ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಅಗತ್ಯ ವಸ್ತುಗಳ ಕೊರತೆಯಿಲ್ಲ; ದೇಶಾದ್ಯಂತ ಸಾಕಷ್ಟು ದಾಸ್ತಾನು ಲಭ್ಯವಿದೆ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು
Posted On:
09 MAY 2025 6:58PM by PIB Bengaluru
ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಯಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಒತ್ತಿ ಹೇಳಿದ್ದಾರೆ.
"ನಾವು ಪ್ರಸ್ತುತ ಸಾಮಾನ್ಯ ಅಗತ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ದಾಸ್ತಾನು ಹೊಂದಿದ್ದೇವೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ - ಅದು ಅಕ್ಕಿ, ಗೋಧಿ ಅಥವಾ ಕಡಲೆ, ತೊಗರಿ, ಮಸೂರ್ ಅಥವಾ ಹೆಸರುಕಾಳುಗಳಂತಹ ದ್ವಿದಳ ಧಾನ್ಯಗಳಾಗಿರಬಹುದು. ಯಾವುದೇ ಕೊರತೆಯಿಲ್ಲ, ನಾಗರಿಕರು ಭಯಭೀತರಾಗಬಾರದು ಮತ್ತು ಆಹಾರ ಧಾನ್ಯಗಳನ್ನು ಖರೀದಿಸಲು ಮಾರುಕಟ್ಟೆಗಳಿಗೆ ಮುಗಿಬೀಳಬಾರದು" ಎಂದು ಅವರು ಹೇಳಿದರು.
ದಾರಿತಪ್ಪಿಸುವ ಸುದ್ದಿಗಳಿಗೆ ಬಲಿಯಾಗಬೇಡಿ ಎಂದು ಕೇಂದ್ರ ಸಚಿವರು ಜನರಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. "ದೇಶದಲ್ಲಿ ಆಹಾರ ದಾಸ್ತಾನುಗಳ ಕುರಿತು ಅಪಪ್ರಚಾರದ ಸಂದೇಶಗಳನ್ನು ನಂಬಬೇಡಿ. ನಮ್ಮಲ್ಲಿ ಸಾಕಷ್ಟು ಆಹಾರಧಾನ್ಯಗಳ ದಾಸ್ತಾನು ಇದೆ, ಅಗತ್ಯಕ್ಕಿಂತ ಹೆಚ್ಚೇ ಇದೆ. ಅಂತಹ ಸಂದೇಶಗಳಿಗೆ ಗಮನ ಕೊಡಬೇಡಿ. ಅಗತ್ಯ ವಸ್ತುಗಳ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಅಥವಾ ವ್ಯಾಪಾರ ಸಂಸ್ಥೆಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಲು ನಿರ್ದೇಶಿಸಲಾಗಿದೆ. ಸಂಗ್ರಹಣೆ ಅಥವಾ ದಾಸ್ತಾನು ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ." ಎಂದು ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಅಕ್ಕಿ ದಾಸ್ತಾನು 356.42 ಲಕ್ಷ ಮೆಟ್ರಿಕ್ ಟನ್ (ಎಲ್ ಎಂ ಟಿ) ಆಗಿದ್ದು, ಬಫರ್ ಮಾನದಂಡ 135 ಎಲ್ ಎಂ ಟಿ ಆಗಿದೆ. ಅದೇ ರೀತಿ, ಗೋಧಿ ದಾಸ್ತಾನು 276 ಎಲ್ ಎಂ ಟಿ ಗೆ ಹೋಲಿಸಿದರೆ 383.32 ಎಲ್ ಎಂ ಟಿ ಆಗಿದೆ. ಹೀಗಾಗಿ, ಅಗತ್ಯವಿರುವ ಬಫರ್ ಮಾನದಂಡಗಳಿಗಿಂತ ಬಲವಾದ ಹೆಚ್ಚುವರಿಯ ಮೂಲಕ ರಾಷ್ಟ್ರವ್ಯಾಪಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ.
ಇದಲ್ಲದೆ, ಭಾರತವು ಪ್ರಸ್ತುತ ಸುಮಾರು 17 ಲಕ್ಷ ಮೆಟ್ರಿಕ್ ಟನ್ ಖಾದ್ಯ ತೈಲದ ದಾಸ್ತಾನನ್ನು ಹೊಂದಿದೆ. ದೇಶೀಯವಾಗಿ, ಪ್ರಸ್ತುತ ಗರಿಷ್ಠ ಉತ್ಪಾದನಾ ಋತುವಿನಲ್ಲಿ ಸಾಸಿವೆ ಎಣ್ಣೆಯ ಲಭ್ಯತೆ ಹೇರಳವಾಗಿದ್ದು, ಖಾದ್ಯ ತೈಲದ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಪ್ರಸ್ತುತ ಸಕ್ಕರೆ ಋತುವು 79 ಲಕ್ಷ ಮೆಟ್ರಿಕ್ ಟನ್ ಗಳ ಕ್ಯಾರಿಓವರ್ ದಾಸ್ತಾನಿನೊಂದಿಗೆ ಪ್ರಾರಂಭವಾಗಿದೆ. ಎಥೆನಾಲ್ ಉತ್ಪಾದನೆಗೆ 34 ಲಕ್ಷ ಮೆಟ್ರಿಕ್ ಟನ್ ಗಳನ್ನು ಬಳಸಿದ ನಂತರ, ಉತ್ಪಾದನೆಯನ್ನು 262 ಲಕ್ಷ ಮೆಟ್ರಿಕ್ ಟನ್ ಗಳೆಂದು ಅಂದಾಜಿಸಲಾಗಿದೆ.
ಇಲ್ಲಿಯವರೆಗೆ ಸುಮಾರು 257 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ದೇಶೀಯ ಬಳಕೆ 280 ಲಕ್ಷ ಮೆಟ್ರಿಕ್ ಟನ್ ಗಳು ಮತ್ತು ರಫ್ತಿನ 10 ಲಕ್ಷ ಮೆಟ್ರಿಕ್ ಟನ್ ಗಳನ್ನು ಪರಿಗಣಿಸಿದರೆ, ಅಂತಿಮ ದಾಸ್ತಾನು ಸುಮಾರು 50 ಲಕ್ಷ ಮೆಟ್ರಿಕ್ ಟನ್ ಗಳಷ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇದು ಎರಡು ತಿಂಗಳ ಬಳಕೆಗಿಂತ ಹೆಚ್ಚಾಗಿದೆ. ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ 2025-26 ರ ಸಕ್ಕರೆ ಋತುವಿನ ಉತ್ಪಾದನಾ ಮುನ್ನೋಟ ಸಹ ಆಶಾದಾಯಕವಾಗಿದೆ.
*****
(Release ID: 2128084)
Read this release in:
Odia
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Tamil
,
Telugu