• Skip to Content
  • Sitemap
  • Advance Search
Infrastructure

ಹೊಸ ಯಾತ್ರಿ ಸೌಲಭ್ಯ ಕೇಂದ್ರ: ಆರಾಮ, ಸಂಪರ್ಕ, ಅನುಕೂಲ!

Posted On: 19 OCT 2025 10:54AM

 ಈ ಹಬ್ಬದ ಋತುವಿನಲ್ಲಿ, ನವದೆಹಲಿ ರೈಲು ನಿಲ್ದಾಣವು ಹೊಸ ರೂಪ ಮತ್ತು ನವೀಕೃತ ದಕ್ಷತೆಯೊಂದಿಗೆ ಪ್ರಯಾಣಿಕರನ್ನು ಸ್ವಾಗತಿಸುತ್ತಿದೆ. ಹೊಳಪು ನೀಡಿದ ಮಹಡಿಗಳು, ಡಿಜಿಟಲ್ ಸೈನ್ ಬೋರ್ಡ್‌ಗಳು, ಸ್ವಚ್ಛ ಶೌಚಾಲಯಗಳು ಮತ್ತು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳು ಒಂದು ಕಾಲದಲ್ಲಿ ಪ್ರಯಾಣಿಕರಿಗೆ ಪರಿಚಿತವಾಗಿದ್ದ ಉದ್ದನೆಯ ಸರತಿ ಸಾಲುಗಳ ಸ್ಥಾನವನ್ನು ಪಡೆದಿವೆ. ಆನ್‌ಲೈನ್ ಟಿಕೆಟ್ ವಿತರಣಾ ಯಂತ್ರಗಳು ಮತ್ತು ಪ್ರಯಾಣಿಕ-ಸ್ನೇಹಿ ಸಹಾಯ ಕೇಂದ್ರಗಳು ಸೇರಿದಂತೆ ಉನ್ನತೀಕರಿಸಿದ ಸೌಲಭ್ಯಗಳೊಂದಿಗೆ, ನವದೆಹಲಿ ರೈಲು ನಿಲ್ದಾಣದ ಈ ಹೊಸ ಹೆಚ್ಚುವರಿ ವಿಭಾಗವು ಮೀಸಲಾತಿ ಮತ್ತು ಮೀಸಲಾತಿ ಇಲ್ಲದ ಪ್ರಯಾಣಿಕರನ್ನು ಸಹ ಸುಲಭವಾಗಿ ನಿರ್ವಹಿಸಲು ಸಿದ್ಧವಾಗಿದೆ.

ನವದೆಹಲಿ ರೈಲು ನಿಲ್ದಾಣದ ಪಕ್ಕದಲ್ಲಿ ನಿರ್ಮಿಸಲಾದ, 2025ರ ಅಕ್ಟೋಬರ್ 11ರಂದು ಉದ್ಘಾಟನೆಗೊಂಡ 6,000 ಚದರ ಮೀಟರ್‌ಗಳ ಹೊಸ ಯಾತ್ರಿ ಸೌಲಭ್ಯ ಕೇಂದ್ರದ ಇಂದಿನ ದೃಶ್ಯವಿದು. ಒಂದೇ ಸಮಯದಲ್ಲಿ ಸುಮಾರು 7,000 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾದ ಈ ಶಾಶ್ವತ ವಿಶ್ರಾಂತಿ ಸ್ಥಳವು, ಭಾರತದ ಅತ್ಯಂತ ಜನನಿಬಿಡ ಹಬ್ಬದ ಋತುವಿನಲ್ಲಿ ಆಗುವ ಜನಸಂದಣಿಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪ್ರಯಾಣಕ್ಕೆ ಮುಂಚಿನ ಆರಾಮ ಮತ್ತು ಪರಿಣಾಮಕಾರಿ ಜನಸಂದಣಿ ನಿರ್ವಹಣೆಯನ್ನು ಖಚಿತಪಡಿಸುವುದರಿಂದ, ಎಲ್ಲಾ ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ನೀಡುತ್ತದೆ.

