ರಕ್ಷಣಾ ಸಚಿವಾಲಯ
ಭಯೋತ್ಪಾದನೆಯ ಪ್ರತಿಯೊಂದು ಕೃತ್ಯವೂ ಕ್ರಿಮಿನಲ್ ಮತ್ತು ಅಸಮರ್ಥನೀಯ, ಸಾಮೂಹಿಕ ಭದ್ರತೆ ಮತ್ತು ರಕ್ಷಣೆಗಾಗಿ ಈ ಬೆದರಿಕೆಯನ್ನು ಬೇರುಸಹಿತ ಕಿತ್ತೊಗೆಯಲು ಎಸ್ ಸಿ ಒ ಒಂದಾಗಬೇಕು: ಚೀನಾದ ಕ್ವಿಂಗ್ಡಾವೊದಲ್ಲಿ ನಡೆದ ಎಸ್ ಸಿ ಒ ರಕ್ಷಣಾ ಸಚಿವರ ಸಭೆಯಲ್ಲಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್
"ಭಯೋತ್ಪಾದನೆ ಮತ್ತು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳು ಸರ್ಕಾರೇತರರು ಮತ್ತು ಭಯೋತ್ಪಾದಕ ಸಂಘಟನೆಗಳ ಕೈಯಲ್ಲಿರುವಾಗ ಶಾಂತಿ ಮತ್ತು ಸಮೃದ್ಧಿ ಸಾಧ್ಯವಿಲ್ಲ"
"ಭಯೋತ್ಪಾದನೆಯ ದುಷ್ಕರ್ಮಿಗಳು, ಸಂಘಟಕರು, ಹಣಕಾಸು ಒದಗಿಸುವವರು ಮತ್ತು ಪ್ರಾಯೋಜಕರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಬೇಕಾಗಿದೆ"
"ಆಪರೇಷನ್ ಸಿಂಧೂರದ ಮೂಲಕ, ಭಾರತವು ಭಯೋತ್ಪಾದನೆಯಿಂದ ರಕ್ಷಿಸಿಕೊಳ್ಳುವ ಮತ್ತು ಮತ್ತಷ್ಟು ಗಡಿಯಾಚೆಗಿನ ದಾಳಿಗಳನ್ನು ತಡೆಯುವ ಹಕ್ಕನ್ನು ಚಲಾಯಿಸಿತು"
"ಭಯೋತ್ಪಾದನಾ ನೆಲೆಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ, ನಾವು ಅವುಗಳನ್ನು ಗುರಿಯಾಗಿಸಲು ಹಿಂಜರಿಯುವುದಿಲ್ಲ"
Posted On:
26 JUN 2025 10:35AM by PIB Bengaluru
ಜೂನ್ 26, 2025 ರಂದು ಚೀನಾದ ಕಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್ ಸಿ ಒ) ರಕ್ಷಣಾ ಸಚಿವರ ಸಭೆಯಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು, ಭಯೋತ್ಪಾದನೆ ವಿರುದ್ಧ ಭಾರತದ ನೀತಿಯಲ್ಲಿನ ಪರಿವರ್ತನಾತ್ಮಕ ಬದಲಾವಣೆಯ ವಿಶಾಲ ರೂಪರೇಷೆಗಳನ್ನು ವಿವರಿಸಿದರು, ಸಾಮೂಹಿಕ ಭದ್ರತೆ ಮತ್ತು ರಕ್ಷಣೆಗೆ ಇರುವ ಅಪಾಯವನ್ನು ತೊಡೆದುಹಾಕುವಲ್ಲಿ ಸದಸ್ಯ ರಾಷ್ಟ್ರಗಳು ಒಂದಾಗಬೇಕೆಂದು ಕರೆ ನೀಡಿದರು. ರಕ್ಷಣಾ ಮಂತ್ರಿಗಳು, ಎಸ್ ಸಿ ಒ ಪ್ರಧಾನ ಕಾರ್ಯದರ್ಶಿ, ಎಸ್ ಸಿ ಒ ಪ್ರಾದೇಶಿಕ ಭಯೋತ್ಪಾದನಾ ನಿಗ್ರಹ ರಚನೆ (ಆರ್ ಎ ಟಿ ಎಸ್) ನಿರ್ದೇಶಕರು ಮತ್ತು ಇತರ ಗಣ್ಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್, ಈ ಪ್ರದೇಶವು ಎದುರಿಸುತ್ತಿರುವ ದೊಡ್ಡ ಸವಾಲುಗಳು ಶಾಂತಿ, ಭದ್ರತೆ ಮತ್ತು ನಂಬಿಕೆಯ ಕೊರತೆಗೆ ಸಂಬಂಧಿಸಿವೆ, ಹೆಚ್ಚುತ್ತಿರುವ ಮೂಲಭೂತವಾದ, ಉಗ್ರವಾದ ಮತ್ತು ಭಯೋತ್ಪಾದನೆ ಈ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ ಎಂದು ಹೇಳಿದರು.
