Rural Prosperity
ಒಂದು ರಾಷ್ಟ್ರ, ಒಂದು ಪಡಿತರ ಚೀಟಿ
प्रविष्टि तिथि:
12 NOV 2026 11:45 AM
ಗಡಿಗಳನ್ನು ಮಿರಿದ ಆಹಾರ ಭದ್ರತೆ
ವರ್ಗಾವಣೆ ಸೌಲಭ್ಯದಿಂದ ಒಳಗೊಳ್ಳುವಿಕೆಯತ್ತ: ಆಹಾರಧಾನ್ಯ ಲಭ್ಯತೆಯ ಪರಿವರ್ತನೆ
'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ' ಯೋಜನೆಯನ್ನು 2019 ರಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪ್ರಾರಂಭಿಸಿತು. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಒಂದು ಪ್ರಮುಖ ಸುಧಾರಣೆಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಬರುವ ಪಡಿತರ ಚೀಟಿಗಳು ಮತ್ತು ಫಲಾನುಭವಿಗಳಿಗೆ ದೇಶಾದ್ಯಂತ ಪೋರ್ಟಬಿಲಿಟಿ (ಎಲ್ಲಿ ಬೇಕಾದರೂ ಪಡಿತರ ಪಡೆಯುವ ಸೌಲಭ್ಯ) ಸೌಲಭ್ಯವನ್ನು ಒದಗಿಸುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ಸಬ್ಸಿಡಿ ದರದ ಆಹಾರಧಾನ್ಯಗಳಿಗೆ ಕಾನೂನುಬದ್ಧ ಹಕ್ಕುಗಳನ್ನು ಸ್ಥಾಪಿಸಿದರೆ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಈ ಧಾನ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸುತ್ತದೆ. ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸುಧಾರಣೆಗಳ ಅಡಿಯಲ್ಲಿ, ಫಲಾನುಭವಿಗಳು ದೇಶದ ಎಲ್ಲಿಯಾದರೂ ತಮ್ಮ ಪಾಲಿನ ಆಹಾರಧಾನ್ಯಗಳನ್ನು ಪಡೆಯಲು ಅನುವು ಮಾಡಿಕೊಡುವಲ್ಲಿ ಒಎನ್ಒಆರ್ಸಿ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಈ ಉಪಕ್ರಮವು ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸಿದೆ ಮತ್ತು ಹೆಚ್ಚು ಸಮಗ್ರ, ಎಲ್ಲರನ್ನೂ ಒಳಗೊಂಡ ಹಾಗೂ ಫಲಾನುಭವಿ-ಕೇಂದ್ರಿತ ಕಲ್ಯಾಣ ವಿತರಣಾ ವ್ಯವಸ್ಥೆಯ ದೃಷ್ಟಿಕೋನವನ್ನು ಮುನ್ನಡೆಸಿದೆ.
- ಹೊಸ ಪಡಿತರ ಚೀಟಿಯ ಅಗತ್ಯವಿಲ್ಲದೆಯೇ ದೇಶಾದ್ಯಂತ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ತಮ್ಮ ಪಾಲಿನ ಆಹಾರಧಾನ್ಯಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಆಹಾರಧಾನ್ಯಗಳ ಹಕ್ಕುಗಳನ್ನು ಎಲ್ಲಾ ರಾಜ್ಯಗಳಿಗೂ ಪೋರ್ಟಬಲ್ (ಎಲ್ಲಿ ಬೇಕಾದರೂ ಪಡೆಯುವಂತೆ) ಆಗಿಸುತ್ತದೆ.
- ವಲಸೆ ಕಾರ್ಮಿಕರು ಮತ್ತು ಕುಟುಂಬಗಳು ತಮ್ಮ ವಾಸಸ್ಥಳವನ್ನು ಬದಲಾಯಿಸಿದ ನಂತರವೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಬೆಂಬಲಿಸುತ್ತದೆ.
- ಫಲಾನುಭವಿಗಳು ದೇಶದ ಎಲ್ಲಿಯೇ ವಾಸವಿದ್ದರೂ ಅವರಿಗೆ ಸಬ್ಸಿಡಿ ದರದ ಆಹಾರಧಾನ್ಯಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ.
- ದೇಶಾದ್ಯಂತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸೌಲಭ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
ಪೋರ್ಟಬಿಲಿಟಿ ಮೈಲಿಗಲ್ಲುಗಳು ಒಎನ್ಒಆರ್ಸಿ ಯೋಜನೆಯು ಆಹಾರಧಾನ್ಯಗಳ ಲಭ್ಯತೆಯನ್ನು ಸುಗಮ, ಪೋರ್ಟಬಲ್ ಮತ್ತು ರಾಷ್ಟ್ರವ್ಯಾಪಿಯಾಗಿಸುವ ಮೂಲಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ.

- ಒಎನ್ಒಆರ್ಸಿ ಯೋಜನೆಯನ್ನು ಎಲ್ಲಾ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ 100% ಫಲಾನುಭವಿಗಳನ್ನು ಇದು ಒಳಗೊಂಡಿದೆ.
- ಒಎನ್ಒಆರ್ಸಿ ಪ್ರತಿ ತಿಂಗಳು ಸುಮಾರು 3.27 ಕೋಟಿ ಪೋರ್ಟಬಿಲಿಟಿ ವಹಿವಾಟುಗಳಿಗೆ ಅನುವು ಮಾಡಿಕೊಡುತ್ತದೆ.
- ಪ್ರಾರಂಭವಾದಾಗಿನಿಂದ, ಇದು 233 ಕೋಟಿಗೂ ಹೆಚ್ಚು ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಿದ್ದು, 614 ಲಕ್ಷ ಮೆಟ್ರಿಕ್ ಟನ್ಗಳಿಗಿಂತ ಹೆಚ್ಚು ಆಹಾರಧಾನ್ಯಗಳನ್ನು ವಿತರಿಸಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಾರದರ್ಶಕತೆ ಮತ್ತು ವಿತರಣೆಯನ್ನು ಬಲಪಡಿಸುವುದು ಪಾರದರ್ಶಕತೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ತಲುಪುವ ವಿತರಣೆಯನ್ನು ಸುಧಾರಿಸಲು ಸರ್ಕಾರವು ಪಡಿತರ ಪೋರ್ಟಬಿಲಿಟಿಯ ಜೊತೆಗೆ ಡಿಜಿಟಲ್ ದೃಢೀಕರಣ, ದತ್ತಾಂಶ ಆಧಾರಿತ ಗುರಿ ನಿಗದಿ ಮತ್ತು ತಂತ್ರಜ್ಞಾನ ಆಧಾರಿತ ವಿತರಣೆಯನ್ನು ಪೂರಕವಾಗಿ ಜೋಡಿಸಿದೆ.
- 100% ಡಿಜಿಟಲೀಕರಣ: ಅಕ್ಟೋಬರ್ 2026 ರ ವೇಳೆಗೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಚೀಟಿ ಮತ್ತು ಫಲಾನುಭವಿಗಳ ದತ್ತಾಂಶಗಳು (ಡೇಟಾಬೇಸ್) 100% ಡಿಜಿಟಲೀಕರಣಗೊಂಡಿದ್ದು, ಸುಮಾರು 78.65 ಕೋಟಿ ಫಲಾನುಭವಿಗಳನ್ನು ಒಳಗೊಂಡಿವೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಾರ್ವಜನಿಕ ಪಾರದರ್ಶಕ ಪೋರ್ಟಲ್ಗಳಲ್ಲಿ ಲಭ್ಯವಿವೆ. ಕೇಂದ್ರೀಯ ವ್ಯವಸ್ಥೆಯಲ್ಲಿರುವ 20.51 ಕೋಟಿ ಪಡಿತರ ಚೀಟಿಗಳ ಪೈಕಿ 98.8% (20.27 ಕೋಟಿ) ಚೀಟಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಆಧಾರ್ ಜೋಡಣೆಯಾದ ಒಟ್ಟು ಫಲಾನುಭವಿಗಳ ಸಂಖ್ಯೆ 76.97 ಕೋಟಿ ಆಗಿದೆ. ಸೆಪ್ಟೆಂಬರ್ 30, 2026 ರ ಅನ್ವಯ, 71.52 ಕೋಟಿ ಫಲಾನುಭವಿಗಳ (ಅಂದರೆ ಒಟ್ಟು ಫಲಾನುಭವಿಗಳಲ್ಲಿ 91%) ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ.
- ಪಾರದರ್ಶಕ ಕುಂದುಕೊರತೆ ನಿವಾರಣೆ: ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾರದರ್ಶಕ ಪೋರ್ಟಲ್ಗಳು, ಆನ್ಲೈನ್ ಕುಂದುಕೊರತೆ ನಿವಾರಣಾ ವ್ಯವಸ್ಥೆಗಳು ಮತ್ತು ಟೋಲ್-ಫ್ರೀ ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ.
- ಗಣಕೀಕೃತ ಪೂರೈಕೆ ಸರಪಳಿ: ರಾಷ್ಟ್ರವ್ಯಾಪಿ ಆನ್ಲೈನ್ ಆಹಾರಧಾನ್ಯ ಹಂಚಿಕೆಯನ್ನು ಜಾರಿಗೊಳಿಸಲಾಗಿದ್ದು, 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರೈಕೆ ಸರಪಳಿಗಳನ್ನು ಗಣಕೀಕರಿಸಲಾಗಿದೆ.
- ಇ-ಪಾಸ್ ಸೌಲಭ್ಯವಿರುವ ನ್ಯಾಯಬೆಲೆ ಅಂಗಡಿಗಳು: ಒಟ್ಟು 5.51 ಲಕ್ಷ ನ್ಯಾಯಬೆಲೆ ಅಂಗಡಿಗಳ ಪೈಕಿ 99.8% (5.50 ಲಕ್ಷ) ಅಂಗಡಿಗಳು ಇ-ಪಾಸ್ ಯಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.
- ಅರ್ಹ ಫಲಾನುಭವಿಗಳ ನಿಖರ ಗುರುತಿಸುವಿಕೆ ಮತ್ತು ನಕಲಿ ದಾಖಲೆಗಳ ತೆಗೆದುಹಾಕುವಿಕೆ: ಸುಧಾರಿತ ಆಧಾರ್ ಮತ್ತು ಪಿಡಿಎಸ್ ದತ್ತಾಂಶ ವಿಶ್ಲೇಷಣೆಯು 5.95 ಕೋಟಿ ಸಂಶಯಾಸ್ಪದ ದಾಖಲೆಗಳನ್ನು ಪತ್ತೆಹಚ್ಚಿದ್ದು, 'ರೈಟ್ಫುಲ್ ಟಾರ್ಗೆಟಿಂಗ್ V1' ಅಡಿಯಲ್ಲಿ 2.58 ಕೋಟಿ ನಕಲಿ ಅಥವಾ ಅನರ್ಹ ದಾಖಲೆಗಳನ್ನು ರದ್ದುಗೊಳಿಸಲಾಗಿದೆ. 'ರೈಟ್ಫುಲ್ ಟಾರ್ಗೆಟಿಂಗ್ ಆವೃತ್ತಿ 3.63' ಅಡಿಯಲ್ಲಿ ಸಂಶಯಾಸ್ಪದ ದಾಖಲೆಗಳನ್ನು ಗುರುತಿಸಿ, 68 ಲಕ್ಷ ದಾಖಲೆಗಳನ್ನು ತೆಗೆದುಹಾಕಲಾಗಿದೆ.
- ನಿರ್ಮಲ್ ಮತ್ತು ಸಕ್ಷಮ್: 'ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಯಾಂತ್ರೀಕರಣದೊಂದಿಗೆ ಪಡಿತರ ಸಾಗಣೆ ಮತ್ತು ನಿರ್ವಹಣೆಗೆ ನೆರವು ಯೋಜನೆ' ಎಂಬ ಸಮಗ್ರ ಯೋಜನೆಯಡಿ, ಈ ಉಪಕ್ರಮಗಳು ಖರೀದಿಯಿಂದ ವಿತರಣೆಯವರೆಗೆ ದತ್ತಾಂಶ ಸಂರಚನೆ/ವಿಶ್ಲೇಷಣೆ ಮತ್ತು ವಾಹನ ಸ್ಥಳ ಪತ್ತೆ ವ್ಯವಸ್ಥೆಗಳು ಸೇರಿದಂತೆ ನೈಜ-ಸಮಯದ ದತ್ತಾಂಶ ಏಕೀಕರಣವನ್ನು ಬಲಪಡಿಸುತ್ತವೆ ಸಾರ್ಥಕ್ ಪಿಡಿಎಸ್ ಯೋಜನೆಯು ರಾಜ್ಯದೊಳಗಿನ ಸಾಗಣೆ, ನಿರ್ವಹಣೆ ಮತ್ತು ನ್ಯಾಯಬೆಲೆ ಅಂಗಡಿಗಳ ವಿತರಕರ ಲಾಭಾಂಶಕ್ಕೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಏಕೀಕೃತ, ನಾಗರಿಕ-ಕೇಂದ್ರಿತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಲ್ಲ ಪಿಡಿಎಸ್ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಮಾರ್ಚ್ 31, 2031 ರವರೆಗೆ ಕಟ್ಟಕಡೆಯ ವ್ಯಕ್ತಿಗೂ ಪಡಿತರ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವುದು, ಸೋರಿಕೆಯನ್ನು ಕನಿಷ್ಠಗೊಳಿಸುವುದು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಆಹಾರ ಭದ್ರತೆಯನ್ನು ಬಲಪಡಿಸುವುದು ಈ ಯೋಜನೆಯ ಗುರಿಯಾಗಿದೆ.
- ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮೂಲಕ ಆಧುನೀಕರಣ ಮತ್ತು ಸುಧಾರಣೆಗಳ ಯೋಜನೆ: ಸಾರ್ಥಕ್ -ಪಿಡಿಎಸ್ಅಡಿಯಲ್ಲಿ, ಸ್ಮಾರ್ಟ್-ಪಿಡಿಎಸ್ಯೋಜನೆಯು ಪಡಿತರ ಚೀಟಿಗಳು, ವಿತರಣೆ, ಪೂರೈಕೆ ಸರಪಳಿಗಳು ಮತ್ತು ಕುಂದುಕೊರತೆ ನಿವಾರಣೆಯನ್ನು ಡಿಜಿಟಲ್ ರೂಪದಲ್ಲಿ ಸಂಯೋಜಿಸುತ್ತದೆ, ಜೊತೆಗೆ ಏಕೀಕೃತ ಕೇಂದ್ರೀಯ ವ್ಯವಸ್ಥೆಯ ಮೂಲಕ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಟ್ಟದಲ್ಲಿರುವ ತಾಂತ್ರಿಕ ಕೊರತೆಗಳನ್ನು ನೀಗಿಸುತ್ತದೆ.
ಮೇರಾ ರೇಷನ್ ಆ್ಯಪ್ : ಬೆರಳ ತುದಿಯಲ್ಲೇ ಆಹಾರಧಾನ್ಯ ಲಭ್ಯತೆ
ಒಎನ್ಒಆರ್ಸಿ ಯೋಜನೆಯಡಿ ತಂತ್ರಜ್ಞಾನ ಆಧಾರಿತ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸುಧಾರಣೆಗಳ ಭಾಗವಾಗಿ, ಇಲಾಖೆಯು 'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. 13 ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್, ಫಲಾನುಭವಿಗಳಿಗೆ ಪಡಿತರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಮತ್ತು ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಪ್ರಮುಖ ವೈಶಿಷ್ಟ್ಯಗಳು:
- ಮಾಸಿಕ ಆಹಾರಧಾನ್ಯ ಹಂಚಿಕೆಯ (ಹಕ್ಕಿನ) ವಿವರಗಳನ್ನು ಪರಿಶೀಲಿಸುವುದು
- ಹಿಂದಿನ ವಹಿವಾಟಿನ ವಿವರಗಳನ್ನು ವೀಕ್ಷಿಸುವುದು
- ಆಧಾರ್ ಜೋಡಣೆ ಸ್ಥಿತಿಯನ್ನು ದೃಢೀಕರಿಸುವುದು
- ರಾಷ್ಟ್ರೀಯ ಪೋರ್ಟಬಿಲಿಟಿ ಅರ್ಹತೆಯನ್ನು ಪರಿಶೀಲಿಸುವುದು
- ಒಎನ್ಒಆರ್ಸಿ ಯೋಜನೆಗೆ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳುವುದು
- ಜಿಪಿಎಸ್ ಬಳಸಿ ಹತ್ತಿರದ ನ್ಯಾಯಬೆಲೆ ಅಂಗಡಿಗಳನ್ನು ಪತ್ತೆಹಚ್ಚುವುದು
- ನಕ್ಷೆಯ ಮೂಲಕ ಸಮೀಪದ ನ್ಯಾಯಬೆಲೆ ಅಂಗಡಿಗೆ ಮಾರ್ಗದರ್ಶನ ಪಡೆಯುವುದು
ಮೇರಾ ರೇಷನ್ ಆ್ಯಪ್ ಫಲಾನುಭವಿಗಳಿಗೆ, ವಿಶೇಷವಾಗಿ ವಲಸೆ ಕಾರ್ಮಿಕರಿಗೆ, ಹೊಸ ಪ್ರದೇಶದಲ್ಲಿ ಹತ್ತಿರದ ನ್ಯಾಯಬೆಲೆ ಅಂಗಡಿಗಳನ್ನು ಪತ್ತೆಹಚ್ಚಲು ಮತ್ತು ತಮ್ಮ ಪಾಲಿನ ಆಹಾರಧಾನ್ಯಗಳನ್ನು ಪಡೆಯಲು ನೆರವಾಗುತ್ತದೆ.
ಎಲ್ಲರನ್ನೂ ಒಳಗೊಂಡ ಮತ್ತು ಗೌರವಯುತ ಆಹಾರ ಭದ್ರತೆಯತ್ತ ಆಹಾರಧಾನ್ಯಗಳ ಲಭ್ಯತೆಯನ್ನು ಪೋರ್ಟಬಲ್ (ಎಲ್ಲಿ ಬೇಕಾದರೂ ಪಡೆಯುವಂತೆ), ರಾಷ್ಟ್ರವ್ಯಾಪಿ ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸುವ ಮೂಲಕ ಒಎನ್ಒಆರ್ಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ ಅನುಷ್ಠಾನ ಹಾಗೂ ವ್ಯಾಪಕವಾದ ಪೋರ್ಟಬಿಲಿಟಿ ವಹಿವಾಟುಗಳು, ಆಹಾರ ಭದ್ರತೆಯನ್ನು ಬಲಪಡಿಸುವಲ್ಲಿ ಈ ಯೋಜನೆಯ ಹೆಚ್ಚುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತವೆ. ಡಿಜಿಟಲೀಕರಣಗೊಂಡ ಫಲಾನುಭವಿಗಳ ದತ್ತಾಂಶ, ಇ-ಪಾಸ್ ಸೌಲಭ್ಯವಿರುವ ನ್ಯಾಯಬೆಲೆ ಅಂಗಡಿಗಳು, ಸಾರ್ಥಕ್-ಪಿಡಿಎಸ್ ಚೌಕಟ್ಟು ಮತ್ತು ಮೇರಾ ರೇಷನ್ ಆ್ಯಪ್ನೊಂದಿಗೆ, ಈ ವ್ಯವಸ್ಥೆಯು ಹೆಚ್ಚು ಪಾರದರ್ಶಕ, ಸಮಗ್ರ ಮತ್ತು ಫಲಾನುಭವಿ-ಕೇಂದ್ರಿತವಾಗುತ್ತಿದೆ.
ಒಟ್ಟಾರೆಯಾಗಿ, ಈ ಸುಧಾರಣೆಗಳು ಕಟ್ಟಕಡೆಯ ವ್ಯಕ್ತಿಗೂ ಪಡಿತರ ತಲುಪುವುದನ್ನು ಬಲಪಡಿಸುತ್ತಿವೆ ಮತ್ತು ಫಲಾನುಭವಿಗಳು ಎಲ್ಲಿಯೇ ವಾಸವಿದ್ದರೂ ಹಾಗೂ ಕೆಲಸ ಮಾಡುತ್ತಿದ್ದರೂ ಅವರಿಗೆ ಆಹಾರ ಭದ್ರತೆ ತಲುಪುವುದನ್ನು ಖಚಿತಪಡಿಸುತ್ತಿವೆ.
References
Ministry of Consumer Affairs and Public Distribution
https://nfsa.gov.in/doc/FAQ_for_Mera_Ration_2.pdf
https://sansad.in/getFile/annex/271/AU2600_K4DMRC.pdf?source=pqars
https://www.pib.gov.in/PressReleaseDetail.aspx?PRID=2269182®=6&lang=1
https://sansad.in/getFile/lsapps/loksabhaquestions/annex/188/AU4010_m1EVEQ.pdf?source=lsapps
https://www.pib.gov.in/PressReleasePage.aspx?PRID=2265788®=3&lang=1
https://dfpd.gov.in/distribution-of-food-grains/en?utm
https://dfpd.gov.in/distribution-of-food-grains/en
AU2771_yEm7WG.pdf
My Scheme
https://www.myscheme.gov.in/schemes/onorc
PIB Backgrounders
https://www.pib.gov.in/FactsheetDetails.aspx?Id=150838®=3&lang=1
https://www.pib.gov.in/PressNoteDetails.aspx?id=158774&NoteId=158774&ModuleId=3®=48&lang=2
Click here to see PDF
*****
(तथ्य सामग्री आईडी: 151180)
आगंतुक पटल : 12
Provide suggestions / comments