ಕೃಷಿ ಸಚಿವಾಲಯ
azadi ka amrit mahotsav

ಜೈವಿಕ ಉತ್ತೇಜಕಗಳ (ಬಯೋಸ್ಟಿಮ್ಯುಲಂಟ್) ಮಾರಾಟದ ಕುರಿತು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಮಹತ್ವದ ಸಭೆ ನಡೆಸಿದರು


ಜೈವಿಕ ಉತ್ತೇಜಕಗಳ ಬಗ್ಗೆ ಕಠಿಣ ನಿಲುವು; ಪಾರದರ್ಶಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ನಿರ್ದೇಶನ

“ರೈತರು ನಮ್ಮ ಪ್ರಮುಖ ಆದ್ಯತೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು” - ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ಐಸಿಎಆರ್ ರೈತರ ಹಿತದೃಷ್ಟಿಯಿಂದ ಜೈವಿಕ ಉತ್ತೇಜಕಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಬೇಕು” - ಶ್ರೀ ಚೌಹಾಣ್

“ಜೈವಿಕ ಉತ್ತೇಜಕಗಳು ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಅವುಗಳನ್ನು ಅನುಮೋದಿಸಲಾಗುತ್ತದೆ” - ಕೇಂದ್ರ ಸಚಿವರು

“ಅನುಮಾನಾಸ್ಪದ ಜೈವಿಕ ಉತ್ತೇಜಕ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” - ಶ್ರೀ ಶಿವರಾಜ್ ಸಿಂಗ್ ಚೌಹಾಣ್

Posted On: 15 JUL 2025 6:27PM by PIB Bengaluru

ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಹಿರಿಯ ಅಧಿಕಾರಿಗಳೊಂದಿಗೆ ಜೈವಿಕ ಉತ್ತೇಜಕಗಳ (ಬಯೋಸ್ಟಿಮ್ಯುಲಂಟ್)  ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿದರು. 

ಜೈವಿಕ ಉತ್ತೇಜಕಗಳ ವಿಷಯದಲ್ಲಿ ರೈತರನ್ನು ಯಾವುದೇ ರೀತಿಯಲ್ಲಿ ದಾರಿ ತಪ್ಪಿಸಬಾರದು ಎಂದು ಹೇಳಿದರು. ಯಾವುದೇ ಅನುಮೋದನೆಗಳನ್ನು ನೀಡುವಾಗ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು "ನಾವು ಯಾವುದೇ ಸಂದರ್ಭದಲ್ಲೂ ಸಣ್ಣ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಕೆಲವು ಅಪ್ರಾಮಾಣಿಕರು ಹಾನಿ ಉಂಟುಮಾಡುತ್ತಿದ್ದಾರೆ ಮತ್ತು ರೈತರನ್ನು ರಕ್ಷಿಸುವುದು ನನ್ನ ಜವಾಬ್ದಾರಿ" ಎಂದು ಹೇಳಿದ ಅವರು ಈ ವಿಷಯದ ಬಗ್ಗೆ ತಮ್ಮ ಕಠಿಣ ನಿಲುವನ್ನು ತಿಳಿಸಿದರು.

ಇತ್ತೀಚೆಗೆ ನಡೆದ 15 ದಿನಗಳ 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಸಂದರ್ಭದಲ್ಲಿ, ಶ್ರೀ ಚೌಹಾಣ್ ಅವರು ಹಲವಾರು ರಾಜ್ಯಗಳಾದ್ಯಂತ ಹಳ್ಳಿಗಳಿಗೆ ಪ್ರವಾಸ ಮಾಡಿ, ರೈತರೊಂದಿಗೆ ನೇರವಾಗಿ ಅವರ ಜಮೀನುಗಳಲ್ಲಿ ಸಂವಾದ ನಡೆಸಿದ್ದರು. ಈ ಸಂವಾದಗಳ ಸಮಯದಲ್ಲಿ, ರೈತರು ನಕಲಿ ರಸಗೊಬ್ಬರಗಳು, ಬೀಜಗಳು, ಜೈವಿಕ ಉತ್ತೇಜಕಗಳು ಮತ್ತು ನ್ಯಾನೊ ಯೂರಿಯಾ ಮಾರಾಟದ ಬಗ್ಗೆ ಹಲವಾರು ದೂರುಗಳನ್ನು ನೀಡಿದ್ದರು. ಸಭೆಯಲ್ಲಿ ಈ ದೂರುಗಳನ್ನು ಉಲ್ಲೇಖಿಸಿದ ಸಚಿವರು, "ಮುಗ್ಧ ರೈತರ ಕುಂದುಕೊರತೆಗಳನ್ನು ಕೇಳಿದ ನಂತರ, ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಈ ದೇಶದ ಕೃಷಿ ಸಚಿವನಾಗಿ, ಕಾರ್ಯನಿರ್ವಹಿಸುವುದು ನನ್ನ ಕರ್ತವ್ಯ" ಎಂದು ಹೇಳಿದರು.

ಜೈವಿಕ ಉತ್ತೇಜಕಗಳು ಪದೇ ಪದೇ ನವೀಕರಣಗೊಂಡು ವರ್ಷಗಳ ಕಾಲ ಮಾರಾಟವಾದರೂ ಅವು ನಿಷ್ಪರಿಣಾಮಕಾರಿಯಾಗಿವೆ ಎಂದು ಜಮೀನುಗಳಿಂದ ಬಂದ ದೂರುಗಳು ತೋರಿಸಿದರೂ ಅವು ಇನ್ನೂ ಮಾರುಕಟ್ಟೆಯಲ್ಲಿ ಏಕೆ ಇವೆ ಎಂದು ಅವರು ಪ್ರಶ್ನಿಸಿದರು. "ಇವು ರೈತರಿಗೆ ಎಷ್ಟು ಉಪಯುಕ್ತವಾಗಿವೆ ಎಂಬುದನ್ನು ನಿರ್ಣಯಿಸಲು ಸಂಪೂರ್ಣ ಪರಿಶೀಲನೆ ಅಗತ್ಯವಿದೆ. ಅವು ಸಹಾಯಕವಾಗಿಲ್ಲದಿದ್ದರೆ, ಅವುಗಳನ್ನು ಮಾರಾಟ ಮಾಡಲು ಅನುಮತಿಸಬಾರದು" ಎಂದು ಅವರು ಹೇಳಿದರು. ಅನೇಕ ಕಂಪನಿಗಳು ಯಾವುದೇ ಅರ್ಹತೆಗಳಿಲ್ಲದೆ ಜೈವಿಕ ಉತ್ತೇಜಕಗಳನ್ನು ಮಾರಾಟ ಮಾಡಲು ಪ್ರಾರಂಭಿಸಿವೆ ಎಂದು ಅವರು ಎಚ್ಚರಿಸಿದರು ಮತ್ತು "ಕೃಷಿ ಸಚಿವನಾಗಿ, ನಾನು ಯಾವುದೇ ಕಾರಣಕ್ಕೂ ಇದು ಮುಂದುವರಿಯಲು ಬಿಡುವುದಿಲ್ಲ" ಎಂದು ಹೇಳಿದರು.

ಶ್ರೀ ಚೌಹಾಣ್ ಅಧಿಕಾರಿಗಳಿಗೆ ಹಲವಾರು ಗಂಭೀರ ಪ್ರಶ್ನೆಗಳನ್ನು ಕೇಳಿದರು ಮತ್ತು ಈ ಕೆಲಕಂಡ ವಿಷಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಕೋರಿದರು:

•    ದೇಶದಲ್ಲಿ ಜೈವಿಕ ಉತ್ತೇಜಕಗಳ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿ
•    ನೋಂದಾಯಿತ ಮತ್ತು ಪರಿಶೀಲಿಸಿದ ಉತ್ಪನ್ನಗಳ ಸಂಖ್ಯೆ
•    ಮಾರುಕಟ್ಟೆ ನಿಯಂತ್ರಣ ಕ್ರಮಗಳು
•    ಮಾದರಿ ಮತ್ತು ಪರೀಕ್ಷಾ ಕಾರ್ಯವಿಧಾನಗಳು
•    ನೈಜ ಮತ್ತು ನಕಲಿ ಉತ್ಪನ್ನಗಳನ್ನು ಗುರುತಿಸುವ ವಿಧಾನಗಳು
•    ಉಲ್ಲಂಘನೆಗಳ ಸಂದರ್ಭದಲ್ಲಿ ಕ್ರಮಕ್ಕಾಗಿ ಕಾನೂನು ಅವಕಾಶಗಳು

ರೈತರ ವಿಶ್ವಾಸವನ್ನು ಕಾಪಾಡಿಕೊಳ್ಳಲು ಮತ್ತು ಅವರ ತಾಂತ್ರಿಕ ಉಪಯುಕ್ತತೆಯನ್ನು ಖಚಿತಪಡಿಸಿಕೊಳ್ಳಲು ಐಸಿಎಆರ್ ಜೈವಿಕ ಉತ್ತೇಜಕ ಉತ್ಪನ್ನಗಳ ಮೌಲ್ಯಮಾಪನದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಹಲವು ವರ್ಷಗಳಿಂದ ಸುಮಾರು 30,000 ಜೈವಿಕ ಉತ್ತೇಜಕ ಉತ್ಪನ್ನಗಳನ್ನು ಯಾವುದೇ ಪರಿಶೀಲನೆಗಳಿಲ್ಲದೆ ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಮತ್ತು ಕಳೆದ ನಾಲ್ಕು ವರ್ಷಗಳಲ್ಲಿಯೂ ಸುಮಾರು 8,000 ಉತ್ಪನ್ನಗಳು ಚಲಾವಣೆಯಲ್ಲಿವೆ ಎಂದು ಗಮನಸೆಳೆದರು. "ನಾನು ಕಠಿಣ ತಪಾಸಣೆಗಳನ್ನು ಜಾರಿಗೆ ತಂದ ನಂತರ, ಅವುಗಳ ಸಂಖ್ಯೆ ಈಗ ಸರಿಸುಮಾರು 650 ಕ್ಕೆ ಇಳಿದಿದೆ" ಎಂದು ಅವರು ಹೇಳಿದರು. ರೈತರಿಗೆ ಹಾನಿ ಮಾಡಬಹುದಾದ ಯಾವುದೇ ನಿರ್ಲಕ್ಷ್ಯದ ವಿರುದ್ಧ ಸಚಿವರು ಎಚ್ಚರಿಕೆ ನೀಡಿದರು.

ಕಂಪನಿಗಳಿಗಿಂತ ರೈತರಿಗೆ ಆದ್ಯತೆ ನೀಡುವಂತೆ ಮತ್ತು ಕೃಷಿಯ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡುವಂತೆ ಶ್ರೀ ಚೌಹಾಣ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಜೈವಿಕ ಉತ್ತೇಜಕಗಳ ಬಳಕೆಯಿಂದ ಉತ್ಪಾದನೆಯಲ್ಲಿ ನಿಜವಾದ ಹೆಚ್ಚಳವನ್ನು ತೋರಿಸುವ ಯಾವುದೇ ಅಂಕಿಅಂಶಗಳಿವೆಯೇ ಎಂದು ಅವರು ಪ್ರಶ್ನಿಸಿದರು.

"ಎಲ್ಲಾ ಮಾನದಂಡಗಳನ್ನು ಪೂರೈಸುವ ಮತ್ತು ರೈತರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಿರುವ ಜೈವಿಕ ಉತ್ತೇಜಕಗಳನ್ನು ಮಾತ್ರ ಅನುಮೋದಿಸಲಾಗುತ್ತದೆ. ಅನುಮೋದನೆಗಳು ಈಗ ಕೇವಲ ವೈಜ್ಞಾನಿಕ ದೃಢೀಕರಣವನ್ನು ಆಧರಿಸಿರುತ್ತವೆ ಮತ್ತು ಇದರ ಜವಾಬ್ದಾರಿಯು ಸಂಪೂರ್ಣವಾಗಿ ಸಂಬಂಧಪಟ್ಟ ಅಧಿಕಾರಿಗಳದ್ದಾಗಿರುತ್ತದೆ" ಎಂದು ಅವರು ಹೇಳಿದರು.

ಸ್ಪಷ್ಟ ನಿಯಮಗಳು ಮತ್ತು ಎಸ್ ಒ ಪಿ ಗಳನ್ನು (ಸಾಮಾನ್ಯ ಕಾರ್ಯಾಚರಣಾ ಕಾರ್ಯವಿಧಾನಗಳು) ಸ್ಥಾಪಿಸಬೇಕು ಸೂಚಿಸಿದರು ಮತ್ತು ಮುಂದೆ ಯಾವುದೇ ಅಕ್ರಮಗಳನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.

"ಭಾರತದ ರೈತರು ನಮ್ಮ ಮೇಲೆ ನಂಬಿಕೆ ಇಡುತ್ತಾರೆ. ಅವರು ಐಸಿಎಆರ್ ಅನ್ನು ನಂಬುತ್ತಾರೆ. ಆದ್ದರಿಂದ, ರೈತರ ಕಲ್ಯಾಣಕ್ಕಾಗಿ ಮಾತ್ರ ಯೋಚಿಸುವುದು ಮತ್ತು ಕಾರ್ಯನಿರ್ವಹಿಸುವುದು ನಮ್ಮ ಮತ್ತು ವಿಜ್ಞಾನಿಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಮತ್ತು ವಿಜ್ಞಾನಿಗಳು ರೈತರ ನಿಜವಾದ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಬೇಕು" ಎಂದು ಶ್ರೀ ಚೌಹಾಣ್ ಹೇಳಿದರು.

 

*****
 


(Release ID: 2145010)