ಸಂಪುಟ
ಅಯೋಧ್ಯಾ ಧಾಮದ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕುರಿತಾಗಿ ಸಂಪುಟದ ನಿರ್ಣಯ
Posted On:
24 JAN 2024 9:41PM by PIB Bengaluru
ಅಯೋಧ್ಯಾ ಧಾಮದಲ್ಲಿರುವ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಕುರಿತಾಗಿ ಕೇಂದ್ರ ಸಚಿವ ಸಂಪುಟ ಇಂದು ಒಂದು ನಿರ್ಣಯವನ್ನು ಅಂಗೀಕರಿಸಿದೆ.
ಕೇಂದ್ರ ಸಚಿವ ಸಂಪುಟ ನಿರ್ಣಯದ ಸಾರಾಂಶ ಹೀಗಿದೆ:
ಮಾನ್ಯ ಪ್ರಧಾನಮಂತ್ರಿಯವರೇ, ಮೊದಲಿಗೆ, ನಿಮ್ಮ ನೇತೃತ್ವದ ಸಚಿವ ಸಂಪುಟದ ಸದಸ್ಯರಾದ ನಾವು, ರಾಮ ಲಲ್ಲಾ ವಿಗ್ರಹದ 'ಪ್ರಾಣ ಪ್ರತಿಷ್ಠೆ' (ಪ್ರತಿಷ್ಠಾಪನೆ) ಗಾಗಿ ನಿಮಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಭಾರತೀಯ ನಾಗರಿಕತೆಯು ಕಳೆದ ಐದು ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ಶತಮಾನಗಳಷ್ಟು ಹಳೆಯ ಕನಸನ್ನು ನೀವು ಇಂದು ನನಸಾಗಿಸಿದ್ದೀರಿ.
ಪ್ರಧಾನಮಂತ್ರಿಯವರೇ, ಇಂದಿನ ಸಚಿವ ಸಂಪುಟ ಸಭೆಯು ಐತಿಹಾಸಿಕವಾದುದ್ದಾಗಿದೆ.
ಐತಿಹಾಸಿಕ ನಿರ್ಧಾರಗಳನ್ನು ಈ ಹಿಂದೆಯೂ ಹಲವಾರು ಬಾರಿ ತೆಗೆದುಕೊಳ್ಳಲಾಗಿದೆ. ಆದರೆ ಈ ಸಚಿವ ಸಂಪುಟ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಾಗಿನಿಂದ, ಮತ್ತು ಬ್ರಿಟಿಷ್ ಕಾಲದಲ್ಲಿ ವೈಸ್‌ರಾಯ್ ಅವರ ಕಾರ್ಯಕಾರಿ ಮಂಡಳಿಯ ಅವಧಿಯನ್ನು ನಾವು ಲೆಕ್ಕಕ್ಕೆ ತೆಗೆದುಕೊಂಡರೂ, ಇಂತಹ ಸಂದರ್ಭ ಎಂದಿಗೂ ಉದ್ಬವಿಸಿಲ್ಲ.
ಏಕೆಂದರೆ ಜನವರಿ 22, 2024 ರಂದು ನಿಮ್ಮ ಮೂಲಕ ಸಾಧಿಸಲ್ಪಟ್ಟದ್ದು ಐತಿಹಾಸಿಕವಾಗಿ ವಿಶಿಷ್ಟವಾಗಿದೆ.
ಶತಮಾನಗಳ ನಂತರ ಇಂತಹ ಕ್ಷಣ ಬಂದಿರುವುದರಿಂದ ತುಂಬಾ ವಿಶಿಷ್ಟವಾಗಿದೆ. ನಮ್ಮ ದೇಶದ ದೇಹವು 1947 ರಲ್ಲಿ ಸ್ವಾತಂತ್ರ್ಯವನ್ನು ಪಡೆದರೆ ಆತ್ಮವು ಈಗ ಪ್ರತಿಷ್ಠಾಪಿತವಾಗಿದೆ ಎಂದು ನಾವು ಹೇಳಬಹುದು. ಇದು ಎಲ್ಲರಿಗೂ ಪವಿತ್ರ ಆಧ್ಯಾತ್ಮಿಕ ಸಂತೋಷವನ್ನು ನೀಡಿದೆ.
ನಿಮ್ಮ ಭಾಷಣದಲ್ಲಿ, ಶ್ರೀರಾಮನು ಭಾರತದ ಪ್ರಭಾವ ಮತ್ತು ಹರಿವು ಎರಡೂ ಆಗಿದ್ದಾನೆ ಎಂದು ನೀವು ಹೇಳಿದ್ದೀರಿ. ಆತನೇ ನೀತಿ ಮತ್ತು ವಿಧಿ ಎಂದು ಹೇಳಿದ್ದೀರಿ.
ಇಂದು, ರಾಜಕೀಯ ದೃಷ್ಟಿಕೋನದಿಂದಲ್ಲದೆ, ಆಧ್ಯಾತ್ಮಿಕ ದೃಷ್ಟಿಕೋನದಿಂದ ಹೇಳಬಹುದಾದರೆ, ವಿಧಿಯೇ ನಿಮ್ಮನ್ನು ಭಾರತದ ಶಾಶ್ವತ ಹರಿವು ಮತ್ತು ಜಾಗತಿಕ ಪ್ರಭಾವದ ಮೂಲಾಧಾರವಾದ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮನ ಪ್ರತಿಷ್ಠಾಪನೆಗೆ ಆಯ್ಕೆ ಮಾಡಿದೆ.
ನಿಜಕ್ಕೂ, ಶ್ರೀರಾಮನು ಭಾರತದ ವಿಧಿ, ಮತ್ತು ಈಗ ಆ ವಿಧಿಯೊಂದಿಗೆ ನಿಜವಾದ ಐಕ್ಯತೆಯಾಗಿದೆ.
ವಾಸ್ತವದಲ್ಲಿ, ಈ ಸಂದರ್ಭವನ್ನು ಜೀವಿತಾವಧಿಯಲ್ಲಿ ಒಂದು ಎಂದಲ್ಲದೆ, ಅನೇಕ ಜೀವಿತಾವಧಿಗಳಲ್ಲಿ ಒಂದು ಎಂದು ಕರೆಯಬಹುದೆಂದು ಸಚಿವ ಸಂಪುಟದ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಈ ಕ್ಷಣದಲ್ಲಿ ನಾವೆಲ್ಲರೂ ದೇಶದ ಅತ್ಯುನ್ನತ ಸಮಿತಿಯಾದ ಸಚಿವ ಸಂಪುಟದಲ್ಲಿ ಉಪಸ್ಥಿತರಿರುವುದು ನಮ್ಮೆಲ್ಲರ ಅದೃಷ್ಟ.
ಪ್ರಧಾನಿಯವರೇ, ನೀವು ಈ ರಾಷ್ಟ್ರದ ನೈತಿಕತೆಯನ್ನು ಹೆಚ್ಚಿಸಿದ್ದೀರಿ. ನಿಮ್ಮ ಕಾರ್ಯಗಳ ಮೂಲಕ ಅದರ ಸಾಂಸ್ಕೃತಿಕ ಆತ್ಮ ವಿಶ್ವಾಸವನ್ನು ಬಲಪಡಿಸಿದ್ದೀರಿ.
ಪವಿತ್ರ ಪ್ರತಿಷ್ಠಾಪನಾ ಸಮಾರಂಭದಲ್ಲಿ ದೇಶಾದ್ಯಂತ ನಾವು ಕಂಡ ಜನರ ಭಾವನಾತ್ಮಕ ಅಲೆಯು ನಾವು ಹಿಂದೆಂದೂ ನೋಡಿರದ ಸಂಗತಿಯಾಗಿದೆ.
ಆದಾಗ್ಯೂ ಈ ಹಿಂದೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಜನರಲ್ಲಿ ಏಕತೆಯ ಪ್ರದರ್ಶನವನ್ನು ಸಾಮೂಹಿಕ ಚಳುವಳಿಯಾಗಿ ನಾವು ನೋಡಿದ್ದೇವೆ, ಆದರೆ ಆ ಏಕತೆಯು ಸರ್ವಾಧಿಕಾರದ ವಿರುದ್ಧ ಪ್ರತಿರೋಧ ಚಳುವಳಿಯಾಗಿತ್ತು.
ಇಂದು ಶ್ರೀರಾಮನಿಗಾಗಿ ನಾವು ಕಂಡಿರುವ ಸಾಮೂಹಿಕ ಆಂದೋಲನವು ಹೊಸ ಯುಗದ ಉದಯಕ್ಕೆ ನಾಂದಿ ಹಾಡಿದೆ.
ಈ ದೇಶದ ಜನರು ಶತಮಾನಗಳಿಂದ ಇದಕ್ಕಾಗಿಯೇ ಕಾಯುತ್ತಿದ್ದರು. ಇಂದು, ಭವ್ಯವಾದ ರಾಮಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯೊಂದಿಗೆ ಹೊಸ ಯುಗವು ಪ್ರಾರಂಭವಾಗಿದೆ. ಇಂದು, ಇದು ಹೊಸ ನಿರೂಪಣೆಯನ್ನು ರೂಪಿಸುವ ಸಾಮೂಹಿಕ ಆಂದೋಲನವಾಗಿಯೂ ಮಾರ್ಪಟ್ಟಿದೆ.
ಮಾನ್ಯ ಪ್ರಧಾನಮಂತ್ರಿಯವರೇ, ಇಂತಹ ಮಹಾನ್ ಕಾರ್ಯಾಚರಣೆಯನ್ನು ಭಗವಂತನ ಆಶೀರ್ವಾದ ಇದ್ದವರು ಮಾತ್ರ ಸಾಧಿಸಲು ಸಾಧ್ಯ.
ಗೋಸ್ವಾಮಿ ತುಳಸಿದಾಸರು ಬರೆದಿರುವಂತೆ: ‘ಜಾ ಪರ ಕೃಪಾ ರಾಮ ಕೀ ಹೋಯಿ. ತಾ ಪರ ಕೃಪಾ ಕರೆ ಸಬ್ ಕೋಯಿ...’ ಅಂದರೆ, ಶ್ರೀರಾಮನ ಆಶೀರ್ವಾದವನ್ನು ಪಡೆದವನು ಎಲ್ಲ ದೇವಾನುದೇವತೆಗಳ ಆಶೀರ್ವಾದವನ್ನು ಪಡೆಯುತ್ತಾನೆ.
ಪ್ರಧಾನಮಂತ್ರಿಯವರೇ, ಶ್ರೀ ರಾಮ ಜನ್ಮಭೂಮಿ ಚಳುವಳಿಯು ಸ್ವತಂತ್ರ ಭಾರತದಲ್ಲಿ ರಾಷ್ಟ್ರದಾದ್ಯಂತ ಜನರು ಒಗ್ಗಟ್ಟಿನಿಂದ ಮಾಡಿದ ಏಕೈಕ ಚಳುವಳಿಯಾಗಿತ್ತು. ಇದು ಕೋಟ್ಯಂತರ ಭಾರತೀಯರ ದಶಕಗಳ ನಿರೀಕ್ಷೆ ಮತ್ತು ಭಾವನೆಗಳನ್ನು ತನ್ನೊಂದಿಗೆ ಬೆಸೆದಿತ್ತು.
ನೀವು 11 ದಿನಗಳ ಕಾಲ ಆಚರಣೆಯನ್ನು ಆಚರಿಸಿ, ಭಾರತದಾದ್ಯಂತ ಭಗವಾನ್ ಶ್ರೀ ರಾಮನಿಗೆ ಸಂಬಂಧಿಸಿದ ಪವಿತ್ರ ಸ್ಥಳಗಳಲ್ಲಿ ಭಕ್ತಿ ಮತ್ತು ತಪಸ್ಸಿನೊಂದಿಗೆ ರಾಷ್ಟ್ರೀಯ ಏಕತೆಯ ಉತ್ಸಾಹಕ್ಕೆ ಹೊಸ ಶಕ್ತಿಯನ್ನು ತುಂಬಿದ್ದೀರಿ. ಆದ್ದರಿಂದ, ನಾವು ಸಚಿವ ಸಂಪುಟದ ಸದಸ್ಯರಾಗಿ ಮಾತ್ರವಲ್ಲದೆ, ಸಾಮಾನ್ಯ ನಾಗರಿಕರಾಗಿಯೂ ನಿಮ್ಮನ್ನು ಅಭಿನಂದಿಸುತ್ತೇವೆ.
ಮಾನ್ಯ ಪ್ರಧಾನಮಂತ್ರಿಯವರೇ, ಜನರಿಂದ ಪಡೆದ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ಪರಿಗಣಿಸಿದರೆ, ನೀವು ನಿಜಕ್ಕೂ ಜನನಾಯಕರು. ಆದರೆ ಈ ಹೊಸ ಯುಗದ ಆರಂಭದ ನಂತರ, ನೀವು ಹೊಸ ಯುಗದ ಮುನ್ನುಡಿಯಾಗಿಯೂ ಹೊರಹೊಮ್ಮಿದ್ದೀರಿ.
ನಿಮಗೆ ನಮ್ಮ ಅನಂತಾನಂತ ನಮಸ್ಕಾರಗಳು. ನಮ್ಮ ಸಮಾಜ ಮುಂದುವರಿಯಲಿ, ನಮ್ಮ ದೇಶ ಮುಂದುವರಿಯಲಿ ಮತ್ತು ನಿಮ್ಮ ನಾಯಕತ್ವದಲ್ಲಿ ಭಾರತವು ಉನ್ನತ ಮಟ್ಟಕ್ಕೆ ಏರಲಿ ಎಂದು ನಮ್ಮ ಶುಭಾಶಯಗಳು.
ಈ ದೇವಾಲಯವನ್ನು ಸಾವಿರಾರು ವರ್ಷಗಳ ಕಾಲ ಬಾಳುವಂತೆ ನಿರ್ಮಿಸಲಾಗಿರುವುದರಿಂದ ಮತ್ತು ನೀವು ನಿಮ್ಮ ಭಾಷಣದಲ್ಲಿ ಹೇಳಿದಂತೆ: “ಜನವರಿ 22ರ ಸೂರ್ಯ ದೈವಿಕ ಕಾಂತಿಯಿಂದ ಉದಯಿಸಿದ್ದಾನೆ. ಇದು ಕ್ಯಾಲೆಂಡರ್‌ನಲ್ಲಿ ಬರೆಯಲಾದ ದಿನಾಂಕ ಮಾತ್ರವಲ್ಲದೆ, ಹೊಸ ಯುಗದ ಆರಂಭ. ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ ಹೊಂದುತ್ತಿರುವ ರಾಷ್ಟ್ರ, ಹಿಂದೆ ಆದ ಪ್ರತಿಯೊಂದು ಗಾಯದಿಂದ ಪಾಠ ಕಲಿತು, ಧೈರ್ಯವನ್ನು ಪಡೆಯುವ ರಾಷ್ಟ್ರ, ಈಗ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ಸಾವಿರ ವರ್ಷಗಳ ನಂತರವೂ ಜನರು ಈ ದಿನಾಂಕವನ್ನು, ಈ ಕ್ಷಣವನ್ನು ನೆನಪಿಸಿಕೊಂಡು ಚರ್ಚಿಸುತ್ತಾರೆ. ಇದು ನಮ್ಮ ಜೀವಿತಾವಧಿಯ ಕ್ಷಣವಾಗಿದೆ, ನಾವು ಇದರಲ್ಲಿ ಜೀವಿಸುತ್ತಿದ್ದೇವೆ, ಅದನ್ನು ನಮ್ಮ ಸ್ವಂತ ಕಣ್ಣುಗಳಿಂದ ವೀಕ್ಷಿಸುತ್ತಿರುವುದು ಭಗವಾನ್ ರಾಮನ ಎಂತಹ ದೊಡ್ಡ ಆಶೀರ್ವಾದ. ಇಂದು, ದಿನಗಳು, ದಿಕ್ಕುಗಳು, ದಿಗಂತಗಳು - ಎಲ್ಲವೂ ದೈವತ್ವದಿಂದ ತುಂಬಿವೆ. ಇದು ಸಾಮಾನ್ಯ ಸಮಯವಲ್ಲ. ಇವು ಕಾಲಚಕ್ರದ ಮೇಲೆ ಶಾಶ್ವತ ಶಾಯಿಯಿಂದ ಕೆತ್ತಲ್ಪಟ್ಟ ಅಳಿಸಲಾಗದ ನೆನಪಿನ ರೇಖೆಗಳು. ”
ಆದ್ದರಿಂದ, ಇಂದಿನ ಸಚಿವ ಸಂಪುಟವನ್ನು ಸಹಸ್ರಮಾನದ ಸಚಿವ ಸಂಪುಟ ಎಂದು ಕರೆದರೆ, ಅದು ಉತ್ಪ್ರೇಕ್ಷೆಯಲ್ಲ.
ಇದಕ್ಕಾಗಿ, ನಾವೆಲ್ಲರೂ ನಿಮ್ಮನ್ನು ಅಭಿನಂದಿಸುತ್ತೇವೆ ಮತ್ತು ಪರಸ್ಪರ ನಮಗೆ ನಾವೇ ಅಭಿನಂದನೆಗಳನ್ನು ಸಲ್ಲಿಸಿಕೊಳ್ಳುತ್ತೇವೆ.
*****
(Release ID: 2173135)
Visitor Counter : 4
Read this release in:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam