ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ವಿಶ್ವ ಮಾನದಂಡಗಳ ದಿನ 2025


ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂ.ಎಸ್.ಎಂ.ಇ.) ಬೆಂಬಲಿಸಲು ಸರ್ಕಾರ ಕ್ಯೂ.ಸಿ.ಒ ಚೌಕಟ್ಟನ್ನು ಸಮನ್ವಯಗೊಳಿಸುತ್ತದೆ; ಮತ್ತು ಕಳಪೆ ಗುಣಮಟ್ಟದ ಸರಕುಗಳಿಗೆ ಕಡಿವಾಣ ಹಾಕುತ್ತದೆ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು

ಬಿ‌.ಐ.ಎಸ್ ಗ್ರಾಹಕ ಉಪಕ್ರಮ ಮತ್ತು ಸಂಪರ್ಕವನ್ನು ಬಲಪಡಿಸಬೇಕು: ಶ್ರೀ ಪ್ರಲ್ಹಾದ್ ಜೋಶಿ

Posted On: 14 OCT 2025 4:57PM by PIB Bengaluru

ದೇಶದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ) ಅವಶ್ಯಕತೆಗಳನ್ನು ಪರಿಗಣಿಸುವಾಗ ಕಳಪೆ ಗುಣಮಟ್ಟದ ಸರಕುಗಳ ಸರಬರಾಜಿಗೆ ಕಡಿವಾಣ ಹಾಕಲು ಕಡ್ಡಾಯ ಪ್ರಮಾಣೀಕರಣಕ್ಕಾಗಿ ಸರ್ಕಾರ ಗುಣಮಟ್ಟ ನಿಯಂತ್ರಣ ಆದೇಶಗಳ (ಕ್ಯೂ.ಸಿ.ಒ) ವ್ಯಾಪ್ತಿಯನ್ನು ಸಮನ್ವಯಗೊಳಿಸುತ್ತಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಇಂದು ಭಾರತೀಯ ಮಾನದಂಡಗಳ ಬ್ಯೂರೋ (ಬಿ.ಐ.ಎಸ್) ಆಯೋಜಿಸಿದ್ದ 2025ರ ವಿಶ್ವ ಮಾನದಂಡಗಳ ದಿನದ ಆಚರಣೆಯಲ್ಲಿ ಈ ಮಾತನ್ನು ಹೇಳಿದರು. ಬಿ.ಐ.ಎಸ್. ಈ ಎರಡು ಉದ್ದೇಶಗಳ ನಡುವೆ ಸುಸ್ಥಿರ ಸಮತೋಲನವನ್ನು ಸಾಧಿಸಬೇಕು ಎಂದು ಅವರು ಒತ್ತಿ ಹೇಳಿದರು.

ಕಳೆದ 11 ವರ್ಷಗಳಲ್ಲಿ, ಭಾರತದ ಆರ್ಥಿಕತೆಯು 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿದೆ ಎಂದು ಶ್ರೀ ಜೋಶಿ ಉಲ್ಲೇಖಿಸಿದರು, ಇದು ಸರ್ಕಾರದ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ತತ್ವದಿಂದ ನಡೆಸಲ್ಪಡುತ್ತಿರುವ ಗಮನಾರ್ಹ ಸಾಧನೆಯಾಗಿದೆ. ಭಾರತವು ಈಗ 2028ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಆತ್ಮವಿಶ್ವಾಸದಿಂದ ಸಾಗುತ್ತಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಮಾನದಂಡಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಜೋಡಿಸುವ ಮೂಲಕ ಈ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಬಿ.ಐ.ಎಸ್ ಪ್ರಮುಖ ಪಾತ್ರ ವಹಿಸಿದೆ.

