ಕೃಷಿ ಸಚಿವಾಲಯ
azadi ka amrit mahotsav

ಕರ್ನಾಟಕದ ಮಾವು ಬೆಳೆಗಾರರಿಗೆ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ದೊಡ್ಡ ಪರಿಹಾರ ನೀಡಿದ್ದಾರೆ


ಮಾವಿನ ಹಣ್ಣಿನ ಬೆಲೆಯಲ್ಲಿನ ವ್ಯತ್ಯಾಸದ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ

2.5 ಲಕ್ಷ ಮೆಟ್ರಿಕ್ ಟನ್ ಮಾವಿನ ಹಣ್ಣಿನ ಬೆಲೆಯಲ್ಲಿನ ವ್ಯತ್ಯಾಸದ ಹಣವನ್ನು ರೈತರಿಗೆ ಪಾವತಿಸಲು ಒಪ್ಪಂದಕ್ಕೆ ಬರಲಾಗಿದೆ

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಮತ್ತು ಕರ್ನಾಟಕದ ಕೃಷಿ ಸಚಿವ ಶ್ರೀ ಎನ್ ಚಲುವರಾಯ ಸ್ವಾಮಿ ಅವರ ನಡುವಿನ ವೀಡಿಯೊ ಕಾನ್ಫರೆನ್ಸ್‌ ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

Posted On: 21 JUN 2025 8:13PM by PIB Bengaluru

ಮಾವಿನ ಬೆಲೆ ನಿರಂತರವಾಗಿ ಕುಸಿಯುತ್ತಿರುವುದರಿಂದ ತೊಂದರೆಗೀಡಾಗಿರುವ ಕರ್ನಾಟಕದ ರೈತರಿಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ದೊಡ್ಡ ಪರಿಹಾರ ನೀಡಿದ್ದಾರೆ. ಮಾವಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಲೆಗಳಲ್ಲಿನ ವ್ಯತ್ಯಾಸದ ವೆಚ್ಚವನ್ನು ಭರಿಸುತ್ತವೆ ಮತ್ತು ಅದನ್ನು ರೈತರಿಗೆ ಪಾವತಿಸುತ್ತವೆ. ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕರ್ನಾಟಕ ಕೃಷಿ ಸಚಿವರಾದ ಶ್ರೀ ಎನ್ ಚಲುವರಾಯ ಸ್ವಾಮಿ ಅವರ ನಡುವಿನ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಇಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇಂದ್ರ ಕೃಷಿ ಕಾರ್ಯದರ್ಶಿ ಶ್ರೀ ದೇವೇಶ್ ಚತುರ್ವೇದಿ ಕೂಡ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.

ಚರ್ಚೆಯ ಸಮಯದಲ್ಲಿ, ಇಬ್ಬರು ಸಚಿವರು ರೈತರಿಗೆ 2.5 ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣಿನ ಬೆಲೆ ವ್ಯತ್ಯಾಸವನ್ನು ಸರಿದೂಗಿಸಲು ಒಪ್ಪಿಕೊಂಡರು. ಇದಕ್ಕೂ ಮೊದಲು, ಕರ್ನಾಟಕ ಸರ್ಕಾರವು ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು, ಅದರಲ್ಲಿ ಟೊಮೆಟೊ ಮತ್ತು ಮಾವಿನಹಣ್ಣುಗಳ ಬೆಲೆಗಳು - ವಿಶೇಷವಾಗಿ ತೋತಾಪುರಿ ಮಾವು - ನಿರಂತರವಾಗಿ ಕುಸಿಯುತ್ತಿವೆ ಎಂದು ಹೇಳಿತ್ತು. ಇಂದಿನ ಸಭೆಯ ಭಾಗವಾಗಿ, ಕರ್ನಾಟಕದ ಅಂದಾಜು ಒಟ್ಟು ಮಾವಿನ ಉತ್ಪಾದನೆಯಾದ 10 ಲಕ್ಷ ಮೆಟ್ರಿಕ್ ಟನ್‌ ಗಳಲ್ಲಿ 2.5 ಲಕ್ಷ ಮೆಟ್ರಿಕ್ ಟನ್‌ ಗಳವರೆಗೆ ಪರಿಹಾರ ನೀಡುವ ಬಗ್ಗೆ ಚರ್ಚೆಗಳು ನಡೆದವು. ತೋತಾಪುರಿ ಮಾವಿನಹಣ್ಣಿಗೆ ರೈತರು ಸಾಮಾನ್ಯಕ್ಕಿಂತ ಕಡಿಮೆ ಬೆಲೆಯನ್ನು ಪಡೆಯುತ್ತಿರುವುದರಿಂದ, ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಮಾರುಕಟ್ಟೆ ದರಕ್ಕಿಂತ ಕಡಿಮೆಯಾದ ವ್ಯತ್ಯಾಸದ ವೆಚ್ಚವನ್ನು ಸಮಾನವಾಗಿ ಭರಿಸಬೇಕೆಂದು ವರ್ಚುವಲ್ ಸಭೆಯಲ್ಲಿ ನಿರ್ಧರಿಸಲಾಯಿತು.

ಚರ್ಚೆಯ ಸಮಯದಲ್ಲಿ, ಪ್ರಸ್ತಾವನೆಯನ್ನು ಸಲ್ಲಿಸಿದ ಸಮಯದಲ್ಲಿ ಟೊಮೆಟೊ ಬೆಲೆಗಳು ಕಡಿಮೆಯಾಗಿದ್ದರೂ, ಈಗ ಬೆಲೆಗಳು ಸ್ಥಿರವಾಗಿವೆ, ಆದ್ದರಿಂದ ಟೊಮೆಟೊಗೆ ಯಾವುದೇ ತಕ್ಷಣದ ಕ್ರಮ ಅಗತ್ಯವಿಲ್ಲ ಎಂದು ಕರ್ನಾಟಕದ ಕೃಷಿ ಸಚಿವರು ಹೇಳಿದರು.

ಕರ್ನಾಟಕದಲ್ಲಿ ಮಾವು ಬೆಳೆಯುವ ರೈತರಿಗೆ ನೆರವು ಮತ್ತು ಪರಿಹಾರ ನೀಡುವ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಸಚಿವ ಶ್ರೀ ಚಲುವರಾಯ ಸ್ವಾಮಿ ಅವರು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್‌ ಅವರಿಗೆ ಧನ್ಯವಾದ ಅರ್ಪಿಸಿದರು.

 

*****


(Release ID: 2138607)
Read this release in: English , Urdu , Tamil