ಕೃಷಿ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೊಯಮತ್ತೂರಿನಲ್ಲಿ ಹತ್ತಿ ಉತ್ಪಾದಕರ ಸಭೆಯ ಅಧ್ಯಕ್ಷತೆ ವಹಿಸಿದರು
ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಹರಿಯಾಣ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಕೃಷಿ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು
ಹತ್ತಿ ಉತ್ಪಾದಕತೆಯನ್ನು ಹೆಚ್ಚಿಸಲು ಪಾಲುದಾರರೊಂದಿಗೆ ವ್ಯಾಪಕ ಚರ್ಚೆಗಳು ನಡೆದವು
"ಉತ್ತಮ ಗುಣಮಟ್ಟದ ಹತ್ತಿಯನ್ನು ಉತ್ಪಾದಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ" – ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
"ಆಹಾರದ ನಂತರ, ಬಟ್ಟೆ ಜೀವನದಲ್ಲಿ ಅತ್ಯಂತ ಅಗತ್ಯವಾದ ವಿಷಯವಾಗಿದೆ" - ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
Posted On:
11 JUL 2025 7:19PM by PIB Bengaluru

ಹತ್ತಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮಹತ್ವದ ಸಭೆಯನ್ನು ಇಂದು ತಮಿಳುನಾಡಿನ ಕೊಯಮತ್ತೂರಿನ ಐಸಿಎಆರ್–ಕಬ್ಬು ತಳಿ ಸಂಸ್ಥೆಯಲ್ಲಿ ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದಲ್ಲಿ ನಡೆಸಲಾಯಿತು.


ಈ ಸಭೆಯಲ್ಲಿ ಹತ್ತಿಯ ಇತಿಹಾಸ, ಪ್ರಸ್ತುತ ಸಮಕಾಲೀನ ಸನ್ನಿವೇಶ, ಸವಾಲುಗಳು ಮತ್ತು ಭಾರತದಲ್ಲಿ ಹತ್ತಿ ಉತ್ಪಾದಕತೆಯನ್ನು ಹೆಚ್ಚಿಸುವ ಭವಿಷ್ಯದ ತಂತ್ರಗಳ ಕುರಿತು ಆಳವಾದ ಚರ್ಚೆಗಳು ನಡೆದವು. ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಹರಿಯಾಣ ರಾಜ್ಯ ಕೃಷಿ ಸಚಿವರಾದ ಶ್ರೀ ಶ್ಯಾಮ್ ಸಿಂಗ್ ರಾಣಾ, ಮಹಾರಾಷ್ಟ್ರ ರಾಜ್ಯ ಕೃಷಿ ಸಚಿವ ಶ್ರೀ ಮಾಣಿಕ್ ರಾವ್ ಕೊಕಟೆ, ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಐಸಿಎಆರ್ ಮಹಾನಿರ್ದೇಶಕ ಡಾ. ಎಂ.ಎಲ್. ಜಾಟ್, ಇತರ ಅಧಿಕಾರಿಗಳು, ಪಾಲುದಾರರು, ವಿಜ್ಞಾನಿಗಳು ಮತ್ತು ರೈತರು ಈ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆ ಪ್ರಾರಂಭಕ್ಕೂ ಮೊದಲು, ಕೇಂದ್ರ ಕೃಷಿ ಸಚಿವರು ಹತ್ತಿ ಹೊಲಗಳಿಗೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು ಮತ್ತು ಕಳವಳಗಳನ್ನು ಆಲಿಸಿದರು. ಆ ನಂತರ ನಡೆದ ಔಪಚಾರಿಕ ಸಭೆಯು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾಷಣದೊಂದಿಗೆ ಪ್ರಾರಂಭವಾಯಿತು. ಭಾಷಣದಲ್ಲಿ ಅವರು, “ ಭಾರತದ ಅತ್ಯಂತ ಪ್ರಾಚೀನ ರಾಜ್ಯಗಳಲ್ಲಿ ಒಂದಾದ ತಮಿಳು ಭಾಷೆಯು 5,000 ವರ್ಷಗಳಷ್ಟು ಹಳೆಯದಾದ ಪರಂಪರೆಯನ್ನು ಹೊಂದಿದೆ, ಇಂತಹ ಪವಿತ್ರ ಭೂಮಿಯಾದ ತಮಿಳುನಾಡಿನಲ್ಲಿ ಸಭೆಯನ್ನು ನಡೆಸಲಾಗುತ್ತಿದೆ. ತಮಿಳುನಾಡಿನ ಮಣ್ಣಿನಲ್ಲಿ ಹೊಸ ಹತ್ತಿ ಹೊಸ ಕ್ರಾಂತಿಯ ತನ್ನ ಬೇರುಗಳನ್ನು ಕಂಡುಕೊಳ್ಳುತ್ತಿದೆ ಮತ್ತು ರೂಪುಗೊಳ್ಳುತ್ತಿದೆ. ಇಂದಿನ ಸಭೆಯು ಕೇವಲ ಔಪಚಾರಿಕತೆಗಿಂತ ಹೆಚ್ಚಿನದಾಗಿದೆ” ಎಂದು ಹೇಳಿದರು.

