹಗಳು, ಬಾಹ್ಯಾಕಾಶ ಅನ್ವಯಿಕೆಗಳು ಮತ್ತು ಮಾನವಸಹಿತ ಬಾಹ್ಯಾಕಾಶ ಯಾನದಾದ್ಯಂತ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದೆ. ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಅದರ ಬಾಹ್ಯಾಕಾಶ ಆಕಾಂಕ್ಷೆಗಳು ಬಾಹ್ಯಾಕಾಶದ ಭವಿಷ್ಯವನ್ನು ರೂಪಿಸುತ್ತಿರುವ ಆತ್ಮವಿಶ್ವಾಸದ ಮತ್ತು ಸ್ವಾವಲಂಬಿ ರಾಷ್ಟ್ರವನ್ನು ಪ್ರತಿಬಿಂಬಿಸುತ್ತವೆ.

- ಭಾರತದ ಬಾಹ್ಯಾಕಾಶ ಪರಿಸರ ವ್ಯವಸ್ಥೆಯು ಅತ್ಯಂತ ವೇಗವಾಗಿ ವಿಸ್ತರಿಸಿದ್ದು, ನೋಂದಾಯಿತ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳ ಸಂಖ್ಯೆಯು 2014 ರಲ್ಲಿ 1 ಇದ್ದದ್ದು 2026 ರ ಹೊತ್ತಿಗೆ (ಆಗಸ್ಟ್ ವರೆಗೆ) ಸುಮಾರು 440 ಕ್ಕೆ ಏರಿಕೆಯಾಗಿದೆ.
- ಈ ವಿಸ್ತರಿಸುತ್ತಿರುವ ಪರಿಸರ ವ್ಯವಸ್ಥೆಯು, ಆಗಸ್ಟ್ 2026 ರ ಹೊತ್ತಿಗೆ 9 ಬಿಲಿಯನ್ ಯುಎಸ್ಡಿ ಮೌಲ್ಯವನ್ನು ಹೊಂದಿರುವ ಭಾರತದ ಬಾಹ್ಯಾಕಾಶ ಅರ್ಥವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಮುಂಬರುವ ದಶಕದಲ್ಲಿ ಇದು 40-45 ಬಿಲಿಯನ್ ಯುಎಸ್ಡಿಗೆ ತಲುಪುವ ನಿರೀಕ್ಷೆಯಿದೆ.
- ಭಾರತದ ಬಾಹ್ಯಾಕಾಶ ವಲಯದಲ್ಲಿನ ಖಾಸಗಿ ಹೂಡಿಕೆಯು ಸುಮಾರು ಆರು ಪಟ್ಟು ಹೆಚ್ಚಾಗಿದ್ದು, 2021-22 ರಲ್ಲಿ 100.5 ಮಿಲಿಯನ್ ಯುಎಸ್ಡಿ ಇದ್ದದ್ದು ಮಾರ್ಚ್ 31, 2026 ರ ವೇಳೆಗೆ 618.5 ಮಿಲಿಯನ್ ಯುಎಸ್ಡಿಗೆ ಏರಿಕೆಯಾಗಿದೆ. ಇದರಲ್ಲಿ ಕೇವಲ 2026 ರ ಅವಧಿಯಲ್ಲೇ 187 ಮಿಲಿಯನ್ ಯುಎಸ್ಡಿ ದಾಖಲಾಗಿದೆ.
- 2026ರ ಮಧ್ಯದ ವೇಳೆಗೆ, ಉಪಗ್ರಹ ಕಾರ್ಯಾಚರಣೆಗಳು, ಪೇಲೋಡ್ ಸ್ಥಾಪನೆ ಮತ್ತು ಉಡಾವಣಾ ಸೇವೆಗಳಿಗಾಗಿ 52 ಸರ್ಕಾರೇತರ ಸಂಸ್ಥೆಗಳಿಗೆ 113 ಅಧಿಕಾರ ಪತ್ರಗಳನ್ನು ನೀಡಲಾಗಿದೆ. ಅವುಗಳಲ್ಲಿ 18 ಸ್ಟಾರ್ಟ್ಅಪ್ಗಳಾಗಿವೆ.
|
ಅರ್ಥ್ ಅಬ್ಸರ್ವೇಶನ್ ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್ಶಿಪ್ (EO-PPP)
ಇಒ-ಪಿಪಿಪಿ ಎಂಬುದು IN-SPACe ನಿಂದ ಪ್ರಾರಂಭಿಸಲಾದ ಒಂದು ಅದ್ಭುತ ಸಾರ್ವಜನಿಕ-ಖಾಸಗಿ ಚೌಕಟ್ಟಾಗಿದೆ. ಇದು ಸುಮಾರು ₹1,200 ಕೋಟಿ ಖಾಸಗಿ ಹೂಡಿಕೆಯ ಬದ್ಧತೆಯೊಂದಿಗೆ ಭಾರತದ ಮೊದಲ ಖಾಸಗಿ ಮಾಲೀಕತ್ವದ ಭೂ ಪರಿವೀಕ್ಷಣಾ ಉಪಗ್ರಹಗಳ ಸಮೂಹವನ್ನು ಅಭಿವೃದ್ಧಿಪಡಿಸಲು ಸರ್ಕಾರದ ಮೇಲ್ವಿಚಾರಣೆ ಮತ್ತು ಖಾಸಗಿ ಉದ್ಯಮವನ್ನು ಒಂದೆಡೆ ತರುತ್ತದೆ.
|
- ಭಾರತದ ಬೆಳೆಯುತ್ತಿರುವ ಉಡಾವಣಾ ಸಾಮರ್ಥ್ಯಗಳು ಜಾಗತಿಕ ಬೇಡಿಕೆಯನ್ನು ಆಕರ್ಷಿಸುತ್ತಿದ್ದು, ವಿದೇಶಿ ಉಪಗ್ರಹ ಉಡಾವಣೆಗಳ ಸಂಖ್ಯೆಯು 2014 ಕ್ಕಿಂತ ಮೊದಲು 35 ಇದ್ದದ್ದು ಜನವರಿ 2026 ರ ಹೊತ್ತಿಗೆ 399 ಕ್ಕೆ ಏರಿಕೆಯಾಗಿದೆ.
