ರೈಲ್ವೇ ಸಚಿವಾಲಯ
ಉದ್ಘಾಟನೆಗೂ ಮುನ್ನ ಬೈರಾಬಿ-ಸೈರಂಗ್ ರೈಲು ಮಾರ್ಗದ ಸ್ಥಳ ಪರಿಶೀಲನೆ ನಡೆಸಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್
ರಾಜ್ಯ ರಾಜಧಾನಿಯಿಂದ ರಾಷ್ಟ್ರ ರಾಜಧಾನಿಗೆ ಮಿಜೋರಾಂನ ಮೊದಲ ರೈಲು ಸಂಚಾರ
ನಾಳೆ ಬೈರಾಬಿ-ಸೈರಂಗ್ ರೈಲು ಮಾರ್ಗ ಮತ್ತು ಮೂರು ಹೊಸ ರೈಲುಗಳಿಗೆ ಪ್ರಧಾನಮಂತ್ರಿ ಚಾಲನೆ
ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಂಪರ್ಕ ಹೆಚ್ಚಿಸಲು ಸೈರಂಗ್‌ನಿಂದ ನವದೆಹಲಿಗೆ ವಾರಕ್ಕೊಮ್ಮೆ ರಾಜಧಾನಿ ಎಕ್ಸ್ ಪ್ರೆಸ್, ಕೋಲ್ಕತ್ತಾಗೆ ವಾರಕ್ಕೆ ಮೂರು ಬಾರಿ ಮಿಜೋರಾಂ ಎಕ್ಸ್ ಪ್ರೆಸ್, ಮತ್ತು ಗುವಾಹಟಿಗೆ ಪ್ರತಿದಿನ ಐಜ್ವಾಲ್ ಇಂಟರ್ ಸಿಟಿ ರೈಲು ಸೇವೆ
ನಾಡಿದ್ದು ಸರಕು ರೈಲು ಸೇವೆ ಪ್ರಾರಂಭ, ಮಿಜೋರಾಂ ಜನರಿಗೆ ಅಗ್ಗದ ಸರಕುಗಳು ಲಭ್ಯ
Posted On:
12 SEP 2025 8:51PM by PIB Bengaluru
ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಮಿಜೋರಾಂನ ಸೈರಂಗ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಉದ್ಘಾಟನೆಗೆ ಸಿದ್ಧವಾಗಿರುವ ಬೈರಾಬಿ-ಸೈರಂಗ್ ರೈಲು ಮಾರ್ಗದ ಮಹತ್ವದ ಬಗ್ಗೆ ಮಾಧ್ಯಮದೊಂದಿಗೆ ಸಂವಾದ ನಡೆಸಿದರು.
ಈ ಮಾರ್ಗದ ನಿರ್ಮಾಣದ ವೇಳೆ ಎದುರಾದ ಅಸಾಧಾರಣ ಸವಾಲುಗಳ ಬಗ್ಗೆ ಶ್ರೀ ವೈಷ್ಣವ್ ಅವರು ವಿವರಿಸಿದರು. ಈ ಪ್ರದೇಶದ ಹಿಮಾಲಯದ ಸಂಕೀರ್ಣ ಭೂವೈಜ್ಞಾನಿಕ ರಚನೆಯೇ ಇದಕ್ಕೆ ಕಾರಣವೆಂದರು. "ಇಲ್ಲಿನ ಎಳೆಯ ಪರ್ವತಗಳಲ್ಲಿ ಸಾವಯವ ವಸ್ತುಗಳು ಮತ್ತು ಸಡಿಲವಾದ ಮರಳು ಇದ್ದುದರಿಂದ, ನಿರ್ಮಾಣ ಕಾರ್ಯಕ್ಕೆ ಹಲವು ತೊಡಕುಗಳು ಎದುರಾದವು. ಇದರಿಂದಾಗಿ, ನಾವು ನವೀನ ಸುರಂಗ ತಂತ್ರಜ್ಞಾನವನ್ನು ಬಳಸಬೇಕಾಯಿತು. ಸುರಂಗ ಮತ್ತು ಸೇತುವೆಗಳ ನಿರ್ಮಾಣಕ್ಕೆ ಮುನ್ನ, ನಮ್ಮ ತಂಡವು ಮೊದಲು ಸಡಿಲವಾದ ಮರಳನ್ನು ಬಂಡೆಯಂತೆ ಗಟ್ಟಿಗೊಳಿಸಿ, ನಂತರ ಕಾಮಗಾರಿಯನ್ನು ಮುಂದುವರಿಸಬೇಕಾಯಿತು," ಎಂದು ಸಚಿವರು ಹೇಳಿದರು.
ಬೈರಾಬಿಯಿಂದ ಸೈರಂಗ್ ವರೆಗಿನ 51 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ 45 ಸುರಂಗಗಳು ಹಾಗೂ 55 ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ದೆಹಲಿಯ ಕುತುಬ್ ಮಿನಾರ್ ಗಿಂತಲೂ ಎತ್ತರದ ಸೇತುವೆಯೂ ಸೇರಿದ್ದು, ಇದು ಭಾರತದ ಎಂಜಿನಿಯರಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಗಿದೆ.
ಈ ಯೋಜನೆಯಿಂದಾಗುವ ಅಭಿವೃದ್ಧಿಯ ಬಗ್ಗೆ ಒತ್ತಿಹೇಳಿದ ಸಚಿವರು, "ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (ಶನಿವಾರ) ಬೈರಾಬಿ-ಸೈರಂಗ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ," ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ, ರಾಜ್ಯ ರಾಜಧಾನಿಯನ್ನು ರಾಷ್ಟ್ರ ರಾಜಧಾನಿಯೊಂದಿಗೆ ಸಂಪರ್ಕಿಸುವ ಮೊದಲ ರೈಲು ಸೇವೆಯಾದ ರಾಜಧಾನಿ ಎಕ್ಸ್ ಪ್ರೆಸ್ ಗೂ ಅವರು ಚಾಲನೆ ನೀಡಲಿದ್ದಾರೆ. ಇದರೊಂದಿಗೆ ಪ್ರಧಾನಮಂತ್ರಿ ಅವರು ಈ ಕೆಳಗಿನ ಮೂರು ಹೊಸ ರೈಲು ಸೇವೆಗಳನ್ನೂ ಉದ್ಘಾಟಿಸಲಿದ್ದಾರೆ:
1. ಸೈರಂಗ್ ನಿಂದ ನವದೆಹಲಿಗೆ ವಾರಕ್ಕೊಮ್ಮೆ ರಾಜಧಾನಿ ಎಕ್ಸ್ ಪ್ರೆಸ್
2. ಸೈರಂಗ್ ನಿಂದ ಕೋಲ್ಕತ್ತಾಗೆ ವಾರಕ್ಕೆ ಮೂರು ಬಾರಿ ಮಿಜೋರಾಂ ಎಕ್ಸ್ ಪ್ರೆಸ್
3. ಸೈರಂಗ್ ನಿಂದ ಗುವಾಹಟಿಗೆ ಪ್ರತಿದಿನ ಐಜ್ವಾಲ್ ಇಂಟರ್ ಸಿಟಿ
"ನಾಡಿದ್ದು, ಅಂದರೆ ಸೆಪ್ಟೆಂಬರ್ 14ರಂದು (ಭಾನುವಾರ) ಸರಕು ಸಾಗಣೆ ರೈಲು ಸೇವೆ ಆರಂಭವಾಗಲಿದೆ," ಎಂದು ಸಚಿವರು ತಿಳಿಸಿದರು. "ಈ ಹೊಸ ರೈಲು ಮಾರ್ಗದ ಮೂಲಕ ಸಿಮೆಂಟ್, ಉಕ್ಕು ಮತ್ತು ಗೃಹೋಪಯೋಗಿ ವಸ್ತುಗಳ ಸಾಗಾಟ ಸುಲಭವಾಗುವುದರಿಂದ, ಈ ಭಾಗದ ಜನರಿಗೆ ಆ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿವೆ," ಎಂದು ಅವರು ಒತ್ತಿ ಹೇಳಿದರು. ಮಿಜೋರಾಂನಿಂದ ಸಾವಯವ ತಾಜಾ ತರಕಾರಿಗಳು, ಸುಂದರ ಹೂವುಗಳು ಹಾಗೂ ಡ್ರ್ಯಾಗನ್ ಫ್ರೂಟ್ ನಂತಹ ವಿಶಿಷ್ಟ ಹಣ್ಣುಗಳನ್ನು ದೇಶದ ಇತರ ಭಾಗಗಳಿಗೆ ರೈಲು ಜಾಲದ ಮೂಲಕ ಸಾಗಿಸುವ ಸಾಧ್ಯತೆಯ ಬಗ್ಗೆಯೂ ಸಚಿವರು ಚರ್ಚಿಸಿದರು. "ಸ್ಥಳೀಯ ಉದ್ಯಮಗಳನ್ನು ಪ್ರೋತ್ಸಾಹಿಸಿ, ಆರ್ಥಿಕ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಮಾದರಿಯನ್ನು ರೂಪಿಸಲಾಗಿದೆ. ಕಾಶ್ಮೀರದಿಂದ ದೆಹಲಿಗೆ ಯಶಸ್ವಿಯಾಗಿ ಸೇಬು ಸಾಗಿಸುವ ಸೇವೆಯಿಂದ ಇದು ಪ್ರೇರಣೆ ಪಡೆದಿದೆ," ಎಂದರು. ಉತ್ತಮ ಸಂಪರ್ಕದಿಂದಾಗಿ ಪ್ರವಾಸಿಗರು ಈ ಭಾಗಕ್ಕೆ ಸುಲಭವಾಗಿ ಬರಲು ಸಾಧ್ಯವಾಗುತ್ತದೆ ಮತ್ತು ಈ ಯೋಜನೆಗೆ ಈಗಾಗಲೇ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದು ಸಚಿವರು ಹೇಳಿದರು.
ಈಶಾನ್ಯ ರಾಜ್ಯಗಳ ರೈಲ್ವೆ ಅಭಿವೃದ್ಧಿಗಾಗಿ ಮೀಸಲಿಡುವ ಬಜೆಟ್ ಅನುದಾನದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಶ್ರೀ ವೈಷ್ಣವ್ ಅವರು ಒತ್ತಿ ಹೇಳಿದರು. "2014ಕ್ಕಿಂತ ಮೊದಲು ವಾರ್ಷಿಕವಾಗಿ ಸುಮಾರು ₹2,000 ಕೋಟಿಯಷ್ಟಿದ್ದ ಅನುದಾನ, ಈಗ ಸುಮಾರು ₹10,000 ಕೋಟಿಗೆ ಹೆಚ್ಚಳವಾಗಿದೆ. ಇದು ಈ ಭಾಗದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಸುಧಾರಿಸಲು ಪ್ರಧಾನಮಂತ್ರಿ ಅವರು ಹೊಂದಿರುವ ಬಲವಾದ ಬದ್ಧತೆಗೆ ಸಾಕ್ಷಿಯಾಗಿದೆ," ಎಂದು ಅವರು ತಿಳಿಸಿದರು.
ಇಡೀ ಯೋಜನಾ ತಂಡವನ್ನು ಅಭಿನಂದಿಸಿದ ಶ್ರೀ ವೈಷ್ಣವ್ ಅವರು, ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಸಿ.ಇ.ಒ ಶ್ರೀ ಸತೀಶ್ ಕುಮಾರ್, ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಶ್ರೀ ಚೇತನ್ ಕುಮಾರ್ ಶ್ರೀವಾಸ್ತವ, ಹಾಗೂ ಜನರಲ್ ಮ್ಯಾನೇಜರ್ (ನಿರ್ಮಾಣ) ಶ್ರೀ ಅರುಣ್ ಕುಮಾರ್ ಚೌಧರಿ ಅವರ ನಿಖರವಾದ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಲೋಕಸಭಾ ಸಂಸದರಾದ ಶ್ರೀ ರಿಚರ್ಡ್ ವನ್ಲಾಲ್ಮಾಂಗೈಹಾ ಮತ್ತು ರಾಜ್ಯಸಭಾ ಸಂಸದರಾದ ಶ್ರೀ ಕೆ. ವನ್ಲಾಲ್ವೇನಾ ಅವರು ಕೂಡ ಉಪಸ್ಥಿತರಿದ್ದರು.
****
(Release ID: 2166163)
Visitor Counter : 2