ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

3ನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ 2022 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ


ಶಾಸಕಾಂಗದ ಘನತೆ ಮತ್ತು ಸಭ್ಯತೆಯನ್ನು ಹೆಚ್ಚಿಸಲು ಜನಪ್ರತಿನಿಧಿಗಳು ಶ್ರದ್ಧೆಯಿಂದ ಕೆಲಸ ಮಾಡಬೇಕು: ಶ್ರೀ ಓಂ ಬಿರ್ಲಾ

ಯುವಕರು ರಾಷ್ಟ್ರಕ್ಕಾಗಿ ತಮ್ಮ ಕರ್ತವ್ಯಗಳನ್ನು ಅರಿತು ಭಾರತವನ್ನು ಸ್ವಾವಲಂಬಿಯಾಗಿಸಲು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಕೆಲಸ ಮಾಡಬೇಕು: ಲೋಕಸಭಾಧ್ಯಕ್ಷರು

ಯುವಕರು ಸಕಾರಾತ್ಮಕ ಬದಲಾವಣೆಗಳಿಗಾಗಿ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ, ಇದು ದೇಶದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಪ್ರೋತ್ಸಾಹಕ ಸಂಕೇತವಾಗಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 11 MAR 2022 3:49PM by PIB Bengaluru

ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ ಅವರು ಇಂದು ನವದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಮೂರನೇ ರಾಷ್ಟ್ರೀಯ ಯುವ ಸಂಸತ್ ಉತ್ಸವ-2022 ರ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಮಾಣಿಕ್ ಅವರು ಸಮಾರಂಭದಲ್ಲಿ ಭಾಗವಹಿಸಿದರು. ಯುವ ವ್ಯವಹಾರಗಳು ಮತ್ತು ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ, ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಸಿ.ಮೋಡಿ, ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ಸಚಿವಾಲಯ ಮತ್ತು ಸಂಸತ್ತಿನ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲೋಕಸಭಾ ಸ್ಪೀಕರ್ ಮತ್ತು ಇತರ ಗಣ್ಯರು ಉತ್ಸವದ ಮೂವರು ಯುವ ರಾಷ್ಟ್ರೀಯ ವಿಜೇತರ ಅಭಿಪ್ರಾಯಗಳನ್ನು ಆಲಿಸಿದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀ ಬಿರ್ಲಾ, ಸಂಸದೀಯ ಕಾರ್ಯವಿಧಾನಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ತಿಳುವಳಿಕೆಯೊಂದಿಗೆ ಯುವಕರನ್ನು ಸಜ್ಜುಗೊಳಿಸಲು ರಾಷ್ಟ್ರೀಯ ಯುವ ಸಂಸತ್ತು ಒಂದು ವಿನೂತನ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ನವ ಭಾರತವನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇದು ಯುವಜನರನ್ನು ಉತ್ತೇಜಿಸುತ್ತದೆ ಎಂದರು. ಭಾರತದಲ್ಲಿನ ಯುವಕರ ವ್ಯಾಪಕ ಬೌದ್ಧಿಕ ಸಾಮರ್ಥ್ಯ ಮತ್ತು ಶಕ್ತಿಯನ್ನು ಶ್ಲಾಘಿಸಿದ ಶ್ರೀ ಬಿರ್ಲಾ, ಜಾಗತಿಕವಾಗಿ ಬೆಳೆಯುತ್ತಿರುವ ಯುವಜನರ ಬೆಳವಣಿಗೆಯು ಭಾರತವು 'ವಿಶ್ವ ಗುರು' ಸ್ಥಾನಮಾನ ಪಡೆಯಲು ಮತ್ತಷ್ಟು ಉತ್ತೇಜನನ್ನು ನೀಡುತ್ತದೆ ಎಂದು ಆಶಿಸಿದರು.

ಜಗತ್ತಿನಾದ್ಯಂತ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀ ಬಿರ್ಲಾ, ಯುವಜನರು ಈ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಇದರಿಂದ ಅವರು ಬದಲಾವಣೆಗಳಿಗೆ ತಕ್ಕಂತೆ ತಮ್ಮನ್ನು ಸಿದ್ಧಪಡಿಸಿಕೊಳ್ಳಬಹುದು ಮತ್ತು ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯಬಹುದು ಎಂದರು. ದೇಶವು ಮುಂದೆ ಸಾಗುತ್ತಿರುವಾಗ, ಯುವಕರು ತಮ್ಮ ಪ್ರತಿಭೆ ಮತ್ತು ಶಕ್ತಿಯೊಂದಿಗೆ ಅಭಿವೃದ್ಧಿ, ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲವರ್ಧನೆಗೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು. ‘ರಾಷ್ಟ್ರ ಮೊದಲು’ಎಂಬ ಮನೋಭಾವವು ಪ್ರತಿಯೊಂದು ಪ್ರಯತ್ನದಲ್ಲೂ ಅವರಿಗೆ ಮಾರ್ಗದರ್ಶಕವಾಗಿರಬೇಕು ಎಂದು ಶ್ರೀ ಬಿರ್ಲಾ ಒತ್ತಿ ಹೇಳಿದರು. ಯುವಜನರು ರಾಷ್ಟ್ರಕ್ಕಾಗಿ ತಮ್ಮ ಕರ್ತವ್ಯಗಳನ್ನು ಅರಿತುಕೊಳ್ಳಬೇಕು ಮತ್ತು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವ ದೊಡ್ಡ ಗುರಿಯ ದಿಕ್ಕಿನಲ್ಲಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಕೆಲಸ ಮಾಡಬೇಕು ಎಂದು ಲೋಕಸಭಾಧ್ಯಕ್ಷರು ಒತ್ತಿ ಹೇಳಿದರು.