ಉತ್ಪನ್ನಗಳು, ಸೇವೆಗಳು ಮತ್ತು ವ್ಯವಸ್ಥೆಗಳಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ವಿಶ್ವಾಸವನ್ನು ಖಾತ್ರಿಪಡಿಸುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುವ ಸಮಾಜದ ಬೆನ್ನೆಲುಬಾಗಿ ಮಾನದಂಡಗಳು ರೂಪುಗೊಳ್ಳುತ್ತವೆ ಎಂದು ಅವರು ತಿಳಿಸಿದರು. ಅವು ತಡೆರಹಿತ ದೇಶೀಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತವೆ, ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುತ್ತವೆ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುತ್ತವೆ. ಮಾನದಂಡಗಳನ್ನು ಪಾಲಿಸುವ ಮೂಲಕ, ಭಾರತವು ತನ್ನ ಉತ್ಪನ್ನಗಳ ವಿಶ್ವಾಸಾರ್ಹತೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತದೆ.

ಈ ವರ್ಷದ ವಿಷಯ, "ಉತ್ತಮ ಪ್ರಪಂಚಕ್ಕಾಗಿ ಹಂಚಿಕೆಯ ದೃಷ್ಟಿ" ಆಗಿದ್ದು, ಎಸ್‌.ಡಿ.ಜಿ-17ರ (ಸುಸ್ಥಿರ ಅಭಿವೃದ್ಧಿ ಗುರಿ 17) - ಉದ್ದೇಶಗಳಿಗಾಗಿ ಪಾಲುದಾರಿಕೆ, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಸಹಯೋಗದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಸಚಿವರು ಹೇಳಿದರು. ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾಗಿ ಬಿ.ಐ.ಎಸ್ ಸಂಸ್ಥೆಯು, ದೇಶದ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಇದರ ಕಾರ್ಯಗಳು ನವೀಕರಿಸಬಹುದಾದ ಇಂಧನ, ವಿದ್ಯುತ್ ವಾಹನಗಳು, ಡಿಜಿಟಲ್ ಮೂಲಸೌಕರ್ಯ ಹಾಗು ಸುಸ್ಥಿರ ವಸ್ತುಗಳಂತಹ ಹೊಸ ಮತ್ತು ಉದಯೋನ್ಮುಖ ವಲಯಗಳಲ್ಲಿ ಸಕ್ರಿಯವಾಗಿ ಒಳಗೊಂಡಿದೆ.

2025ರ ವಿಶ್ವ ಮಾನದಂಡಗಳ ದಿನಾಚರಣೆಯನ್ನು ಆಯೋಜಿಸಿದ್ದಕ್ಕಾಗಿ ಶ್ರೀ ಜೋಶಿ ಅವರು ಬಿ.ಐ.ಎಸ್ ಅನ್ನು ಅಭಿನಂದಿಸಿದರು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಪ್ರತಿಯೊಬ್ಬ ನಾಗರಿಕನು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಹಾಗು ಸೇವೆಗಳನ್ನು ಹೊಂದಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು ಭಾರತವು ಮತ್ತೆ ಹೊಸ ಉದ್ದೇಶದಿಂದ ಮುಂದುವರಿಯುತ್ತಿದೆ ಎಂದು ಹೇಳಿದರು.

ಗುಣಮಟ್ಟದಲ್ಲಿ ದೋಷರಹಿತ ಮತ್ತು ಪರಿಸರಕ್ಕೆ ಹಾನಿಯಾಗದ ಉತ್ಪನ್ನಗಳನ್ನು ಉತ್ತೇಜಿಸಲು ʻಶೂನ್ಯ ದೋಷ ಮತ್ತು ಶೂನ್ಯ ದುಶ್ಪರಿಣಾಮʼಕ್ಕಾಗಿ ಪ್ರಧಾನಮಂತ್ರಿ ಅವರು ತಮ್ಮ ಕರೆಯ ಮೂಲಕ ಸ್ಪಷ್ಟ ನಿರ್ದೇಶನವನ್ನು ನೀಡಿದ್ದಾರೆ ಎಂದು ಸಚಿವರು ಪುನರುಚ್ಚರಿಸಿದರು. ಭಾರತವು ತನ್ನ ಗುಣಮಟ್ಟಕ್ಕಾಗಿ ಜಾಗತಿಕವಾಗಿ ಗುರುತಿಸಲ್ಪಡಬೇಕು ಹಾಗು ಭಾರತೀಯ ಮಾನದಂಡಗಳು ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮಾನಾರ್ಥಕವಾಗಬೇಕು ಎಂದು ಅವರು ಹೇಳಿದರು.

