ಆಯುಷ್
azadi ka amrit mahotsav

ಯೋಗ ಕನೆಕ್ಟ್ 2025: 'ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ' ಕುರಿತು ನಾಳೆ ನವದೆಹಲಿಯಲ್ಲಿ ಹೈಬ್ರಿಡ್ ಜಾಗತಿಕ ಶೃಂಗಸಭೆ


ಪ್ರಪಂಚದಾದ್ಯಂತದ ಪ್ರಮುಖ ಅಂತಾರಾಷ್ಟ್ರೀಯ ಯೋಗ ಸಂಸ್ಥೆಗಳು ಮತ್ತು ಕ್ಷೇಮ ಸಮುದಾಯಗಳಿಂದ 1,000ಕ್ಕೂ ಹೆಚ್ಚು ಮಂದಿ ಭಾಗಿ, ವರ್ಚುವಲ್ ಮೂಲಕವೂ ಹಾಜರಾತಿ

'ಯೋಗ ಪ್ರಭಾವ' ವರದಿ- ದಶಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಪ್ರಭಾವ ಅಧ್ಯಯನ ನಾಳೆ ಬಿಡುಗಡೆ

Posted On: 13 JUN 2025 3:12PM by PIB Bengaluru

ಆಯುಷ್ ಸಚಿವಾಲಯವು ಜೂನ್ 14, 2025 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (IDY) ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾಗಿ 'ಯೋಗ ಕನೆಕ್ಟ್' ಎಂಬ ಹೈಬ್ರಿಡ್ ಜಾಗತಿಕ ಶೃಂಗಸಭೆಯನ್ನು ಆಯೋಜಿಸಿದೆ. ಭಾರತ ಮತ್ತು ವಿದೇಶಗಳ ಯೋಗ ಗುರುಗಳು, ನೀತಿ ನಿರೂಪಕರು, ಆರೋಗ್ಯ ತಜ್ಞರು, ವ್ಯಾಪಾರ ಮುಖಂಡರು, ಸಂಶೋಧಕರು ಮತ್ತು ಜಾಗತಿಕ ಪ್ರಭಾವಿಗಳು ಈ ವಿಶಿಷ್ಟ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು ಯೋಗ ಕ್ಷೇತ್ರದ ಅತ್ಯುನ್ನತ ಸಂಶೋಧನಾ ಸಂಸ್ಥೆಯಾದ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (CCRYN) ಸಂಯೋಜಿಸುತ್ತಿದೆ. 'ಯೋಗ ಕನೆಕ್ಟ್' ಹೈಬ್ರಿಡ್ ಸ್ವರೂಪವನ್ನು ಅನುಸರಿಸುತ್ತದೆ, ಪ್ರಮುಖ ಅಂತಾರಾಷ್ಟ್ರೀಯ ಯೋಗ ಸಂಸ್ಥೆಗಳು ಮತ್ತು ಕ್ಷೇಮ ಸಮುದಾಯಗಳಿಂದ 1,000 ಕ್ಕೂ ಹೆಚ್ಚು ವ್ಯಕ್ತಿಗಳು ಮತ್ತು ವರ್ಚುವಲ್ ಮೂಲಕವೂ ಹಲವಾರು ಮಂದಿ ಭಾಗವಹಿಸುತ್ತಿದ್ದಾರೆ. ಬಹರೇನ್, ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಇನ್ನೂ ಹೆಚ್ಚಿನ ದೇಶಗಳ ತಜ್ಞರು ಶೃಂಗಸಭೆಯಲ್ಲಿ ಸೇರಲಿದ್ದಾರೆ. ಪ್ರತಿಯೊಬ್ಬರೂ ಯೋಗ, ಆರೋಗ್ಯ ರಕ್ಷಣೆ, ಸಂಶೋಧನೆ ಅಥವಾ ಕ್ಷೇಮದ ಆಯಾ ಕ್ಷೇತ್ರಗಳಲ್ಲಿ ವಿಶಿಷ್ಟ ವ್ಯಕ್ತಿಗಳಾಗಿದ್ದು, ಭಾರತದ ಯೋಗ ಚಳವಳಿಯ ಜಾಗತಿಕ ಮಹತ್ವವನ್ನು ಸಾರಲಿದ್ದಾರೆ.

ಶೃಂಗಸಭೆಯ ಪ್ರಮುಖ ಮುಖ್ಯಾಂಶವೆಂದರೆ 'ಯೋಗ ಪ್ರಭಾವ' ವರದಿಯ ಬಿಡುಗಡೆ - ಕಳೆದ ದಶಕದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಪ್ರಭಾವವನ್ನು ನಿರ್ಣಯಿಸಲು CCRYN ನಡೆಸಿದ ರಾಷ್ಟ್ರವ್ಯಾಪಿ ಅಧ್ಯಯನದ ವರದಿಯಾಗಿದೆ. ಈ ವರದಿಯು ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ಸಾರ್ವಜನಿಕ ಆರೋಗ್ಯ ವೃತ್ತಿಪರರಿಗೆ ಗಮನಾರ್ಹ ಪ್ರಸ್ತುತತೆಯನ್ನು ನೀಡುತ್ತದೆ, ಏಕೆಂದರೆ ಇದು ದೇಶಾದ್ಯಂತ IDY ಉಪಕ್ರಮಗಳ ವ್ಯಾಪ್ತಿ, ಪರಿಣಾಮಕಾರಿತ್ವ ಮತ್ತು ಪರಿವರ್ತನಾ ಪ್ರಭಾವದ ಬಗ್ಗೆ ಅತಿ ಮುಖ್ಯ ಒಳನೋಟಗಳನ್ನು ಒದಗಿಸುತ್ತದೆ.

ಇದರ ಜೊತೆಗೆ, ಮೂರು ಮಹತ್ವದ ಜ್ಞಾನ ಉತ್ಪನ್ನಗಳನ್ನು ಅನಾವರಣಗೊಳಿಸಲಾಗುವುದು:

  • ಯೋಗದ ದಶಮಾನದ ಪ್ರಭಾವ (ಇ-ಪುಸ್ತಕ)
  • ಯೋಗ ಸಂಶೋಧನೆಯ ಸೈಂಟೊಮೆಟ್ರಿಕ್ ವಿಶ್ಲೇಷಣೆಯ ವರದಿ
  • ಭಾರತೀಯ ವೃಕ್ಷ ವೈಭವಂ: ಸ್ಥಳೀಯ ಭಾರತೀಯ ಮರಗಳ ಮಹತ್ವ ಮತ್ತು ಅವುಗಳ ಪ್ರಸ್ತುತತೆಯನ್ನು ಎತ್ತಿ ತೋರಿಸುವ ವಿವರಣಾತ್ಮಕ ಕಿರುಪುಸ್ತಕ

ಶೃಂಗಸಭೆಯು ಈ ಕೆಳಗಿನವುಗಳನ್ನು ಒಳಗೊಂಡ ವಿವಿಧ ವಿಷಯಾಧಾರಿತ ಅವಧಿಗಳನ್ನು ಒಳಗೊಂಡಿರುತ್ತದೆ:

i. ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ಯೋಗ
ii. ಸಾಮಾನ್ಯ ಯೋಗ ಪ್ರೋಟೋಕಾಲ್ ಮತ್ತು IDY ಯ ಪ್ರಭಾವದ ಮೌಲ್ಯಮಾಪನದ ಕುರಿತು ಅಧ್ಯಯನಗಳು
iii. ಯೋಗ-ತಂತ್ರಜ್ಞಾನ: ನಾವೀನ್ಯಕಾರರ ಪ್ರಸ್ತುತಿ
iv. ಎಲ್ಲರಿಗೂ ಯೋಗದ ದೃಷ್ಟಿಕೋನ
v. ಯೋಗ ಮತ್ತು ಅದರ ಅಪ್ಲಿಕೇಷನ್‌ಗಳು
vi. ಜೀವನದ ಹಂತಗಳಲ್ಲಿ ಯೋಗ ಮತ್ತು ಮಹಿಳೆಯರ ಆರೋಗ್ಯ
vii. ಯೋಗ ವಾಣಿಜ್ಯ ಮತ್ತು ಕೈಗಾರಿಕೆ

ಸ್ವಾಮಿ ಬಾಬಾ ರಾಮದೇವ್‌ಜಿ, ಆಚಾರ್ಯ ಬಾಲಕೃಷ್ಣಜಿ, ಎಚ್‌ಆರ್ ನಾಗೇಂದ್ರಜಿ, ಪರಮಪೂಜ್ಯ ಬಿಕ್ಕು ಸಂಘಸೇನ ಮತ್ತು ಶ್ರೀ ಭರತ್ ಭೂಷಣ್‌ ಜಿ ಸೇರಿದಂತೆ ಯೋಗ ಕ್ಷೇತ್ರದ ಹಲವಾರು ದಿಗ್ಗಜರು ಭಾಗವಹಿಸಲಿದ್ದಾರೆ..

‘ಯೋಗ ಸಂಪರ್ಕ’ವು ಯೋಗದ ಭವಿಷ್ಯವನ್ನು ರೂಪಿಸುತ್ತಿರುವ ಜನರನ್ನು ಒಟ್ಟುಗೂಡಿಸುವ ಅವಕಾಶವಾಗಿದೆ. ಇದು ಭಾರತದ ಜಾಗತಿಕ ಯೋಗ ಆಂದೋಲನದ ಹತ್ತು ವರ್ಷಗಳನ್ನು ಸೂಚಿಸುತ್ತದೆ, ಇದು 2014 ರಲ್ಲಿ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದಾಗ ಪ್ರಾರಂಭವಾಯಿತು. ಯೋಗವನ್ನು ಯುನೆಸ್ಕೋ ಕೂಡ ಜಗತ್ತಿಗೆ ಭಾರತದ ಕೊಡುಗೆ ಎಂದು ಗುರುತಿಸಿದೆ. ಈ ರೀತಿಯ ಕಾರ್ಯಕ್ರಮಗಳ ಮೂಲಕ, ಭಾರತವು ಆರೋಗ್ಯ, ಸಮತೋಲನ ಮತ್ತು ಏಕತೆಯ ಸಂದೇಶವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವುದನ್ನು ಮುಂದುವರೆಸಿದೆ.

 

*****


(Release ID: 2137917) Visitor Counter : 3