• Sitemap
  • Advance Search
Technology

ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕೆ ಯೋಜನೆ

प्रविष्टि तिथि: 17 SEP 2026 12:51 AM

ಭಾರತದ ಎಲೆಕ್ಟ್ರಾನಿಕ್ಸ್ ಬೆನ್ನೆಲುಬನ್ನು ನಿರ್ಮಿಸುವುದು

ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಇಸಿಎಂಎಸ್

ಎಲೆಕ್ಟ್ರಾನಿಕ್ಸ್ ಆಧುನಿಕ ಆರ್ಥಿಕತೆಗಳು ಮತ್ತು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂಪರ್ಕ, ಆರೋಗ್ಯ ರಕ್ಷಣೆ, ಸಾರಿಗೆ, ಹಣಕಾಸು, ತಯಾರಿಕೆ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೆ ಇವು ಶಕ್ತಿ ನೀಡುತ್ತವೆ. ಸ್ಮಾರ್ಟ್‌ಫೋನ್‌ಗಳು ಮತ್ತು ಆಟೋಮೊಬೈಲ್‌ಗಳಿಂದ ಹಿಡಿದು ಟೆಲಿಕಾಂ ನೆಟ್‌ವರ್ಕ್‌ಗಳು ಮತ್ತು ಕೈಗಾರಿಕಾ ವ್ಯವಸ್ಥೆಗಳವರೆಗೆ, ಎಲೆಕ್ಟ್ರಾನಿಕ್ಸ್ ತಾಂತ್ರಿಕ ಪ್ರಗತಿ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಯನ್ನು ಮುನ್ನಡೆಸುತ್ತವೆ. ಆದ್ದರಿಂದ ತಾಂತ್ರಿಕ ಸಾಮರ್ಥ್ಯ, ಆರ್ಥಿಕ ಭದ್ರತೆ ಮತ್ತು ರಾಷ್ಟ್ರೀಯ ಸ್ವಾವಲಂಬನೆಗೆ ಬಲವಾದ ದೇಶೀಯ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯು ಅತ್ಯಗತ್ಯವಾಗಿದೆ.

ಕಳೆದ ದಶಕದಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ತಯಾರಿಕಾ ವಲಯವು ಗಮನಾರ್ಹ ವಿಸ್ತರಣೆಗೆ ಸಾಕ್ಷಿಯಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯು 2014–15 ರಲ್ಲಿ ₹1.9 ಲಕ್ಷ ಕೋಟಿಯಿಂದ 2025–26 ರಲ್ಲಿ ₹13.11 ಲಕ್ಷ ಕೋಟಿಗೆ ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್ ರಫ್ತು ₹38,000+ ಕೋಟಿಯಿಂದ ₹4.24 ಲಕ್ಷ ಕೋಟಿಗೆ ಬೆಳೆದಿದೆ. ಈ ನಿರಂತರ ಬೆಳವಣಿಗೆಯು ಭಾರತದ ಎಲೆಕ್ಟ್ರಾನಿಕ್ಸ್ ತಯಾರಿಕಾ ಆಕಾಂಕ್ಷೆಗಳಿಗೆ ಬಲವಾದ ಅಡಿಪಾಯವನ್ನು ಹಾಕಿದೆ. ದೇಶೀಯ ಘಟಕಗಳ ತಯಾರಿಕೆ, ಹೆಚ್ಚಿನ ಮೌಲ್ಯವರ್ಧನೆ ಮತ್ತು ಬಲವಾದ ಪೂರೈಕೆ-ಸರಪಳಿ ಸಾಮರ್ಥ್ಯದ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಇನ್ನಷ್ಟು ಆಳವಾಗಿಸುವುದು ಮುಂದಿನ ಆದ್ಯತೆಯಾಗಿದೆ.