"ಭಯೋತ್ಪಾದನೆ ಮತ್ತು ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳು ಸರ್ಕಾರೇತರರು ಮತ್ತು ಭಯೋತ್ಪಾದಕ ಗುಂಪುಗಳ ಕೈಯಲ್ಲಿರುವಾಗ ಶಾಂತಿ ಮತ್ತು ಸಮೃದ್ಧಿ ಸಾಧ್ಯವಿಲ್ಲ. ಈ ಸವಾಲುಗಳನ್ನು ಎದುರಿಸಲು ನಿರ್ಣಾಯಕ ಕ್ರಮದ ಅಗತ್ಯವಿದೆ. ಭಯೋತ್ಪಾದನೆಯನ್ನು ಪ್ರಾಯೋಜಿಸುವವರು, ಪೋಷಿಸುವವರು ಮತ್ತು ಸಂಕುಚಿತ ಮತ್ತು ಸ್ವಾರ್ಥ ಉದ್ದೇಶಗಳಿಗಾಗಿ ಬಳಸಿಕೊಳ್ಳುವವರು ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿಯ ಸಾಧನವಾಗಿ ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ಅಂತಹ ದ್ವಿಮುಖ ನೀತಿಗಳಿಗೆ ಯಾವುದೇ ಅವಕಾಶವಿರಬಾರದು. ಎಸ್ ಸಿ ಒ ಅಂತಹ ರಾಷ್ಟ್ರಗಳನ್ನು ಟೀಕಿಸಲು ಹಿಂಜರಿಯಬಾರದು" ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಆಪರೇಷನ್ ಸಿಂಧೂರ ನಡೆಸಿತು. ಭಯೋತ್ಪಾದನೆಯಿಂದ ರಕ್ಷಿಸಿಕೊಳ್ಳಲು ಮತ್ತು ಮುಂದಿನ ಗಡಿಯಾಚೆಗಿನ ದಾಳಿಗಳನ್ನು ತಡೆಯಲು ತನ್ನ ಹಕ್ಕನ್ನು ಚಲಾಯಿಸಿತು ಎಂದು ರಕ್ಷಣಾ ಸಚಿವರು ಹೇಳಿದರು. "ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಬಲಿಪಶುಗಳನ್ನು ಧಾರ್ಮಿಕ ಗುರುತಿನ ಆಧಾರದ ಮೇಲೆ ಗುರುತಿಸಿದ ನಂತರ ಗುಂಡು ಹಾರಿಸಲಾಯಿತು. ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ ಇ ಟಿ) ಅಂಗಸಂಸ್ಥೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಪಹಲ್ಗಾಮ್ ದಾಳಿಯ ಮಾದರಿಯು ಭಾರತದಲ್ಲಿ ಎಲ್ ಇ ಟಿ ನಡೆಸಿದ ಹಿಂದಿನ ಭಯೋತ್ಪಾದಕ ದಾಳಿಗಳಿಗೆ ಹೋಲುತ್ತದೆ ಎಂದು ಅವರು ಹೇಳಿದರು. ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯನ್ನು ಅದರ ಕ್ರಮಗಳ ಮೂಲಕ ತೋರಿಸಲಾಗಿದೆ. ಇದರಲ್ಲಿ ಭಯೋತ್ಪಾದನೆಯ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕು ಸೇರಿದೆ. ಭಯೋತ್ಪಾದನೆಯ ನೆಲೆಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ ಎಂದು ನಾವು ತೋರಿಸಿದ್ದೇವೆ ಮತ್ತು ನಾವು ಅವುಗಳನ್ನು ಗುರಿಯಾಗಿಸಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಖಂಡನೀಯ ಭಯೋತ್ಪಾದನಾ ಕೃತ್ಯಗಳ ಅಪರಾಧಿಗಳು, ಸಂಘಟಕರು, ಹಣಕಾಸು ಒದಗಿಸುವವರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡಿ ಅವರನ್ನು ನ್ಯಾಯದ ಕಟಕಟೆಗೆ ತರುವ ಅಗತ್ಯವನ್ನು ಶ್ರೀ ರಾಜನಾಥ್ ಸಿಂಗ್ ಪುನರುಚ್ಚರಿಸಿದರು. ಯಾವುದೇ ಭಯೋತ್ಪಾದನಾ ಕೃತ್ಯವು ಯಾವಾಗ, ಎಲ್ಲಿಯಾದರೂ ಮತ್ತು ಯಾರಿಂದ ನಡೆಸಲ್ಪಟ್ಟರೂ ಅದು ಅಪರಾಧ ಮತ್ತು ಅಸಮರ್ಥನೀಯ. ಎಸ್ ಸಿ ಒ ಸದಸ್ಯರು ಈ ದುಷ್ಟತನವನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದು ಅವರು ಹೇಳಿದರು. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಹೋರಾಡುವ ಭಾರತದ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು.