“ಆಹಾರದ ನಂತರ, ಬಟ್ಟೆ ಒಬ್ಬ ವ್ಯಕ್ತಿಗೆ ಅತ್ಯಂತ ಅಗತ್ಯವಾಗಿದೆ . ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲದಂತೆಯೇ, ಬಟ್ಟೆ ಇಲ್ಲದೆ ಬದುಕುವುದು ಕೂಡ ಅಷ್ಟೇ ಅಸಾಧ್ಯ. ಬಟ್ಟೆ ಹತ್ತಿಯಿಂದ ಬರುತ್ತದೆ ಮತ್ತು ಹತ್ತಿಯನ್ನು ನಮ್ಮ ರೈತರು ಉತ್ಪಾದಿಸುತ್ತಾರೆ. ಕೃಷಿ ಭಾರತೀಯ ಆರ್ಥಿಕತೆಯ ಬೆನ್ನೆಲುಬು ಮತ್ತು ರೈತರು ಅದರ ಆತ್ಮ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಅವರು ಹೇಳಿದರು.

ಭಾರತದ ಉತ್ಪಾದಕತೆ ಇತರ ದೇಶಗಳಿಗೆ ಹೋಲಿಸಿದರೆ ಹಿಂದುಳಿದಿರುವುದರಿಂದ ನಮ್ಮ ದೇಶದಲ್ಲಿ ಹತ್ತಿ ಉತ್ಪಾದನೆಯಲ್ಲಿನ ಸವಾಲುಗಳನ್ನು ಸಚಿವರು ಈ ಸಂದರ್ಭದಲ್ಲಿ ಒಪ್ಪಿಕೊಂಡರು. “ಇಳುವರಿಯನ್ನು ಹೆಚ್ಚಿಸಲು ಒಮ್ಮೆ ಅಭಿವೃದ್ಧಿಪಡಿಸಿದ ಬಿಟಿ ಹತ್ತಿ ವಿಧವು ಈಗ ರೋಗಗಳಿಂದ ಬೆದರಿಕೆಯನ್ನು ಎದುರಿಸುತ್ತಿದೆ, ಇದರ ಪರಿಣಾಮವಾಗಿ ಉತ್ಪಾದಕತೆ ಕುಸಿಯುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಮತ್ತು ವೈರಸ್-ನಿರೋಧಕ, ಹೆಚ್ಚು ಇಳುವರಿ ನೀಡುವ ಬೀಜಗಳನ್ನು ಅಭಿವೃದ್ಧಿಪಡಿಸುವ ಮೂಲಕ ಹತ್ತಿ ಉತ್ಪಾದಕತೆಯನ್ನು ಸುಧಾರಿಸಲು ಭಾರತವು ಇತರ ರಾಷ್ಟ್ರಗಳಂತೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು. ಈ ಸುಧಾರಿತ ಬೀಜಗಳನ್ನು ರೈತರಿಗೆ ಸಕಾಲಿಕವಾಗಿ ತಲುಪಿಸುವ ಮಹತ್ವವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು ಮತ್ತು ಇದನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನಿಗಳು ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡಬೇಕೆಂದು ಕೂಡಾ ಒತ್ತಾಯಿಸಿದರು.
ವಿವಿಧ ರಾಜ್ಯಗಳ ರೈತರು ತಿಳಿಸುವ ಸಮಸ್ಯೆಗಳು ಮತ್ತು ಬೇಡಿಕೆಗಳು ಭವಿಷ್ಯದ ಕಾರ್ಯತಂತ್ರವನ್ನು ರೂಪಿಸುತ್ತವೆ. ಉತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಲು, ಉತ್ತಮ ಗುಣಮಟ್ಟದ ಹತ್ತಿ ಅತ್ಯಗತ್ಯ ಮತ್ತು ಇದನ್ನು ಸಾಧಿಸುವುದು ರಾಷ್ಟ್ರೀಯ ಗುರಿಯಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು ವೈಭವ, ಸಮೃದ್ಧಿ ಮತ್ತು ಅಧಿಕಾರದ ಹಾದಿಯಲ್ಲಿದೆ. “‘ವಿಕಸಿತ ಭಾರತ’ದಲ್ಲಿ, ನಾವು ವಿದೇಶದಿಂದ ಹತ್ತಿಯನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ದೇಶೀಯ ಉತ್ತಮ ಗುಣಮಟ್ಟದ ಉತ್ಪನ್ನಗಳೊಂದಿಗೆ ದೇಶದ ಹತ್ತಿ ಅಗತ್ಯಗಳನ್ನು ಪೂರೈಸುವುದು ಒಂದು ಸವಾಲು ಮತ್ತು ಗುರಿಯಾಗಿದೆ - ನಾವು ಒಟ್ಟಾಗಿ ಸಾಧಿಸಬೇಕಾದ ಒಂದು ವಿಷಯ ಕೂಡಾ ಆಗಿದೆ,” ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಹೇಳಿದರು.
“ಅಗ್ಗದ ವಿದೇಶಿ ಹತ್ತಿಯನ್ನು ಅನುಮತಿಸಲು ಜವಳಿ ಉದ್ಯಮವು ಆಮದು ಸುಂಕಗಳನ್ನು ತೆಗೆದುಹಾಕುವಂತೆ ಆಗಾಗ್ಗೆ ಒತ್ತಾಯಿಸುತ್ತಿದ್ದರೂ, ಇದು ಸ್ಥಳೀಯ ಹತ್ತಿ ಬೆಲೆಗಳಿಗೆ ಅಡ್ಡಿಯಾಗುತ್ತದೆ ಎಂದು ರೈತರು ವಾದಿಸುತ್ತಾರೆ . ಆದ್ದರಿಂದ, ಸರ್ಕಾರವು ರೈತರು ಮತ್ತು ಉದ್ಯಮ ಎರಡರ ಹಿತಾಸಕ್ತಿಗಳನ್ನು ಸಮತೋಲನಗೊಳಿಸಬೇಕಾಗಿದೆ” ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ತಿಳಿಸಿದರು.

ತಮ್ಮ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ವನ್ನು ಪ್ರತಿಬಿಂಬಿಸುತ್ತಾ, ಕೇಂದ್ರ ಸಚಿವ ಶ್ರೀ ಚೌಹಾಣ್ ಅವರು ಮಧ್ಯಪ್ರದೇಶದ ಇಂದೋರ್ ನಲ್ಲಿ ಸೋಯಾಬೀನ್ ಗಳ ಕುರಿತು ಈ ಹಿಂದೆ ಒಂದು ಪ್ರಮುಖ ಸಭೆಯನ್ನು ನಡೆಸಿದ್ದರು ಮತ್ತು ಕೊಯಮತ್ತೂರಿನಲ್ಲಿ ಹತ್ತಿಯ ಕುರಿತು ಇಂದಿನ ಆಳವಾದ ಸುದೀರ್ಘ ಸಭೆಯು ಕೃಷಿ ಅಭಿವೃದ್ಧಿಗಾಗಿ ಬೆಳೆವಾರು ಮತ್ತು ರಾಜ್ಯವಾರು ಕಾರ್ಯತಂತ್ರಗಳ ಮೇಲೆ ಕೇಂದ್ರೀಕರಿಸಿದ ಅದೇ ಸಮಾಲೋಚನಾ ಪ್ರಕ್ರಿಯೆಯನ್ನು ಮುಂದುವರೆಸಿದ ಹೆಜ್ಜೆಯಾಗಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಹೇಳಿದರು.
*****
(Release ID: 2144160)