- ಭಾರತದ ಜಾಗತಿಕ ಸಹಭಾಗಿತ್ವಗಳು ಅದರ ಬೆಳೆಯುತ್ತಿರುವ ಬಾಹ್ಯಾಕಾಶ ನಾಯಕತ್ವವನ್ನು ಬಲಪಡಿಸುತ್ತಿದ್ದು, ಸಂಶೋಧನೆ, ತಂತ್ರಜ್ಞಾನ, ಜಂಟಿ ಮಿಷನ್ಗಳು ಮತ್ತು ಸಾಮರ್ಥ್ಯ ವೃದ್ಧಿಯನ್ನು ಒಳಗೊಂಡಂತೆ 61 ದೇಶಗಳು ಮತ್ತು 5 ಬಹುಪಕ್ಷೀಯ ಸಂಸ್ಥೆಗಳೊಂದಿಗೆ 300 ಕ್ಕೂ ಹೆಚ್ಚು ಬಾಹ್ಯಾಕಾಶ ಸಹಕಾರ ಒಪ್ಪಂದಗಳನ್ನು ಹೊಂದಿವೆ.
ಕಾರ್ಯತಂತ್ರದ ಕ್ರಿಯೆಯ ಮೂಲಕ ಸುಧಾರಣೆಗಳಿಗೆ ಚಾಲನೆ
ಭಾರತದ ಬಾಹ್ಯಾಕಾಶ ಸುಧಾರಣೆಗಳು ಖಾಸಗಿ ಭಾಗವಹಿಸುವಿಕೆ, ಹೂಡಿಕೆ, ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿವೆ. ಈ ಕ್ರಮಗಳು ಸಾಂಪ್ರದಾಯಿಕ ಸರ್ಕಾರಿ ನೇತೃತ್ವದ ಬಾಹ್ಯಾಕಾಶ ಚಟುವಟಿಕೆಗಳಿಂದ ಆಚೆಗೆ ಈ ರಂಗವನ್ನು ವಿಸ್ತರಿಸಿವೆ.
- ಭಾರತವು 2020ರಲ್ಲಿ ತನ್ನ ಬಾಹ್ಯಾಕಾಶ ರಂಗವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಿತು, ಇದು ಉಪಗ್ರಹಗಳು, ಉಡಾವಣಾ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಅನ್ವಯಿಕೆಗಳಲ್ಲಿ ಉದ್ಯಮಗಳು ಹಾಗೂ ಸ್ಟಾರ್ಟ್ಅಪ್ಗಳಿಗೆ ಅವಕಾಶ ಮಾಡಿಕೊಟ್ಟಿತು. ಇದು ವಿಶಾಲವಾದ ರಾಷ್ಟ್ರೀಯ ಬಾಹ್ಯಾಕಾಶ ಪರಿಸರ ವ್ಯವಸ್ಥೆಯತ್ತ ಪ್ರಮುಖ ಬದಲಾವಣೆಯನ್ನು ಗುರುತಿಸಿತು.
- ಭಾರತೀಯ ಬಾಹ್ಯಾಕಾಶ ನೀತಿ 2023 ಬಾಹ್ಯಾಕಾಶ ಮೌಲ್ಯ ಸರಪಳಿಯಾದ್ಯಂತ ಖಾಸಗಿ ಭಾಗವಹಿಸುವಿಕೆಯನ್ನು ಮತ್ತಷ್ಟು ವಿಸ್ತರಿಸಿತು. ಇದು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಅಂಡ್ ಅಥರೈಸೇಶನ್ ಸೆಂಟರ್ ನ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸಹ ವ್ಯಾಖ್ಯಾನಿಸಿತು.
- ಇಸ್ರೋ ದ ವಾಣಿಜ್ಯ ವಿಭಾಗವಾದ ಎನ್ಎಸ್ಐಎಲ್, ಉಡಾವಣೆ, ಉಪಗ್ರಹ ಮತ್ತು ಬಾಹ್ಯಾಕಾಶ ಆಧಾರಿತ ಸೇವೆಗಳನ್ನು ಒದಗಿಸುತ್ತದೆ ಮತ್ತು ಇಸ್ರೋ ತಂತ್ರಜ್ಞಾನಗಳನ್ನು ಭಾರತೀಯ ಉದ್ಯಮಕ್ಕೆ ಹಸ್ತಾಂತರಿಸುತ್ತದೆ. ಇದರ ಆದಾಯವು 2021-22ರ ಹಣಕಾಸು ವರ್ಷದಲ್ಲಿದ್ದ ₹321.77 ಕೋಟಿಯಿಂದ 2024-25ರ ಹಣಕಾಸು ವರ್ಷದಲ್ಲಿ ₹3,000 ಕೋಟಿಗೂ ಹೆಚ್ಚು ಹಣಕ್ಕೆ ಏರಿಕೆಯಾಗಿದ್ದು, ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಬೆಳೆಯುತ್ತಿರುವ ವಾಣಿಜ್ಯೀಕರಣವನ್ನು ಪ್ರತಿಬಿಂಬಿಸುತ್ತದೆ.
- ಇಂದಿನವರೆಗೆ, ಇಸ್ರೋ/ಬಾಹ್ಯಾಕಾಶ ಇಲಾಖೆಯಲ್ಲಿ ಅಭಿವೃದ್ಧಿಪಡಿಸಲಾದ 83 ತಂತ್ರಜ್ಞಾನಗಳನ್ನು ಭಾರತೀಯ ಉದ್ಯಮಕ್ಕೆ ಹಸ್ತಾಂತರಿಸಲು NSIL 118 ತಂತ್ರಜ್ಞಾನ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಿದೆ.
