ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಉನ್ನತ ಮಟ್ಟದ ಸಭೆಯಲ್ಲಿ ಕೃಷಿ ಕ್ಷೇತ್ರದ ಪ್ರಗತಿಯನ್ನು ಪರಿಶೀಲಿಸಿದರು
ಮುಂಗಾರು ಬಿತ್ತನೆ ಪ್ರದೇಶವು 6.51 ಲಕ್ಷ ಹೆಕ್ಟೇರ್ ಗಳಷ್ಟು ಹೆಚ್ಚಾಗಿದೆ; ಒಟ್ಟು ವ್ಯಾಪ್ತಿ 1,121.46 ಲಕ್ಷ ಹೆಕ್ಟೇರ್ ಗಳನ್ನು ತಲುಪಿದೆ
ಅಕ್ಕಿ ಮತ್ತು ಗೋಧಿ ದಾಸ್ತಾನು ಮಟ್ಟಗಳು ಬಫರ್ ಮಾನದಂಡಗಳಿಗಿಂತ ಹೆಚ್ಚಿವೆ
ದೇಶಾದ್ಯಂತ ಜಲಾಶಯಗಳ ಸಂಗ್ರಹಣಾ ಮಟ್ಟಗಳು ತೃಪ್ತಿದಾಯಕವಾಗಿದ್ದು, ಉತ್ತಮ ಇಳುವರಿಯ ಭರವಸೆ ಇದೆ
Posted On:
13 OCT 2025 3:48PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಕ್ಷೇತ್ರದ ಪ್ರಗತಿಯನ್ನು ಪರಿಶೀಲಿಸಲು ಇಂದು ಉನ್ನತ ಮಟ್ಟದ ಸಭೆ ನಡೆಸಿದರು. ಮುಂಗಾರು ಬೆಳೆ ಪರಿಸ್ಥಿತಿಗಳು, ಹಿಂಗಾರು ಬಿತ್ತನೆ ಸಿದ್ಧತೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಬೆಳೆ ಪರಿಸ್ಥಿತಿ, ಬೆಲೆ ಪ್ರವೃತ್ತಿಗಳು, ರಸಗೊಬ್ಬರ ಲಭ್ಯತೆ ಮತ್ತು ಜಲಾಶಯಗಳ ಸಂಗ್ರಹಣಾ ಮಟ್ಟಗಳನ್ನು ಸಭೆಯು ಸಮಗ್ರವಾಗಿ ಮೌಲ್ಯಮಾಪನ ಮಾಡಿತು. ಸಭೆಯಲ್ಲಿ ಕೇಂದ್ರ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಮುಂಗಾರು ಬೆಳೆಗಳ ಒಟ್ಟು ವಿಸ್ತೀರ್ಣ 6.51 ಲಕ್ಷ ಹೆಕ್ಟೇರ್ ಗಳಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 2024–25ರಲ್ಲಿ 1,114.95 ಲಕ್ಷ ಹೆಕ್ಟೇರ್ ಗಳಷ್ಟಿದ್ದ ಒಟ್ಟು ಬಿತ್ತನೆ ಪ್ರದೇಶವು 1,121.46 ಲಕ್ಷ ಹೆಕ್ಟೇರ್ ಗಳಷ್ಟಿದೆ. ಗೋಧಿ, ಭತ್ತ, ಜೋಳ, ಕಬ್ಬು ಮತ್ತು ದ್ವಿದಳ ಧಾನ್ಯಗಳಂತಹ ಪ್ರಮುಖ ಬೆಳೆಗಳ ಬಿತ್ತನೆ ಹಿಂದಿನ ವರ್ಷಕ್ಕಿಂತ ಹೆಚ್ಚಾಗಿರುವುದನ್ನು ಸಭೆ ಗಮನಿಸಿತು. ಉದ್ದಿನ ಕಾಳು ಕೃಷಿ ಪ್ರದೇಶವು 1.50 ಲಕ್ಷ ಹೆಕ್ಟೇರ್ ಗಳಷ್ಟು ಹೆಚ್ಚಾಗಿದೆ, 2024–25ರಲ್ಲಿದ್ದ 22.87 ಲಕ್ಷ ಹೆಕ್ಟೇರ್ ಗಳಿಂದ 2025–26ರಲ್ಲಿ 24.37 ಲಕ್ಷ ಹೆಕ್ಟೇರ್ ಗಳಿಗೆ ಏರಿದೆ ಎಂದು ಸಭೆಗೆ ತಿಳಿಸಲಾಯಿತು.

ಕೇಂದ್ರ ಸಚಿವರು ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಪರಿಶೀಲಿಸಿದರು. ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಶ್ರೀ ಚೌಹಾಣ್ ಅವರಿಗೆ, ಕೆಲವು ಪ್ರದೇಶಗಳಲ್ಲಿನ ಬೆಳೆಗಳು ಅತಿಯಾದ ಮಳೆಯಿಂದ ಹಾನಿಗೊಳಗಾಗಿದ್ದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಉತ್ತಮ ಮುಂಗಾರಿನಿಂದ ಬೆಳೆಗಳು ಪ್ರಯೋಜನ ಪಡೆದಿವೆ, ಇದರಿಂದಾಗಿ ಉತ್ತಮ ಬೆಳೆ ಬೆಳವಣಿಗೆ ಕಂಡುಬಂದಿದ್ದು, ಇದು ಹಿಂಗಾರು ಬಿತ್ತನೆ ಮತ್ತು ಒಟ್ಟಾರೆ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ತಿಳಿಸಲಾಯಿತು.