ಪ್ರಸ್ತುತ 22,300ಕ್ಕೂ ಹೆಚ್ಚು ಮಾನದಂಡಗಳು ಜಾರಿಯಲ್ಲಿವೆ ಮತ್ತು 94% ಭಾರತೀಯ ಮಾನದಂಡಗಳು ಐ.ಎಸ್ಒ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್) ಮತ್ತು ಐ.ಇ.ಸಿ (ಇಂಟರ್ನ್ಯಾಷನಲ್ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್) ಮಾನದಂಡಗಳೊಂದಿಗೆ ಸಮನ್ವಯಗೊಂಡಿದೆ ಎಂದು ಶ್ರೀ ಜೋಶಿ ಮಾಹಿತಿ ನೀಡಿದರು. 2014 ರಲ್ಲಿ 407 ಹೊಸ ಮಾನದಂಡಗಳನ್ನು ರೂಪಿಸಲಾಗಿದ್ದು, 2025 ರಲ್ಲಿ 1,038 ಕ್ಕೆ ಏರಿದೆ. ಕಡ್ಡಾಯ ಪ್ರಮಾಣೀಕರಣದ ಅಡಿಯಲ್ಲಿ ಉತ್ಪನ್ನಗಳು 2014 ರಲ್ಲಿ 14 ಕ್ಯೂ.ಸಿ.ಒಗಳ ಅಡಿಯಲ್ಲಿ 106 ಉತ್ಪನ್ನಗಳಿಂದ 2025 ರಲ್ಲಿ 191 ಕ್ಯೂ.ಸಿ.ಒಗಳ ಅಡಿಯಲ್ಲಿ 773 ಉತ್ಪನ್ನಗಳಿಗೆ ಜೊತೆಯಲ್ಲಿ ಎರಡು ಸಮಗ್ರ ಕ್ಯೂ.ಸಿ.ಒಗಳಿಷ್ಟು ಹೆಚ್ಚಾಗಿವೆ.

ಇದಲ್ಲದೆ, ಚಿನ್ನದ ಆಭರಣಗಳನ್ನು ಹಾಲ್‌ ಮಾರ್ಕ್ ಮಾಡುವಲ್ಲಿ ಬಿ.ಐ.ಎಸ್ ಸಂಸ್ಥೆಯ ಪ್ರಯತ್ನಗಳಿಗಾಗಿ ಸಚಿವರು ಶ್ಲಾಘಿಸಿದರು, ಎಚ್‌.ಉ.ಐ.ಡಿ -ಗುರುತು ಮಾಡಿದ ಆಭರಣಗಳ ಪರಿಚಯವು ಗ್ರಾಹಕ ರಕ್ಷಣೆ ಮತ್ತು ನಂಬಿಕೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಎಂದು ಹೇಳಿದರು. ಮಾನದಂಡಗಳನ್ನು ಹೆಚ್ಚು ಪ್ರಾಯೋಗಿಕ, ಕ್ರಿಯಾತ್ಮಕ ಮತ್ತು ಭವಿಷ್ಯಕ್ಕೆ ಸಿದ್ಧವಾಗಿಸಲು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಅವರು ಉದ್ಯಮವನ್ನು ಪ್ರೋತ್ಸಾಹಿಸಿದರು.

