ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

89 ನೇ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ (ಐಇಸಿ) ವಾರ್ಷಿಕ ಸಭೆ ಆಯೋಜಿದ ಭಾರತ


ಭಾರತ ಓಐಎಂಎಲ್ ಮಾದರಿ ಅನುಮೋದನೆ ಪ್ರಮಾಣಪತ್ರ ನೀಡುವ 13 ನೇ ದೇಶವಾಗಿದೆ; ಡಿಜಿಟಲ್ ಇಂಡಿಯಾ, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನಗಳಲ್ಲಿ ಮುನ್ನಡೆಯುತ್ತಿದೆ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ

11 ವರ್ಷಗಳಲ್ಲಿ ಭಾರತದ ಹಣದುಬ್ಬರ ಕನಿಷ್ಠ ಮಟ್ಟಕ್ಕೆ ತಲುಪಿದೆ; 474 ಕೇಂದ್ರಗಳ ಮೂಲಕ ಬೆಲೆಗಳ ಮೇಲೆ ನಿಗಾ: ಶ್ರೀ ಪ್ರಲ್ಹಾದ್ ಜೋಶಿ

ಬಿಐಎಸ್ ಸುಮಾರು 24,000 ಮಾನದಂಡಗಳು, ವ್ಯಾಪಕ ಪ್ರಮಾಣೀಕರಣ ವ್ಯಾಪ್ತಿ ಮತ್ತು ಹಾಲ್‌ಮಾರ್ಕಿಂಗ್‌ನಲ್ಲಿ ಮೈಲಿಗಲ್ಲು ಸುಧಾರಣೆಗಳೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರನಾಗಿ ಪಾತ್ರವಾಗಿ ವಿಸ್ತರಣೆ: ಶ್ರೀ ಜೋಶಿ

ಪಿಎಲ್‌ಐ ಯೋಜನೆಗಳು, ಸೆಮಿಕಾನ್ ಇಂಡಿಯಾ ಮತ್ತು ಗ್ರೀನ್ ಎನರ್ಜಿ ಮಿಷನ್‌ಗಳು ಎಲೆಕ್ಟ್ರಾನಿಕ್ಸ್ ಮತ್ತು ಶುದ್ಧ ತಂತ್ರಜ್ಞಾನಗಳಿಗೆ ಜಾಗತಿಕ ಕೇಂದ್ರವಾಗಿ ಭಾರತದ ಹೊರಹೊಮ್ಮಲು ಚಾಲನೆ: ಶ್ರೀ ಜೋಶಿ

Posted On: 15 SEP 2025 8:57PM by PIB Bengaluru

ಭಾರತವು ಅಂತಾರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಸಂಸ್ಥೆ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಲೀಗಲ್ ಮೆಟ್ರೋಲಜಿ) ಮಾದರಿ ಅನುಮೋದನೆ ಪ್ರಮಾಣಪತ್ರವನ್ನು ನೀಡುವ ವಿಶ್ವದ 13ನೇ ರಾಷ್ಟ್ರವಾಗಿದ್ದು, ಇದು ಕಾನೂನು ಮಾಪನಶಾಸ್ತ್ರ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ನವದೆಹಲಿಯಲ್ಲಿ ನಡೆದ 89ನೇ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗ (ಐಇಸಿ) ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಡಿಜಿಟಲ್ ಇಂಡಿಯಾ, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ಇಂಧನಕ್ಕೆ ಸಂಬಂಧಿಸಿದಂತೆ ಭಾರತವು ಇಡೀ ಜಗತ್ತಿಗಿಂತ ಮುಂದೆ ಸಾಗುತ್ತಿದೆ ಎಂದು ಅವರು ಹೇಳಿದರು.

ಭಾರತದ ಹಣದುಬ್ಬರ ದರ ಇಂದು 11 ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯಾಗಿದೆ ಎಂದು ಶ್ರೀ ಜೋಶಿ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಉದ್ದಕ್ಕೂ ಹಣದುಬ್ಬರವು ನಿಯಂತ್ರಣದಲ್ಲಿದೆ ಮತ್ತು ದೇಶಾದ್ಯಂತ 474 ಬೆಲೆ ಮೇಲ್ವಿಚಾರಣಾ ಕೇಂದ್ರಗಳ ಮೂಲಕ ಅಗತ್ಯ ವಸ್ತುಗಳ ಬೆಲೆಗಳ ನಿರಂತರ ನಿಗಾ ಇಡಲಾಗುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಭೌತಿಕ ಪ್ರಯೋಗಾಲಯ ಮತ್ತು ಇಸ್ರೋ ಸಹಯೋಗದೊಂದಿಗೆ ಗ್ರಾಹಕ ವ್ಯವಹಾರಗಳ ಇಲಾಖೆಯು ಕೈಗೊಳ್ಳುವ ನಿಖರವಾದ ಭಾರತೀಯ ನಿರ್ಧಿಷ್ಟ ಕಾಲಮಾನದ ಪ್ರಸರಣಕ್ಕಾಗಿ ಭಾರತವು ಶೀಘ್ರದಲ್ಲೇ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಸಚಿವರು ಹೇಳಿದರು. ದೇಶಾದ್ಯಂತ ಐದು ಸ್ಥಳಗಳಿಂದ ಭಾರತೀಯ ಪ್ರಮಾಣಿತ ಸಮಯವನ್ನು ಪ್ರಸಾರ ಮಾಡಲು ಅಗತ್ಯವಾದ ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಮಾಹಿತಿ ನೀಡಿದರು. ಕಾರ್ಯತಂತ್ರ ಮತ್ತು ಕಾರ್ಯತಂತ್ರೇತರ ವಲಯಗಳಿಗೆ ನಿಖರವಾದ ಸಮಯದ ಪ್ರಸರಣ ಅತ್ಯಗತ್ಯ ಎಂದು ಅವರು ಹೇಳಿದರು.

ಎಲೆಕ್ಟ್ರೋಟೆಕ್ನಿಕಲ್ ಕ್ಷೇತ್ರದಲ್ಲಿ ಜಾಗತಿಕ ಮಾನದಂಡಗಳನ್ನು ಮುನ್ನಡೆಸುವಲ್ಲಿ ಐಇಸಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವರು ಹೇಳಿದರು. ಸ್ವಯಂಪ್ರೇರಿತ, ಸಹಮತ ಆಧಾರಿತ ಪ್ರಮಾಣೀಕರಣಕ್ಕೆ ತನ್ನ ಬದ್ಧತೆಯ ಮೂಲಕ ತಂತ್ರಜ್ಞಾನವು ದಕ್ಷ, ಪರಸ್ಪರ ಕಾರ್ಯನಿರ್ವಹಿಸಬಹುದಾದ, ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರವಾಗಿರುವ ಜಗತ್ತನ್ನು ರೂಪಿಸಲು ಐಇಸಿ ಸಹಾಯ ಮಾಡಿದೆ. ನಾವೀನ್ಯತೆ, ಜ್ಞಾನ ಹಂಚಿಕೆ ಮತ್ತು ದೀರ್ಘಕಾಲೀನ ಪಾಲುದಾರಿಕೆಗಳನ್ನು ಬೆಳೆಸುವ ಪರಿಸರದಲ್ಲಿ ವಿಶ್ವದ ಅಗ್ರಗಣ್ಯ ಎಲೆಕ್ಟ್ರೋಟೆಕ್ನಿಕಲ್ ತಜ್ಞರನ್ನು ಕರೆಯುವ ಸಂಪ್ರದಾಯವನ್ನು ಮುಂದುವರೆಸಿದ್ದಕ್ಕಾಗಿ ಅವರು ಐಇಸಿಗೆ ಕೃತಜ್ಞತೆ ಸಲ್ಲಿಸಿದರು. ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ಮೂಲಕ ಭಾರತವು ಈ ವರ್ಷದ ಸಭೆಯನ್ನು ಆಯೋಜಿಸುವ ಭಾಗ್ಯ ದೊರೆತಿದೆ ಎಂದು ಅವರು ಹೇಳಿದರು.

ಜಾಗತಿಕ ಪ್ರಮಾಣೀಕರಣದ ಈ ಪಯಣದಲ್ಲಿ, ಬಿಐಎಸ್ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ರೀ ಜೋಶಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತದ ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾಗಿ, ಬಿಐಎಸ್ ತಾಂತ್ರಿಕ ಚೌಕಟ್ಟುಗಳನ್ನು ಬಲಪಡಿಸುವುದಲ್ಲದೆ, ಸುಸ್ಥಿರತೆಯ ಗುರಿಗಳೊಂದಿಗೆ ಪ್ರಮಾಣೀಕರಣವನ್ನು ಸಂಯೋಜಿಸಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯ ಮೂಲಕ, ಬಿಐಎಸ್ ಮಾನದಂಡಗಳ ಸಮನ್ವಯತೆಯನ್ನು ಬೆಳೆಸಿದೆ, ನಾವೀನ್ಯತೆಯನ್ನು ಪ್ರೋತ್ಸಾಹಿಸಿದೆ ಮತ್ತು ವಲಯಗಳಾದ್ಯಂತ ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಸುಗಮಗೊಳಿಸಿದೆ ಎಂದರು.

ಕಳೆದ ಹನ್ನೊಂದು ವರ್ಷಗಳಲ್ಲಿ, ಬಿಐಎಸ್ ತಾಂತ್ರಿಕ ನಿಯಂತ್ರಕನ ಸ್ಥಾನದಿಂದ ರಾಷ್ಟ್ರ ನಿರ್ಮಾಣದಲ್ಲಿ ನೈಜ ಪಾಲುದಾರನಾಗುವವರೆಗೆ ತನ್ನ ಪಾತ್ರವನ್ನು ವಿಸ್ತರಿಸಿದೆ ಎಂದು ಸಚಿವರು ಹೇಳಿದರು. ಉತ್ಪನ್ನಗಳು ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಜಾಗತಿಕ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಇಂದು ಭಾರತದಲ್ಲಿ ಸುಮಾರು 24,000 ಭಾರತೀಯ ಮಾನದಂಡಗಳಿವೆ ಎಂದು ಅವರು ಮಾಹಿತಿ ನೀಡಿದರು. 2014ರಲ್ಲಿ 14 ಗುಣಮಟ್ಟ ನಿಯಂತ್ರಣ ಆದೇಶಗಳ ಅಡಿಯಲ್ಲಿ ಕೇವಲ 106 ಉತ್ಪನ್ನಗಳಿಂದ 186 ಕ್ಯೂಸಿಒಗಳು, 2 ಹಾರಿಜಾಂಟಲ್ ಕ್ಯೂಸಿಒಗಳು ಮತ್ತು ಓಮ್ನಿಬಸ್ ತಾಂತ್ರಿಕ ನಿಯಮಗಳ ಅಡಿಯಲ್ಲಿ 769 ಉತ್ಪನ್ನಗಳಿಗೆ ಪ್ರಮಾಣೀಕರಣ ವ್ಯಾಪ್ತಿಯು ಬೆಳೆದಿದೆ. ಜುಲೈ 2021ರಲ್ಲಿ ಚಿನ್ನದ ಆಭರಣಗಳಿಗೆ ಎಚ್ ಯುಐಡಿ-ಆಧಾರಿತ ಹಾಲ್‌ಮಾರ್ಕಿಂಗ್ ಅನ್ನು ಪರಿಚಯಿಸಿರುವುದು ಒಂದು ಮೈಲಿಗಲ್ಲು ಸುಧಾರಣೆಯಾಗಿದೆ, ಅದರಡಿಯಲ್ಲಿ ಈಗಾಗಲೇ 48 ಕೋಟಿಗೂ ಅಧಿಕ ವಸ್ತುಗಳನ್ನು ಹಾಲ್‌ಮಾರ್ಕಿಂಗ್ ಮಾಡಲಾಗಿದೆ, ಹಾಲ್‌ಮಾರ್ಕಿಂಗ್ ಕೇಂದ್ರಗಳು 2014ರಲ್ಲಿ 285 ರಿಂದ ಇಂದು 1,600ಕ್ಕೆ ಏರಿದೆ, 373 ಜಿಲ್ಲೆಗಳನ್ನು ಒಳಗೊಂಡಿದೆ ಮತ್ತು 2 ಲಕ್ಷಕ್ಕೂ ಅಧಿಕ ನೋಂದಾಯಿತ ಆಭರಣ ವ್ಯಾಪಾರಿಗಳನ್ನು ಒಳಗೊಂಡಿದೆ. ಈ ಯಶಸ್ಸಿನ ಮೇಲೆ, ಬೆಳ್ಳಿ ಆಭರಣಗಳು ಮತ್ತು ಕಲಾಕೃತಿಗಳ ಹಾಲ್‌ಮಾರ್ಕಿಂಗ್ ಅನ್ನು ಸಹ ಪರಿಚಯಿಸಲಾಗಿದೆ ಎಂದು ಅವರು ಹೇಳಿದರು.

