• Sitemap
  • Advance Search
Culture & Tourism

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

प्रविष्टि तिथि: 20 SEP 2026 12:49 AM

 

ಭಾರತೀಯ ಸಿನಿಮಾದ ಮಾಯಾಲೋಕಕ್ಕೆ ರಾಷ್ಟ್ರದ ನಮನ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು — ಒಂದು ನೋಟ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದೇಶದ ಚಲನಚಿತ್ರ ಕ್ಷೇತ್ರದಲ್ಲಿನ ಶ್ರೇಷ್ಠತೆಗೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಗೌರವಗಳಾಗಿವೆ. 1954 ರಲ್ಲಿ ಪ್ರಾರಂಭವಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರದಾನ ಮಾಡುತ್ತದೆ. ಏಳು ದಶಕಗಳಿಗೂ ಹೆಚ್ಚು ಕಾಲದಿಂದ, ಈ ಪ್ರಶಸ್ತಿಗಳು ಭಾರತೀಯ ಚಲನಚಿತ್ರ ನಿರ್ಮಾಣದಲ್ಲಿನ ಅತ್ಯುತ್ತಮ ಸೃಜನಶೀಲ ಮತ್ತು ತಾಂತ್ರಿಕ ಸಾಧನೆಗಳನ್ನು ಗುರುತಿಸಿವೆ. ಇವು ಮೂರು ಕ್ಷೇತ್ರಗಳನ್ನು ಒಳಗೊಂಡಿವೆ, ಅವುಗಳೆಂದರೆ ಕಥಾಚಿತ್ರಗಳು (ಫೀಚರ್ ಫಿಲ್ಮ್‌ಗಳು), ಕಥೇತರ ಚಿತ್ರಗಳು (ನಾನ್-ಫೀಚರ್ ಫಿಲ್ಮ್‌ಗಳು) ಮತ್ತು ಸಿನೆಮಾ ಕುರಿತ ಬರವಣಿಗೆ.

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024 ನೇ ಸಾಲಿನ ಭಾರತೀಯ ಚಿತ್ರರಂಗದ ಸಾಧನೆಗಳನ್ನು ಗೌರವಿಸುತ್ತವೆ. ವಿಜೇತರನ್ನು 2026 ರ ಜುಲೈ 18 ರಂದು ಮೂರು ತೀರ್ಪುಗಾರರ ಸಮಿತಿಗಳ ಅಧ್ಯಕ್ಷರು ಘೋಷಿಸಿದರು. ಭಾರತದ ರಾಷ್ಟ್ರಪತಿಯವರು 2026 ರ ಸೆಪ್ಟೆಂಬರ್ 22 ರಂದು ಗುಜರಾತ್‌ನ ಏಕತಾ ನಗರದಲ್ಲಿ (ಹಿಂದಿನ ಕೆವಾಡಿಯಾ) ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಈ ಪ್ರಶಸ್ತಿಗಳು ದೇಶಾದ್ಯಂತ ಚಲನಚಿತ್ರ ನಿರ್ಮಾಣದ ಶ್ರೀಮಂತ ಭಾಷಿಕ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ. ಇವು ದೊಡ್ಡ ವಾಣಿಜ್ಯಿಕ ನಿರ್ಮಾಣಗಳು ಮತ್ತು ಸಣ್ಣ ಸ್ವತಂತ್ರ ಚಿತ್ರಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ತಂದು ನಿಲ್ಲಿಸುತ್ತವೆ. ಈ ವಿಶಾಲವಾದ ವ್ಯಾಪ್ತಿಯೇ ಈ ಗೌರವಕ್ಕೆ ಚಲನಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರಿಬ್ಬರಲ್ಲೂ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿದೆ.

ನಿಮಗೆ ಗೊತ್ತೇ?

ಒಂದು ಪ್ರಮುಖ ನೀತಿ ಉಪಕ್ರಮವಾಗಿ, ಸಚಿವಾಲಯವು ಪ್ರಶಸ್ತಿ ಸಮಾರಂಭವನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಲು ನಿರ್ಧರಿಸಿದೆ. ಮುಂದಿನ ಆವೃತ್ತಿಗಳು ರಾಷ್ಟ್ರೀಯ ರಾಜಧಾನಿಯನ್ನು ಹೊರತುಪಡಿಸಿ ವಿವಿಧ ರಾಜ್ಯಗಳು ಮತ್ತು ನಗರಗಳಿಗೆ ಪ್ರಯಾಣಿಸಲಿವೆ. ಏಕತಾ ನಗರದಲ್ಲಿ ನಡೆಯುವ ಸಮಾರಂಭವು ಭಾರತದಾದ್ಯಂತದ ಚಲನಚಿತ್ರ ಪ್ರತಿಭೆಗಳನ್ನು ಒಂದೆಡೆ ಸೇರಿಸಲಿದ್ದು, 'ಏಕ್ ಭಾರತ್, ಶ್ರೇಷ್ಠ ಭಾರತ್' ಆಶಯವನ್ನು ಸಾಕಾರಗೊಳಿಸಲಿದೆ.

ಪಾರಂಪರ್ಯ ಮತ್ತು ವಿಕಾಸ — 1954 ರಿಂದ

ಭಾರತೀಯ ಚಿತ್ರರಂಗದ ಪ್ರಯಾಣವು 1913 ರಲ್ಲಿ ದಾದಾಸಾಹೇಬ್ ಫಾಲ್ಕೆ ಅವರ 'ರಾಜಾ ಹರಿಶ್ಚಂದ್ರ' ಚಿತ್ರದೊಂದಿಗೆ ಪ್ರಾರಂಭವಾಯಿತು. 1949 ರಲ್ಲಿ ಸ್ಥಾಪಿಸಲಾದ ಚಲನಚಿತ್ರ ವಿಚಾರಣಾ ಸಮಿತಿಯು (ಫಿಲ್ಮ್ ಎನ್‌ಕ್ವೈರಿ ಕಮಿಟಿ) 'ಚಿತ್ರಗಳಿಗಾಗಿ ರಾಜ್ಯ ಪ್ರಶಸ್ತಿಗಳನ್ನು' ಸ್ಥಾಪಿಸಲು ಶಿಫಾರಸು ಮಾಡಿತು. ಭಾರತೀಯ ಸಿನಿಮಾದಲ್ಲಿನ ಕಲಾತ್ಮಕ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಗೌರವಿಸಲು ಮತ್ತು ಪ್ರೋತ್ಸಾಹಿಸಲು ಇವುಗಳನ್ನು ರೂಪಿಸಲಾಯಿತು. ಈ ಪ್ರಶಸ್ತಿಗಳನ್ನು 1954 ರಲ್ಲಿ ಸ್ಥಾಪಿಸಲಾಯಿತು ಮತ್ತು ಮೊದಲ ಆವೃತ್ತಿಯು 1953ರ ಚಲನಚಿತ್ರಗಳನ್ನು ಗೌರವಿಸಿತು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಮೊದಲ ಆವೃತ್ತಿ

ಮೊದಲ ಆವೃತ್ತಿಯು ಮೂರು ವಿಭಾಗಗಳನ್ನು ಒಳಗೊಂಡಿತ್ತು, ಅವುಗಳೆಂದರೆ ಕಥಾಚಿತ್ರಗಳು (ಫೀಚರ್ ಫಿಲ್ಮ್‌ಗಳು), ಸಾಕ್ಷ್ಯಚಿತ್ರಗಳು ಮತ್ತು ಮಕ್ಕಳ ಚಿತ್ರಗಳು. ಮರಾಠಿಯ 'ಶ್ಯಾಮ್‌ಚಿ ಆಯಿ' ಚಿತ್ರವು ಅತ್ಯುತ್ತಮ ಸಮಗ್ರ ಭಾರತೀಯ ಕಥಾಚಿತ್ರಕ್ಕಾಗಿ ನೀಡಲಾಗುವ ರಾಷ್ಟ್ರಪತಿಗಳ ಚಿನ್ನದ ಪದಕವನ್ನು (ಪ್ರೆಸಿಡೆಂಟ್ಸ್ ಗೋಲ್ಡ್ ಮೆಡಲ್) ಪಡೆಯಿತು. 'ಮಹಾಬಲಿಪುರಂ' ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ಗೆದ್ದುಕೊಂಡರೆ, 'ದೋ ಬಿಘಾ ಜಮೀನ್' ಚಿತ್ರವು ಮೆರಿಟ್ ಪ್ರಮಾಣಪತ್ರವನ್ನು (ಸರ್ಟಿಫಿಕೇಟ್ ಆಫ್ ಮೆರಿಟ್) ಪಡೆಯಿತು. ಹೀಗೆ ಏಳು ಗೌರವಗಳೊಂದಿಗೆ ಸರಳವಾಗಿ ಪ್ರಾರಂಭವಾದ ಈ ಪ್ರಯಾಣವು, ಭಾರತೀಯ ಚಿತ್ರರಂಗಕ್ಕೆ ಏಳು ದಶಕಗಳ ರಾಷ್ಟ್ರೀಯ ಗುರುತಿಸುವಿಕೆಯನ್ನು ತಂದುಕೊಟ್ಟಿತು.

ವ್ಯಾಪ್ತಿಯ ವಿಸ್ತರಣೆ

1967 ನೇ ಸಾಲಿನ ಚಲನಚಿತ್ರಗಳಿಗಾಗಿ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರತ್ಯೇಕ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಉತ್ತಮ್ ಕುಮಾರ್ ಮತ್ತು ನರ್ಗಿಸ್ ಅವರು 1968 ರಲ್ಲಿ ಕ್ರಮವಾಗಿ ಮೊದಲ 'ಅತ್ಯುತ್ತಮ ನಟ' ಮತ್ತು 'ಅತ್ಯುತ್ತಮ ನಟಿ' ಪ್ರಶಸ್ತಿಗಳನ್ನು ಪಡೆದರು. ಆಗ ಅತ್ಯುತ್ತಮ ನಟ ಪ್ರಶಸ್ತಿಯನ್ನು 'ಭರತ್' ಮತ್ತು ಅತ್ಯುತ್ತಮ ನಟಿ ಪ್ರಶಸ್ತಿಯನ್ನು 'ಉರ್ವಶಿ' ಎಂದು ಕರೆಯಲಾಗುತ್ತಿತ್ತು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 1969 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದನ್ನು ಮೊದಲ ಬಾರಿಗೆ ದೇವಿಕಾ ರಾಣಿ ಅವರಿಗೆ ಪ್ರದಾನ ಮಾಡಲಾಯಿತು. ಭಾರತೀಯ ಚಿತ್ರರಂಗದ ವ್ಯಾಪ್ತಿ ಬೆಳೆದಂತೆಲ್ಲಾ ಹೊಸ ವಿಭಾಗಗಳು ಮತ್ತು ತಾಂತ್ರಿಕ ಕಲೆಗಳನ್ನು ನಿರಂತರವಾಗಿ ಸೇರಿಸಲಾಯಿತು.

ವರ್ಷ

ಮೈಲಿಗಲ್ಲು

1913

ದಾದಾಸಾಹೇಬ್ ಫಾಲ್ಕೆ ಅವರು ಭಾರತೀಯ ಚಲನಚಿತ್ರ ರಂಗದ ಮೈಲಿಗಲ್ಲಾದ 'ರಾಜಾ ಹರಿಶ್ಚಂದ್ರ' ಚಿತ್ರವನ್ನು ಪೂರ್ಣಗೊಳಿಸಿದರು.

1954

'ಚಿತ್ರಗಳಿಗಾಗಿ ರಾಜ್ಯ ಪ್ರಶಸ್ತಿಗಳು' ಎಂಬ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಮೊದಲ ಗೌರವಗಳು 1953 ರ ಚಲನಚಿತ್ರಗಳಿಗೆ ಲಭಿಸಿದವು.

1967-68

ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿಗಳು ಪ್ರಾರಂಭವಾದವು. ಉತ್ತಮ್ ಕುಮಾರ್ ಮತ್ತು ನರ್ಗಿಸ್ ಅವರು ಮೊದಲ ಅಭಿನಯದ ಪ್ರಶಸ್ತಿಗಳನ್ನು ಗೆದ್ದರು.

1969

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ದೇವಿಕಾ ರಾಣಿ ಇದರ ಮೊದಲ ಪುರಸ್ಕೃತರಾದರು.

1973

ಚಲನಚಿತ್ರೋತ್ಸವಗಳ ನಿರ್ದೇಶನಾಲಯವು (ಡಿಎಫ್‌ಎಫ್) ಪ್ರಶಸ್ತಿಗಳ ಆಡಳಿತವನ್ನು ವಹಿಸಿಕೊಂಡಿತು.

2022

ಚಲನಚಿತ್ರೋತ್ಸವಗಳ ನಿರ್ದೇಶನಾಲಯವನ್ನು ಪ್ರಸ್ತುತ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯಾದ ಎನ್‌ಎಫ್‌ಡಿಸಿಯೊಂದಿಗೆ ವಿಲೀನಗೊಳಿಸಲಾಯಿತು.

