ಕೃಷಿ ಸಚಿವಾಲಯ
ರೈತರಿಗೆ ಒಂದು ಪ್ರಮುಖ ಉಡುಗೊರೆ - ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮಾ ಕ್ಲೇಮ್ ಮೊತ್ತ ನೇರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ
ರಾಜಸ್ಥಾನದ ಜುನ್ಜುನುವಿನಿಂದ ರೈತರ ಖಾತೆಗಳಿಗೆ ವಿಮಾ ಮೊತ್ತ ಡಿಜಿಟಲ್ ರೂಪದಲ್ಲಿ ವರ್ಗಾವಣೆ ಮಾಡಿದ ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
35 ಲಕ್ಷ ರೈತರಿಗೆ ಒಟ್ಟು 3,900 ಕೋಟಿ ರೂ. ವಿಮಾ ಪರಿಹಾರ ಮೊತ್ತ ವಿತರಣೆ
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಕೂಡ ಕಾರ್ಯಕ್ರಮದಲ್ಲಿ ಭಾಗಿ
Posted On:
11 AUG 2025 6:43PM by PIB Bengaluru
ರೈತರ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ರಾಜಸ್ಥಾನದ ಜುನ್ಜುನುವಿನಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮಾ ಪರಿಹಾರ ಪಾವತಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ಸುಮಾರು 35 ಲಕ್ಷ ರೈತರ ಖಾತೆಗಳಿಗೆ ಸುಮಾರು 3,900 ಕೋಟಿ ರೂ. ಪರಿಹಾರವನ್ನು ವಿತರಿಸಲಾಯಿತು.

ಈ ವೇಳೆ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಭಗೀರಥ ಚೌಧರಿ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಭಜನ್‌ಲಾಲ್ ಶರ್ಮಾ ಮತ್ತು ರಾಜಸ್ಥಾನ ಕೃಷಿ ಸಚಿವರಾದ ಡಾ. ಕಿರೋಡಿ ಲಾಲ್ ಮೀನಾ ಸೇರಿದಂತೆ ಸಾಕಷ್ಟು ಸಂಖ್ಯೆಯ ರೈತರು ಉಪಸ್ಥಿತರಿದ್ದರು. ವಿವಿಧ ರಾಜ್ಯಗಳ ಲಕ್ಷಾಂತರ ರೈತರು ಮತ್ತು ಫಲಾನುಭವಿಗಳು ವರ್ಚುವಲ್ ರೂಪದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಸದೃಢ ಭಾರತ ರಚನೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಹೇಳಿದರು. ರಾಜಸ್ಥಾನ ಶೀಘ್ರದಲ್ಲೇ ಯಮುನಾ, ಚಂಬಲ್ ಮತ್ತು ಸಿಂಧೂ ನದಿಯಿಂದ ನೀರನ್ನು ಪಡೆಯಲಿದೆ ಎಂದು ಅವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ಬಲವಾದ ಪ್ರತೀಕಾರ ತೀರಿಸಿಕೊಂಡಿದೆ, 'ಆಪರೇಷನ್ ಸಿಂಧೂರ್' ಮೂಲಕ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಲಾಗಿದೆ. ಈ ನಿರ್ಧಾರವನ್ನು ಭಾರತವು ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ ತೆಗೆದುಕೊಂಡಿದೆ ಎಂದು ಹೇಳಿದರು. ಅಲ್ಲದೆ, ಪಾಕಿಸ್ತಾನ ಭಾರತದ ಶಕ್ತಿಯ ಮುಂದೆ ತಲೆಬಾಗಿದ ನಂತರವೇ ನಾವು ಎಲ್ಲಾ ಮಿಲಿಟರಿ ಕ್ರಮಗಳನ್ನು ನಿಲ್ಲಿಸಿದ್ದೇವೆ ಎಂದು ಅವರು ಹೇಳಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ, ಇಡೀ ತಹಸಿಲ್ ಅಥವಾ ಬ್ಲಾಕ್‌ಗಳಲ್ಲಿ ಬೆಳೆಗಳು ನಾಶವಾದಾಗ ಮಾತ್ರ ಬೆಳೆ ವಿಮಾ ಪರಿಹಾರಗಳನ್ನು ನೀಡಲಾಗುತ್ತಿತ್ತು, ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಳೆಯ ಯೋಜನೆಗಳನ್ನು ರದ್ದುಗೊಳಿಸಿ, ಹಳ್ಳಿಯ ಒಬ್ಬ ರೈತನ ಬೆಳೆ ಹಾನಿಯಾದರೂ ಪರಿಹಾರವನ್ನು ಪಾವತಿಸುವ ವಿಮಾ ಯೋಜನೆಯನ್ನು ಜಾರಿಗೊಳಿಸಿದರು ಎಂದು ಸಚಿವರು ಹೇಳಿದರು.