ಗುಣಮಟ್ಟ, ಸುರಕ್ಷತೆ ಮತ್ತು ಸುಸ್ಥಿರತೆಯಲ್ಲಿ ಮಾನದಂಡಗಳನ್ನು ಹೊಂದಿಸುವ ಮೂಲಕ ಬಿ.ಐ.ಎಸ್ ವಿಶ್ವದ ಪ್ರಮುಖ ರಾಷ್ಟ್ರೀಯ ಮಾನದಂಡ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ತ್ವರಿತ ತಾಂತ್ರಿಕ ಪ್ರಗತಿಯೊಂದಿಗೆ ವೇಗವನ್ನು ಕಾಯ್ದುಕೊಳ್ಳಲು, ವಿಶೇಷವಾಗಿ ದೇಶದ ಆದ್ಯತೆಯ ಕ್ಷೇತ್ರಗಳಲ್ಲಿ, ಮಾನದಂಡಗಳ ಅಭಿವೃದ್ಧಿಯನ್ನು ವೇಗವಾಗಿ ಪತ್ತೆ ಹಚ್ಚುವುದನ್ನು   ಮುಂದುವರಿಸಲು ಅವರು ಬಿ.ಐ.ಎಸ್ ಅನ್ನು ಒತ್ತಾಯಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶದ ನಾಗರಿಕರಿಗೆ ಮಾನದಂಡಗಳ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಬಿ.ಐ.ಎಸ್ ತನ್ನ ಗ್ರಾಹಕರ ಸಂಪರ್ಕ ಮತ್ತು ಪ್ರಚಾರ ಉಪಕ್ರಮಗಳನ್ನು ಬಲಪಡಿಸಬೇಕೆಂದು ಸಚಿವರು ಕರೆ ನೀಡಿದರು. ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಧಿಸಲು ಗುಣಮಟ್ಟದ ಮೇಲೆ ಗಮನಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು, ಅದೇ ಸಮಯದಲ್ಲಿ ನಾವೀನ್ಯತೆ, ಸ್ಥಳೀಯ ತಂತ್ರಜ್ಞಾನ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸಿದರು. ಎಲ್ಲಾ ಪಾಲುದಾರರು ಸ್ವದೇಶಿ ಅಭಿಯಾನವನ್ನು ಅಳವಡಿಸಿಕೊಳ್ಳುವಂತೆ ಅವರು ಮತ್ತಷ್ಟು ಪ್ರೋತ್ಸಾಹಿಸಿದರು ಹಾಗು ಬಿ.ಐ.ಎಸ್‌ ನ ನಿರಂತರ ಶ್ರೇಷ್ಠತೆಗೆ ಶುಭಾಶಯಗಳನ್ನು ಕೋರಿದರು .

ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ, ಭಾರತದ ಮಾನದಂಡದ ಆಂದೋಲನವನ್ನು ಮುನ್ನಡೆಸುವ ತಜ್ಞರ ಕೊಡುಗೆಗಳನ್ನು ಶ್ಲಾಘಿಸಿದರು.  ಕೈಗಾರಿಕೆಗಳು ಮತ್ತು ಆರ್ಥಿಕತೆಗೆ ಮಾರ್ಗದರ್ಶನ ನೀಡುವ ಜಾಗತಿಕ ಮಾನದಂಡಗಳನ್ನು ರೂಪಿಸುವವರ ಅವಿಶ್ರಾಂತ ಪ್ರಯತ್ನಗಳನ್ನು ಈ ದಿನ ಆಚರಿಸುತ್ತದೆ ಎಂದು ಅವರು ಹೇಳಿದರು.   ಅಭಿವೃದ್ಧಿ ಮತ್ತು ಸಹಯೋಗವನ್ನು ಉತ್ತೇಜಿಸುವಲ್ಲಿ ಜಾಗತಿಕ ಪ್ರಮಾಣೀಕರಣದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ವರ್ಮಾ, ಮಾನದಂಡಗಳು ಮತ್ತು ಪ್ರಮಾಣೀಕರಣಗಳ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಂಡ "ಭಾರತದ ಪ್ರಮಾಣೀಕರಣ ವೀರರನ್ನು” ಶ್ಲಾಘಿಸಿದರು. ಭಾರತದ ಜಾಗತಿಕ ನಿಲುವನ್ನು ಬಲಪಡಿಸಿದ ಮತ್ತು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ದೇಶದ ಮಾನದಂಡಗಳನ್ನು ಸಮನ್ವಯಗೊಳಿಸಿದ ಐ.ಎಸ್‌.ಒ ಮತ್ತು ಐ.ಇ.ಸಿ ಯಲ್ಲಿ ಬಿ.ಐ.ಎಸ್‌ ನ ಸಕ್ರಿಯ ಪಾತ್ರವನ್ನು ಅವರು ಉಲ್ಲೇಖಿಸಿದರು.

ಈ ಸಂದರ್ಭದಲ್ಲಿ ಬಿ.ಐ.ಎಸ್‌ ನ ಮಹಾನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿ, ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಭರತ್ ಖೇರಾ, ಒಎಸ್‌ ಡಿ, ಬಿಐಎಸ್‌, ಶ್ರೀ ಸಂಜಯ್ ಗಾರ್ಗ್; ಮತ್ತು ಬ್ಯೂರೋದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತದ ಗುಣಮಟ್ಟದ ಪರಿಸರ ವ್ಯವಸ್ಥೆಯಲ್ಲಿ ಪ್ರಮಾಣೀಕರಣ, ಪಾರದರ್ಶಕತೆ ಮತ್ತು ಡಿಜಿಟಲ್ ಪರಿವರ್ತನೆಯನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ಹಲವಾರು ಪ್ರಮುಖ ಉಪಕ್ರಮಗಳಿಗೆ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು, ಇದರಲ್ಲಿ ಭಾರತದ ರಾಷ್ಟ್ರೀಯ ಬೆಳಕಿನ ಸಂಹಿತೆ: 2025 ಬಿಡುಗಡೆಯಾಯಿತು. 2010ರಲ್ಲಿ ಮೊದಲು ಪ್ರಕಟವಾದ ರಾಷ್ಟ್ರೀಯ ಬೆಳಕಿನ ಸಂಹಿತೆ (ಎನ್.ಎಲ್.ಸಿ.)ಯು ಒಳಾಂಗಣ ಮತ್ತು ಹೊರಾಂಗಣ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು, ಆಯ್ಕೆ ಮಾಡಲು, ಸ್ಥಾಪಿಸಲು ಮತ್ತು ನಿರ್ವಹಿಸಲು ಉತ್ತಮ ಅಭ್ಯಾಸಗಳನ್ನು ಒಟ್ಟುಗೂಡಿಸುತ್ತದೆ. ಅಂದಿನಿಂದ, ಬೆಳಕಿನ ಕ್ಷೇತ್ರವು ಗಮನಾರ್ಹವಾಗಿ ವಿಕಸನಗೊಂಡಿದೆ. ಮನುಷ್ಯರ ಮನಸ್ಥಿತಿ, ಸಿರ್ಕಾಡಿಯನ್ ಲಯಗಳು, ನಡವಳಿಕೆ ಮತ್ತು ದೀರ್ಘಕಾಲೀನ ಆರೋಗ್ಯದ ಮೇಲೆ ಬೆಳಕಿನ ಪ್ರಭಾವವನ್ನು ವೈಜ್ಞಾನಿಕ ಸಂಶೋಧನೆಯು ತಿಳಿಸಿದೆ. ಡಿಜಿಟಲ್ ಲೈಟಿಂಗ್, ಐ.ಒ.ಟಿ ಆಧಾರದ ಸ್ಮಾರ್ಟ್ ಸಿಸ್ಟಮ್‌ ಗಳು ಮತ್ತು ನವೀಕರಿಸಬಹುದಾದ ಇಂಧನ ಪರಿಹಾರಗಳ ವ್ಯಾಪಕ ಅಳವಡಿಕೆಯು ನವೀಕರಿಸಿದ ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಿದೆ, ಜೊತೆಗೆ ಅತಿಯಾದ ಅಥವಾ ಕಳಪೆಯಾಗಿ ವಿನ್ಯಾಸಗೊಳಿಸಲಾದ ಕೃತಕ ಬೆಳಕಿನ ಬಗ್ಗೆ ಪರಿಸರ ಕಾಳಜಿಗಳಿಗೆ ತುರ್ತು ಗಮನ ನೀಡಬೇಕಾಗಿದೆ. ಈ ಬೆಳವಣಿಗೆಗಳನ್ನು ಗುರುತಿಸಿ, ಬಿಐಎಸ್‌ ನ ಇಲ್ಯುಮಿನೇಷನ್ ಎಂಜಿನಿಯರಿಂಗ್ ಮತ್ತು ಲುಮಿನೈರ್ಸ್ ವಿಭಾಗೀಯ ಸಮಿತಿ (ಇಟಿಡಿ 49) ಎನ್‌.ಎಲ್‌.ಸಿ ಯ ಸಮಗ್ರ ಪರಿಷ್ಕರಣೆಯನ್ನು ಕೈಗೊಂಡಿದೆ. ಈಗ ಹದಿನಾರು ಭಾಗಗಳಾಗಿ ಆಯೋಜಿಸಲಾದ ಪರಿಷ್ಕೃತ ಸಂಹಿತೆಯು, ಫ್ಲೋರೊಸೆಂಟ್ ಮತ್ತು ಹ್ಯಾಲೊಜೆನ್‌ನಂತಹ ಸಾಂಪ್ರದಾಯಿಕ ಮೂಲಗಳಿಂದ ಎಲ್‌.ಇ.ಡಿಗಳು ಮತ್ತು ಘನ-ಸ್ಥಿತಿಯ ಬೆಳಕಿಗೆ ಪರಿವರ್ತನೆ, ಐ.ಒ.ಟಿಯಿಂದ ಸಕ್ರಿಯಗೊಳಿಸಲಾದ ಸ್ಮಾರ್ಟ್, ಸಂಪರ್ಕಿತ ವ್ಯವಸ್ಥೆಗಳ ಏರಿಕೆ ಮತ್ತು ನವೀಕರಿಸಬಹುದಾದ ಶಕ್ತಿಯೊಂದಿಗೆ ಬೆಳಕಿನ ಕ್ರೋಡೀಕರಣದಂತಹ ಪ್ರಮುಖ ಪ್ರಗತಿಗಳನ್ನು ತಿಳಿಸುತ್ತದೆ.  ಇದು ಸುರಂಗಗಳು, ಪರಂಪರೆಯ ತಾಣಗಳು, ಆರೋಗ್ಯ ರಕ್ಷಣೆ, ತೋಟಗಾರಿಕೆ ಮತ್ತು ರೋಗಾಣುನಾಶಕ ಬಳಕೆಗಳಿಗೆ ವಿಶೇಷ ಬೆಳಕಿನ ವ್ಯವಸ್ಥೆಗಳನ್ನು ಸಹ ಒಳಗೊಂಡಿದೆ, ಜೊತೆಗೆ ಮಾನವ-ಕೇಂದ್ರಿತ ಬೆಳಕು, ಯು.ವಿ-ಆಧಾರಿತ ಸೋಂಕು ನಿವಾರಕ ಮತ್ತು ಸೌರಶಕ್ತಿ ಚಾಲಿತ ವ್ಯವಸ್ಥೆಗಳಂತಹ ಹೊಸ ಕ್ಷೇತ್ರಗಳನ್ನು ಅನ್ವೇಷಿಸುತ್ತದೆ.