ಬಿಐಎಸ್ ಪ್ರಯೋಗಾಲಯಗಳು ತಮ್ಮ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿವೆ, 2014–15ರಲ್ಲಿ 81 ಇದ್ದ ಮಾನ್ಯತೆ ಪಡೆದ ಪ್ರಯೋಗಾಲಯಗಳ ಜಾಲವು 2025ರಲ್ಲಿ 382 ಕ್ಕೆ ವಿಸ್ತರಣೆಗೊಂಡಿದೆ ಮತ್ತು ಅದೇ ಅವಧಿಯಲ್ಲಿ ನೋಂದಾಯಿತ ಪ್ರಯೋಗಾಲಯಗಳು 62 ರಿಂದ 287 ಕ್ಕೆ ಹೆಚ್ಚಾಗಿವೆ ಎಂದು ಹೇಳಿದರು. ತರಬೇತಿ ಮತ್ತು ಪ್ರಚಾರ ಚಟುವಟಿಕೆಗಳನ್ನು ಸಹ ಬಲವರ್ಧನೆಗೊಳಿಸಲಾಗಿದೆ. ಗುಣಮಟ್ಟದ ಮಾನದಂಡಗಳ ಮಹತ್ವದ ಕುರಿತು ಸಂಸ್ಥೆಗಳು ಮತ್ತು ಅಧಿಕಾರಿಗಳನ್ನು ಸಂವೇದನಾಶೀಲಗೊಳಿಸಲು 600ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.

ಭಾರತ ಇಂದು ಬೃಹತ್ ತಾಂತ್ರಿಕ ಮತ್ತು ಕೈಗಾರಿಕಾ ಪರಿವರ್ತನೆಗೆ ಸಾಕ್ಷಿಯಾಗುತ್ತಿದೆ ಎಂದು ಸಚಿವರು ಹೇಳಿದರು. ಉತ್ಪಾದಕತೆಯನ್ನು ಹೆಚ್ಚಿಸಲು ಉತ್ಪಾದನಾ ವಲಯವು ಯಾಂತ್ರೀಕೃತಗೊಂಡ ಮತ್ತು ನಿಖರತೆಯನ್ನು ಅಳವಡಿಸಿಕೊಳ್ಳುತ್ತಿದೆ. ಸ್ಮಾರ್ಟ್ ಕಾರ್ಖಾನೆಗಳು, ಉದ್ಯಮ 4.0 ಮತ್ತು ಸೈಬರ್-ಭೌತಿಕ ವ್ಯವಸ್ಥೆಗಳು ಉದ್ಯಮದ ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತಿವೆ. ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕರಾಗಿರುವುದರಿಂದ ವಿದ್ಯುತ್ ವಾಹನಗಳು ಮತ್ತು ಸೌರ ತಂತ್ರಜ್ಞಾನಗಳಿಗೆ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗುವವರೆಗೆ ಭಾರತದ ಪ್ರಗತಿಯು ಮಹತ್ವಾಕಾಂಕ್ಷೆಯಿಂದ ಮುನ್ನಡೆಸಲ್ಪಡುತ್ತಿದ್ದು, ಅದಕ್ಕೆ ನೀತಿಗಳ ಬೆಂಬಲವಿದೆ ಮತ್ತು ಸಾಮೂಹಿಕ ಪ್ರಯತ್ನದ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.

ಎಲೆಕ್ಟ್ರೋಟೆಕ್ನಿಕಲ್ ಮತ್ತು ಇಂಧನ ಕ್ಷೇತ್ರಗಳಲ್ಲಿ ಭಾರತದ ಪಯಣವು ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವಕ್ಕಾಗಿ ರಾಷ್ಟ್ರೀಯ ದೂರದೃಷ್ಟಿಯಲ್ಲಿ ಬೇರೂರಿದೆ ಎಂದು ಅವರು ಹೇಳಿದರು. ಬಳಸಿದರೆ ಬರಿದಾಗುವ ಇಂಧನಗಳ ಮೇಲಿನ ಅವಲಂಬನೆಯಿಂದ ಭಾರತವು ನವೀಕರಿಸಬಹುದಾದ ಇಂಧನ, ಶುದ್ಧ ತಂತ್ರಜ್ಞಾನ ಮತ್ತು ಕಡಿಮೆ ಇಂಗಾಲದ ಮೂಲಸೌಕರ್ಯದತ್ತ ಮಹತ್ವದ ಬದಲಾವಣೆಗೆ ಒಳಗಾಗುತ್ತಿದೆ. 2023ರಲ್ಲಿ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿಯೂ ಸಹ ಭಾರತವು ಇಂಧನ ಪರಿವರ್ತನೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಪ್ರಮುಖ ವಲಯಗಳಾಗಿ ಆದ್ಯತೆ ನೀಡಿತು ಎಂದು ಅವರು ಸ್ಮರಿಸಿದರು.

ಉತ್ಪಾದನೆ-ಆಧರಿತ ಪ್ರೋತ್ಸಾಹ ಯೋಜನೆಗಳು(ಪಿಎಲ್ಐ), ಬೃಹತ್ ಕೈಗಾರಿಕಾ ಕಾರಿಡಾರ್‌ಗಳು, ಸೆಮಿಕಾನ್ ಇಂಡಿಯಾ ಕಾರ್ಯಕ್ರಮ ಮತ್ತು ಹೆಚ್ಚಿನ ಪ್ರಭಾವ ಬೀರುವ ಹೂಡಿಕೆಗಳು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ ನ ಜಾಗತಿಕ ಕೇಂದ್ರವಾಗಿ ಭಾರತ ಹೊರಹೊಮ್ಮಲು ಶಕ್ತಿ ತುಂಬುತ್ತಿವೆ ಎಂದು ಸಚಿವರು ಬಲವಾಗಿ ಪ್ರತಿಪಾದಿಸಿದರು. ಇದೇ ವೇಳೆ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ-ಕುಸುಮ್, ಪಿಎಂ ಸೂರ್ಯ ಘರ್ ಯೋಜನೆ ಮತ್ತು ಫೇಮ್ ಇಂಡಿಯಾ ಯೋಜನೆ ಮತ್ತಿತರ ಉಪಕ್ರಮಗಳು ಶುದ್ಧ ಇಂಧನ ತಂತ್ರಜ್ಞಾನಗಳಿಗೆ ವರ್ಗಾವಣೆಗೊಳ್ಳಲು ಚಾಲನೆ ನೀಡುತ್ತಿವೆ ಎಂದು ಹೇಳಿದರು.

ಸ್ಟಾರ್ಟ್ಅಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಪರಿವರ್ತನಾ ಕಾರ್ಯಕ್ರಮಗಳ ನೆರವಿನೊಂದಿಗೆ, ಭಾರತದ ಯುವಜನತೆ ಎಲೆಕ್ಟ್ರೋಟೆಕ್ನಿಕಲ್ ವಲಯದಲ್ಲಿ ಸುಸ್ಥಿರ ತಂತ್ರಜ್ಞಾನಗಳನ್ನು ಪ್ರವರ್ತಿಸುತ್ತಿದ್ದಾರೆ, ಅಲ್ಲಿ ನಾವೀನ್ಯತೆ ಮತ್ತು ಪರಿಸರ ಪ್ರಜ್ಞೆ ಒಟ್ಟಿಗೆ ಸಾಗುತ್ತದೆ ಎಂದು ಅವರು ಹೇಳಿದರು. ಸಭೆಯ ಜೊತೆಗೆ ನಡೆಯುತ್ತಿರುವ ಪ್ರದರ್ಶನದಲ್ಲಿ, ಕೃಷಿ ಮತ್ತು ಆರೋಗ್ಯ ರಕ್ಷಣೆಯಿಂದ ಹಿಡಿದು ಸ್ಮಾರ್ಟ್ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಪರಿಹಾರಗಳವರೆಗೆ ಹಲವು ಕ್ಷೇತ್ರಗಳಲ್ಲಿ ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕಾ ಸಂಘಗಳು ಮಾಡುತ್ತಿರುವ ಕೆಲಸಗಳನ್ನು ಕಾಣಬಹುದಾಗಿದೆ. ಈ ಪ್ರದರ್ಶನವು ಕೇವಲ ಪ್ರದರ್ಶನವಲ್ಲ, ಅರ್ಥಪೂರ್ಣ ತೊಡಗಿಸಿಕೊಳ್ಳುವಿಕೆ, ಸಹಯೋಗ ಮತ್ತು ಪಾಲುದಾರಿಕೆಗಳಿಗೆ ವೇದಿಕೆಯಾಗಿದೆ ಎಂದು ಉಲ್ಲೇಖಿಸಿದರು.

ಈ ಕಾರ್ಯಕ್ರಮವು ಭಾರತದ ಹಂಚಿಕೆಯ ಮಾನವ ಸ್ಫೂರ್ತಿಯ ಆಚರಣೆಯಾಗಿದೆ ಎಂದು ಸಚಿವರು ಹೇಳಿದರು. ದೇಶದ ಶ್ರೀಮಂತ ಪರಂಪರೆ, ವೈವಿಧ್ಯತೆ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಸ್ಥಿರತೆಯಲ್ಲಿ ಉದಯೋನ್ಮುಖ ಶಕ್ತಿಯಾಗಿ ಮಾತ್ರವಲ್ಲದೆ, ಏಕತೆ, ಸೃಜನಶೀಲತೆ ಮತ್ತು ಸಂಪ್ರದಾಯದಲ್ಲಿ ಅಭಿವೃದ್ಧಿ ಹೊಂದುವ ನಾಗರಿಕತೆಯಾಗಿಯೂ ಭಾರತದ ಅನುಭವವನ್ನು ತಿಳಿದುಕೊಳ್ಳುವಂತೆ ಅವರು ಆಹ್ವಾನಿಸಿದರು.

ಭಾರತವು ಡಿಜಿಟಲ್ ನಾವೀನ್ಯತೆ, ನವೀಕರಿಸಬಹುದಾದ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನಗಳಲ್ಲಿ ವಿಶ್ವಕ್ಕಿಂತ ಮುಂದೆ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳುವ ಮೂಲಕ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. 89ನೇ ಐಇಸಿ ವಾರ್ಷಿಕ ಸಭೆಯ ಚರ್ಚೆಗಳು, ಒಳನೋಟಗಳು ಮತ್ತು ಸಹಯೋಗಗಳು ಎಲೆಕ್ಟ್ರೋಟೆಕ್ನಿಕಲ್ ಪ್ರಮಾಣೀಕರಣ ಮತ್ತು ಸುಸ್ಥಿರ ನಾವೀನ್ಯತೆ ಕುರಿತು ಜಾಗತಿಕ ಚರ್ಚೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

*****


(Release ID: 2167030) Visitor Counter : 2