ರೈತರ ಜೀವನವನ್ನು ಸುಧಾರಿಸಲು ಸರ್ಕಾರವು ಹಲವು ಯೋಜನೆಗಳ ಮೂಲಕ ಕೆಲಸ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 3.75 ಲಕ್ಷ ಕೋಟಿ ರೂ.ಗಳನ್ನು ನೇರ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. 2016 ರಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಿದಾಗಿನಿಂದ, ರೈತರಿಗೆ 2.12 ಲಕ್ಷ ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಗಣನೀಯ ಪ್ರಮಾಣದಲ್ಲಿ ರೈತರಿಗೆ ನೀಡುತ್ತಿರುವ ರಸಗೊಬ್ಬರ ಸಬ್ಸಿಡಿಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, 45 ಕೆಜಿ ಚೀಲ ಯೂರಿಯಾವು ರೈತರಿಗೆ 266 ರೂ. ವೆಚ್ಚವಾಗುತ್ತದೆ. ಅದರ ನಿಜವಾದ ಬೆಲೆ 1,633.24 ರೂ., ಉಳಿದ ವ್ಯತ್ಯಯದ ಹಣವನ್ನು ಸರ್ಕಾರವೇ ಭರಿಸುತ್ತದೆ. ಅದೇ ರೀತಿ, 50 ಕೆಜಿ ಚೀಲ ಡಿಎಪಿ (ಡೈಯಾಮೋನಿಯಂ ಫಾಸ್ಫೇಟ್) ಅದರ ನಿಜವಾದ ಬೆಲೆ 3,100 ರೂ. ಗೆ ಬದಲಾಗಿ 1,350 ರೂ. ವೆಚ್ಚಕ್ಕೆ ರೈತರಿಗೆ ನೀಡಲಾಗುತ್ತಿದೆ. ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರಗಳನ್ನು ಖಚಿತಪಡಿಸಿಕೊಳ್ಳಲು ಈವರೆಗೆ ರಸಗೊಬ್ಬರ ಕಂಪನಿಗಳಿಗೆ 14.06 ಲಕ್ಷ ಕೋಟಿ ರೂ. ನೆರವು ಒದಗಿಸಲಾಗಿದೆ.
ಇತರ ರೈತ ಕಲ್ಯಾಣ ಕ್ರಮಗಳನ್ನು ಉಲ್ಲೇಖಿಸಿದ ಶ್ರೀ ಚೌಹಾಣ್ ಅವರು, ಸರ್ಕಾರವು ಎಂ.ಎಸ್.ಪಿ (ಕನಿಷ್ಠ ಬೆಂಬಲ ಬೆಲೆ) ದರಗಳನ್ನು ಹೆಚ್ಚಿಸಿದೆ ಮತ್ತು ಉತ್ಪಾದನಾ ವೆಚ್ಚಕ್ಕಿಂತ ಶೇ.50 ರಷ್ಟು ನಿಗದಿಪಡಿಸಲಾಗಿದೆ ಎಂದರು. ಸರ್ಕಾರವು ಕ್ವಿಂಟಲ್‌ಗೆ 2,000 ರೂ.ಗೆ ಹೆಸರುಕಾಳು ಖರೀದಿಸಲು ನಿರ್ಧರಿಸಿದೆ. ಪಿಎಂ-ಆಶಾ ಯೋಜನೆಯಡಿ (ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ್) ಗೋಧಿ ಮತ್ತು ಭತ್ತದ ಖರೀದಿಗಾಗಿ ರೈತರ ಖಾತೆಗಳಿಗೆ 43.87 ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (ಎಂ.ಐ.ಪಿ) ರೈತರು ಸಾರಿಗೆ ವೆಚ್ಚವನ್ನು ಭರಿಸುವುದರೊಂದಿಗೆ ಇತರ ರಾಜ್ಯಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶ ನೀಡುತ್ತದೆ.
ನಕಲಿ ರಸಗೊಬ್ಬರಗಳ ವಿಷಯದ ಕುರಿತು ಮಾತನಾಡಿದ ಸಚಿವರು, ಅಪರಾಧಿಗಳನ್ನು ಶಿಕ್ಷಿಸಲು ಕಠಿಣ ಕಾನೂನನ್ನು ಪರಿಚಯಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ತಪ್ಪಿತಸ್ಥರಿಗೆ ಕಠಿಣ ಕ್ರಮ ಮತ್ತು ಜೈಲು ಶಿಕ್ಷೆಯನ್ನು ಖಾತ್ರಿಪಡಿಸಿಕೊಳ್ಳಲು ಈಗಾಗಲೇ ಕಾರ್ಯೋನ್ಮುಖವಾಗಿದ್ದೇವೆ ಎಂದರು.