2026

72ನೇ ಪ್ರಶಸ್ತಿಗಳನ್ನು ಜುಲೈನಲ್ಲಿ ಘೋಷಿಸಲಾಯಿತು. ಸಮಾರಂಭವನ್ನು ಗುಜರಾತ್‌ನ ಏಕತಾ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಉದ್ದೇಶ ಮತ್ತು ಮಹತ್ವ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಉದ್ದೇಶಗಳನ್ನು ಅಧಿಕೃತ ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇವು ಕಲಾತ್ಮಕ ಹಾಗೂ ತಾಂತ್ರಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರಸ್ತುತತೆಯನ್ನು ಹೊಂದಿರುವ ಚಿತ್ರಗಳ ನಿರ್ಮಾಣವನ್ನು ಪ್ರೋತ್ಸಾಹಿಸುತ್ತವೆ. ದೇಶದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌರವಿಸಲು ಪ್ರೇಕ್ಷಕರಿಗೆ ಸಹಾಯ ಮಾಡುತ್ತವೆ. ಈ ಮೂಲಕ, ಈ ಪ್ರಶಸ್ತಿಗಳು ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಹೆಚ್ಚಿಸುತ್ತವೆ.

ಈ ಪ್ರಶಸ್ತಿಗಳು ಚಲನಚಿತ್ರವನ್ನು ಒಂದು ಕಲಾ ಪ್ರಕಾರವಾಗಿ ಅಧ್ಯಯನ ಮಾಡಲು ಮತ್ತು ಆಸ್ವಾದಿಸಲು ಮತ್ತಷ್ಟು ಪ್ರೋತ್ಸಾಹ ನೀಡುತ್ತವೆ. ಪುಸ್ತಕಗಳು, ಲೇಖನಗಳು ಮತ್ತು ವಿಮರ್ಶೆಗಳು ಈ ಕಲಾ ಪ್ರಕಾರದ ವಿಮರ್ಶಾತ್ಮಕ ಮೌಲ್ಯಮಾಪನವನ್ನು ವಿಶಾಲವಾದ ಓದುಗರ ಬಳಿಗೆ ಕೊಂಡೊಯ್ಯುತ್ತವೆ.

ಈ ಗುರುತಿಸುವಿಕೆ ಏಕೆ ಮುಖ್ಯ?

ರಾಷ್ಟ್ರೀಯ ಪ್ರಶಸ್ತಿಯು ಒಂದು ಚಲನಚಿತ್ರವು ದೇಶವು ನಿಗದಿಪಡಿಸಿದ ಅತ್ಯುನ್ನತ ಗುಣಮಟ್ಟವನ್ನು ತಲುಪಿದೆ ಎಂಬುದನ್ನು ಖಚಿತಪಡಿಸುತ್ತದೆ. ಇದು ಕೇವಲ ಸಣ್ಣ ಪ್ರಮಾಣದ ವೀಕ್ಷಕರನ್ನು ಮಾತ್ರ ತಲುಪಬಹುದಾಗಿದ್ದ ಚಿತ್ರಗಳ ಕಡೆಗೆ ವಿಶಾಲ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಗೌರವವು ಚಲನಚಿತ್ರ ನಿರ್ಮಾಪಕರ ಜೊತೆ ಸಾಗಿ, ಅವರ ಮುಂದಿನ ಯೋಜನೆಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.

ಪ್ರಶಸ್ತಿಯ ರಚನೆ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಒಂದು ಜೀವಮಾನದ ಗೌರವದೊಂದಿಗೆ ಮೂರು ವಿಭಾಗಗಳಲ್ಲಿ ಸಂಘಟಿಸಲಾಗುತ್ತದೆ. ಕಥಾಚಿತ್ರ (ಫೀಚರ್ ಫಿಲ್ಮ್) ವಿಭಾಗವು ಪೂರ್ಣ ಪ್ರಮಾಣದ ಚಲನಚಿತ್ರಗಳಿಗಾಗಿ ಮೀಸಲಾಗಿದೆ. ಕಥೇತರ (ನಾನ್-ಫೀಚರ್) ವಿಭಾಗವು ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್ ಮತ್ತು ಇತರ ಸಂಬಂಧಿತ ಕಲಾಪ್ರಕಾರಗಳಿಗಾಗಿ ನಿರ್ಮಾಣಗೊಂಡಿದೆ. ಸಿನಿಮಾ ಕುರಿತ ಅತ್ಯುತ್ತಮ ಬರವಣಿಗೆ ವಿಭಾಗವು ಅತ್ಯುತ್ತಮ ಪುಸ್ತಕ ಮತ್ತು ಅತ್ಯುತ್ತಮ ಚಲನಚಿತ್ರ ವಿಮರ್ಶಕರನ್ನು ಗೌರವಿಸುತ್ತದೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾಗಿ ಪ್ರತ್ಯೇಕವಾಗಿ ನಿಲ್ಲುತ್ತದೆ.

ವಿಭಾಗ

ಪ್ರವರ್ಗಗಳು

ಪದಕ

ನಗದು ಬಹುಮಾನ

ಕಥಾಚಿತ್ರಗಳು (ಫೀಚರ್ ಫಿಲ್ಮ್ಸ್)

26 (ವಿಶೇಷ ಉಲ್ಲೇಖಗಳೊಂದಿಗೆ)

ಸ್ವರ್ಣ ಕಮಲ, ರಜತ ಕಮಲ

₹ 3,00,000 ಮತ್ತು ₹ 2,00,000

ಕಥೇತರ ಚಿತ್ರಗಳು (ನಾನ್-ಫೀಚರ್ ಫಿಲ್ಮ್ಸ್)

16 (ವಿಶೇಷ ಉಲ್ಲೇಖಗಳೊಂದಿಗೆ)

