ರೈಲ್ವೇ ಸಚಿವಾಲಯ 
                
                
                
                
                
                    
                    
                        3 ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು 4 ಪ್ಯಾಸೆಂಜರ್ ರೈಲುಗಳು ಸೇರಿದಂತೆ ಬಿಹಾರಕ್ಕೆ 7 ಹೊಸ ರೈಲುಗಳ ಸಮರ್ಪಣೆ
                    
                    
                        
ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿದರು; ದೇಶಾದ್ಯಂತ ಒಟ್ಟು ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳು 30ಕ್ಕೆ ಏರಿಕೆಯಾಗಿದ್ದು, ಈ ಪೈಕಿ 26 ರೈಲುಗಳ ಸೇವೆಗಳು ಬಿಹಾರದಲ್ಲಿ ಪ್ರಾರಂಭವಾಗುತ್ತಿವೆ
ಪ್ರಯಾಣಿಕರ ರೈಲುಗಳು ಬಿಹಾರದಲ್ಲಿ ಸಂಪರ್ಕವನ್ನು ಹೆಚ್ಚಿಸಲಿವೆ; ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಬಿಹಾರವನ್ನು ತೆಲಂಗಾಣ, ರಾಜಸ್ಥಾನ ಮತ್ತು ದೆಹಲಿಯೊಂದಿಗೆ ಸಂಪರ್ಕಿಸಲಿದೆ
ಬಿಹಾರದ ವಾರ್ಷಿಕ ರೈಲ್ವೆ ಬಜೆಟ್ 2014ಕ್ಕಿಂತ ಮೊದಲು 1,000 ಕೋಟಿ ರೂ.ಗಳಿಂದ 2025 ರಲ್ಲಿ 10,000 ಕೋಟಿ ರೂ.ಗೆ ಏರಿದೆ, ಸುಮಾರು 1 ಲಕ್ಷ ಕೋಟಿ ರೂ.ಗಳ ಯೋಜನೆಗಳು ಪ್ರಗತಿಯಲ್ಲಿವೆ: ಅಶ್ವಿನಿ ವೈಷ್ಣವ್
2014ರಿಂದ ಬಿಹಾರದಲ್ಲಿ ಹೊಸ ಮಾರ್ಗಗಳು, ಗೇಜ್ ಪರಿವರ್ತನೆ, ಡಬ್ಲಿಂಗ್ ಅಥವಾ 3 ಮತ್ತು 4ನೇ ಮಾರ್ಗಗಳ ಸೇರ್ಪಡೆ ಮುಂತಾದ 21 ಪ್ರಮುಖ ರೈಲ್ವೆ ಯೋಜನೆಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿವೆ, ಇದರಲ್ಲಿ ಪಾಟ್ನಾ ಮತ್ತು ಮುಂಗೇರ್ ರೈಲು ಮತ್ತು ರಸ್ತೆ ಸೇತುವೆಗಳು ಸೇರಿವೆ
                    
                
                
                    Posted On:
                29 SEP 2025 2:32PM by PIB Bengaluru
                
                
                
                
                
                
                ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರೊಂದಿಗೆ ಇಂದು ಬಿಹಾರದಲ್ಲಿ ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಒಟ್ಟು ಏಳು ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಈ ಹೊಸ ರೈಲುಗಳು ಬಿಹಾರದ ಸಂಪರ್ಕಕ್ಕೆ ಹೊಸ ಆಯಾಮವನ್ನು ಒದಗಿಸುತ್ತವೆ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣ ಸೇವೆಗಳನ್ನು ಒದಗಿಸುತ್ತವೆ. ಈ ಹೊಸ ರೈಲುಗಳ ಚಾಲನೆಯೊಂದಗೆ, ಬಿಹಾರವು ಈಗ ದೇಶಾದ್ಯಂತ ಸಂಚರಿಸುವ ಒಟ್ಟು 30 ಅಮೃತ್ ಭಾರತ್ ರೈಲು ಸೇವೆಗಳಲ್ಲಿ 26 ಅಮೃತ್ ಭಾರತ್  ರೈಲುಗಳನ್ನು ಹೊಂದಿದಂತಾಗಿದೆ.
ಮುಜಾಫರ್‌ಪುರ-ಚರ್ಲಪಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಮುಜಾಫರ್‌ಪುರದಿಂದ ದಕ್ಷಿಣ ಭಾರತಕ್ಕೆ ಮೊದಲ ಅಮೃತ್ ಭಾರತ್ ರೈಲು ಸೇವೆಯಾಗಿದೆ. ಹಾಗೆಯೇ ಛಪ್ರಾ-ಆನಂದ್ ವಿಹಾರ್ ಅಮೃತ್ ಭಾರತ್  ಎಕ್ಸ್‌ಪ್ರೆಸ್ ಬಿಹಾರದಿಂದ ದೆಹಲಿಗೆ ಆರನೇ ಅಮೃತ್ ಭಾರತ್ ರೈಲು ಆಗಿದೆ.
ಈ ಅತ್ಯಾಧುನಿಕ ಸ್ವದೇಶಿ ರೈಲು ಪ್ರಯಾಣಿಕರಿಗೆ ವೇಗದ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುತ್ತದೆ. ಈ ರೈಲುಗಳು ದೇಶದ ವಿವಿಧ ಭಾಗಗಳೊಂದಿಗೆ, ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಭಾರತದೊಂದಿಗೆ ಬಿಹಾರದ ಸಂಪರ್ಕವನ್ನು ಬಲಪಡಿಸುತ್ತವೆ. ಇವುಗಳ ಕಾರ್ಯಾಚರಣೆಗಳು ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತವೆ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ.
ಈ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕೇಂದ್ರ ಸಚಿವರು, ಬಿಹಾರದ ಅಭಿವೃದ್ಧಿಯ ವೇಗವು ಹೇಗಿದೆಯೆಂದರೆ, ಮುಂದಿನ ದಿನಗಳಲ್ಲಿ ರಾಜ್ಯವು ಸುವರ್ಣ ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಈ ರೈಲುಗಳು ಬಿಹಾರದಲ್ಲಿ ಹೊಸ ಮಟ್ಟದ ಸಂಪರ್ಕವನ್ನು ಒದಗಿಸುತ್ತವೆ, ಪ್ರಯಾಣಿಕರಿಗೆ ಅನುಕೂಲವನ್ನು ಹೆಚ್ಚಿಸುತ್ತವೆ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ. 2014 ರಲ್ಲಿ ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದ, ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಿ ರೈಲ್ವೆಗೆ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಹಿಂದೆ, 2014 ಕ್ಕಿಂತ ಮೊದಲು ಬಿಹಾರದ ವಾರ್ಷಿಕ ರೈಲ್ವೆ ಬಜೆಟ್ ಕೇವಲ 1,000 ಕೋಟಿ ರೂ.ಗಳಷ್ಟಿತ್ತು, ಆದರೆ ಇಂದು ಅದು ಸುಮಾರು 10,000 ಕೋಟಿ ರೂ.ಗಳಷ್ಟಿದೆ ಎಂದು ಸಚಿವರು ಹೇಳಿದರು. ಪ್ರಧಾನಿ ಮೋದಿ ಅವರು ಬಿಹಾರದ ಅಭಿವೃದ್ಧಿಗೆ ಮಹತ್ವದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದ್ದಾರೆ, ಬಿಹಾರದಲ್ಲಿ ಸುಮಾರು 1 ಲಕ್ಷ ಕೋಟಿ ರೂ.ಗಳ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು. ರಾಜ್ಯದ ರೈಲ್ವೆ ಜಾಲವನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸಲಾಗಿದೆ ಮತ್ತು 1,899 ಕಿ.ಮೀ ಹೊಸ ಟ್ರ್ಯಾಕ್ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿದ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲು ದೇಶದ ರೈಲ್ವೆ ವ್ಯವಸ್ಥೆಯಲ್ಲಿ ಆಧುನೀಕರಣದ ಸಂಕೇತವಾಗಿದೆ. ಈ ರೈಲು ಕೇವಲ ವೇಗದ ಮತ್ತು ಕೈಗೆಟುಕುವ ಪ್ರಯಾಣದ ಆಯ್ಕೆ ಮಾತ್ರವಲ್ಲದೆ, ಇದು ಅರೆ-ಸ್ವಯಂಚಾಲಿತ ಕಪ್ಲರ್‌ಗಳು, ಅಗ್ನಿ  ಪತ್ತೆ ವ್ಯವಸ್ಥೆಗಳು, ಸೀಲ್ಡ್ ಗ್ಯಾಂಗ್ ವೇಗಳು ಮತ್ತು ಟಾಕ್-ಬ್ಯಾಕ್ ಘಟಕಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಮೊದಲ ಬಾರಿಗೆ, ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಇಂತಹ ಸುಧಾರಿತ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ.
ಇದು "ವಿಕಸಿತ ಬಿಹಾರದಿಂದ ವಿಕಸಿತ ಭಾರತ" ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಕ್ಷಿಪ್ತ ವಿವರಗಳು:
1. ದರ್ಭಂಗಾ - ಅಜ್ಮೀರ್ (ಮದಾರ) ಅಮೃತ್ ಭಾರತ್ ಎಕ್ಸ್‌ಪ್ರೆಸ್
2. ಮುಜಾಫರ್ ಪುರ್ - ಹೈದರಾಬಾದ್ (ಚಾರ್ಲಪಲ್ಲಿ) ಅಮೃತ್ ಭಾರತ್ ಎಕ್ಸ್‌ಪ್ರೆಸ್
3. ಚಪ್ರಾ - ದೆಹಲಿ (ಆನಂದ್ ವಿಹಾರ್ ಟರ್ಮಿನಲ್) ಅಮೃತ್ ಭಾರತ್ ಎಕ್ಸ್‌ಪ್ರೆಸ್
ರೈಲು ಸೇವೆಗಳಲ್ಲಿ ಸಾಮಾನ್ಯ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ನಾಲ್ಕು ಪ್ರಯಾಣಿಕ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಪ್ರಯಾಣಿಕ ರೈಲುಗಳ ಸಂಕ್ಷಿಪ್ತ ವಿವರಗಳು:
1. ಪಾಟ್ನಾ - ಬಕ್ಸಾರ್ ಪ್ಯಾಸೆಂಜರ್
2. ಝಾಝಾ - ದಾನಾಪುರ್ ಪ್ಯಾಸೆಂಜರ್
3. ನವಾಡಾ - ಪಾಟ್ನಾ ಪ್ಯಾಸೆಂಜರ್
4. ಪಾಟ್ನಾ - ಇಸ್ಲಾಂಪುರ ಪ್ಯಾಸೆಂಜರ್
ರಾಜ್ಯದಲ್ಲಿ ಪೂರ್ಣಗೊಂಡ ಕೆಲವು ಪ್ರಮುಖ ರೈಲ್ವೆ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, 28 ಕಿ.ಮೀ ಉದ್ದದ ಪಾಟ್ನಾ ರೈಲು ಮತ್ತು ರಸ್ತೆ ಸೇತುವೆ, 15 ಕಿ.ಮೀ ಮುಂಗೇರ್ ರೈಲು ಮತ್ತು ರಸ್ತೆ ಸೇತುವೆ ಮತ್ತು ಬಹುನಿರೀಕ್ಷಿತ ಕೋಸಿ ಸೇತುವೆ ಎಲ್ಲವೂ ಪೂರ್ಣಗೊಂಡಿವೆ ಎಂದು ಹೇಳಿದರು.
2014 ರಿಂದ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ಪ್ರಮುಖ ಯೋಜನೆಗಳು
	- ಪಾಟ್ನಾ ರೈಲು ಮತ್ತು ರಸ್ತೆ ಸೇತುವೆ
 
	- ಮುಂಗೇರ್ ರೈಲು ಮತ್ತು ರಸ್ತೆ ಸೇತುವೆ
 
	- ಕೋಸಿ ಸೇತುವೆ 
 
	- ದನಿಯಾವಾನ್-ಬಿಹಾರ್ ಶರೀಫ್ ಹೊಸ ಮಾರ್ಗ
 
	- ಚಂದನ್-ಬಂಕಾ ಹೊಸ ಮಾರ್ಗ
 
	- ರಾಂಪುರ್ಹಟ್-ಮಂದಾರ್ಹಿಲ್ ಹೊಸ ಮಾರ್ಗ
 
	- ಮಹಾರಾಜ್ ಗಂಜ್-ಮಸ್ರಾಖ್ ಹೊಸ ಮಾರ್ಗ
 
	- ರಾಜ್‌ಗೀರ-ತಿಲೈಯ ಮತ್ತು ನಟೇಸರ್-ಇಸ್ಲಾಂಪುರ್ ಹೊಸ ಮಾರ್ಗ
 
	- ಮಾನ್ಸಿ-ಸಹರ್ಸಾ-ಪೂರ್ಣಿಯಾ ಗೇಜ್ ಪರಿವರ್ತನೆ
 
	- ಜಯನಗರ-ನರ್ಕಟಿಯಾಗಂಜ್ ಗೇಜ್ ಪರಿವರ್ತನೆ
 
	- ಕಪ್ತಾನ್ ಗಂಜ್-ಛಪ್ರಾ ಗೇಜ್ ಪರಿವರ್ತನೆ
 
	- ಸಕ್ರಿ-ನಿರ್ಮಾಲಿ ಮತ್ತು ಸಹಾರಸಾ-ಫೋರ್ಬ್ಸ್ ಗಂಜ್ ಗೇಜ್ ಪರಿವರ್ತನೆ
 
	- ಮಾನ್ಸಿ-ಸಹರ್ಸಾ-ಸಹರಸಾ-ಪುರ್ನಿಯಾ ಮತ್ತು ಬನ್ಮಾಂಖಿ-ಬಿಹಾರಿಗಂಜ್ ಗೇಜ್ ಪರಿವರ್ತನೆ
 
	- ಸಾಹಿಬ್ ಗಂಜ್-ಪಿರ್‌ಪೈತಿ ಡಬ್ಲಿಂಗ್
 
	- ಮಹೇಶ್ಕುಂತ್-ಥಾನಭಪುರ ಡಬ್ಲಿಂಗ್
 
	- ಹಾಜಿಪುರ-ರಾಮದಯಾಳು ನಗರ ಡಬ್ಲಿಂಗ್
 
	- ಪಿರ್‌ಪೈತಿ-ಭಾಗಲ್ಪುರ್ ಡಬ್ಲಿಂಗ್
 
	- ಭಖ್ತಿಯಾರ್ಪುರ್-ಬಾರ್ಹ್ ಡಬ್ಲಿಂಗ್
 
	- ಕಿಯುಲ್-ಗಯಾ ಡಬಲ್
 
	- ಹಾಜಿಪುರ್-ಬಚ್ವಾರಾ ಡಬ್ಲಿಂಗ್
 
	- ದರ್ಭಂಗಾ ಬೈಪಾಸ್ .
 
ಹೆಚ್ಚುವರಿಯಾಗಿ, ಅರಾರಿಯಾ-ಗಲ್ಗಲ್ಹಿಯಾ (ಠಾಕೂರ್ ಗಂಜ್) ಹೊಸ ಮಾರ್ಗವು ಪೂರ್ಣಗೊಂಡಿದೆ ಮತ್ತು ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.
ಅನುಷ್ಠಾನದಲ್ಲಿರುವ ಪ್ರಮುಖ ಯೋಜನೆಗಳು
ಹೊಸ ಮಾರ್ಗಗಳು: ಸಕ್ರಿ-ಹಸನ್ಪುರ್, ಖಗಾರಿಯಾ-ಕುಶೇಶ್ವರಸ್ಥಾನ, ಕುರ್ಸೆಲಾ-ಬಿಹಾರಿಗಂಜ್, ತಿಲೈಯಾ-ಕೊಡೆರ್ಮಾ, ಹಾಜಿಪುರ್-ಸುಗೌಲಿ, ಸೀತಾಮರ್ಹಿ-ಶಿಯೋಹರ್, ಛಪ್ರಾ-ಮುಜಾಫರ್ಪುರ್, ಅರಾರಿಯಾ-ಸುಪೌಲ್, ವಿಕ್ರಮಸಿಂಗ್ಲಾ-ಕಟಾರಿಯಹ್ (ಗಂಗಾ ಸೇತುವೆ ಸೇರಿದಂತೆ), ಝಾ-ಬಾಟಿ, ಪಿರ್‌ಪೈತಿ-ಜಸಿದಿಹ್, ಚಿಟೌಟಿನಿ-ತುಮ್ಕುಯಿ ರಸ್ತೆ,  ಜಲಾಲ್‌ಗಾರ್ನಿ-ಕಿಶನ್‌ಗಂಜ್, ಜೋಗ್ಬಾನಿ-ಬಿರಾಟ್‌ನಗರ್, ಔರಂಗಾಬಾದ್ ಟರ್ಮಿನಲ್-ಅನುಗ್ರಹ್ ನಾರಾಯಣ್ ರಸ್ತೆ, ಜಯನಗರ-ಬಿಜಲ್ಪುರ, ಧನಾಬಾದ-ಸೊಂಗರ್, ಮುಂತಾದವು.
3ನೇ/4ನೇ ಜೋಡಿ ಮಾರ್ಗದ ಕಾಮಗಾರಿಗಳು: ಸಮಸ್ತಿಪುರ-ದರ್ಭಂಗಾ, ಸಗೌಲಿ-ವಾಲ್ಮೀಕಿನಗರ, ಮುಜಾಫರ್ಪುರ್-ಸಗೌಲಿ, ನರ್ಕಟಿಯಾಗಂಜ್-ದರ್ಭಂಗಾ-ಸೀತಾಮರ್ಹಿ-ಮುಜಾಫರ್‌ಪುರ್ , ಛಾಪ್ರಾ-ಬಲ್ಲಿಯಾ, ಕತಿಹಾರ್-ಕುಮೇದ್‌ಪುರ, ಬರೌನಿ-ಬಚ್ವಾರ (3 ಮತ್ತು 4ನೇ ಮಾರ್ಗ), ಸೋನ್‌ನಗರ್-ಆಂಡಾಲ್ (3 ಮತ್ತು 4ನೇ ಮಾರ್ಗ), ಪುನರಾಖ್-ಭಕ್ತಿಯಾರ್‌ಪುರ  (3 ಮತ್ತು 4ನೇ ಮಾರ್ಗ), ಇತ್ಯಾದಿ.
ಇತರ ಹಲವಾರು ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಮತ್ತು ಹೆಚ್ಚುವರಿ ಯೋಜನೆಗಳ ಯೋಜನೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದರು. ಪ್ರಸ್ತುತ, 13 ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲುಗಳು ಅಂದರೆ 26 ಸೇವೆಗಳು ಬಿಹಾರದಲ್ಲಿ ಕಾರ್ಯಾಚರಣೆಗೊಳ್ಳುತ್ತಿವೆ, 25 ಜಿಲ್ಲೆಗಳಲ್ಲಿ 42 ನಿಲ್ದಾಣಗಳನ್ನು ಇವು ಒಳಗೊಂಡಿವೆ. ಇದಲ್ಲದೆ, 10 ಜೋಡಿ ವಂದೇ ಭಾರತ್ ರೈಲುಗಳು (20 ಸೇವೆಗಳು) 28 ಜಿಲ್ಲೆಗಳನ್ನು ಒಳಗೊಂಡಿವೆ. ರಾಜ್ಯವು ನಮೋ ಭಾರತ್ ಕ್ಷಿಪ್ರ ರೈಲು ಸೇವೆಗಳನ್ನು ಸಹ ಹೊಂದಿದೆ.
ಬಿಹಾರದಿಂದ ಹೊರಡುವ ಈ ಹೊಸ ರೈಲುಗಳು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತವೆ, ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ. ಉತ್ತಮ ಸಂಪರ್ಕವನ್ನು ಒದಗಿಸುವುದು ಮಾತ್ರವಲ್ಲದೆ ಪ್ರಯಾಣಿಕರಿಗೆ ಸುರಕ್ಷಿತ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುವುದು ಈ ರೈಲುಗಳ ಉದ್ದೇಶವಾಗಿದೆ.
 
*****
                
                
                
                
                
                (Release ID: 2172735)
                Visitor Counter : 18