ಬೆಳೆಗೆ ಸೋಂಕು ದಾಳಿಯ ಸಂದರ್ಭಗಳಲ್ಲಿ, ರೈತರು ಮಾಹಿತಿ ಹಂಚಿಕೊಂಡರೆ ಅಥವಾ ಫೋಟೋ ಕಳುಹಿಸಿದರೆ, ವಿಜ್ಞಾನಿಗಳ ತಂಡವು ಸಹಾಯ ಮಾಡಲು ತಕ್ಷಣ ಗ್ರಾಮವನ್ನು ತಲುಪುತ್ತದೆ ಎಂದು ಅವರು ಹೇಳಿದರು.
ಮುಂಗಾರು ಋತುವಿನ ನಂತರ, ವಿಕಸಿತ ಕೃಷಿ ಸಂಕಲ್ಪ ಅಭಿಯಾನದಡಿಯಲ್ಲಿ, ವಿಜ್ಞಾನಿಗಳ ತಂಡಗಳು ಹಿಂಗಾರು ಬೆಳೆ ಋತುವಿನಲ್ಲಿ ನಿಖರವಾದ ಕೃಷಿ ಮತ್ತು ಸಂಶೋಧನಾ ಜ್ಞಾನವನ್ನು ಹಂಚಿಕೊಳ್ಳಲು ಹಳ್ಳಿಗಳಿಗೆ ಭೇಟಿ ನೀಡಲಿವೆ ಎಂದು ಶ್ರೀ ಚೌಹಾಣ್ ಹೇಳಿದರು. ಭವಿಷ್ಯದ ಕೃಷಿ ಸಂಶೋಧನೆಯು ರೈತರ ಅಗತ್ಯತೆಗಳನ್ನು ಆಧರಿಸಿ ಬೇಡಿಕೆ ಆಧಾರಿತವಾಗಿರುತ್ತದೆ, ಉತ್ಪಾದನೆಯನ್ನು ಹೆಚ್ಚಿಸಲು ಹೆಸರುಕಾಳು, ಉದ್ದು, ಸೋಯಾಬೀನ್ ಮತ್ತು ಸಿರಿಧಾನ್ಯಗಳಿಗೆ ಗುಣಮಟ್ಟದ ಬೀಜಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿಗಳನ್ನು ಶ್ಲಾಘಿಸಿದ ಶ್ರೀ ಚೌಹಾಣ್, ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅವರು ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಿರುವುದರಿಂದ ಅವರ ನಾಯಕತ್ವವನ್ನು ಹೊಂದಿರುವುದು ದೇಶಕ್ಕೆ ಅದೃಷ್ಟ ಎಂದು ಹೇಳಿದರು ಮತ್ತು ರೈತರ ಹಿತಾಸಕ್ತಿಗಳನ್ನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಅಂತಹ ಸಂದರ್ಭ ಬಂದರೆ ವೈಯಕ್ತಿಕವಾಗಿ ಯಾವುದೇ ಬೆಲೆ ತರಲು ಸಿದ್ಧ ಎಂದು ಪ್ರಧಾನಮಂತ್ರಿ ಭರವಸೆ ನೀಡಿದ್ದಾರೆ.
ಈ ನಿರ್ಣಾಯಕ ನಿಲುವು ರಾಜಸ್ಥಾನದಲ್ಲಿ ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ವಿಶೇಷ ನೀಲನಕ್ಷೆಯನ್ನು ರೂಪಿಸುವ ಬಗ್ಗೆಯೂ ಶ್ರೀ ಚೌಹಾಣ್ ಮಾತನಾಡಿದರು.
ಭಾಷಣದ ಕೊನೆಯಲ್ಲಿ ಶ್ರೀ ಚೌಹಾಣ್ ಅವರು, ನಾಗರಿಕರು ನಮ್ಮ ಎಲ್ಲಾ ದೈನಂದಿನ ಅಗತ್ಯಗಳಿಗಾಗಿ ಸ್ವದೇಶಿ ಉತ್ಪನ್ನಗಳನ್ನು ಬಳಸಲು ಪ್ರತಿಜ್ಞೆ ಮಾಡುವಂತೆ ಕರೆ ನೀಡಿದರು. ಸ್ಥಳೀಯ ಸರಕುಗಳನ್ನು ಬಳಸುವುದರಿಂದ ಸಣ್ಣ ಕುಶಲಕರ್ಮಿಗಳು ಮತ್ತು ಉದ್ಯಮಿಗಳನ್ನು ಬಲಪಡಿಸುತ್ತದೆ ಮತ್ತು ಭಾರತೀಯ ಆರ್ಥಿಕತೆಯನ್ನು ವೃದ್ಧಿಸುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದರು.
****
(Release ID: 2155458)
Visitor Counter : 3