ಯಾತ್ರಿ ಸೌಲಭ್ಯ ಕೇಂದ್ರವು ಮೂರು ವಿಭಾಗಗಳನ್ನು ಹೊಂದಿದೆ - ಟಿಕೆಟ್‌ ಪೂರ್ವ ವಿಭಾಗ (2,860 ಚದರ ಮೀಟರ್), ಟಿಕೆಟಿಂಗ್ ವಿಭಾಗ (1,150 ಚದರ ಮೀಟರ್) ಮತ್ತು ನಿರ್ಗಮನ ವಿಭಾಗ (1,218 ಚದರ ಮೀಟರ್).ಪ್ರಯಾಣಿಕರು ತಮ್ಮ ರೈಲುಗಳಿಗಾಗಿ ಕಾಯಲು ಇಲ್ಲಿ ಆಸನ ವ್ಯವಸ್ಥೆ (ಬೆಂಚ್‌ಗಳು) ಇದೆ, ಆದರೆ ಇಲ್ಲಿ ಯಾವುದೇ ಮೀಸಲಾತಿ ಸೀಟುಗಳು ಅಥವಾ ಬರ್ತ್‌ಗಳು ಇರುವುದಿಲ್ಲ.ಬೋನಸ್ ಮಾಹಿತಿ: ಯಾತ್ರಿ ಸೌಲಭ್ಯ ಕೇಂದ್ರದಲ್ಲಿ ಕಾಯುವುದು ಸಂಪೂರ್ಣವಾಗಿ ಉಚಿತವಾಗಿದೆ!

ಹೊಸ ಸೌಲಭ್ಯದ ಒಳಗೆ

ಟಿಕೆಟಿಂಗ್ ವಿಭಾಗದಲ್ಲಿ 22 ಆಧುನಿಕ ಕೌಂಟರ್‌ಗಳು ಮತ್ತು 25 ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳಿವೆ, ಇದು ಸರತಿ ಸಾಲುಗಳು ಮತ್ತು ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಆರಾಮಕ್ಕಾಗಿ, ಈ ಪ್ರದೇಶವು ಸುಮಾರು 200 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಒದಗಿಸುತ್ತದೆ ಮತ್ತು ದಕ್ಷ ಹವಾನಿಯಂತ್ರಣವನ್ನು ಕಾಪಾಡಿಕೊಳ್ಳಲು 18 ಹೈ-ವಾಲ್ಯೂಮ್ ಲೋ-ಸ್ಪೀಡ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ.

ಪ್ರಯಾಣಿಕರ ಕ್ಷೇಮಕ್ಕೆ ಆದ್ಯತೆ ನೀಡಲಾಗಿದ್ದು, 652 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿ ಸ್ವಚ್ಛ ಮತ್ತು ವಿಶಾಲವಾದ ನೈರ್ಮಲ್ಯ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ, ಆರ್‌ಒ ಆಧಾರಿತ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿದೆ. ಸಂವಹನ ಮತ್ತು ಮಾರ್ಗದರ್ಶನಕ್ಕಾಗಿ, ಈ ಕೇಂದ್ರವು 24 ಸ್ಪೀಕರ್‌ಗಳನ್ನು ಒಳಗೊಂಡಿರುವ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಯನ್ನು ಮತ್ತು ನೈಜ-ಸಮಯದ ರೈಲು ಮಾಹಿತಿ ನೀಡಲು ಮೂರು ಎಲ್‌ಇಡಿ ಮಾಹಿತಿ ಪ್ರದರ್ಶಕಗಳನ್ನು ಹೊಂದಿದೆ. ಸುರಕ್ಷತಾ ಮೂಲಸೌಕರ್ಯವು ಅಗ್ನಿಶಾಮಕ ಘಟಕಗಳು, ಸಿಸಿಟಿವಿ ವ್ಯಾಪ್ತಿ, ಲಗೇಜ್ ಸ್ಕ್ಯಾನರ್‌ಗಳು ಮತ್ತು ಮೆಟಲ್ ಡಿಟೆಕ್ಟರ್‌ಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಭದ್ರತೆ ಮತ್ತು ವಿಶ್ವಾಸ ಎರಡನ್ನೂ ಖಚಿತಪಡಿಸುತ್ತದೆ.

ತ್ವರಿತ, ಶುಭ್ರ ಮತ್ತು ಅನುಕೂಲಕರ ಪ್ರಯಾಣ

ಈ ಸೌಲಭ್ಯದ ಅಗತ್ಯವು ಶಾಶ್ವತ ವಿಶ್ರಾಂತಿ ಸ್ಥಳವನ್ನು ಬಳಸುತ್ತಿರುವ ಪ್ರಯಾಣಿಕರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

"ನನಗೆ ದೆಹಲಿಯಿಂದ ಬರೇಲಿಗೆ ಕೇವಲ ನಾಲ್ಕು ನಿಮಿಷದಲ್ಲಿ ಟಿಕೆಟ್ ಸಿಕ್ಕಿತು! ಬೇರೆ ಯಾವುದೇ ವರ್ಷವಾಗಿದ್ದರೆ, ಸರತಿಯಲ್ಲಿ ಕಾಯಲು ಸುಮಾರು ಎರಡು ಗಂಟೆಗಳು ಬೇಕಾಗುತ್ತಿದ್ದವು. ಇವತ್ತು ಕೂಡಾ ನಾನು ಬೇಗನೆ ಬಂದಿದ್ದೇನೆ, ಆದರೆ ಈಗ ನಾನು ಈ ಪ್ರದೇಶದಲ್ಲಿ ಕಾಯುತ್ತೇನೆ - ಇದು ಚೆನ್ನಾಗಿದೆ, ಸ್ವಚ್ಛವಾಗಿದೆ, ವಾಸನೆ ಇಲ್ಲ, ಮತ್ತು ಫ್ಯಾನ್‌ಗಳಿವೆ. ನಾನು ಇಲ್ಲಿ ಆರಾಮವಾಗಿ ಮಲಗಬಹುದು. ನನ್ನ ರೈಲನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ," ಎಂದು ದೆಹಲಿಯಲ್ಲಿ ನೆಲೆಸಿರುವ ಬರೇಲಿಯ 20 ವರ್ಷದ ವಿದ್ಯಾರ್ಥಿ ಅಮನ್ ಕಶ್ಯಪ್ ಹೇಳುತ್ತಾರೆ.

ರಾಮ್‌ಪುರಕ್ಕೆ ಪ್ರಯಾಣಿಸುತ್ತಿದ್ದ 55 ವರ್ಷದ ದಯಾಳ್ ಕೌರ್ ಅವರು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರದಿಂದ (ವಲ ಎರಡು ನಿಮಿಷದಲ್ಲಿ ತಮ್ಮ ಟಿಕೆಟ್ ಅನ್ನು ಖರೀದಿಸಿದ ನಂತರ ಆಶ್ಚರ್ಯದಿಂದ ಸಂತೋಷಗೊಂಡಿದ್ದರು. "ಇದು ತುಂಬಾ ಸುಲಭ, ಮತ್ತು ಸಿಬ್ಬಂದಿ ಸಹ ಸಹಾಯ ಮಾಡುತ್ತಾರೆ," ಎಂದು ಅವರು ಹೇಳಿದರು.

ಎಲ್ಲರಿಗೂ ಸುರಕ್ಷತೆ ಮತ್ತು ಭದ್ರತೆ

"ನಾವು ನಿನ್ನೆ ಸಂಜೆಯಿಂದಲೂ ಸುವಿಧಾ ಕೇಂದ್ರದಲ್ಲಿದ್ದೇವೆ," ಎಂದು ತಮ್ಮ ಪತಿಯೊಂದಿಗೆ ಗೋರಖ್‌ಪುರದಿಂದ ಪ್ರಯಾಣಿಸಿದ್ದ ನಿರ್ಮಲಾ ದೇವಿ ಹೇಳುತ್ತಾರೆ. "ಅವರಿಗೆ ಇಲ್ಲಿ ಸ್ವಲ್ಪ ಬ್ಯಾಂಕ್ ಕೆಲಸವಿತ್ತು, ಮತ್ತು ನಾವು ಬದರ್‌ಪುರ ಗಡಿಯಲ್ಲಿ ವಾಸಿಸುತ್ತೇವೆ. ಈ ಸ್ಥಳವು ಸುರಕ್ಷಿತ ಮತ್ತು ಭದ್ರವಾಗಿದೆ ಎಂದು ಅನಿಸುತ್ತದೆ, ಮತ್ತು ನಮ್ಮ ಎಲ್ಲಾ ಸಾಮಾನುಗಳು ನಮ್ಮೊಂದಿಗಿವೆ, ಮತ್ತು ಶೌಚಾಲಯಗಳು ಸಹ ಸ್ವಚ್ಛವಾಗಿವೆ." ನಿರ್ಮಲಾ ಮತ್ತು ಅಮನ್ ಅವರಂತಹ ನೂರಾರು ಪ್ರಯಾಣಿಕರು ಯಾತ್ರಿ ಸೌಲಭ್ಯ ಕೇಂದ್ರದಲ್ಲಿ ಕುಳಿತಿರುವುದು ಅಥವಾ ವಿಶ್ರಾಂತಿ ಪಡೆಯುತ್ತಿರುವುದು ಕಾಣಸಿಗುತ್ತದೆ, ಆದರೂ ಈ ಸ್ಥಳವು ವ್ಯವಸ್ಥಿತವಾಗಿ ಮತ್ತು ಸಂಚಾರಕ್ಕೆ ಯಾವುದೇ ಅಡಚಣೆಯಿಲ್ಲದೆ ಇದೆ.

ಪಶ್ಚಿಮ ಬಂಗಾಳಕ್ಕೆ ಹೋಗುವ ತಮ್ಮ ರೈಲಿಗಾಗಿ ಕಾಯುತ್ತಿರುವ ಪಾಟ್ನಾದ 24 ವರ್ಷದ ಸಮೀನಾ ಖಾನ್ ಅವರು ಸುಮ್ಮನೆ ಕುಳಿತಿದ್ದಾರೆ. 36 ಗಂಟೆಗಳಿಗಿಂತ ಹೆಚ್ಚು ಕಾಯುವ ಸಮಯವಿದ್ದು, ನಗರದಲ್ಲಿ ವಸತಿ ದುಬಾರಿ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಈ ಪ್ರದೇಶವು ಸುರಕ್ಷಿತವಾಗಿದೆ ಮತ್ತು ಎಲ್ಲಾ ಮೂಲಭೂತ ಸೌಕರ್ಯಗಳು ಹಾಗೂ ಸುರಕ್ಷತೆಯನ್ನು ಒದಗಿಸುತ್ತದೆ ಎಂಬ ಕಾರಣಕ್ಕಾಗಿ ಅವರು ನಿಲ್ದಾಣದ ಬಳಿಯೇ ಇರಲು ಆಯ್ಕೆ ಮಾಡಿಕೊಂಡಿದ್ದಾರೆ.

ಸುಗಮ ಪ್ರಯಾಣದತ್ತ ಒಂದು ಹೆಜ್ಜೆ

ಯಾತ್ರಿ ಸೌಲಭ್ಯ ಕೇಂದ್ರವು ಭಾರತದ ಅತ್ಯಂತ ಜನನಿಬಿಡ ರೈಲ್ವೆ ಕೇಂದ್ರದಲ್ಲಿ ಆರಾಮ, ಸುಲಭ ಲಭ್ಯತೆ ಮತ್ತು ಸುರಕ್ಷತೆಯ ಮೇಲೆ ಹೆಚ್ಚುತ್ತಿರುವ ಗಮನವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಮೂಲಸೌಕರ್ಯ ಮತ್ತು ಸುಧಾರಿತ ಜನಸಂದಣಿ ನಿರ್ವಹಣಾ ವಿನ್ಯಾಸದೊಂದಿಗೆ, ಈ ಸೌಲಭ್ಯವು ಕೇವಲ ಪ್ರಯಾಣದ ಅನುಭವವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಭಾರತೀಯ ರೈಲ್ವೆಯಾದ್ಯಂತ ಪ್ರಯಾಣಿಕ-ಕೇಂದ್ರಿತ ಸೌಲಭ್ಯಗಳಿಗೆ ಹೊಸ ಮಾನದಂಡವನ್ನುಸಹ ಸ್ಥಾಪಿಸುತ್ತದೆ.

  

References

https://www.pib.gov.in/PressReleseDetailm.aspx?PRID=2177759

Click here to see PDF. 

 

*****

(Features ID: 155635) Visitor Counter : 10
Provide suggestions / comments
Link mygov.in
National Portal Of India
STQC Certificate