ಈ ಬದಲಾವಣೆಯನ್ನು ಮುನ್ನಡೆಸಲು 'ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್' (ಇಸಿಎಂಸ್) ಅನ್ನು ರೂಪಿಸಲಾಗಿದೆ. ಹಲವಾರು ನಿರ್ಣಾಯಕ ಘಟಕಗಳು ಮತ್ತು ಕಚ್ಚಾವಸ್ತುಗಳು ಇಂದಿಗೂ ಆಮದಿನ ಮೇಲೆಯೇ ಅವಲಂಬಿತವಾಗಿವೆ. ಇವುಗಳಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳು, ಕ್ಯಾಮೆರಾ ಮತ್ತು ಡಿಸ್ ಪ್ಲೇ ಮಾಡ್ಯೂಲ್‌ಗಳು, ಕನೆಕ್ಟರ್‌ಗಳು, ಕೆಪಾಸಿಟರ್‌ಗಳು, ಲಿಥಿಯಂ-ಐಯಾನ್ ಸೆಲ್‌ಗಳು ಮತ್ತು ಅಪರೂಪದ ಭೂಮಿಯ ಕಾಂತಗಳು ಸೇರಿವೆ. ಇಸಿಎಂಎಸ್ ಘಟಕಗಳು, ಸಬ್-ಅಸೆಂಬ್ಲಿಗಳು, ಪೂರೈಕೆ-ಸರಪಳಿ ಉತ್ಪನ್ನಗಳು ಮತ್ತು ಸಂಬಂಧಿತ ಬಂಡವಾಳ ಸರಕುಗಳ ದೇಶೀಯ ತಯಾರಿಕೆಗೆ ಬೆಂಬಲ ನೀಡುತ್ತದೆ. ಇದು ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಶ್ರಮಿಸುತ್ತದೆ. ಭಾರತದ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯಾದ್ಯಂತ ಸ್ಥಿರತೆಯನ್ನು ಬಲಪಡಿಸುವ ಗುರಿಯನ್ನೂ ಈ ಯೋಜನೆ ಹೊಂದಿದೆ. ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯ ಆಳದಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸುವ ಮೂಲಕ, ಭಾರತದ ತಯಾರಿಕಾ ವೇಗವನ್ನು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ಗುರಿಯನ್ನು ಇಸಿಎಂಎಸ್ ಹೊಂದಿದೆ.

ಸೆಮಿಕಾನ್ 2026: ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ವೇಗವರ್ಧನೆ

ಆಧುನಿಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳ ಕೇಂದ್ರಭಾಗವೇ ಸೆಮಿಕಂಡಕ್ಟರ್‌ಗಳು. ಆದ್ದರಿಂದ ಬಲವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ತಾಂತ್ರಿಕ ಸಾಮರ್ಥ್ಯ, ಆರ್ಥಿಕ ಭದ್ರತೆ ಮತ್ತು ರಾಷ್ಟ್ರೀಯ ಸ್ವಾವಲಂಬನೆಗೆ ಅಗತ್ಯವಾಗಿದೆ. ಈ ರಣತಾಂತ್ರಿಕ ಪ್ರಾಮುಖ್ಯತೆಯನ್ನು ಗುರುತಿಸಿ, ಭಾರತ ಸರ್ಕಾರವು ನೀತಿ ಬೆಂಬಲ, ಮೂಲಸೌಕರ್ಯ ಮತ್ತು ಜಾಗತಿಕ ಪಾಲುದಾರಿಕೆಗಳ ಮೂಲಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಈ ಪ್ರಯತ್ನದಲ್ಲಿ, "ಸಿಲಿಕಾನ್‌ನಿಂದ ಸಿಸ್ಟಮ್‌ಗಳಿಗೆ: ಪರಿಸರ ವ್ಯವಸ್ಥೆಯ ನಿರ್ಮಾಣ" ಎಂಬ ಧೇಯ್ಯವಾಕ್ಯದೊಂದಿಗೆ 'ಸೆಮಿಕಾನ್ ಇಂಡಿಯಾ 2026' ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ರ ಸೆಪ್ಟೆಂಬರ್ 17 ರಂದು ನವದೆಹಲಿಯ ಯಶೋಭೂಮಿಯಲ್ಲಿ ಉದ್ಘಾಟಿಸಿದರು. 2026 ರ ಸೆಪ್ಟೆಂಬರ್ 17 ರಿಂದ 19 ರವರೆಗೆ ನಡೆಯಲಿರುವ ಸೆಮಿಕಾನ್ 2026, ಜಾಗತಿಕ ಉದ್ಯಮದ ಮುಖಂಡರು, ನೀತಿ ನಿರೂಪಕರು, ಹೂಡಿಕೆದಾರರು, ಶೈಕ್ಷಣಿಕ ವಲಯ ಮತ್ತು ನವೋದ್ಯಮಗಳನ್ನು ಒಂದೇ ವೇದಿಕೆಗೆ ತರುತ್ತದೆ. ಇದು ಭಾರತದ ಸೆಮಿಕಂಡಕ್ಟರ್ ಆಕಾಂಕ್ಷೆಗಳನ್ನು ಮುನ್ನಡೆಸಲು ಮತ್ತು ಸಮಗ್ರ ಮೌಲ್ಯ ಸರಪಳಿಯಾದ್ಯಂತ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ವೇದಿಕೆಯನ್ನು ಒದಗಿಸುತ್ತದೆ. (ಕಾರ್ಯಸೂಚಿಯನ್ನು ಅನ್ವೇಷಿಸಲು ಇಲ್ಲಿ ಕ್ಲಿಕ್ ಮಾಡಿ)

ಇಸಿಎಂಎಸ್ ಇದುವರೆಗಿನ ಪ್ರಗತಿ: ನೀತಿಯಿಂದ ಉತ್ಪಾದನೆಯವರೆಗೆ

ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್ ಬಲವಾದ ಮತ್ತು ಆಳವಾದ 'ಸ್ವದೇಶಿ' ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯ ಅಭಿವೃದ್ಧಿಯನ್ನು ವೇಗಗೊಳಿಸುತ್ತಿದೆ; ಕೇವಲ ಜೋಡಣೆಗೆ ಸೀಮಿತವಾಗದೆ ನಿರ್ಣಾಯಕ ಘಟಕಗಳು ಮತ್ತು ಅಗತ್ಯ ಕಚ್ಚಾವಸ್ತುಗಳ ದೇಶೀಯ ತಯಾರಿಕೆಯತ್ತ ಸಾಗುತ್ತಿದೆ.

  • ಇಸಿಎಂಎಸ್ ಅನ್ನು 8 ಏಪ್ರಿಲ್ 2025 ರಂದು ಅಧಿಸೂಚಿಸಲಾಯಿತು. ಇದನ್ನು ₹22,919 ಕೋಟಿ ಪ್ರಾಥಮಿಕ ವೆಚ್ಚದೊಂದಿಗೆ ಪ್ರಾರಂಭಿಸಲಾಯಿತು.
  • ಈ ಯೋಜನೆಯು ಆರು ವರ್ಷಗಳ ಅವಧಿಯನ್ನು ಹೊಂದಿದ್ದು, ಐಚ್ಛಿಕವಾಗಿ ಒಂದು ವರ್ಷದ ಪ್ರವೇಶಾವಧಿಯನ್ನು ಹೊಂದಿದೆ.
  • ಕ್ಯಾಪೆಕ್ಸ್ ಪ್ರೋತ್ಸಾಹಕವು ಐದು ವರ್ಷಗಳವರೆಗೆ ಲಭ್ಯವಿರುತ್ತದೆ.
  • ಕೇಂದ್ರ ಬಜೆಟ್ 2026–27 ರಲ್ಲಿ ಇಸಿಎಂಎಸ್ ವೆಚ್ಚವನ್ನು ₹40,000 ಕೋಟಿಗೆ ಹೆಚ್ಚಿಸಲಾಯಿತು. ಈ ಹೆಚ್ಚಿನ ಹಂಚಿಕೆಯು ದೇಶೀಯ ಎಲೆಕ್ಟ್ರಾನಿಕ್ಸ್ ಘಟಕ ತಯಾರಿಕೆಯನ್ನು ಇನ್ನಷ್ಟು ವಿಸ್ತರಿಸಲಿದೆ.
  • ಆಗಸ್ಟ್ 2026 ರ ವೇಳೆಗೆ, 15 ರಾಜ್ಯಗಳಲ್ಲಿ 106 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
  • ಈ ಯೋಜನೆಗಳು 30 ಎಲೆಕ್ಟ್ರಾನಿಕ್ ಡೊಮೇನ್ ಉತ್ಪನ್ನಗಳನ್ನು ಒಳಗೊಂಡಿದ್ದು, ₹69,548 ಕೋಟಿಗಳ ಅನುಮೋದಿತ ಹೂಡಿಕೆಯನ್ನು ಒಳಗೊಂಡಿವೆ.

  • ಅನುಮೋದಿತ 38 ಪ್ಲಾಂಟ್‌ಗಳು ಈಗಾಗಲೇ ಉತ್ಪಾದನೆ ನಡೆಯುತ್ತಿದೆ. ಮತ್ತು 16 ಯೋಜನೆಗಳು ನಿರ್ಮಾಣ ಅಥವಾ ಯಂತ್ರೋಪಕರಣಗಳ ಅಳವಡಿಕೆಯ ಮುಂದುವರಿದ ಹಂತಗಳಲ್ಲಿವೆ.
  • ಅನುಮೋದಿತ ಯೋಜನೆಗಳು ₹5.34 ಲಕ್ಷ ಕೋಟಿ ಮೌಲ್ಯದ ಉತ್ಪಾದನೆಯನ್ನು ಉತ್ಪಾದಿಸುವ ನಿರೀಕ್ಷೆಯಿದೆ.
  • ಅವು 74,628 ನೇರ ಉದ್ಯೋಗಗಳನ್ನು ಮತ್ತು 2.5 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
  • ಇಸಿಎಂಎಸ್ ನಿರ್ಣಾಯಕ ಎಲೆಕ್ಟ್ರಾನಿಕ್ಸ್ ಘಟಕಗಳು ಮತ್ತು ವಸ್ತುಗಳಾದ್ಯಂತ ದೇಶೀಯ ಸಾಮರ್ಥ್ಯವನ್ನು ಬಲಪಡಿಸುತ್ತಿದೆ. ಉತ್ಪಾದನಾ ಸಾಮರ್ಥ್ಯವು ಈಗ ಹಲವು ಉತ್ಪನ್ನ ವಿಭಾಗಗಳಲ್ಲಿ ದೇಶೀಯ ಬೇಡಿಕೆಯನ್ನು ಪೂರೈಸುತ್ತದೆ ಅಥವಾ ಅದಕ್ಕಿಂತ ಹೆಚ್ಚಾಗಿದೆ.

ಎಲೆಕ್ಟ್ರಾನಿಕ್ಸ್ ತಯಾರಿಕೆಯನ್ನು ಉತ್ತೇಜಿಸಲು ಸರ್ಕಾರದ ಕಾರ್ಯತಂತ್ರದ ಉಪಕ್ರಮಗಳು

  • ಎಲೆಕ್ಟ್ರಾನಿಕ್ಸ್ ಮೇಲಿನ ರಾಷ್ಟ್ರೀಯ ನೀತಿ 2019 (ಎನ್.ಪಿ.ಇ 2019): ಭಾರತವನ್ನು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ (ಇ.ಎಸ್.ಡಿ.ಎಂ) ನ ಜಾಗತಿಕ ಕೇಂದ್ರವನ್ನಾಗಿ ಮಾಡುವ ಸಮಗ್ರ ಉದ್ದೇಶವನ್ನು ಹೊಂದಲಾಗಿದೆ. ಜಾಗತಿಕವಾಗಿ ಸ್ಪರ್ಧಾತ್ಮಕ ತಯಾರಿಕೆಗೆ ಅಗತ್ಯವಿರುವ ಪ್ರಮುಖ ಘಟಕಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸೂಕ್ತ ವಾತಾವರಣವನ್ನು ನಿರ್ಮಿಸುವುದು ಇದರಲ್ಲಿ ಸೇರಿದೆ.
  • ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆ (ಪಿ.ಎಲ್.ಐ): ಅರ್ಹ ವಿಭಾಗಗಳಿಗೆ ಹೆಚ್ಚುವರಿ ಮಾರಾಟದ ಮೇಲೆ 4%–6% ನಷ್ಟು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳನ್ನು ಪರಿಚಯಿಸಲಾಗಿದೆ. ದೇಶೀಯ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ತಯಾರಿಕೆಯನ್ನು ಹೆಚ್ಚಿಸುವುದು ಇದರ ಮುಖ್ಯ ಗಮನವಾಗಿದೆ.
  • ಎಲೆಕ್ಟ್ರಾನಿಕ್ ಕಾಂಪೊನೆಂಟ್‌ಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಯ ಉತ್ತೇಜನ ಯೋಜನೆ (ಎಸ್.ಪಿ.ಇ.ಸಿ.ಎಸ್) ಮತ್ತು ಸುಧಾರಿತ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್‌ಗಳು (ಇಎಂಸಿ 2.0): ಎಸ್.ಪಿ.ಇ.ಸಿ.ಎಸ್ ಯೋಜನೆಯು ಎಲೆಕ್ಟ್ರಾನಿಕ್ ಘಟಕಗಳು, ಸೆಮಿಕಂಡಕ್ಟರ್/ಡಿಸ್ ಪ್ಲೇ ಫ್ಯಾಬ್ರಿಕೇಶನ್, ಎಟಿಎಂಪಿ (ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್) ಯುನಿಟ್‌ಗಳು, ವಿಶೇಷ ಸಬ್-ಅಸೆಂಬ್ಲಿಗಳು ಮತ್ತು ಬಂಡವಾಳ ಸರಕುಗಳಿಗೆ 25% ಬಂಡವಾಳ-ವೆಚ್ಚದ ಪ್ರೋತ್ಸಾಹಕವನ್ನು ಒದಗಿಸಿದೆ. ಇಎಂಸಿ 2.0 ವಿಶ್ವದರ್ಜೆಯ ತಯಾರಿಕಾ ಮೂಲಸೌಕರ್ಯ, ಸಾರ್ವಜನಿಕ ಸೌಲಭ್ಯಗಳು ಮತ್ತು ಪ್ಲಗ್-ಅಂಡ್-ಪ್ಲೇ ಸಾಮರ್ಥ್ಯವನ್ನು ಬೆಂಬಲಿಸಿದೆ.
  • ಐಟಿ ಹಾರ್ಡ್‌ವೇರ್‌ಗೆ ಪಿ.ಎಲ್.ಐ ಯೋಜನೆ: ದೇಶೀಯ ತಯಾರಿಕೆಯನ್ನು ಉತ್ತೇಜಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಉತ್ಪಾದನೆ ಆಧಾರಿತ ಪ್ರೋತ್ಸಾಹಕಗಳನ್ನು ಒದಗಿಸುತ್ತದೆ. ತಯಾರಿಕಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತವನ್ನು ವಿಶ್ವಾಸಾರ್ಹ ಜಾಗತಿಕ ಪೂರೈಕೆ-ಸರಪಳಿ ಕೇಂದ್ರವನ್ನಾಗಿ ರೂಪಿಸಲು ಪಿ.ಎಲ್.ಐ 2.0 ಇದನ್ನು ಮತ್ತಷ್ಟು ವಿಸ್ತರಿಸುತ್ತದೆ.
  • ಸೆಮಿಕಾನ್ ಇಂಡಿಯಾ ಕಾರ್ಯಕ್ರಮ: ₹76,000 ಕೋಟಿಯ 'ಸೆಮಿಕಾನ್ 1.0' ಕಾರ್ಯಕ್ರಮವು ವ್ಯಾಪಕವಾದ ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ತಯಾರಿಕಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ. ಇದು ಫ್ಯಾಬ್‌ಗಳು, ಪ್ಯಾಕೇಜಿಂಗ್, ಪರೀಕ್ಷೆ, ವಿನ್ಯಾಸ ಮತ್ತು ಸಂಬಂಧಿತ ಸಾಮರ್ಥ್ಯಗಳಿಗೆ ಬೆಂಬಲ ನೀಡುವ ಮೂಲಕ ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಪೂರಕವಾಗಿದೆ. ₹1,27,500 ಕೋಟಿ ವೆಚ್ಚದಲ್ಲಿ 'ಸೆಮಿಕಾನ್ 2.0' ಅನ್ನು ಜುಲೈ 2026ರಲ್ಲಿ ಅನುಮೋದಿಸಲಾಯಿತು. ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಸುವುದು ಇದರ ಗುರಿಯಾಗಿದೆ.
  • ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಸ್ (ಇಎಂಸಿ) ಯೋಜನೆ: ಇದು ಗ್ರೀನ್‌ಫೀಲ್ಡ್ ಯೋಜನೆಗಳಿಗೆ ಪ್ರತಿ 100 ಎಕರೆ ಜಮೀನಿಗೆ ಗರಿಷ್ಠ ₹50 ಕೋಟಿ ಪರಿಮಿತಿಯೊಂದಿಗೆ ಯೋಜನೆ ವೆಚ್ಚದ 50% ರಷ್ಟು ಆರ್ಥಿಕ ನೆರವನ್ನು ನೀಡುತ್ತದೆ.
  • ಫೇಸ್ಡ್ ಮ್ಯಾನುಫ್ಯಾಕ್ಚರಿಂಗ್ ಪ್ರೋಗ್ರಾಂ (ಪಿಎಂಪಿ): ಸೆಲ್ಯುಲಾರ್ ಮೊಬೈಲ್ ಫೋನ್‌ಗಳು ಮತ್ತು ಅವುಗಳ ಪ್ರಮುಖ ಸಬ್-ಅಸೆಂಬ್ಲಿಗಳಲ್ಲಿ ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು ನಿಯಮಿತ, ಸುಂಕ-ಆಧಾರಿತ ವಿಧಾನವನ್ನು ಸ್ಥಾಪಿಸುತ್ತದೆ.
  • ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಫಂಡ್ (ಇಡಿಎಫ್): ಇದು ರಿಸ್ಕ್ ಕ್ಯಾಪಿಟಲ್ ಪೂರೈಸಲು ಹಾಗೂ ಇ.ಎಸ್.ಡಿ.ಎಂ ಮತ್ತು ಐ.ಟಿ.ಯಲ್ಲಿ ಮಾರುಕಟ್ಟೆ ಚಾಲಿತ ನಾವೀನ್ಯತೆ, ಉತ್ಪನ್ನ ವಿನ್ಯಾಸ ಮತ್ತು ಸ್ಟಾರ್ಟ್‌ಅಪ್ ಬೆಳವಣಿಗೆಯನ್ನು ಉತ್ತೇಜಿಸಲು ವೆಂಚರ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಫಂಡ್ ಆಫ್ ಫಂಡ್ಸ್ ಆಗಿ ಕಾರ್ಯನಿರ್ವಹಿಸುತ್ತದೆ.

ಜಾಗತಿಕ ಎಲೆಕ್ಟ್ರಾನಿಕ್ಸ್ ತಯಾರಿಕಾ ಕೇಂದ್ರದತ್ತ

ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ಸ್ ಮ್ಯಾನುಫ್ಯಾಕ್ಚರಿಂಗ್ ಯೋಜನೆಯು ಭಾರತದ ಎಲೆಕ್ಟ್ರಾನಿಕ್ಸ್ ತಯಾರಿಕಾ ಆಕಾಂಕ್ಷೆಗಳನ್ನು ಹೂಡಿಕೆ, ಉತ್ಪಾದನೆ ಮತ್ತು ಉದ್ಯೋಗವಾಗಿ ಪರಿವರ್ತಿಸಲು ಸಹಾಯ ಮಾಡುತ್ತಿದೆ. ಯೋಜನೆಗಳು ಅನುಮೋದನೆಯಿಂದ ನಿರ್ಮಾಣ ಮತ್ತು ವಾಣಿಜ್ಯ ಉತ್ಪಾದನೆಯತ್ತ ಸಾಗುತ್ತಿದ್ದಂತೆ, ಇಸಿಎಂಎಸ್ ದೇಶದ ತಯಾರಿಕಾ ನೆಲೆಯನ್ನು ವಿಸ್ತರಿಸುತ್ತಿದೆ, ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸುತ್ತಿದೆ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜನೆಯನ್ನು ಬಲಪಡಿಸುತ್ತಿದೆ. ಎಲೆಕ್ಟ್ರಾನಿಕ್ಸ್ ರಫ್ತು ಈಗಾಗಲೇ ಪ್ರಮುಖ ರಫ್ತು ವಿಭಾಗವಾಗಿ ಹೊರಹೊಮ್ಮುತ್ತಿರುವುದರಿಂದ, ಭಾರತವು 2030 ರ ವೇಳೆಗೆ $500 ಬಿಲಿಯನ್ (₹47.75 ಲಕ್ಷ ಕೋಟಿ) ದೇಶೀಯ ಎಲೆಕ್ಟ್ರಾನಿಕ್ಸ್ ತಯಾರಿಕಾ ಪರಿಸರ ವ್ಯವಸ್ಥೆ ಮತ್ತು $150 ಬಿಲಿಯನ್ (₹14.33 ಲಕ್ಷ ಕೋಟಿ) ಎಲೆಕ್ಟ್ರಾನಿಕ್ಸ್ ರಫ್ತಿನ ಗುರಿಯನ್ನು ಹೊಂದಿದೆ. ಇದು ಜಾಗತಿಕವಾಗಿ ಸ್ಪರ್ಧಾತ್ಮಕ ಎಲೆಕ್ಟ್ರಾನಿಕ್ಸ್ ತಯಾರಿಕೆ ಮತ್ತು ರಫ್ತು ಕೇಂದ್ರವಾಗುವ ತನ್ನ ಆಕಾಂಕ್ಷೆಯನ್ನು ಪುನರುಚ್ಚರಿಸುತ್ತದೆ.

References

 

Ministry of Electronics and Information Technology:

 

PIB Backgrounders

 

Cabinet

 

Ministry of Commerce & Industry

Electronics Components Manufacturing Scheme

 

*****

(तथ्य सामग्री आईडी: 151037) आगंतुक पटल : 13


Provide suggestions / comments
इस विश्लेषक को इन भाषाओं में पढ़ें : English , हिन्दी , Bengali , Assamese , Malayalam