Infrastructure

ಗೃಹಬಳಕೆಯ ಪಿ.ಎನ್.ಜಿ. ಸಂಪರ್ಕಗಳ ಪ್ರೋತ್ಸಾಹಕ್ಕೆ ಪ್ರೋತ್ಸಾಹಕ ಯೋಜನೆ

प्रविष्टि तिथि: 13 SEP 2026 11:05 AM

ಪ್ರತಿಯೊಂದು ಮನೆಗೂ ಶುದ್ಧ ಹಾಗೂ ಕೈಗೆಟುಕುವ ಬೆಲೆಯ ಪೈಪ್‌ಲೈನ್ ಅಡುಗೆ ಅನಿಲ

ಅವಲೋಕನ

ಪೈಪ್‌ಲೈನ್ ನೈಸರ್ಗಿಕ ಅನಿಲ (ಪಿಎನ್‌ಜಿ) ವಿಸ್ತರಣೆಯು ಶುದ್ಧ ಗೃಹ ಇಂಧನ ಮತ್ತು ಇಂಧನ ಭದ್ರತೆಯ ಕಡೆಗೆ ಭಾರತದ ಪರಿವರ್ತನೆಯ ಪ್ರಮುಖ ಭಾಗವಾಗಿದೆ. ಮನೆಗಳಿಗೆ ಪಿಎನ್‌ಜಿ ಪೂರೈಸುವುದು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್ ಅಭಿವೃದ್ಧಿಯ ಒಂದು ಭಾಗವಾಗಿದೆ. ಇಂತಹ ನೆಟ್‌ವರ್ಕ್ ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕಾ ಘಟಕಗಳಿಗೆ ಸೇವೆ ಸಲ್ಲಿಸುವ ಪೈಪ್‌ಲೈನ್‌ಗಳು ಮತ್ತು ಸಂಬಂಧಿತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ಯಿಂದ ಅಧಿಕಾರ ಪಡೆದ ಸಂಸ್ಥೆಗಳು ಇದನ್ನು ಅಭಿವೃದ್ಧಿಪಡಿಸುತ್ತವೆ. ಪಿಎನ್‌ಜಿRB ದೇಶದ ಇಡೀ ಮುಖ್ಯ ಭೂಭಾಗವನ್ನು ಒಳಗೊಂಡಿರುವ 309 ಭೌಗೋಳಿಕ ಪ್ರದೇಶಗಳಲ್ಲಿ ಸಂಸ್ಥೆಗಳಿಗೆ ಅಧಿಕಾರ ನೀಡಿದೆ. 18 ಆಗಸ್ಟ್ 2026 ರ ಹೊತ್ತಿಗೆ, ದೇಶದಾದ್ಯಂತ 1.74 ಕೋಟಿ ಗೃಹಬಳಕೆಯ ಪಿಎನ್‌ಜಿ ಸಂಪರ್ಕಗಳಿದ್ದವು.

ಪಿಎನ್‌ಜಿ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು, ಗೃಹಬಳಕೆಯ ಪಿಎನ್‌ಜಿ ಸಂಪರ್ಕಗಳ ಪ್ರೋತ್ಸಾಹಕ್ಕಾಗಿ ಪ್ರೋತ್ಸಾಹಕ ಯೋಜನೆಯನ್ನು 18 ಆಗಸ್ಟ್ 2026 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು 1 ಸೆಪ್ಟೆಂಬರ್ 2026 ರಿಂದ ಜಾರಿಗೆ ಬಂದಿತು.

ಯೋಜನೆಯ ಬಗ್ಗೆ

ಗೃಹಬಳಕೆಯ ಪಿಎನ್‌ಜಿ ಸಂಪರ್ಕಗಳ ಪ್ರೋತ್ಸಾಹಕ್ಕಾಗಿ ಪ್ರೋತ್ಸಾಹಕ ಯೋಜನೆಯು ಸಕ್ರಿಯ ಗೃಹಬಳಕೆಯ ಪಿಎನ್‌ಜಿ ಸಂಪರ್ಕಗಳ ಬೆಳವಣಿಗೆಯನ್ನು ವೇಗಗೊಳಿಸಲು ಶ್ರಮಿಸುತ್ತದೆ. ಪೈಪ್‌ಲೈನ್ ಪೂರೈಕೆಯ ಮೂಲಕ ಮನೆಗಳು ಶುದ್ಧ, ಸುರಕ್ಷಿತ ಮತ್ತು ಕೈಗೆಟುಕುವ ಬೆಲೆಯ ಅಡುಗೆ ಅನಿಲವನ್ನು ಪಡೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ಯೋಜನೆಯು ಬಿಲ್ ಮಾಡದ ಸಂಪರ್ಕಗಳನ್ನು ಸಕ್ರಿಯ ಮತ್ತು ಬಿಲ್ ಮಾಡುವ ಸಂಪರ್ಕಗಳಾಗಿ ಪರಿವರ್ತಿಸಲು ಸಿಜಿಡಿ ಸಂಸ್ಥೆಗಳಿಗೆ ಪ್ರೋತ್ಸಾಹ ಧನವನ್ನು ನೀಡುತ್ತದೆ. ಇದು ಹೊಸ ಪ್ರದೇಶಗಳಿಗೆ ಪಿಎನ್‌ಜಿ ನೆಟ್‌ವರ್ಕ್ ವಿಸ್ತರಣೆಗೂ ಪ್ರೋತ್ಸಾಹ ನೀಡುತ್ತದೆ. ಈ ಯೋಜನೆಯು ಆರು ತಿಂಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ.

ಈ ಯೋಜನೆಯಡಿಯಲ್ಲಿ ಪ್ರತಿಯೊಂದು ಭೌಗೋಳಿಕ ಪ್ರದೇಶಕ್ಕೂ ಕನಿಷ್ಠ ಸಂಖ್ಯೆಯ ಸಂಪರ್ಕಗಳನ್ನು ನಿಗದಿಪಡಿಸಲಾಗಿದೆ. ಕಾರ್ಯಕ್ಷಮತೆಯ ಅವಧಿಯಲ್ಲಿ, ಅರ್ಹ ಸಿಜಿಡಿ ಸಂಸ್ಥೆಗಳು ಈ ಮಿತಿಗಿಂತ ಹೆಚ್ಚಿನ ಬಿಲ್ ಮಾಡಲಾದ ಗೃಹಬಳಕೆಯ ಸಂಪರ್ಕಗಳನ್ನು ಸೇರಿಸಬೇಕಾಗುತ್ತದೆ. ಪ್ರತಿಯೊಂದು ಅಂತಹ ಹೆಚ್ಚುವರಿ ಸಂಪರ್ಕಕ್ಕೂ, ಸಂಸ್ಥೆಯು 200 ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ನಷ್ಟು ಹೆಚ್ಚುವರಿ ಅನಿಲ ಹಂಚಿಕೆಯನ್ನು ಗಳಿಸುತ್ತದೆ. ಈ ಅನಿಲವು ದೇಶೀಯವಾಗಿ ಉತ್ಪಾದಿಸಲ್ಪಡುವ 'ಅಡ್ಮಿನಿಸ್ಟರ್ಡ್ ಪ್ರೈಸ್ ಮೆಕಾನಿಸಂ' ಅನಿಲವಾಗಿದ್ದು, ಇದರ ಬೆಲೆ ಕಡಿಮೆಯಿರುತ್ತದೆ.

ಈ ಹೆಚ್ಚುವರಿ ಹಂಚಿಕೆಯು ಹೆಚ್ಚು ದುಬಾರಿಯಾದ ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ಭರಿಸುತ್ತದೆ. ಸಿಜಿಡಿ ಸಂಸ್ಥೆಗಳು ಪ್ರಸ್ತುತ ತಮ್ಮ ಸಂಕುಚಿತ ನೈಸರ್ಗಿಕ ಅನಿಲ (ಸಾರಿಗೆ) ವಿಭಾಗಕ್ಕಾಗಿ ಈ ಎಲ್‌ಎನ್‌ಜಿ ಯನ್ನು ಖರೀದಿಸುತ್ತವೆ. ಇದನ್ನು ಅಗ್ಗದ APM ಅನಿಲದಿಂದ ಬದಲಾಯಿಸುವುದರಿಂದ ಅವುಗಳ ಒಟ್ಟಾರೆ ಅನಿಲ ಸಂಗ್ರಹಣೆ ವೆಚ್ಚ ಕಡಿಮೆಯಾಗುತ್ತದೆ.

ಆದ್ದರಿಂದ ಗೃಹಬಳಕೆಯ ಸಂಪರ್ಕಕ್ಕಾಗಿ ವಿನಿಯೋಗಿಸಲಾದ ಬಂಡವಾಳದ ಮರುಪಾವತಿ ಅವಧಿಯು ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಸುಮಾರು ಹತ್ತು ವರ್ಷಗಳಿಂದ ಸುಮಾರು ಮೂರು ವರ್ಷಗಳಿಗೆ ಇಳಿಯುವ ನಿರೀಕ್ಷೆಯಿದೆ. ಹೀಗಾಗಿ ಕಂಪನಿಗಳಿಗೆ ಮನೆಗಳಿಗೆ ವೇಗವಾಗಿ ಸಂಪರ್ಕ ನೀಡಲು ಬಲವಾದ ವಾಣಿಜ್ಯಿಕ ಕಾರಣ ದೊರೆಯುತ್ತದೆ.

ಮನೆಗಳಿಗೆ ಪಿಎನ್‌ಜಿ ನಿಯ ಅನುಕೂಲಗಳು

ಪಿಎನ್‌ಜಿ ಮನೆಗಳಿಗೆ ಸುಲಭ ಬಳಕೆ, ವೆಚ್ಚ ಉಳಿತಾಯ ಮತ್ತು ಅಡೆತಡೆಗಳಿಲ್ಲದ ಲಭ್ಯತೆ ಸೇರಿದಂತೆ ಹಲವಾರು ಪ್ರಮುಖ ಅನುಕೂಲಗಳನ್ನು ನೀಡುತ್ತದೆ. ಗೃಹ ಬಳಕೆದಾರರಿಗೆ ಪಿಎನ್‌ಜಿ ಯ ಪ್ರಮುಖ ಅನುಕೂಲಗಳು ಈ ಕೆಳಗಿನಂತಿವೆ:
 

  • ಸುರಕ್ಷಿತ ಮತ್ತು ಭದ್ರ: ಅನಿಲವು ಕಡಿಮೆ ಒತ್ತಡದಲ್ಲಿ ಭೂಗತ ಪೈಪ್‌ಲೈನ್‌ಗಳ ಮೂಲಕ ಹರಿಯುತ್ತದೆ, ಆದ್ದರಿಂದ ಸಿಲಿಂಡರ್‌ಗಳನ್ನು ಸಂಗ್ರಹಿಸುವ ಅಥವಾ ನಿರ್ವಹಿಸುವ ಅಗತ್ಯವಿರುವುದಿಲ್ಲ. ಗಾಳಿಗಿಂತ ಹಗುರವಾಗಿರುವುದರಿಂದ, ಅಪರೂಪದ ಸೋರಿಕೆಯ ಸಂದರ್ಭದಲ್ಲಿ ಇದು ವೇಗವಾಗಿ ಮೇಲೇರಿ ಹರಡುತ್ತದೆ.
  • ದೈನಂದಿನ ಅನುಕೂಲತೆ: ಸಿಲಿಂಡರ್‌ಗಳ ಬುಕಿಂಗ್, ಸಂಗ್ರಹಣೆ ಅಥವಾ ಬದಲಾಯಿಸುವ ಅಗತ್ಯವಿಲ್ಲ. ಅನಿಲವು ದಿನದ 24 ಗಂಟೆಯೂ ಮನೆಯಲ್ಲಿ ಲಭ್ಯವಿರುತ್ತದೆ. ವಿದ್ಯುತ್ ಅಥವಾ ನೀರಿನಂತೆ ಮೀಟರ್ ಬಳಕೆಯ ಆಧಾರದ ಮೇಲೆ ಬಿಲ್‌ಗಳನ್ನು ನೀಡಲಾಗುತ್ತದೆ.
  • ಕಡಿಮೆ ವೆಚ್ಚಗಳು: ಒಂದು ಕುಟುಂಬವು ತಾನು ನಿಜವಾಗಿ ಬಳಸುವ ಅನಿಲಕ್ಕೆ ಮಾತ್ರ ಹಣ ಪಾವತಿಸುತ್ತದೆ. ಪ್ರತಿ-ಯೂನಿಟ್ ಶಕ್ತಿಯ ಆಧಾರದ ಮೇಲೆ, ಪಿಎನ್‌ಜಿ ಸಾಮಾನ್ಯವಾಗಿ ಎಲ್‌ಪಿಜಿ ಗಿಂತ ಕಡಿಮೆ ವೆಚ್ಚವಾಗುತ್ತದೆ. ಆದ್ದರಿಂದ ಮಾಸಿಕ ಇಂಧನ ವೆಚ್ಚಗಳು ಕಾಲಕ್ರಮೇಣ ಕಡಿಮೆಯಾಗುತ್ತವೆ.
  • ಶುದ್ಧ ಪರಿಸರ: ಸಾಂಪ್ರದಾಯಿಕ ಅಡುಗೆ ಇಂಧನಗಳಿಗಿಂತ ಪಿಎನ್‌ಜಿ ಶುದ್ಧವಾಗಿ ಉರಿಯುತ್ತದೆ ಮತ್ತು ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುತ್ತದೆ. ಒಳಾಂಗಣ ಗಾಳಿಯು ಆರೋಗ್ಯಕರವಾಗಿರುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆಯಿರುತ್ತದೆ.
  • ಖಚಿತ ಪೂರೈಕೆ: ಪೈಪ್‌ಲೈನ್ ಪೂರೈಕೆಯು ನಿರಂತರವಾಗಿರುತ್ತದೆ ಮತ್ತು ಸಿಲಿಂಡರ್ ವಿತರಣೆಯ ಸಾಗಣೆ ತೊಂದರೆಗಳಿಂದ ಮುಕ್ತವಾಗಿರುತ್ತದೆ. ಎತ್ತರದ ಕಟ್ಟಡಗಳು ಮತ್ತು ಕಿಷ್ಕಿಂಧೆಯ ನಗರ ಜನವಸತಿಗಳಲ್ಲಿರುವ ಮನೆಗಳು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ.

ಪಿಎನ್‌ಜಿ ವಿಸ್ತರಣೆಗಾಗಿ ಕೈಗೊಂಡ ಉದ್ಯಮಗಳು

ವೇಗದ ಅನುಮೋದನೆಗಳು, ಯುಕ್ತಗೊಳಿಸಿದ ತೆರಿಗೆಗಳು ಮತ್ತು ಸರಳೀಕೃತ ಮೂಲಸೌಕರ್ಯ ಅಭಿವೃದ್ಧಿಯ ಕ್ರಮಗಳ ಮೂಲಕ ಪಿಎನ್‌ಜಿ ವಿಸ್ತರಣೆಯನ್ನು ಬೆಂಬಲಿಸಲಾಗುತ್ತಿದೆ. ಡಿಜಿಟಲ್ ವೇದಿಕೆಗಳು ಮತ್ತು ಜಾಗೃತಿ ಉದ್ಯಮಗಳು ಮನೆಗಳು ಪಿಎನ್‌ಜಿ ಗೆ ಪರಿವರ್ತನೆಗೊಳ್ಳುವುದನ್ನು ಸರಳ, ವೇಗ ಮತ್ತು ಹೆಚ್ಚು ಸುಲಭವಾಗಿಸುತ್ತಿವೆ:
 

  • ಸರಳೀಕೃತ ನಿಯಂತ್ರಕ ಅನುಮೋದನೆಗಳು : 'ನ್ಯಾಚುರಲ್ ಗ್ಯಾಸ್ ಆಂಡ್ ಪೆಟ್ರೋಲಿಯಂ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಷನ್ ಆರ್ಡರ್, 2026' ರ ಅಡಿಯಲ್ಲಿ ವೇಗವರ್ಧಿತ ಅನುಮೋದನೆ ಚೌಕಟ್ಟನ್ನು ಹೊರಡಿಸಲಾಗಿದೆ. ಈ ಆದೇಶವು ಪೈಪ್‌ಲೈನ್ ರೈಟ್-ಆಫ್-ವೇ ಗಾಗಿ ಏಕರೂಪದ ಶುಲ್ಕಗಳನ್ನು ಸಹ ಪರಿಚಯಿಸುತ್ತದೆ, ಇದು ಪಿಎನ್‌ಜಿ ಪೈಪ್‌ಲೈನ್‌ಗಳನ್ನು ಅಳವಡಿಸಲು ಜಾಗ ಅಥವಾ ಸಾರ್ವಜನಿಕ ಪ್ರದೇಶಗಳನ್ನು ಬಳಸಲು ಅನುಮತಿಯನ್ನು ಒಳಗೊಂಡಿದೆ. ಅರ್ಜಿಗಳನ್ನು ಈಗ ಆದ್ಯತೆಯ ಮೇಲೆ ಮತ್ತು ನಿಗದಿತ ಕಾಲಮಿತಿಯೊಳಗೆ ಪ್ರಕ್ರಿಯೆಗೊಳಿಸಲಾಗುತ್ತದೆ.
  • ಕಡಿಮೆಗೊಳಿಸಿದ ಮೌಲ್ಯವರ್ಧಿತ ತೆರಿಗೆ : ನೈಸರ್ಗಿಕ ಅನಿಲದ ಮೇಲಿನ ವಿಎಟಿ ಅನ್ನು ಶೇಕಡಾ 5 ಕ್ಕೆ ಇಳಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಹಲವಾರು ರಾಜ್ಯಗಳು ಈಗಾಗಲೇ ಹಾಗೆ ಮಾಡಿದ್ದು, ಗ್ರಾಹಕರಿಗೆ ಪೈಪ್‌ಲೈನ್ ಅನಿಲವನ್ನು ಅಗ್ಗವಾಗಿಸಿವೆ.
  • ರಾಷ್ಟ್ರೀಯ ಪಿಎನ್‌ಜಿ ಅಭಿಯಾನ 2.: ಭೌಗೋಳಿಕ ಪ್ರದೇಶಗಳಾದ್ಯಂತ ಡಿಪಿಎನ್‌ಜಿ ಸಂಪರ್ಕಗಳನ್ನು ವೇಗಗೊಳಿಸಲು 1 ಜನವರಿಯಿಂದ 30 ಜೂನ್ 2026 ರವರೆಗೆ ರವರೆಗೆ ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸಲಾಯಿತು.
  • ಏಕೀಕೃತ ಪಿಎನ್‌ಜಿ ನೋಂದಣಿ ಪೋರ್ಟಲ್: ಏಕ-ಗವಾಕ್ಷಿ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹೊಸ ಸಂಪರ್ಕಗಳಿಗೆ ಅರ್ಜಿ ಸಲ್ಲಿಸುವುದನ್ನು ಮತ್ತು ಟ್ರ್ಯಾಕ್ ಮಾಡುವುದನ್ನು ಸರಳ ಮತ್ತು ವೇಗವಾಗಿ ಮಾಡುತ್ತದೆ.

ಶುದ್ಧ, ಸಂಪರ್ಕಿತ ಮನೆಗಳತ್ತ

ಮನೆಯಲ್ಲಿ ಶುದ್ಧ ಅಡುಗೆ ಇಂಧನವು ಪ್ರತಿಯೊಂದು ಕುಟುಂಬದ ಸೌಕರ್ಯ, ಆರೋಗ್ಯ ಮತ್ತು ಗೌರವವನ್ನು ಹೆಚ್ಚಿಸುತ್ತದೆ. ಈಗ ಜಾರಿಯಲ್ಲಿರುವ ಹೊಸ ಯೋಜನೆಯು ಗ್ಯಾಸ್ ಕಂಪನಿಗಳ ವಾಣಿಜ್ಯ ಹಿತಾಸಕ್ತಿಗಳನ್ನು ಈ ರಾಷ್ಟ್ರೀಯ ಗುರಿಯೊಂದಿಗೆ ಸಂಯೋಜಿಸುತ್ತದೆ. ಪೈಪ್‌ಲೈನ್‌ಗಳು ಹೆಚ್ಚಿನ ಪ್ರದೇಶಗಳನ್ನು ಮತ್ತು ಹೆಚ್ಚಿನ ಅಡುಗೆಮನೆಗಳನ್ನು ತಲುಪುತ್ತಿದ್ದಂತೆ, ಸಿಲಿಂಡರ್‌ಗಳ ಮೇಲಿನ ಅವಲಂಬನೆ ಸ್ಥಿರವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಪೈಪ್‌ಲೈನ್ ಅನಿಲವು ಭಾರತದಲ್ಲಿ ದೈನಂದಿನ ಜೀವನದ ಒಂದು ನೈಸರ್ಗಿಕ ಭಾಗವಾಗಲು ಸಜ್ಜಾಗಿದೆ.

References

Ministry of Petroleum and Natural Gas:

https://www.pib.gov.in/PressReleaseDetail.aspx?PRID=2301012&reg=3&lang=1

https://www.pib.gov.in/PressReleasePage.aspx?PRID=2252308&lang=1

https://sansad.in/getFile/lsapps/loksabhaquestions/annex/188/AU1952_UgNJ5G.pdf?source=lsapps

Incentive Scheme for Promotion of Domestic PNG Connections

 

*****

 

(तथ्य सामग्री आईडी: 151014) आगंतुक पटल : 78


Provide suggestions / comments
इस विश्लेषक को इन भाषाओं में पढ़ें : English , हिन्दी , Urdu , Assamese , Malayalam , Bengali