ಯುವಜನರಲ್ಲಿ ಮೂಲಭೂತವಾದ ಹರಡುವುದನ್ನು ತಡೆಯಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಕ್ಷಣಾ ಸಚಿವರು ಕರೆ ನೀಡಿದರು, ಈ ಸವಾಲನ್ನು ಎದುರಿಸುವಲ್ಲಿ ಆರ್ ಎ ಟಿ ಎಸ್ ಕಾರ್ಯವಿಧಾನದ ಮಹತ್ವದ ಪಾತ್ರವನ್ನು ಒಪ್ಪಿಕೊಂಡರು. "ಭಾರತದ ಅಧ್ಯಕ್ಷತೆಯಲ್ಲಿ ಬಿಡುಗಡೆಯಾದ 'ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದಕ್ಕೆ ಕಾರಣವಾಗುವ ಮೂಲಭೂತವಾದವನ್ನು ಎದುರಿಸುವುದು' ಕುರಿತ ಎಸ್ ಸಿ ಒ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿಯ ಜಂಟಿ ಹೇಳಿಕೆಯು ನಮ್ಮ ಹಂಚಿಕೆಯ ಬದ್ಧತೆಯನ್ನು ಸಂಕೇತಿಸುತ್ತದೆ" ಎಂದು ಅವರು ಹೇಳಿದರು.
ಗಡಿಯಾಚೆಗಿನ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗಾಗಿ ಡ್ರೋನ್ ಗಳು ಸೇರಿದಂತೆ ಭಯೋತ್ಪಾದಕರು ಬಳಸುವ ತಂತ್ರಜ್ಞಾನವನ್ನು ಎದುರಿಸುವ ಮಹತ್ವವನ್ನು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು, ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಈ ಬೆದರಿಕೆಗಳ ವಿರುದ್ಧ ಸಾಂಪ್ರದಾಯಿಕ ಗಡಿಗಳು ಇನ್ನು ಮುಂದೆ ಅಡೆತಡೆಗಲಾಗಿರುವುದಿಲ್ಲ ಎಂದು ಅವರು ಹೇಳಿದರು. ಅಂತರರಾಷ್ಟ್ರೀಯ ಭಯೋತ್ಪಾದನೆ ಮತ್ತು ಸೈಬರ್ ದಾಳಿಯಿಂದ ಹಿಡಿದು ಹೈಬ್ರಿಡ್ ಯುದ್ಧದವರೆಗಿನ ಸವಾಲುಗಳ ಸಂಕೀರ್ಣ ಜಾಲವನ್ನು ಜಗತ್ತು ಎದುರಿಸುತ್ತಿದೆ ಎಂದು ಅವರು ಹೇಳಿದರು. ಈ ಬೆದರಿಕೆಗಳು ರಾಷ್ಟ್ರೀಯ ಗಡಿಗಳನ್ನು ಗೌರವಿಸುವುದಿಲ್ಲ ಮತ್ತು ಪಾರದರ್ಶಕತೆ, ಪರಸ್ಪರ ನಂಬಿಕೆ ಮತ್ತು ಸಹಯೋಗದ ಒಗ್ಗಟ್ಟಿನ ಪ್ರತಿಕ್ರಿಯೆಯ ಮೂಲಕ ಅವುಗಳನ್ನು ಎದುರಿಸಬೇಕಾಗಿದೆ ಎಂದು ಅವರು ಹೇಳಿದರು.
ಪ್ರಸ್ತುತ ಅನಿಶ್ಚಿತ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ಎಸ್ ಸಿ ಒ ದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದ ರಕ್ಷಣಾ ಸಚಿವರು, ಸದಸ್ಯ ರಾಷ್ಟ್ರಗಳು ಜಾಗತಿಕ ಜಿಡಿಪಿಯ ಸುಮಾರು ಶೇಕಡಾ 30 ರಷ್ಟು ಕೊಡುಗೆ ನೀಡುತ್ತವೆ ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಶೇಕಡಾ 40 ರಷ್ಟು ಜನರು ಇಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಸುರಕ್ಷಿತ, ಸುಭದ್ರ ಮತ್ತು ಸ್ಥಿರವಾದ ಪ್ರದೇಶವನ್ನು ಸೃಷ್ಟಿಸುವುದು ಸಾಮೂಹಿಕ ಜವಾವಬ್ದಾರಿಯಾಗಿದ್ದು, ಇದು ಜನರ ಜೀವನದ ಪ್ರಗತಿ ಮತ್ತು ಸುಧಾರಣೆಗೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಜಾಗತೀಕರಣವು ತನ್ನ ಆವೇಗವನ್ನು ಕಳೆದುಕೊಳ್ಳುತ್ತಿದೆ ಮತ್ತು ಬಹುಪಕ್ಷೀಯ ವ್ಯವಸ್ಥೆಗಳ ದುರ್ಬಲಗೊಳ್ಳುವಿಕೆಯಿಂದಾಗಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವುದರಿಂದ ಹಿಡಿದು ಸಾಂಕ್ರಾಮಿಕ ರೋಗದ ನಂತರ ಆರ್ಥಿಕತೆಯನ್ನು ಪುನರ್ನಿರ್ಮಿಸುವವರೆಗೆ ತುರ್ತು ಸವಾಲುಗಳನ್ನು ನಿಭಾಯಿಸುವುದು ಕಷ್ಟಕರವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಪ್ರಮುಖ ರಾಷ್ಟ್ರಗಳ ನಡುವಿನ ಸ್ಪರ್ಧೆ ತೀವ್ರಗೊಳ್ಳುತ್ತಿದೆ, ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಭೌಗೋಳಿಕ ರಾಜಕೀಯ ಪೈಪೋಟಿಯಲ್ಲಿ ಸಾಧನಗಳಾಗಿ ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. "ಸುಧಾರಿತ ಬಹುಪಕ್ಷೀಯತೆಯು ಮಾತುಕತೆ ಮತ್ತು ಸಹಯೋಗಕ್ಕಾಗಿ ಕಾರ್ಯವಿಧಾನಗಳನ್ನು ರಚಿಸುವ ಮೂಲಕ ದೇಶಗಳ ನಡುವಿನ ಸಂಘರ್ಷವನ್ನು ತಡೆಗಟ್ಟಲು ಸಹಕಾರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಭಾರತ ನಂಬುತ್ತದೆ" ಎಂದು ಅವರು ಹೇಳಿದರು.
ಮಧ್ಯ ಏಷ್ಯಾದೊಂದಿಗೆ ಸಂಪರ್ಕವನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ರಕ್ಷಣಾ ಸಚಿವರು ವ್ಯಕ್ತಪಡಿಸಿದರು. "ಉತ್ತಮ ಸಂಪರ್ಕವು ಪರಸ್ಪರ ವ್ಯಾಪಾರವನ್ನು ಹೆಚ್ಚಿಸುವುದಲ್ಲದೆ ಪರಸ್ಪರ ನಂಬಿಕೆಯನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಈ ಪ್ರಯತ್ನಗಳಲ್ಲಿ ಎಸ್ ಸಿ ಒ ಚಾರ್ಟರ್ ನ ಮೂಲ ತತ್ವಗಳನ್ನು, ವಿಶೇಷವಾಗಿ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅಗತ್ಯ" ಎಂದು ಅವರು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಬೆಂಬಲಿಸುವ ತನ್ನ ನೀತಿಯಲ್ಲಿ ಭಾರತ ಸ್ಥಿರ ಮತ್ತು ದೃಢವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆರವು ನೀಡುವುದು ಮತ್ತು ಒಟ್ಟಾರೆ ಅಭಿವೃದ್ಧಿ ಅಗತ್ಯಗಳಿಗೆ ಕೊಡುಗೆ ನೀಡುವುದು ಸೇರಿದಂತೆ ತಕ್ಷಣದ ಆದ್ಯತೆಗಳನ್ನು ಅವರು ವಿವರಿಸಿದರು. ಅಫ್ಘಾನಿಸ್ತಾನದ ಅತಿದೊಡ್ಡ ಪ್ರಾದೇಶಿಕ ಅಭಿವೃದ್ಧಿ ಪಾಲುದಾರನಾಗಿ, ಭಾರತವು ಅಫ್ಘಾನ್ ಜನರ ಸಾಮರ್ಥ್ಯ ವೃದ್ಧಿ ಉಪಕ್ರಮಗಳನ್ನು ಮುಂದುವರೆಸಿದೆ ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆ, ಆಹಾರ ಮತ್ತು ನೀರಿನ ಸುರಕ್ಷತೆ ಮತ್ತು ಸಂಬಂಧಿತ ಸಾಮಾಜಿಕ ಅಡೆತಡೆಗಳಂತಹ ಸಾಂಪ್ರದಾಯಿಕವಲ್ಲದ ಭದ್ರತಾ ಸವಾಲುಗಳಿಗೆ ಯಾವುದೇ ಗಡಿಗಳಿರುವುದಿಲ್ಲ ಮತ್ತು ಅವುಗಳು ಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ರಕ್ಷಣಾ ಸಚಿವರು ಒಳನೋಟಗಳನ್ನು ಹಂಚಿಕೊಂಡರು. ರಾಷ್ಟ್ರಗಳ ನಡುವೆ ಜವಾಬ್ದಾರಿಯುತ ನೀತಿಗಳು ಮತ್ತು ಸಹಯೋಗವಿಲ್ಲದೆ ಈ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. "ವಿಪತ್ತು ತಾಳಿಕೆ ಮೂಲಸೌಕರ್ಯ ಒಕ್ಕೂಟಕ್ಕಾಗಿ ಭಾರತದ ಉಪಕ್ರಮವು ವಿಪತ್ತು ತಾಳಿಕೆ ಮೂಲಸೌಕರ್ಯವನ್ನು ಮಾತ್ರವಲ್ಲದೆ ಮೂಲಸೌಕರ್ಯ ಅಪಾಯ ನಿರ್ವಹಣೆ, ಮಾನದಂಡಗಳು, ಹಣಕಾಸು ಮತ್ತು ಚೇತರಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರವನ್ನು ನಿಭಾಯಿಸಲು ದೇಶಗಳು ಹೇಗೆ ಒಟ್ಟಿಗೆ ಸಾಮರ್ಥ್ಯಗಳನ್ನು ಸೃಷ್ಟಿಸುತ್ತವೆ ಮತ್ತು ಹಂಚಿಕೊಳ್ಳುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ" ಎಂದು ಅವರು ಹೇಳಿದರು.
ಭಾರತದ 'SAGAR' (ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಮತ್ತು 'MAHASAGAR' (ಪ್ರದೇಶಗಳಲ್ಲಿ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿ) ಎಂಬ ದೃಷ್ಟಿಕೋನವು ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದಕ್ಕೆ ಸಾಕ್ಷಿಯಾಗಿದೆ, ಇದರಲ್ಲಿ ಭದ್ರತೆ ಮತ್ತು ಸ್ಥಿರತೆ ಅತ್ಯಂತ ಅಗತ್ಯವಾದ ಅಂಶಗಳಾಗಿವೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಎಸ್ ಸಿ ಒ ಸದಸ್ಯರಲ್ಲಿ ಹೆಚ್ಚಿನ ಸಹಕಾರ ಮತ್ತು ಪರಸ್ಪರ ನಂಬಿಕೆಗೆ ಭಾರತದ ಬೆಂಬಲವನ್ನು ಅವರು ಒತ್ತಿ ಹೇಳಿದರು, ಇಂದಿನ ಸವಾಲುಗಳನ್ನು ಎದುರಿಸುವಾಗ ಜನರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸಲು ಅವುಗಳು ಸಾಮೂಹಿಕವಾಗಿ ಆಶಿಸಬೇಕು ಎಂದು ಒತ್ತಾಯಿಸಿದರು. "ನಮ್ಮ ನೆರೆಹೊರೆಯಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಬಲಪಡಿಸುವ ಪ್ರಯತ್ನಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು" ಎಂದು ಅವರು ಹೇಳಿದರು.
'ವಸುಧೈವ ಕುಟುಂಬಕಂ' (ಜಗತ್ತು ಒಂದು ಕುಟುಂಬ) ಎಂಬ ನಾಗರಿಕ ಮೌಲ್ಯಗಳನ್ನು ಆಧರಿಸಿದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯವಾಕ್ಯದ ಆಧಾರದ ಮೇಲೆ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಒಮ್ಮತವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ ಎಂದು ರಕ್ಷಣಾ ಸಚಿವರು ಒತ್ತಿ ಹೇಳಿದರು. ಪರಸ್ಪರ ತಿಳುವಳಿಕೆ ಮತ್ತು ಪರಸ್ಪರ ಪ್ರಯೋಜನವು ನಮ್ಮ ಮಾರ್ಗದರ್ಶಿ ತತ್ವಗಳಾಗಿರಬೇಕು ಎಂದು ಅವರು ಹೇಳಿದರು.
*****
(Release ID: 2140075)