- IN-SPACe ಏಕ-ಗವಾಕ್ಷಿ ವ್ಯವಸ್ಥೆಯ ಮೂಲಕ ಖಾಸಗಿ ಬಾಹ್ಯಾಕಾಶ ಚಟುವಟಿಕೆಗಳನ್ನು ಸಾಧ್ಯವಾಗಿಸುತ್ತದೆ. ಇದು 31 ಜನವರಿ 2026 ರ ಹೊತ್ತಿಗೆ ಉದ್ಯಮಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ಇಸ್ರೋದ 71 ತಂತ್ರಜ್ಞಾನ ವರ್ಗಾವಣೆಗಳನ್ನು ಸುಗಮಗೊಳಿಸಿದೆ.
- ಫೆಬ್ರವರಿ 2024 ರಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕಾಗಿ ವಿದೇಶಿ ನೇರ ಹೂಡಿಕೆ (FDI) ನಿಯಮಗಳನ್ನು ಸಡಿಲಗೊಳಿಸಲಾಯಿತು. ಉಪಗ್ರಹ ತಯಾರಿಕೆ ಮತ್ತು ಕಾರ್ಯಾಚರಣೆಗಳಿಗೆ ಶೇ. 74 ರಷ್ಟು, ಉಡಾವಣಾ ವಾಹನಗಳು ಮತ್ತು ಸ್ಪೇಸ್ಪೋರ್ಟ್ಗಳಿಗೆ ಶೇ. 49 ರಷ್ಟು ಹಾಗೂ ಉಪಗ್ರಹ ಮತ್ತು ಗ್ರೌಂಡ್-ಸೆಗ್ಮೆಂಟ್ ಘಟಕಗಳಿಗೆ ಶೇ. 100 ರಷ್ಟು ಎಫ್ಡಿಐಗೆ ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿ ನೀಡಲಾಗಿದೆ.
- ನಾರ್ಮ್ಸ್, ಗೈಡ್ಲೈನ್ಸ್ ಅಂಡ್ ಪ್ರೊಸೀಜರ್ಸ್ 2024 ಪಾರದರ್ಶಕ ಅಧಿಕಾರ ಮತ್ತು ಅನುಸರಣೆ ಅಗತ್ಯತೆಗಳನ್ನು ಸ್ಥಾಪಿಸಿತು. ಈ ಚೌಕಟ್ಟು ನಿಯಂತ್ರಕ ಮುನ್ಸೂಚನೆ ಮತ್ತು ಸುಲಭ ವ್ಯವಹಾರವನ್ನು (ease of doing business) ಹೆಚ್ಚಿಸುತ್ತದೆ.
- ಗುರಿ ಆಧಾರಿತ ಹಣಕಾಸು ಬೆಂಬಲವು ಭಾರತದ ಖಾಸಗಿ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. IN-SPACe ಸೀಡ್ ಫಂಡ್ ಯೋಜನೆಯು ಆರಂಭಿಕ ಹಂತದ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುತ್ತದೆ, ₹1,000 ಕೋಟಿ ವೆಂಚರ್ ಕ್ಯಾಪಿಟಲ್ ಫಂಡ್ ಬೆಳವಣಿಗೆಯ ಬಂಡವಾಳವನ್ನು ಒದಗಿಸುತ್ತದೆ ಮತ್ತು ₹500 ಕೋಟಿ ಟೆಕ್ನಾಲಜಿ ಅಡಾಪ್ಷನ್ ಫಂಡ್ ಬಾಹ್ಯಾಕಾಶ ತಂತ್ರಜ್ಞಾನಗಳ ವಿಶಾಲ ನಿಯೋಜನೆಯನ್ನು ಸಾಧ್ಯವಾಗಿಸುತ್ತದೆ. ಇದಲ್ಲದೆ, ಉಪಗ್ರಹ ಬಸ್ ಸಾಮರ್ಥ್ಯಗಳ ಅಭಿವೃದ್ಧಿಯನ್ನು ಬೆಂಬಲಿಸಲು ಸ್ಯಾಟಲೈಟ್ ಬಸ್ ಆಸ್ ಎ ಸರ್ವಿಸ್ ಯೋಜನೆಗೆ ₹75 ಕೋಟಿ ಮೀಸಲಿಡಲಾಗಿದೆ.

ಈ ಸುಧಾರಣೆಗಳು ಹೆಚ್ಚು ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿವೆ. ಅವು ಭಾರತೀಯ ಉದ್ಯಮಗಳು ಮತ್ತು ಸ್ಟಾರ್ಟ್ಅಪ್ಗಳಿಗೆ ಬಾಹ್ಯಾಕಾಶ ಮೌಲ್ಯ ಸರಪಳಿಯಾದ್ಯಂತ ಕೊಡುಗೆ ನೀಡಲು ಅನುವು ಮಾಡಿಕೊಡುತ್ತಿವೆ.
ಭೂಮಿಯನ್ನೂ ಮೀರಿ ತಲುಪುತ್ತಿರುವ ಬಾಹ್ಯಾಕಾಶ ಸಾಮರ್ಥ್ಯ
ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಉಪಗ್ರಹ ಅಭಿವೃದ್ಧಿಯಿಂದ ಚಂದ್ರ, ಮಂಗಳ ಮತ್ತು ಸೌರಮಂಡಲದಾದ್ಯಂತ ಸಂಕೀರ್ಣ ಮಿಷನ್ಗಳವರೆಗೆ ಪ್ರಗತಿ ಸಾಧಿಸಿದೆ. ಸಾಧನೆಗಳು ಪರಿಶೋಧನೆ, ದಿಕ್ಸೂಚಿ (navigation), ವಿಜ್ಞಾನ ಮತ್ತು ಸುಧಾರಿತ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತವೆ.
ಸ್ವಾವಲಂಬಿ ಬಾಹ್ಯಾಕಾಶ ಸಾರಿಗೆ
- ಭಾರತವು ನಾಲ್ಕು ಸ್ವದೇಶಿ ಉಡಾವಣಾ ವಾಹನಗಳನ್ನು ಕಾರ್ಯಾಚರಣೆಗೆ ತಂದಿದೆ: ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV), ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV), ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ III (GSLV Mk III), ಮತ್ತು ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (SSLV).
- ಈ ಉಡಾವಣಾ ವಾಹನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗ್ರಾಹಕರ ವಾಣಿಜ್ಯ ಉಡಾವಣೆಗಳ ಹೊರತಾಗಿ, ಭೂ ಪರಿವೀಕ್ಷಣೆ, ಸಂಪರ್ಕ, ದಿಕ್ಸೂಚಿ, ಬಾಹ್ಯಾಕಾಶ ವಿಜ್ಞಾನ ಮತ್ತು ಪರಿಶೋಧನೆಯನ್ನು ಬೆಂಬಲಿಸುತ್ತವೆ.
- ಕಳೆದ ಮೂರು ವರ್ಷಗಳಲ್ಲಿ (ಜುಲೈ 2023 ರಿಂದ ಜೂನ್ 2026), ಭಾರತವು 11 ರಾಷ್ಟ್ರೀಯ ಉಪಗ್ರಹಗಳು ಮತ್ತು ಅಂತರರಾಷ್ಟ್ರೀಯ ಗ್ರಾಹಕರಿಗಾಗಿ ಒಂಬತ್ತು ಉಪಗ್ರಹಗಳನ್ನು ಹೊತ್ತೊಯ್ಯುವ ಮೂಲಕ 12 ಉಡಾವಣಾ ವಾಹನ ಮಿಷನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
|
ಭಾರತವು ತನ್ನ ಉಡಾವಣಾ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ
ಬೆಳೆಯುತ್ತಿರುವ ರಾಷ್ಟ್ರೀಯ ಮತ್ತು ವಾಣಿಜ್ಯ ಬಾಹ್ಯಾಕಾಶ ಬೇಡಿಕೆಯನ್ನು ಪೂರೈಸಲು ಭಾರತವು ತನ್ನ ಉಡಾವಣಾ ಮೂಲಸೌಕರ್ಯವನ್ನು ಬಲಪಡಿಸುತ್ತಿದೆ. ಶ್ರೀಹರಿಕೋಟಾ ಪ್ರಸ್ತುತ ಎರಡು ಕಾರ್ಯಾಚರಣೆಯ ಉಡಾವಣಾ ಪೆಡ್ಗಳನ್ನು ಹೊಂದಿದೆ, ಮತ್ತು ಮುಂದಿನ ಪೀಳಿಗೆಯ ಉಡಾವಣಾ ವಾಹನಗಳಿಗಾಗಿ ಮೂರನೆಯದನ್ನು ಸ್ಥಾಪಿಸಲಾಗುತ್ತಿದೆ. ತಮಿಳುನಾಡಿನ ಕುಲಶೇಖರಪಟ್ಟಿನಂ ಕೂಡ ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್ ಮತ್ತು ಖಾಸಗಿ ವಲಯದ ಉಡಾವಣೆಗಳಿಗಾಗಿ ಭಾರತದ ಎರಡನೇ ರಾಕೆಟ್ ಉಡಾವಣಾ ತಾಣವಾಗಿ ಹೊರಹೊಮ್ಮುತ್ತಿದೆ. ಒಟ್ಟಾಗಿ, ಈ ಸೌಲಭ್ಯಗಳು ಉಡಾವಣಾ ಸಾಮರ್ಥ್ಯ, ಆವರ್ತನ ಮತ್ತು ಕಾರ್ಯಾಚರಣೆಯ ನಮ್ಯತೆಯನ್ನು ವಿಸ್ತರಿಸಲಿವೆ, ಸ್ಪರ್ಧಾತ್ಮಕ ಜಾಗತಿಕ ಬಾಹ್ಯಾಕಾಶ-ಉಡಾವಣಾ ಹಬ್ ಆಗಿ ಭಾರತದ ಸ್ಥಾನವನ್ನು ಬಲಪಡಿಸಲಿವೆ.
|
ಚಂದ್ರ ಪರಿಶೋಧನೆ — ಚಂದ್ರಯಾನ ಕಾರ್ಯಕ್ರಮ
- ಚಂದ್ರಯಾನ-1 (2008) ಭಾರತದ ಮೊದಲ ಚಂದ್ರ ಮಿಷನ್ ಆಗಿದ್ದು, ಚಂದ್ರನ ಮೇಲ್ಮೈನಲ್ಲಿ ನೀರಿನ ಅಣುಗಳು ಮತ್ತು ಹೈಡ್ರಾಕ್ಸಿಲ್ ಅನ್ನು ಪತ್ತೆಹಚ್ಚಿತು. ಇದು ಜಾಗತಿಕ ಚಂದ್ರ ವಿಜ್ಞಾನಕ್ಕೆ ಕೊಡುಗೆ ನೀಡಿದ ದೇಶವಾಗಿ ಭಾರತವನ್ನು ಸ್ಥಾಪಿಸಿತು.
· ಚಂದ್ರಯಾನ-2 (2019) 100 ಕಿಮೀ ಎತ್ತರದಿಂದ ಕಾರ್ಯಾಚರಣೆ ನಡೆಸಿತು ಮತ್ತು 30 ಸೆಂಮೀ ವರೆಗಿನ ರೆಸಲ್ಯೂಶನ್ನಲ್ಲಿ ಚಂದ್ರನ ಚಿತ್ರಗಳನ್ನು ತೆಗೆಯಿತು, ಇದು ಚಂದ್ರನ ಆರ್ಬಿಟರ್ ಪ್ಲಾಟ್ಫಾರ್ಮ್ನಿಂದ ತೆಗೆಯಲಾದ ಅತ್ಯುನ್ನತ ರೆಸಲ್ಯೂಶನ್ ಆಪ್ಟಿಕಲ್ ಚಿತ್ರಗಳಾಗಿವೆ.
- ಚಂದ್ರಯಾನ-3 (2023) ಭಾರತವನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್-ಲ್ಯಾಂಡ್ ಮಾಡಿದ ಮೊದಲ ದೇಶವನ್ನಾಗಿ ಮತ್ತು ಚಂದ್ರನ ಮೇಲೆ ಸಾಫ್ಟ್-ಲ್ಯಾಂಡ್ ಮಾಡಿದ ನಾಲ್ಕನೇ ರಾಷ್ಟ್ರವನ್ನಾಗಿ ಮಾಡಿತು.

|
ಭವಿಷ್ಯದ ಚಂದ್ರ ಮಿಷನ್ಗಳು
ಚಂದ್ರಯಾನ-4, ಈ ಮಿಷನ್ ಚಂದ್ರನ ಮಾದರಿ ಸಂಗ್ರಹಣೆ, ಚಂದ್ರನ ಮೇಲ್ಮೈನಿಂದ ಮೇಲಕ್ಕೆರುವುದು ಮತ್ತು ಮಾದರಿಯನ್ನು ಭೂಮಿಗೆ ಮರಳಿ ತರುವುದನ್ನು ಪ್ರದರ್ಶಿಸುತ್ತದೆ. ಈ ಮಿಷನ್ನ ಯೋಜಿತ ಸಮಯ 2027 ಆಗಿದೆ.
ಚಂದ್ರಯಾನ-5/LUPEX, ಜಂಟಿ ಇಸ್ರೋ-ಜಾಕ್ಸಾ ಮಿಷನ್ ಆಗಿದ್ದು, ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಚಂದ್ರನ ನೀರು ಸೇರಿದಂತೆ ಚಂದ್ರನ ಆವಿಶೀಲತೆಗಳನ್ನು ಅಧ್ಯಯನ ಮಾಡುತ್ತದೆ.
|
ಚಂದ್ರನ ಆಚೆಗೆ: ಮಂಗಳ, ಸೂರ್ಯ ಮತ್ತು ಆಳವಾದ ಬಾಹ್ಯಾಕಾಶ

- ಮಂಗಳಯಾನ 24 ಸೆಪ್ಟೆಂಬರ್ 2014 ರಂದು ಮಂಗಳ ಗ್ರಹದ ಕಕ್ಷೆಯನ್ನು ಸೇರಿತು, ಇದು ಭಾರತದ ಮೊದಲ ಗ್ರಹಾಂತರ ಮಿಷನ್ ಆಗಿದೆ. ಈ ನೌಕೆಯು ಯೋಜಿತ ಆರು ತಿಂಗಳ ಅವಧಿಯನ್ನು ಮೀರಿ 8 ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿತು.
- ಆಸ್ಟ್ರೋಸ್ಯಾಟ್, ಎಕ್ಸ್-ರೇ, ಆಪ್ಟಿಕಲ್ ಮತ್ತು ಯುವಿ ಸ್ಪೆಕ್ಟ್ರಲ್ ಬ್ಯಾಂಡ್ಗಳಲ್ಲಿ ಏಕಕಾಲದಲ್ಲಿ ಖಗೋಳ ಮೂಲಗಳನ್ನು ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿರುವ ಭಾರತದ ಮೊದಲ ಮೀಸಲಾದ ಖಗೋಳಶಾಸ್ತ್ರ ಮಿಷನ್ ಆಗಿದೆ.
- ಆದಿತ್ಯ-ಎಲ್1 (2023) ಸೂರ್ಯನನ್ನು ಅಧ್ಯಯನ ಮಾಡಲು ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಮಿಷನ್ ಆಗಿದೆ, ಇದನ್ನು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ಸೂರ್ಯ-ಭೂಮಿಯ L1 ಬಿಂದುವಿನಲ್ಲಿ ಸ್ಥಾಪಿಸಲಾಗಿದೆ. 27 TB ಗೂ ಹೆಚ್ಚು ಸೌರ ದತ್ತಾಂಶವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ.
- ಜನವರಿ 2024ರಲ್ಲಿ ಉಡಾವಣೆಗೊಂಡ XPoSat, ಎಕ್ಸ್-ರೇ ಧ್ರುವೀಕರಣ ಖಗೋಳಶಾಸ್ತ್ರದಲ್ಲಿ ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸಿತು. ಇದು ತೀವ್ರವಾದ ಬಾಹ್ಯಾಕಾಶ ಮೂಲಗಳ ವಿವರವಾದ ಅಧ್ಯಯನಗಳನ್ನು ಸಾಧ್ಯವಾಗಿಸುತ್ತದೆ.
- ಬಾಹ್ಯಾಕಾಶ ಡಾಕಿಂಗ್ ಪ್ರಯೋಗ, ಜನವರಿ 2025, ಸ್ವಾಯತ್ತ ಬಾಹ್ಯಾಕಾಶ ಡಾಕಿಂಗ್ ಮತ್ತು ಅನ್ಡಾಕಿಂಗ್ ಅನ್ನು ಪ್ರದರ್ಶಿಸಿದ ನಾಲ್ಕನೇ ದೇಶವಾಗಿ ಭಾರತವನ್ನು ಮಾಡಿತು.
ಆಕ್ಸಿಯಮ್-4: ಮಾನವ ಬಾಹ್ಯಾಕಾಶ ಯಾನ ಸಾಮರ್ಥ್ಯಗಳ ಪ್ರಗತಿ
- ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, 25 ಜೂನ್ 2025 ರಂದು ಉಡಾವಣೆಯಾದ ಆಕ್ಸಿಯಮ್-4 ಮಿಷನ್ನಲ್ಲಿ ISS (ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ) ಗೆ ಪ್ರಯಾಣಿಸಿದ ಭಾರತದ ಮೊದಲ ಗಗನಯಾತ್ರಿಯಾಗಿದ್ದಾರೆ. ಅವರ ಭಾಗವಹಿಸುವಿಕೆಯು ಮಾನವ ಬಾಹ್ಯಾಕಾಶ ಯಾನ ಮತ್ತು ಸೂಕ್ಷ್ಮ ಗುರುತ್ವಾಕರ್ಷಣೆ ಸಂಶೋಧನೆಯಲ್ಲಿ ಭಾರತಕ್ಕೆ ಮೌಲ್ಯಯುತ ಅನುಭವವನ್ನು ನೀಡಿತು.
- ಆಕ್ಸಿಯಮ್-4 ಮಿಷನ್ 15 ಜುಲೈ 2025 ರಂದು ಯಶಸ್ವಿಯಾಗಿ ಮುಕ್ತಾಯಗೊಂಡಿತು, ಇದು ಗಗನಯಾನ ಸೇರಿದಂತೆ ಮುಂಬರುವ ಮಾನವಸಹಿತ ಮಿಷನ್ಗಳಿಗಾಗಿ ಭಾರತದ ಕಾರ್ಯಾಚರಣೆಯ ಅನುಭವವನ್ನು ಬಲಪಡಿಸಿತು.
ನಾವಿಕ್ — ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ
- ನೇವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಶನ್ ಭಾರತದಾದ್ಯಂತ ಮತ್ತು ಅದರ ಗಡಿಯಿಂದ 1,500 ಕಿಮೀ ವರೆಗೆ ಸ್ಥಳೀಕರಣ, ನ್ಯಾವಿಗೇಷನ್ ಮತ್ತು ಸಮಯದ ಮಾಹಿತಿಯನ್ನು ಒದಗಿಸುತ್ತದೆ. ಇದು ಭಾರತದ ನ್ಯಾವಿಗೇಷನ್ ಸ್ವಾಯತ್ತತೆಯನ್ನು ಬಲಪಡಿಸುತ್ತದೆ ಹಾಗೂ ಆಯಕಟ್ಟಿನ ಮತ್ತು ನಾಗರಿಕ ಅನ್ವಯಿಕೆಗಳನ್ನು ಬೆಂಬಲಿಸುತ್ತದೆ.
- ಎರಡನೇ ತಲೆಮಾರಿನ ಮೊದಲ ಎರಡು ನಾವಿಕ್ ಉಪಗ್ರಹಗಳಾದ ಎನ್ವಿಎಎಸ್-01 ಮತ್ತು ಎನ್ವಿಎಎಸ್-02 ಅನ್ನು ಅನುಕ್ರಮವಾಗಿ ಮೇ 2023 ಮತ್ತು ಜನವರಿ 2025 ರಲ್ಲಿ ಉಡಾವಣೆ ಮಾಡಲಾಯಿತು.
- ಎನ್ವಿಎಎಸ್-03 ಉಡಾವಣೆಗೆ ಸಿದ್ಧವಾಗಿದ್ದರೆ, ಎನ್ವಿಎಎಸ್-04 ಮತ್ತು ಎನ್ವಿಎಎಸ್-05 ಮುಂದುವರಿದ ಹಂತದ ತಯಾರಿಕೆಯಲ್ಲಿವೆ. ಎರಡನೇ ತಲೆಮಾರಿನ ಉಪಗ್ರಹಗಳು ವ್ಯವಸ್ಥೆಯ ನಂಬಿಕಾರ್ಹತೆ ಮತ್ತು ನಿರಂತರತೆಯನ್ನು ಹೆಚ್ಚಿಸುತ್ತವೆ.
- ನಾವಿಕ್ ವ್ಯವಸ್ಥೆಯನ್ನು ಪವರ್-ಗ್ರಿಡ್ ಸಿಂಕ್ರೊನೈಸೇಶನ್, ರಿಯಲ್-ಟೈಮ್ ರೈಲು ಟ್ರ್ಯಾಕಿಂಗ್, ಆಧಾರ್ ಜಿಯೋ-ಟ್ಯಾಗಿಂಗ್ ಮತ್ತು ಮೊಬೈಲ್ ಚಿಪ್ಸೆಟ್ಗಳಲ್ಲಿ ಸಂಯೋಜಿಸಲಾಗುತ್ತಿದೆ.
- ಇದರ ಅಳವಡಿಕೆಯು ನಿರ್ಣಾಯಕ ಮೂಲಸೌಕರ್ಯ ಮತ್ತು ದೈನಂದಿನ ಸೇವೆಗಳಲ್ಲಿ ಉಪಗ್ರಹ ಆಧಾರಿತ ಸ್ಥಾನೀಕರಣವನ್ನು ವಿಸ್ತರಿಸುತ್ತಿದೆ.
ಭಾರತದ ವಿಸ್ತರಿಸುತ್ತಿರುವ ಸಾಮರ್ಥ್ಯಗಳು ಬಾಹ್ಯಾಕಾಶ ವಿಜ್ಞಾನ ಮತ್ತು ಪರಿಶೋಧನೆಯಲ್ಲಿ ಹೊಸ ಗಡಿಗಳನ್ನು ತೆರೆಯುತ್ತಿವೆ.
ಇವು ದೇಶದ ತಾಂತ್ರಿಕ ಸಾಮರ್ಥ್ಯಗಳನ್ನು ಮತ್ತು ಬಾಹ್ಯಾಕಾಶ ರಂಗದಲ್ಲಿ ಜಾಗತಿಕ ಸ್ಥಾನಮಾನವನ್ನು ಬಲಪಡಿಸುತ್ತವೆ.
ಭಾರತದ ಮುಂದಿನ ಬಾಹ್ಯಾಕಾಶ ಪಯಣ
ಭಾರತವು ಮಾನವ ಬಾಹ್ಯಾಕಾಶ ಯಾನ, ಆಳವಾದ ಬಾಹ್ಯಾಕಾಶ ಪರಿಶೋಧನೆ ಮತ್ತು ಸುಧಾರಿತ ಬಾಹ್ಯಾಕಾಶ ಮೂಲಸೌಕರ್ಯಗಳ ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಮುಂಬರುವ ಮಿಷನ್ಗಳು ನಿರಂತರ ಮಾನವ ಉಪಸ್ಥಿತಿ ಮತ್ತು ಸಂಕೀರ್ಣ ಕಕ್ಷೀಯ ಕಾರ್ಯಾಚರಣೆಗಳಿಗಾಗಿ ಸಾಮರ್ಥ್ಯಗಳನ್ನು ನಿರ್ಮಿಸುತ್ತವೆ.
- ಗಗನಯಾನ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮಕ್ಕೆ ಜನವರಿ 2019 ರಲ್ಲಿ ಅನುಮೋದನೆ ನೀಡಲಾಯಿತು. ಇದರ ವ್ಯಾಪ್ತಿಯನ್ನು ಸೆಪ್ಟೆಂಬರ್ 2024 ರಲ್ಲಿ ವಿಸ್ತರಿಸಿ, ಒಟ್ಟು 8 ಮಿಷನ್ಗಳನ್ನು ಒಳಗೊಂಡಂತೆ ₹20,193 ಕೋಟಿ ವೆಚ್ಚಕ್ಕೆ ಪರಿಷ್ಕರಿಸಲಾಯಿತು — ಇದರಲ್ಲಿ ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್-01) ನ ಆರಂಭಿಕ ಫ್ಲೈಟ್ಗಳು ಸೇರಿವೆ.
- ಇದು 3 ಭಾರತೀಯ ಗಗನಯಾತ್ರಿಗಳ ತಂಡವನ್ನು 400-ಕಿಮೀ ಕಕ್ಷೆಗೆ ಮೂರು ದಿನಗಳ ಮಿಷನ್ಗಾಗಿ ಉಡಾವಣೆ ಮಾಡುವ ಗುರಿಯನ್ನು ಹೊಂದಿದೆ.
- ವ್ಯೋಮಮಿತ್ರ ಅರ್ಧ-ಮಾನವರೂಪಿ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಪರಿಶೀಲಿಸಲು ಮೊದಲ ಸಿಬ್ಬಂದಿರಹಿತ ಪ್ರಯೋಗಾತ್ಮಕ ಮಿಷನ್ ಅನ್ನು 2026 ರ 4 ನೇ ತ್ರೈಮಾಸಿಕದಲ್ಲಿ (Q4) ಗುರಿಯಾಗಿಸಲಾಗಿದೆ. ಸಿಬ್ಬಂದಿಸಹಿತ ಮಿಷನ್ ಅನ್ನು 2027ರ ವೇಳೆಗೆ ಗುರಿಯಾಗಿಸಲಾಗಿದೆ.
- ಭಾರತದ ಯೋಜಿತ ಐದು ಮಾಡ್ಯೂಲ್ಗಳ ಬಾಹ್ಯಾಕಾಶ ನಿಲ್ದಾಣ ಭಾರತೀಯ ಅಂತರಿಕ್ಷ ಸ್ಟೇಷನ್ (BAS) ಅನ್ನು 2035 ರ ವೇಳೆಗೆ ಕಾರ್ಯಾಚರಣೆಗೆ ತರುವ ಗುರಿಯನ್ನು ಹೊಂದಿದೆ, ಮತ್ತು ಬಿಎಎಸ್-01 ಅನ್ನು 2028 ರ ವೇಳೆಗೆ ಉಡಾವಣೆ ಮಾಡಲು ಯೋಜಿಸಲಾಗಿದೆ. ಇದು ಸುದೀರ್ಘ ಅವಧಿಯ ಮಾನವ ಬಾಹ್ಯಾಕಾಶ ಯಾನ, ಸೂಕ್ಷ್ಮ ಗುರುತ್ವಾಕರ್ಷಣೆ ಸಂಶೋಧನೆ ಮತ್ತು ಸುಧಾರಿತ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ.
- SPADEX-2 ಮತ್ತು SPADEX-3: ಭವಿಷ್ಯದ ಚಂದ್ರಯಾನ-4, ಗಗನಯಾನ ಮತ್ತು ಬಿಎಎಸ್ ಮಿಷನ್ಗಳಿಗಾಗಿ ಕಕ್ಷೀಯ ಡಾಕಿಂಗ್ ತಂತ್ರಜ್ಞಾನಗಳನ್ನು ಮುನ್ನಡೆಸಲು ಈ ಮಿಷನ್ಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಇವು ಬಾಹ್ಯಾಕಾಶ ನೌಕೆಯ ಡಾಕಿಂಗ್, ಮಾದರಿ ವರ್ಗಾವಣೆ, ಸಿಬ್ಬಂದಿ ವರ್ಗಾವಣೆ ಹಾಗೂ ವಿದ್ಯುತ್, ದ್ರವ ಮತ್ತು ಇಂಧನ ವರ್ಗಾವಣೆಯಂತಹ ಸಾಮರ್ಥ್ಯಗಳನ್ನು ಸಾಧ್ಯವಾಗಿಸುತ್ತವೆ.
- ಶುಕ್ರ ಕಕ್ಷಕ ಮಿಷನ್: ಮಾರ್ಚ್ 2028 ರಲ್ಲಿ ಉಡಾವಣೆಗೆ ಗುರಿಯಿಡಲಾಗಿದ್ದು, ಈ ಮಿಷನ್ ಶುಕ್ರ ಗ್ರಹದ ಭೂವಿಜ್ಞಾನ, ವಾತಾವರಣ ಮತ್ತು ಅಯಾನುಮಂಡಲವನ್ನು ಅಧ್ಯಯನ ಮಾಡುತ್ತದೆ. ಇದು ಸುಧಾರಿತ ಏರೋಬ್ರೇಕಿಂಗ್ ಮತ್ತು ಥರ್ಮಲ್-ಮ್ಯಾನೇಜ್ಮೆಂಟ್ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ.
|
ಭಾರತದ ಮುಂದಿನ ಪೀಳಿಗೆಯ ಬಾಹ್ಯಾಕಾಶ ಸಾಮರ್ಥ್ಯಗಳನ್ನು ರೂಪಿಸುತ್ತಿರುವ ಮುನ್ನಡೆದ ತಂತ್ರಜ್ಞಾನಗಳು
- ಇಸ್ರೋ 200-ಟನ್ ಥ್ರಸ್ಟ್ ಸಾಮರ್ಥ್ಯದ ಸೆಮಿ-ಕ್ರಯೋಜೆನಿಕ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಹೆಚ್ಚು ಶಕ್ತಿಶಾಲಿ ಉಡಾವಣಾ ವಾಹನಗಳನ್ನು ಮತ್ತು ಹೆಚ್ಚಿನ ಪೇಲೋಡ್ ಸಾಮರ್ಥ್ಯವನ್ನು ಸಾಧ್ಯವಾಗಿಸಲಿದೆ.
- ಉಡಾವಣಾ ವಾಹನ ಮಾರ್ಕ್-3 ಗಾಗಿ ಸೆಮಿ-ಕ್ರಯೋಜೆನಿಕ್ ಬೂಸ್ಟರ್ ಹಂತವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಎಲ್ವಿಎಂ3 ನ ಪೇಲೋಡ್ ಹೊರುವ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ.
- ಇಸ್ರೋ ಲಂಬ ಉಡಾವಣೆ ಮತ್ತು ಲಂಬವಾಗಿ ಇಳಿಯುವ ತಂತ್ರಜ್ಞಾನವನ್ನು ಬಳಸಿಕೊಂಡು ಬೂಸ್ಟರ್ ಮರುಪಡೆಯುವಿಕೆಯನ್ನು ಪ್ರದರ್ಶಿಸುತ್ತಿದೆ. ಇದು ರಾಕೆಟ್-ಹಂತದ ಮರುಬಳಕೆಯನ್ನು ಸಾಧ್ಯವಾಗಿಸಲಿದ್ದು, ಭವಿಷ್ಯದ ಉಡಾವಣಾ ವೆಚ್ಚಗಳನ್ನು ಕಡಿಮೆ ಮಾಡುತ್ತದೆ.
- ಇಸ್ರೋ ಲಿಕಿಡ್ ಆಕ್ಸಿಜನ್-ಮಿಥೇನ್ ಚಾಲನೆಯನ್ನು ಬಳಸಿಕೊಂಡು ಭಾಗಶಃ ಮರುಬಳಕೆ ಮಾಡಬಹುದಾದ ಮುಂದಿನ ಪೀಳಿಗೆಯ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಹೆಚ್ಚಿನ ಪೇಲೋಡ್ ಸಾಮರ್ಥ್ಯವನ್ನು ಒದಗಿಸುತ್ತದೆ ಮತ್ತು ಹೆಚ್ಚು ಆಗಾಗ್ಗೆ ಹಾಗೂ ವೆಚ್ಚ-ಸಮರ್ಥ ಉಡಾವಣೆಗಳಿಗೆ ಬೆಂಬಲ ನೀಡುತ್ತದೆ.
- ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಕಾರ್ಯಕ್ರಮಕ್ಕಾಗಿ ಇಸ್ರೋ ರೆಕ್ಕೆಗಳಿರುವ ಆರ್ಬಿಟಲ್ ಮರು-ಪ್ರವೇಶ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ಸಾರಿಗೆಗಾಗಿ ಕಕ್ಷೀಯ ಮರು-ಪ್ರವೇಶ ಮತ್ತು ರನ್ವೇ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲಿದೆ.
- ಇಸ್ರೋ ಗಾಳಿಯನ್ನು ಬಳಸಿಕೊಂಡು ಚಲಿಸುವ ಪ್ರೊಪಲ್ಷನ್ ವ್ಯವಸ್ಥೆಯನ್ನು ಮತ್ತು ತಂತ್ರಜ್ಞಾನ ಪ್ರದರ್ಶನ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಈ ತಂತ್ರಜ್ಞಾನವು ಹೆಚ್ಚು ಸಮರ್ಥವಾದ ವಾತಾವರಣದ ಹಾರಾಟವನ್ನು ಮತ್ತು ಮುನ್ನಡೆದ ಮರುಬಳಕೆ ಮಾಡಬಹುದಾದ ಉಡಾವಣಾ ವ್ಯವಸ್ಥೆಗಳನ್ನು ಸಾಧ್ಯವಾಗಿಸಲಿದೆ.
|
ಮುಂದಿನ ಹಂತವು ಮಾನವ ಬಾಹ್ಯಾಕಾಶ ಯಾನ, ಗ್ರಹಗಳ ಪರಿಶೋಧನೆ ಮತ್ತು ಸುಧಾರಿತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಆಳವಾಗಿಸಲಿದೆ (ಗಟ್ಟಿಗೊಳಿಸಲಿದೆ). ಈ ಪ್ರಯತ್ನಗಳು ಪ್ರಮುಖ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗುವ ಭಾರತದ ಆಕಾಂಕ್ಷೆಗೆ ಬೆಂಬಲ ನೀಡುತ್ತವೆ.
References
Department of Space
Ministry of Science & Technology
PIB Backgrounder
Lok Sabha
Indian Space Research Organisation
Vice President's Secretariat
Prime Minister's Office
Click here for the pdf file.
*****
(तथ्य सामग्री आईडी: 150920)
आगंतुक पटल : 11
Provide suggestions / comments