ಟೊಮೆಟೊ ಮತ್ತು ಈರುಳ್ಳಿ ಬಿತ್ತನೆ ಸರಾಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. 2024–25ರಲ್ಲಿ 3.62 ಲಕ್ಷ ಹೆಕ್ಟೇರ್ ಇದ್ದ ಈರುಳ್ಳಿ ಕೃಷಿ ಪ್ರದೇಶವು ಈಗ 3.91 ಲಕ್ಷ ಹೆಕ್ಟೇರ್ ಗೆ ಏರಿದೆ, ಆಲೂಗಡ್ಡೆ ಕೃಷಿ 0.35 ಲಕ್ಷ ಹೆಕ್ಟೇರ್ ನಿಂದ 0.43 ಲಕ್ಷ ಹೆಕ್ಟೇರ್ ಗೆ ವಿಸ್ತರಿಸಿದೆ. ಅದೇ ರೀತಿ, ಕಳೆದ ವರ್ಷ ಇದೇ ಅವಧಿಯಲ್ಲಿ 1.86 ಲಕ್ಷ ಹೆಕ್ಟೇರ್ ಇದ್ದ ಟೊಮೆಟೊ ಬಿತ್ತನೆಯು ಈ ವರ್ಷ 2.37 ಲಕ್ಷ ಹೆಕ್ಟೇರ್ ಗೆ ಹೆಚ್ಚಾಗಿದೆ. ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊ ಬಿತ್ತನೆ ನಿಗದಿತ ಗುರಿಗಳಿಗೆ ಅನುಗುಣವಾಗಿ ಉತ್ತಮವಾಗಿ ಪ್ರಗತಿ ಸಾಧಿಸಿದೆ ಎಂದು ಸಭೆಗೆ ತಿಳಿಸಲಾಯಿತು.
ಅಕ್ಕಿ ಮತ್ತು ಗೋಧಿಯ ಪ್ರಸ್ತುತ ದಾಸ್ತಾನು ಮಟ್ಟಗಳು ನಿಗದಿತ ಬಫರ್ ಮಾನದಂಡಗಳಿಗಿಂತ ಹೆಚ್ಚಿವೆ ಎಂದು ಅಧಿಕಾರಿಗಳು ಕೇಂದ್ರ ಕೃಷಿ ಸಚಿವರಿಗೆ ಮಾಹಿತಿ ನೀಡಿದರು, ಇದು ಸ್ಥಿರ ಪೂರೈಕೆ ಪರಿಸ್ಥಿತಿಯನ್ನು ಸೂಚಿಸುತ್ತದೆ.
ನೀರಿನ ಲಭ್ಯತೆಗೆ ಸಂಬಂಧಿಸಿದಂತೆ, ದೇಶಾದ್ಯಂತ ಜಲಾಶಯಗಳ ಸಂಗ್ರಹಣಾ ಮಟ್ಟವು ಕಳೆದ ವರ್ಷದ ಇದೇ ಅವಧಿಗೆ ಮತ್ತು ಕಳೆದ ದಶಕದ ಸರಾಸರಿಗೆ ಹೋಲಿಸಿದರೆ ಗಮನಾರ್ಹವಾಗಿ ಉತ್ತಮವಾಗಿದೆ ಎಂದು ಶ್ರೀ ಚೌಹಾಣ್ ಅವರಿಗೆ ತಿಳಿಸಲಾಯಿತು. ಪ್ರಸ್ತುತ, 161 ಪ್ರಮುಖ ಜಲಾಶಯಗಳು ಕಳೆದ ವರ್ಷದ ಸಂಗ್ರಹದ ಶೇ.103.51 ಮತ್ತು ಹತ್ತು ವರ್ಷಗಳ ಸರಾಸರಿ ಸಂಗ್ರಹದ ಶೇ.115 ರಷ್ಟನ್ನು ಹೊಂದಿವೆ, ಇದು ಕೃಷಿ ಉತ್ಪಾದಕತೆಯ ಸಕಾರಾತ್ಮಕ ಮುನ್ನೋಟವನ್ನು ಪ್ರತಿಬಿಂಬಿಸುತ್ತದೆ.
ಶ್ರೀ ಚೌಹಾಣ್ ಅವರು ರಸಗೊಬ್ಬರಗಳ ಲಭ್ಯತೆಯನ್ನು ಪರಿಶೀಲಿಸಿದರು ಮತ್ತು ಮುಂಬರುವ ತಿಂಗಳುಗಳಲ್ಲಿ ಸುಗಮ ಮತ್ತು ಸಕಾಲಿಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯಾವುದೇ ಅಡೆತಡೆಗಳನ್ನು ನಿವಾರಿಸಲು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಬೇಕೆಂದು ಅವರು ಸೂಚನೆ ನೀಡಿದರು. ಮುಂಬರುವ ಕೃಷಿ ಋತುವಿಗೆ ರಸಗೊಬ್ಬರಗಳ ಅವಶ್ಯಕತೆಗಳನ್ನು ನಿರ್ಣಯಿಸಲು ಮತ್ತು ಪೂರೈಸಲು ರಾಜ್ಯಗಳೊಂದಿಗೆ ನಿರಂತರ ಸಮನ್ವಯವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಕೇಂದ್ರ ಸಚಿವರಿಗೆ ತಿಳಿಸಿದರು.
*****
(Release ID: 2178527)
Visitor Counter : 33
Read this release in:
English
,
Urdu
,
हिन्दी
,
Marathi
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam