ಸಂಸ್ಕೃತಿ ಸಚಿವಾಲಯ
100 ಕೋಟಿ ಲಸಿಕೆಗಳ ಮೈಲಿಗಲ್ಲು ಸಾಧನೆಯನ್ನುಆಚರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ 100 ಸ್ಮಾರಕಗಳಿಗೆ ತ್ರಿವರ್ಣದ ದೀಪಾಲಂಕಾರ
Posted On:
21 OCT 2021 5:27PM by PIB Bengaluru
ಪ್ರಮುಖಾಂಶಗಳು
- ಸ್ಮಾರಕದ ದೀಪಾಲಂಕಾರವು ಕೊರೊನಾ ಯೋಧರಾದ ಲಸಿಕೆ ಹಾಕುವವರು, ನೈರ್ಮಲ್ಯ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ, ಸಹಾಯಕ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆ ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿದೆ
- ತ್ರಿವರ್ಣದಲ್ಲಿ ದೀಪಾಲಂಕಾರ ಮಾಡಿದ 1೦೦ ಸ್ಮಾರಕಗಳಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳೂ ಸೇರಿವೆ
ವಿಶ್ವದ ಅತಿದೊಡ್ಡ ಮತ್ತು ವೇಗದ ಲಸಿಕಾ ಅಭಿಯಾನದಲ್ಲಿ ಭಾರತವು 100 ಕೋಟಿ ಕೋವಿಡ್ ಲಸಿಕೆಗಳ ಮೈಲುಗಲ್ಲನ್ನು ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ದೇಶಾದ್ಯಂತ 100 ಸ್ಮಾರಕಗಳನ್ನು ತ್ರಿವರ್ಣ ದೀಪಾಲಂಕಾರದೊಂದಿಗೆ ಬೆಳಗಿಸುತ್ತಿದೆ. ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಅವಿರತ ಕೊಡುಗೆ ನೀಡಿದ ಕೊರೊನಾ ಯೋಧರಿಗೆ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿ ಈ ದೀಪಾಲಂಕಾರವನ್ನು ಆಯೋಜಿಸಲಾಗಿದೆ.

ಹುಮಾಯೂನ್ ಸಮಾಧಿ
ತ್ರಿವರ್ಣ ದೀಪಾಲಂಕಾರ ಮಾಡಿದ 100 ಸ್ಮಾರಕಗಳಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ - ಕೆಂಪು ಕೋಟೆ, ಹುಮಾಯೂನ್ ಸಮಾಧಿ ಮತ್ತು ದೆಹಲಿಯ ಕುತುಬ್ ಮಿನಾರ್, ಉತ್ತರ ಪ್ರದೇಶದ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ, ಒಡಿಶಾದ ಕೋನಾರ್ಕ್ ದೇವಾಲಯ, ತಮಿಳುನಾಡಿನ ಮಮಲ್ಲಪುರಂರಥ ದೇವಾಲಯಗಳು, ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್, ಖಜುರಾಹೋ, ರಾಜಸ್ಥಾನದ ಚಿತ್ತೋರ್ ಮತ್ತು ಕುಂಭಲ್ಗಢ್ ಕೋಟೆಗಳು, ಬಿಹಾರದ ಪ್ರಾಚೀನ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳು ಮತ್ತು ಗುಜರಾತಿನ ಧೋಲವೀರ ಮುಂತಾದವು (ಇತ್ತೀಚೆಗೆ ವಿಶ್ವ ಪರಂಪರೆಯ ಸ್ಥಾನಮಾನವನ್ನು ನೀಡಲಾಗಿದೆ) ಸೇರಿವೆ.

ಸೂರ್ಯ ದೇವಾಲಯ, ಕೋನಾರ್ಕ್

ಕೆಂಪು ಕೋಟೆ
ಕೋವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ತಮ್ಮ ಕರ್ತ್ಯವ್ಯದ ಎಲ್ಲೆಯನ್ನು ಮೀರಿ ದೇಶಕ್ಕೆ ನೆರವು ನೀಡಿದ ಮತ್ತು ಮಾನವಕುಲಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕೊರೊನಾ ಯೋಧರಾದ ಲಸಿಕೆ ಹಾಕುವವರು, ನೈರ್ಮಲ್ಯ ಸಿಬ್ಬಂದಿ, ಅರೆವೈದ್ಯಕೀಯ ಸಿಬ್ಬಂದಿ, ಸಹಾಯಕ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಮುಂತಾದವರಿಗೆ ಕೃತಜ್ಞತೆಯ ಸಂಕೇತವಾಗಿ 100 ಸ್ಮಾರಕಗಳಿಗೆ ತ್ರಿವರ್ಣದ ದೀಪಾಲಂಕಾರ ಮಾಡಲಾಗಿದೆ. ಭಾರತವು 100 ಕೋಟಿ ಲಸಿಕೆ ಹೆಗ್ಗುರುತು ಸಾಧಿಸಿದ ಹಿನ್ನೆಲೆಯಲ್ಲಿ 2021ರ ಅಕ್ಟೋಬರ್ 21ರ ರಾತ್ರಿ ಇಡೀ ಈ ದೀಪಾಲಂಕಾರ ಮುಂದುವರಿಯಲಿದೆ.

ಖಜುರಾಹೋ
ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಮತ್ತು ಮೂರನೇ ಅಲೆಯನ್ನು ತಡೆಯುವಲ್ಲಿ ಲಸಿಕೆಯು ಪ್ರಮುಖ ಪಾತ್ರ ವಹಿಸಿದೆ. 100 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡುವ ಮೂಲಕ ಚೀನಾದ ಬಳಿಕ ಒಂದು ಶತಕೋಟಿ ಡೋಸ್ ಕ್ಲಬ್‌ಗೆ ಸೇರಿದ ಏಕೈಕ ದೇಶವಾಗಿ ಭಾರತ ಹೊರಹೊಮ್ಮಿದೆ.
ದೀಪಾಲಂಕಾರಕ್ಕಾಗಿ ಗುರುತಿಸಲಾದ 100 ಸ್ಮಾರಕಗಳ ಪಟ್ಟಿಯನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ
***
(Release ID: 1765621)