ಸ್ವರ್ಣ ಕಮಲ, ರಜತ ಕಮಲ

₹ 3,00,000 ಮತ್ತು ₹ 2,00,000

ಸಿನಿಮಾ ಕುರಿತ ಅತ್ಯುತ್ತಮ ಬರವಣಿಗೆ

2

ಸ್ವರ್ಣ ಕಮಲ

₹ 1,00,000

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

1

ಸ್ವರ್ಣ ಕಮಲ, ಶಾಲೂ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ₹ 10,00,000

ಕಥಾಚಿತ್ರ (ಫೀಚರ್ ಫಿಲ್ಮ್) ವಿಭಾಗವು ಅತ್ಯುತ್ತಮ ಕಥಾಚಿತ್ರ, ಅತ್ಯುತ್ತಮ ನಿರ್ದೇಶನ ಮತ್ತು ಮುಖ್ಯಾಪಾತ್ರದ ಅತ್ಯುತ್ತಮ ನಟ ಸೇರಿದಂತೆ ಇತರ ಪ್ರಶಸ್ತಿಗಳನ್ನು ಒಳಗೊಂಡಿದೆ. ಇದು ಅತ್ಯುತ್ತಮ ಮಕ್ಕಳ ಚಿತ್ರ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಗೀತ ನಿರ್ದೇಶನ ಮತ್ತು ಅತ್ಯುತ್ತಮ ವಸ್ತ್ರವಿನ್ಯಾಸ ಪ್ರಶಸ್ತಿಗಳನ್ನೂ ಒಳಗೊಳ್ಳುತ್ತದೆ. ಕಥೇತರ (ನಾನ್-ಫೀಚರ್) ವಿಭಾಗವು ಅತ್ಯುತ್ತಮ ಸಾಕ್ಷ್ಯಚಿತ್ರ, ಅತ್ಯುತ್ತಮ ಕಿರುಚಿತ್ರ ಮತ್ತು ಅತ್ಯುತ್ತಮ ಅನಿಮೇಷನ್ ಚಿತ್ರಗಳನ್ನು ಒಳಗೊಂಡಿದೆ. ಜೊತೆಗೆ, ಇದು ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ, ಅತ್ಯುತ್ತಮ ಹಿನ್ನೆಲೆ ಧ್ವನಿ (ನ್ಯಾರೇಷನ್ ಅಥವಾ ವಾಯ್ಸ್ ಓವರ್) ಮತ್ತು ಅತ್ಯುತ್ತಮ ಚಿತ್ರಕಥೆ ಸೇರಿದಂತೆ ಇತರ ಪ್ರಶಸ್ತಿಗಳನ್ನು ಒಳಗೊಂಡಿದೆ.

ಪ್ರತಿಯೊಂದು ಭಾಷೆಗೂ ಇಲ್ಲಿದೆ ಸ್ಥಾನ

ಸಂವಿಧಾನದ 8 ನೇ ಅನುಸೂಚಿಯಲ್ಲಿ (ಷೆಡ್ಯೂಲ್ VIII) ಪಟ್ಟಿ ಮಾಡಲಾದ ಪ್ರತಿಯೊಂದು ಭಾಷೆಯಲ್ಲೂ 'ಅತ್ಯುತ್ತಮ ಕಥಾಚಿತ್ರ' ಪ್ರಶಸ್ತಿಯನ್ನು ನೀಡಲಾಗುತ್ತದೆ. ಅನುಸೂಚಿಯ ಹೊರತಾಗಿರುವ ಭಾಷೆಗಳ ಚಲನಚಿತ್ರಗಳನ್ನು ಅವುಗಳದ್ದೇ ಆದ ಪ್ರತ್ಯೇಕ ಪ್ರಶಸ್ತಿಗಳ ಮೂಲಕ ಗೌರವಿಸಲಾಗುತ್ತದೆ. 72ನೇ ಆವೃತ್ತಿಯಲ್ಲಿ, ಈ ನಿಬಂಧನೆಯ ಅಡಿಯಲ್ಲಿ ಗರ್ವಾಲಿ ಭಾಷೆಯ 'ಢೋಲಿ' ಮತ್ತು ತುಳು ಭಾಷೆಯ 'ಇಂಬು'ಚಿತ್ರಗಳನ್ನು ಗುರುತಿಸಿ ಗೌರವಿಸಲಾಗಿದೆ.

ಪ್ರಶಸ್ತಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಹಿಂದಿನ ಕ್ಯಾಲೆಂಡರ್ ವರ್ಷದಲ್ಲಿ ಪ್ರಮಾಣಪತ್ರ ಪಡೆದ ಚಲನಚಿತ್ರಗಳಿಗಾಗಿ ಪ್ರತಿವರ್ಷ ಪ್ರವೇಶಗಳನ್ನು ಆಹ್ವಾನಿಸಲಾಗುತ್ತದೆ. ನಂತರ ಸಚಿವಾಲಯವು ಪ್ರಶಸ್ತಿಯ ಮೂರು ವಿಭಾಗಗಳಿಗಾಗಿ ಪ್ರತ್ಯೇಕ ತೀರ್ಪುಗಾರರ ಸಮಿತಿಗಳನ್ನು ರಚಿಸುತ್ತದೆ. ತೀರ್ಪುಗಾರರ ಸದಸ್ಯರಾಗಿ ಸೇವೆ ಸಲ್ಲಿಸಲು ಚಲನಚಿತ್ರ ಕ್ಷೇತ್ರ, ಅದಕ್ಕೆ ಸಂಬಂಧಿಸಿದ ಕಲಾ ಪ್ರಕಾರಗಳು ಮತ್ತು ಮಾನವಿಕ ಶಾಸ್ತ್ರಗಳ ಗಣ್ಯ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ.

ಕಥಾಚಿತ್ರಗಳಿಗೆ ಎರಡು ಹಂತದ ಪರಿಶೀಲನೆ

57ನೇ ಆವೃತ್ತಿಯಿಂದ ಪರಿಚಯಿಸಲಾದ ಎರಡು ಹಂತದ ಪ್ರಕ್ರಿಯೆಯ ಮೂಲಕ ಕಥಾಚಿತ್ರಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ ಬಂದಿರುವ ಪ್ರವೇಶಗಳನ್ನು ಮೊದಲು ಐದು ಪ್ರಾದೇಶಿಕ ಸಮಿತಿಗಳು ಕಿರುಪಟ್ಟಿ (ಶಾರ್ಟ್‌ಲಿಸ್ಟ್) ಮಾಡುತ್ತವೆ. ನಂತರ ಕೇಂದ್ರ ಸಮಿತಿಯು ಪ್ರಶಸ್ತಿಯ ಕಥಾಚಿತ್ರ ವಿಭಾಗದ ವಿಜೇತರನ್ನು ನಿರ್ಧರಿಸುತ್ತದೆ. ಕಥೇತರ ಚಿತ್ರ ವಿಭಾಗ ಮತ್ತು ಸಿನಿಮಾ ಕುರಿತ ಅತ್ಯುತ್ತಮ ಬರವಣಿಗೆ ವಿಭಾಗವು ತಮ್ಮದೇ ಆದ ಪ್ರತ್ಯೇಕ ತೀರ್ಪುಗಾರರ ಸಮಿತಿಗಳನ್ನು ಹೊಂದಿವೆ. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಯಾವುದೇ ಪ್ರವೇಶಗಳನ್ನು ಆಹ್ವಾನಿಸಲಾಗುವುದಿಲ್ಲ, ಇದು ವಿಭಿನ್ನ ಮಾರ್ಗವನ್ನು ಅನುಸರಿಸುತ್ತದೆ. ಪ್ರಸಿದ್ಧ ಚಲನಚಿತ್ರ ವ್ಯಕ್ತಿಗಳನ್ನೊಳಗೊಂಡ ವಿಶೇಷವಾಗಿ ರಚಿಸಲಾದ ಸಮಿತಿಯು ಪುರಸ್ಕೃತರನ್ನು ಶಿಫಾರಸು ಮಾಡುತ್ತದೆ.

72ನೇ ಆವೃತ್ತಿಯ ತೀರ್ಪುಗಾರರು

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಕಥಾಚಿತ್ರ ತೀರ್ಪುಗಾರರ ಸಮಿತಿಯ ಅಧ್ಯಕ್ಷತೆಯನ್ನು ಶ್ರೀ ಜಯರಾಜ್ ವಹಿಸಿದ್ದರು. ಅದೇ ಆವೃತ್ತಿಯ ಕಥೇತರ ಚಿತ್ರ ತೀರ್ಪುಗಾರರ ಸಮಿತಿಯ ಅಧ್ಯಕ್ಷತೆಯನ್ನು ಶ್ರೀ ಅಸೀಮ್ ಸಿನ್ಹಾ ವಹಿಸಿದ್ದರು. ಸಿನಿಮಾ ಕುರಿತ ಅತ್ಯುತ್ತಮ ಬರವಣಿಗೆಯ ತೀರ್ಪುಗಾರರ ಸಮಿತಿಯ ಅಧ್ಯಕ್ಷತೆಯನ್ನು ಶ್ರೀ ಎ. ಚಂದ್ರಶೇಖರ್ ವಹಿಸಿದ್ದರು.

ಅರ್ಹತೆಯ ಸಂಕ್ಷಿಪ್ತ ವಿವರಣೆ

ಚಲನಚಿತ್ರಗಳು ಪ್ರಶಸ್ತಿ ವರ್ಷದಲ್ಲಿ ಸಿಬಿಎಫ್‌ಸಿಯಿಂದ ಪ್ರಮಾಣೀಕರಿಸಲ್ಪಟ್ಟಿರಬೇಕು ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳನ್ನು (ಸಬ್‌ಟೈಟಲ್‌ಗಳನ್ನು) ಹೊಂದಿರಬೇಕು. ಕಥಾಚಿತ್ರವು (ಫೀಚರ್ ಫಿಲ್ಮ್) 72 ನಿಮಿಷಗಳಿಗಿಂತ ಹೆಚ್ಚು ಅವಧಿಯನ್ನು ಹೊಂದಿರಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಡಬ್ ಮಾಡಲಾದ, ಮರುನಿರ್ಮಾಣಗೊಂಡ (ರೀಮೇಕ್) ಅಥವಾ ಮರು-ಸಂಪಾದಿಸಲಾದ (ರೀ-ಎಡಿಟ್) ಆವೃತ್ತಿಗಳು ಪ್ರಶಸ್ತಿಗೆ ಅರ್ಹವಾಗಿರುವುದಿಲ್ಲ.

ಭಾರತೀಯ ಚಿತ್ರರಂಗದಾದ್ಯಂತ ಗುರುತಿಸುವಿಕೆ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದೇಶದ ಎಲ್ಲಾ ಭಾಗಗಳಲ್ಲಿ ನಿರ್ಮಿಸಲಾದ ಚಲನಚಿತ್ರಗಳನ್ನು ಪರಿಗಣಿಸುತ್ತವೆ. 72ನೇ ಆವೃತ್ತಿಯು ಮರಾಠಿ, ಸಾಂತಾಲಿ, ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರಗಳನ್ನು ಗೌರವಿಸಿತು. ಇತರ ಹಲವಾರು ಭಾಷೆಗಳ ಜೊತೆಗೆ ತುಳು ಮತ್ತು ಗರ್ವಾಲಿ ಭಾಷೆಯ ಚಿತ್ರಗಳನ್ನೂ ಗುರುತಿಸಲಾಯಿತು. ಇದೇ ಮೊದಲ ಬಾರಿಗೆ, ಕಥೇತರ ಚಿತ್ರ (ನಾನ್-ಫೀಚರ್ ಫಿಲ್ಮ್) ವಿಭಾಗದಲ್ಲಿ ಸಾಂತಾಲಿ ಭಾಷೆಯ ಚಿತ್ರವೊಂದು ಗೌರವಕ್ಕೆ ಪಾತ್ರವಾಯಿತು.

ಶ್ರೀ ರವಿ ರಾಜ್ ಮುರ್ಮು ಅವರು ನಿರ್ದೇಶಿಸಿದ 'ಅಂಗೆನ್'  ಚಿತ್ರವು 'ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ' (ಬೆಸ್ಟ್ ಡೆಬ್ಯೂ ಫಿಲ್ಮ್) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ರೀತಿಯ ಮೊದಲ ಗುರುತಿಸುವಿಕೆಯು ಭಾರತೀಯ ಚಿತ್ರರಂಗದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ.

ಇತ್ತೀಚಿನ ಆವೃತ್ತಿ — ಪ್ರಮುಖ ಮುಖ್ಯಾಂಶಗಳು

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು 2024 ನೇ ಸಾಲಿನಲ್ಲಿ ಪ್ರಮಾಣೀಕರಿಸಲ್ಪಟ್ಟ ಭಾರತೀಯ ಚಲನಚಿತ್ರಗಳನ್ನು ಒಳಗೊಂಡಿವೆ. ಈ ಆವೃತ್ತಿಯಲ್ಲಿ 'ಆರ್ಟಿಕಲ್ 370' ಚಿತ್ರವು 'ಅತ್ಯುತ್ತಮ ಕಥಾಚಿತ್ರ' ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೇ ಚಿತ್ರಕ್ಕಾಗಿ ಯಾಮಿ ಗೌತಮ್ ಅವರು 'ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಪಡೆದರು. ಮಮ್ಮುಟ್ಟಿ ಮತ್ತು ಕಾರ್ತಿಕ್ ಆರ್ಯನ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡರು. ಅವರು ಕ್ರಮವಾಗಿ 'ಬ್ರಮಯುಗಂ' ಮತ್ತು 'ಚಂದೂ ಚಾಂಪಿಯನ್' ಚಿತ್ರಗಳಿಗಾಗಿ ಈ ಪ್ರಶಸ್ತಿಯನ್ನು ಗೆದ್ದರು.

ತಮಿಳು ಚಿತ್ರ 'ಅಮರನ್'ಗಾಗಿ ಶ್ರೀ ರಾಜಕುಮಾರ್ ಪೆರಿಯಸಾಮಿ ಅವರು 'ಅತ್ಯುತ್ತಮ ನಿರ್ದೇಶನ' ಪ್ರಶಸ್ತಿಯನ್ನು ಗೆದ್ದುಕೊಂಡರು. 'ಕಲ್ಕಿ 2898 ಎಡಿ' ಚಿತ್ರವನ್ನು 'ಸಮಗ್ರ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಿತ್ರ' ಎಂದು ಹೆಸರಿಸಲಾಯಿತು. ಶ್ರೀ ರಣದೀಪ್ ಹೂಡಾ ಅವರು 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರಕ್ಕಾಗಿ 'ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ' ಪ್ರಶಸ್ತಿಯನ್ನು ಗೆದ್ದರು. 'ಭಂಗಾರ್' ಅತ್ಯುತ್ತಮ ಕಥೇತರ ಚಿತ್ರವಾಗಿ ಹೊರಹೊಮ್ಮಿದರೆ, 'ರಾಮ್-ನಾಮಿ' ಅತ್ಯುತ್ತಮ ಸಾಕ್ಷ್ಯಚಿತ್ರವಾಗಿ ಆಯ್ಕೆಯಾಯಿತು.

ಪ್ರಸ್ತುತ ಪ್ರಶಸ್ತಿ ಪುರಸ್ಕೃತರು — 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ಕೆಳಗಿನ ಕೋಷ್ಟಕವು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಮುಖ್ಯ ಪ್ರಶಸ್ತಿಗಳನ್ನು ಒಳಗೊಂಡಿದೆ. ಭಾಷಾವಾರು ಪ್ರಶಸ್ತಿಗಳು, ತಾಂತ್ರಿಕ ವಿಭಾಗಗಳು ಮತ್ತು ವಿಶೇಷ ಉಲ್ಲೇಖಗಳನ್ನು ಪೂರ್ಣ ಪಟ್ಟಿಯಲ್ಲಿ ಪ್ರತ್ಯೇಕವಾಗಿ ದಾಖಲಿಸಲಾಗಿದೆ.

ಪ್ರಶಸ್ತಿ

ಚಿತ್ರ (ಭಾಷೆ)

ಪ್ರಶಸ್ತಿ ಪುರಸ್ಕೃತರು

ಅತ್ಯುತ್ತಮ ಕಥಾಚಿತ್ರ

ಆರ್ಟಿಕಲ್ 370 (ಹಿಂದಿ)

ನಿರ್ಮಾಪಕರು: ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್; ನಿರ್ದೇಶಕ: ಆದಿತ್ಯ ಸುಹಾಸ್ ಜಂಭಾಳೆ

ಅತ್ಯುತ್ತಮ ನಿರ್ದೇಶನ

ಅಮರನ್ (ತಮಿಳು)

ರಾಜ್‌ಕುಮಾರ್ ಪೆರಿಯಸಾಮಿ

ಮುಖ್ಯಪಾತ್ರದ ಅತ್ಯುತ್ತಮ ನಟ

ಬ್ರಮಯುಗಂ (ಮಲಯಾಳಂ); ಚಂದೂ ಚಾಂಪಿಯನ್ (ಹಿಂದಿ)

ಮಮ್ಮುಟ್ಟಿ ಮತ್ತು ಕಾರ್ತಿಕ್ ಆರ್ಯನ್ (ಜಂಟಿ)

ಮುಖ್ಯಪಾತ್ರದ ಅತ್ಯುತ್ತಮ ನಟಿ

ಆರ್ಟಿಕಲ್ 370 (ಹಿಂದಿ)

ಯಾಮಿ ಗೌತಮ್

ಪೋಷಕ ಪಾತ್ರದ ಅತ್ಯುತ್ತಮ ನಟ

ಭಕ್ಷಕ್ (ಹಿಂದಿ)

ಸಂಜಯ್ ಮಿಶ್ರಾ

ಪೋಷಕ ಪಾತ್ರದ ಅತ್ಯುತ್ತಮ ನಟಿ

ಮಹಾರಾಜ (ತಮಿಳು); ಮಿಥ್ಯಾ (ಕನ್ನಡ)

ಸಚನಾ ನಮಿದಾಸ್ ಮತ್ತು ರೂಪಶ್ರೀ ವರ್ಕಾಡಿ (ಜಂಟಿ)

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ

ಸ್ವಾತಂತ್ರ್ಯ ವೀರ್ ಸಾವರ್ಕರ್ (ಹಿಂದಿ)

ರಣದೀಪ್ ಹೂಡಾ

ಸಮಗ್ರ ಮನರಂಜನೆ ನೀಡುವ ಅತ್ಯುತ್ತಮ ಜನಪ್ರಿಯ ಚಿತ್ರ

ಕಲ್ಕಿ 2898 ಎಡಿ (ತೆಲುಗು)

ನಿರ್ಮಾಪಕರು: ವೈಜಯಂತಿ ಮೂವೀಸ್; ನಿರ್ದೇಶಕ: ನಾಗ್ ಅಶ್ವಿನ್ ಸಿಂಗಿರೆಡ್ಡಿ

ರಾಷ್ಟ್ರೀಯ, ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಕಥಾಚಿತ್ರ

ಕ್ಯಾಪ್ಟನ್ ಮಿಲ್ಲರ್ (ತಮಿಳು)

ನಿರ್ಮಾಪಕರು: ಸತ್ಯ ಜ್ಯೋತಿ ಫಿಲ್ಮ್ಸ್; ನಿರ್ದೇಶಕ: ಅರುಣ್ ಮಾಥೇಶ್ವರನ್

ಅತ್ಯುತ್ತಮ ಮಕ್ಕಳ ಚಿತ್ರ

35 - ಚಿನ್ನ ಕಥ ಕಾದು (ತೆಲುಗು)

ನಿರ್ಮಾಪಕರು: ಎಸ್ ಒರಿಜಿನಲ್ಸ್ ಮತ್ತು ವಾಲ್ಟೇರ್ ಪ್ರೊಡಕ್ಷನ್ಸ್; ನಿರ್ದೇಶಕ: ನಂದ ಕಿಶೋರ್ ಎಮಾನಿ

ಅತ್ಯುತ್ತಮ ಸಂಗೀತ ನಿರ್ದೇಶನ

ಆರ್ಟಿಕಲ್ 370 (ಹಿಂದಿ); ಅಮರನ್ (ತಮಿಳು)

ಶಾಶ್ವತ್ ಸಚದೇವ್ (ಹಾಡುಗಳು); ಜಿ. ವಿ. ಪ್ರಕಾಶ್ ಕುಮಾರ್ (ಹಿನ್ನೆಲೆ ಸಂಗೀತ)

ಅತ್ಯುತ್ತಮ ಕಥೇತರ ಚಿತ್ರ

ಭಂಗಾರ್ (ಮರಾಠಿ ಮತ್ತು ಇಂಗ್ಲಿಷ್)

ನಿರ್ಮಾಪಕರು ಮತ್ತು ನಿರ್ದೇಶಕರು: ಸುಮೀರಾ ರಾಯ್

ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಿತ್ರ (ಕಥೇತರ)

ಅಂಗೆನ್ (ಸಾಂತಾಲಿ)

ನಿರ್ದೇಶಕ: ರವಿ ರಾಜ್ ಮುರ್ಮು

ಅತ್ಯುತ್ತಮ ಸಾಕ್ಷ್ಯಚಿತ್ರ

ರಾಮ್-ನಾಮಿ (ಹಿಂದಿ)

ನಿರ್ಮಾಪಕರು: ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈ. ಲಿಮಿಟೆಡ್; ನಿರ್ದೇಶಕ: ಭಾರತ್‌ಬಾಲಾ ಗಣಪತಿ

ಅತ್ಯುತ್ತಮ ನಿರ್ದೇಶನ (ಕಥೇತರ)

ಸ್ಟ್ಯಾಚ್ಯೂ ಆಫ್ ಯೂನಿಟಿ - ಏಕತಾ ಕಾ ಪ್ರತೀಕ್ (ಹಿಂದಿ)

ಆನಂದ್ ಎಲ್ ರೈ

ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ

ನಾನಿರುವುದೇ ನಿಮಗಾಗಿ ನಾಡಿರುವುದೇ ನನಗಾಗಿ (ಕನ್ನಡ)

ಲೇಖಕ: ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ; ಪ್ರಕಾಶಕರು: ಮಿರರ್ ಪುಸ್ತಕ

ಅತ್ಯುತ್ತಮ ಚಲನಚಿತ್ರ ವಿಮರ್ಶಕ

ಹಿಂದಿ

ಸಂಜೀವ್ ಶ್ರೀವಾಸ್ತವ

ವಿಜೇತರು ಮತ್ತು ತೀರ್ಪುಗಾರರ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಲು ಈ ಕೆಳಗಿನ ಲಿಂಕ್ ಹಾಗೂ ಸಂಪನ್ಮೂಲಗಳನ್ನು ಬಳಸಬಹುದು:

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯು ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿನ ಅತ್ಯುನ್ನತ ಗೌರವವಾಗಿದೆ. ಇದನ್ನು 1969 ರಲ್ಲಿ ಸ್ಥಾಪಿಸಲಾಯಿತು, ಮತ್ತು ಆ ವರ್ಷ ದೇವಿಕಾ ರಾಣಿ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು 1913 ರಲ್ಲಿ 'ರಾಜಾ ಹರಿಶ್ಚಂದ್ರ' ಚಿತ್ರವನ್ನು ನಿರ್ದೇಶಿಸಿದ ದಾದಾಸಾಹೇಬ್ ಫಾಲ್ಕೆ ಅವರ ನೆನಪಿನಲ್ಲಿ ನೀಡಲಾಗುತ್ತದೆ. ಭಾರತೀಯ ಸಿನಿಮಾದ ಬೆಳವಣಿಗೆ ಮತ್ತು ವಿಕಾಸಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪುರಸ್ಕೃತರನ್ನು ಗುರುತಿಸಿ ಗೌರವಿಸಲಾಗುತ್ತದೆ.

ನಿಮಗೆ ಗೊತ್ತೇ?

ದುಂಡಿರಜ್‌ ಗೋವಿಂದ್ ಫಾಲ್ಕೆ (1870-1944), ಅಂದರೆ 'ದಾದಾಸಾಹೇಬ್ ಫಾಲ್ಕೆ' ಎಂದು ಜನಪ್ರಿಯರಾದ ಇವರು, 1913 ರಲ್ಲಿ ಭಾರತದ ಮೊದಲ ಪೂರ್ಣ ಪ್ರಮಾಣದ ಕಥಾಚಿತ್ರವಾದ 'ರಾಜಾ ಹರಿಶ್ಚಂದ್ರ'ವನ್ನು ನಿರ್ದೇಶಿಸಿದರು. ಅವರು ತಮ್ಮ ಜೀವನಾವಧಿಯಲ್ಲಿ 94 ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು 27 ಕಿರುಚಿತ್ರಗಳನ್ನು ನಿರ್ಮಿಸಿದರು. 'ಭಾರತೀಯ ಚಿತ್ರರಂಗದ ಪಿತಾಮಹ' ಎಂದು ಗೌರವಿಸಲ್ಪಡುವ ಇವರ ಸ್ಮರಣಾರ್ಥವಾಗಿ, ಭಾರತ ಸರ್ಕಾರವು 1969 ರಲ್ಲಿ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಸ್ಥಾಪಿಸಿತು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 2024

2024 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಶ್ರೀ ಅನಂತ್ ನಾಗ್ ಅವರಿಗೆ ಪ್ರದಾನ ಮಾಡಲಾಗುವುದು. ಭಾರತ ಸರ್ಕಾರವು ಈ ನಿರ್ಧಾರವನ್ನು 2026 ರ ಸೆಪ್ಟೆಂಬರ್ 16 ರಂದು ಘೋಷಿಸಿತು. ಅವರು 1948 ರ ಸೆಪ್ಟೆಂಬರ್ 4 ರಂದು ಕರ್ನಾಟಕದಲ್ಲಿ ಜನಿಸಿದರು ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ ನಟನೆಯನ್ನು ಪ್ರಾರಂಭಿಸಿದರು. ಅವರು ಕನ್ನಡದ 'ಸಂಕಲ್ಪ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಮತ್ತು 'ಅಂಕುರ್' ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಅವರು ಆರು ಭಾರತೀಯ ಭಾಷೆಗಳ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಅವರ ಪ್ರಸಿದ್ಧ ಕೃತಿಗಳಲ್ಲಿ ಅಪಾರ ಜನಪ್ರಿಯತೆ ಗಳಿಸಿದ 'ಮಾಲ್ಗುಡಿ ಡೇಸ್' ಕಿರುತೆರೆ ಸರಣಿಯೂ ಸೇರಿದೆ. ಅವರು ಐದು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಐದು ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತ ಸರ್ಕಾರವು ಅವರಿಗೆ 2025 ರಲ್ಲಿ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಿದೆ. ಐದಕ್ಕೂ ಹೆಚ್ಚು ದಶಕಗಳ ಕಾಲ ವಿಸ್ತರಿಸಿರುವ ಅವರ ಚಲನಚಿತ್ರ ಪಯಣವು ಪೀಳಿಗೆಯ ಕಲಾವಿದರಿಗೆ ಸ್ಫೂರ್ತಿಯಾಗಿದೆ.

ಇತ್ತೀಚಿನ ಪುರಸ್ಕೃತರು

ಶ್ರೀ ಮೋಹನ್ ಲಾಲ್ ಅವರು 2023 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದರು. ಶ್ರೀ ಮಿಥುನ್ ಚಕ್ರವರ್ತಿ ಅವರು 2022 ನೇ ಸಾಲಿನ ಪ್ರಶಸ್ತಿಯನ್ನು ಪಡೆದರು. ಶ್ರೀಮತಿ ವಹೀದಾ ರೆಹಮಾನ್ ಅವರು 2021 ನೇ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರತಿಯೊಂದು ಪ್ರಶಸ್ತಿಯನ್ನು ಆಯಾ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

ಭಾರತೀಯ ಸಿನಿಮಾ: ಸಂಸ್ಕೃತಿ, ಅನನ್ಯತೆ ಮತ್ತು ಪ್ರಭಾವ

ಸಿನಿಮಾ ಭಾರತದ ಅತ್ಯಂತ ಅಭಿವ್ಯಕ್ತ ಕಲಾಪ್ರಕಾರಗಳಲ್ಲಿ ಒಂದಾಗಿದೆ ಹಾಗೂ ಅತ್ಯಂತ ಪ್ರಭಾವಶಾಲಿ ಸಾಂಸ್ಕೃತಿಕ ಸಂಪತ್ತುಗಳಲ್ಲಿ ಒಂದಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದನ್ನು ಸೃಜನಶೀಲತೆ, ಸಂಸ್ಕೃತಿ ಮತ್ತು ನಾವೀನ್ಯತೆಯ ಪ್ರಬಲ ಮಾಧ್ಯಮ ಎಂದು ವರ್ಣಿಸುತ್ತದೆ. ಕಲಾತ್ಮಕ ಅಭಿವ್ಯಕ್ತಿಯನ್ನು ಹೊರತುಪಡಿಸಿ, ಇದು ಬೃಹತ್ ಸೃಜನಶೀಲ ಅರ್ಥವ್ಯವಸ್ಥೆಯನ್ನು ಪೋಷಿಸುತ್ತದೆ: ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರವು ಈಗ ವಿಶ್ವದ ಐದನೇ ಅತಿದೊಡ್ಡ ಕ್ಷೇತ್ರವಾಗಿದ್ದು, 2 ರಿಂದ 2.5 ಮಿಲಿಯನ್ ಡಿಜಿಟಲ್ ರಚನೆಕಾರರು ಮತ್ತು ಶೇಕಡಾ 40 ರಿಂದ 60 ರಷ್ಟು ವೆಚ್ಚದ ಪ್ರಯೋಜನವನ್ನು ಹೊಂದಿರುವ ಅನಿಮೇಷನ್ ಹಾಗೂ ವಿಎಫ್‌ಎಕ್ಸ್‌ ಸೇವೆಗಳಿಂದ ಬೆಂಬಲಿತವಾಗಿದೆ. ಭಾರತೀಯ ಚಲನಚಿತ್ರಗಳು ದೇಶದ ಸಾಂಸ್ಕೃತಿಕ ಪ್ರಭಾವವನ್ನು (ಸಾಫ್ಟ್ ಪವರ್) ಜಾಗತಿಕ ಪ್ರೇಕ್ಷಕರಿಗೆ ತಲುಪಿಸುತ್ತವೆ, ಜೊತೆಗೆ ವಿವಿಧ ಭಾಷೆಗಳು ಮತ್ತು ಪ್ರದೇಶಗಳಲ್ಲಿ ಜೀವನೋಪಾಯವನ್ನು ಸೃಷ್ಟಿಸುತ್ತಾ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುತ್ತವೆ.

ಭಾರತೀಯ ಸಿನಿಮಾಗೆ ಮುಂದುವರಿದ ಕೊಡುಗೆ

ಇಂದಿನ ಭಾರತೀಯ ಸಿನಿಮಾ ಮುಂಚೆಗಿಂತಲೂ ಹೆಚ್ಚಿನ ಭಾಷೆಗಳು ಮತ್ತು ಮಾಧ್ಯಮಗಳಲ್ಲಿ (ಫಾರ್ಮ್ಯಾಟ್‌ಗಳು) ಪ್ರೇಕ್ಷಕರನ್ನು ತಲುಪುತ್ತಿದೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ದೇಶದ ಚಲನಚಿತ್ರ ಶ್ರೇಷ್ಠತೆಯ ಮುಖ್ಯ ಮಾನದಂಡವಾಗಿ ಉಳಿದುಕೊಂಡಿವೆ. ಇವು ಕೇವಲ ವಾಣಿಜ್ಯಿಕ ಪ್ರಮಾಣಕ್ಕಿಂತ ಹೆಚ್ಚಾಗಿ ಕಲೆ, ಧೈರ್ಯ ಮತ್ತು ಸ್ಪಷ್ಟ ದೃಷ್ಟಿಕೋನಕ್ಕೆ ಪುರಸ್ಕಾರ ನೀಡುತ್ತವೆ.

ಏಕತಾ ನಗರಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸಿರುವುದು ರಾಜಧಾನಿಯ ಹೊರಗಿನ ಪ್ರೇಕ್ಷಕರಿಗೆ ಪ್ರಶಸ್ತಿಗಳನ್ನು ಮತ್ತಷ್ಟು ಹತ್ತಿರಗೊಳಿಸಿದೆ. ಮುಂಬರುವ ಆವೃತ್ತಿಗಳು ದೇಶಾದ್ಯಂತ ವಿವಿಧ ರಾಜ್ಯಗಳು ಮತ್ತು ನಗರಗಳಿಗೆ ಪ್ರಯಾಣಿಸಲಿವೆ. ದೊಡ್ಡ ಸ್ಟುಡಿಯೋಗಳಿಂದ ದೂರದಲ್ಲಿ ಬೆಳೆಯುವ ಚಲನಚಿತ್ರ ಸಂಸ್ಕೃತಿಗಳು ಈಗ ರಾಷ್ಟ್ರೀಯ ವೇದಿಕೆಯನ್ನು ಪಡೆದುಕೊಳ್ಳುತ್ತವೆ.

72ನೇ ಆವೃತ್ತಿಯು ಈಗಾಗಲೇ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಈ ಭರವಸೆಯನ್ನು ಸಾಕಾರಗೊಳಿಸುತ್ತಿದೆ. ಮೊದಲ ಬಾರಿಗೆ ಸಾಂತಾಲಿ ಭಾಷೆಯ ಚಿತ್ರವೊಂದು ಗೌರವದ ಪಟ್ಟಿಗೆ ಸೇರ್ಪಡೆಗೊಂಡಿದೆ. ಕನ್ನಡ ಚಿತ್ರರಂಗದ ಹಿರಿಯ ನಟರೊಬ್ಬರು ಈ ಕ್ಷೇತ್ರದ ಅತ್ಯುನ್ನತ ಗೌರವವನ್ನು ಪಡೆದಿದ್ದಾರೆ. ಹೀಗೆ ಈ ಪ್ರಶಸ್ತಿಗಳು ಕಲೆ ಮತ್ತು ರಾಷ್ಟ್ರವೆರಡಕ್ಕೂ ಸೇವೆಯನ್ನು ಮುಂದುವರಿಸಿವೆ.



******

(तथ्य सामग्री आईडी: 151036) आगंतुक पटल : 16


Provide suggestions / comments
इस विश्लेषक को इन भाषाओं में पढ़ें : English , Urdu , हिन्दी , Bengali , Malayalam , Assamese , Marathi