25 ಲೋಹ ಪರೀಕ್ಷೆ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಗಳಲ್ಲಿ (ಎ ಎಚ್‌ ಸಿ) ಹಾಲ್‌ಮಾರ್ಕ್ ಮಾಡಿದ ಆಭರಣಗಳ ತೂಕ ಮತ್ತು ಛಾಯಾಚಿತ್ರವನ್ನು ಸೆರೆಹಿಡಿಯುವ ಪ್ರಾಥಮಿಕ ಯೋಜನೆಯನ್ನು ಸಹ ಪ್ರಾರಂಭಿಸಲಾಯಿತು. ಈ ಉಪಕ್ರಮವು ಬಿ.ಐ.ಎಸ್‌  ಪೋರ್ಟಲ್‌ ನಲ್ಲಿ ಪ್ರತಿಯೊಂದು ಹಾಲ್‌ ಮಾರ್ಕ್ ಮಾಡಿದ ಆಭರಣಗಳ ಛಾಯಾಚಿತ್ರ ಮತ್ತು ತೂಕವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಮೂಲಕ ಹಾಲ್‌ ಮಾರ್ಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಉಪಕರಣದೊಂದಿಗೆ ಜೋಡಿಸಲ್ಪಟ್ಟ ಕ್ಯಾಮೆರಾಗಳು ಆಭರಣ ವಸ್ತು ಮತ್ತು ಅದರ ಎಚ್‌.ಯು.ಐ.ಡಿ ಎರಡರ ಸ್ಪಷ್ಟ ಚಿತ್ರಗಳನ್ನು ಪ್ರತ್ಯೇಕವಾಗಿ ಸೆರೆಹಿಡಿಯುತ್ತವೆ, ಜೊತೆಗೆ ಪ್ರತಿ ಎ.ಎಚ್‌.ಸಿಯಲ್ಲಿ ತೂಕದ ಸಮತೋಲನಗಳನ್ನು ಸ್ವಯಂಚಾಲಿತವಾಗಿ ತೂಕದ ದತ್ತಾಂಶವನ್ನು ದಾಖಲಿಸಲು ಸಂಯೋಜಿಸಲಾಗುತ್ತದೆ ಹಾಗು ಹಸ್ತಚಾಲಿತವಾಗಿ ನಮೂದಿಸುವುದರಿಂದ ಆಗುವ ದೋಷಗಳಿಂದ ಮುಕ್ತಗೊಳಿಸುತ್ತದೆ. ಗ್ರಾಹಕರು ಬಿಐಎಸ್‌   ಕೇರ್ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ರೆಕಾರ್ಡ್ ಮಾಡಿದ ಛಾಯಾಚಿತ್ರ ಮತ್ತು ತೂಕವನ್ನು ವೀಕ್ಷಿಸುವ ಮೂಲಕ, ಪಾರದರ್ಶಕತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಹಾಲ್‌ ಮಾರ್ಕ್ ಮಾಡಿದ ವಸ್ತುಗಳ ದೃಢೀಕರಣವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.  ಭಾರತದೆಲ್ಲೆಡೆ ಇದನ್ನು ಕಾರ್ಯಗತಗೊಳಿಸುವ ಮೊದಲು 25 ಆಯ್ದ ಎ.ಎಚ್‌.ಸಿಗಳಲ್ಲಿ ಒಂದು ತಿಂಗಳ ಕಾಲ ಈ ಪ್ರಾಥಮಿಕ (ಪೈಲಟ್ ಯೋಜನೆ) ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ.

ಪ್ರಾರಂಭಿಸಲಾದ ಮತ್ತೊಂದು ಪ್ರಮುಖ ಉಪಕ್ರಮವೆಂದರೆ ಬಿ.ಐ.ಎಸ್ ಪ್ರಯೋಗಾಲಯ ಮಾಹಿತಿ ನಿರ್ವಹಣಾ ವ್ಯವಸ್ಥೆ‌ ಯೊಂದಿಗೆ ಪ್ರಯೋಗಾಲಯ ಉಪಕರಣಗಳ ಕ್ರೋಡೀಕರಣ (ಎಲ್‌.ಐ.ಎಂ.ಎಸ್). ಬಿ.ಐ.ಎಸ್  ಪ್ರಯೋಗಾಲಯಗಳು, ಬಿ.ಐ.ಎಸ್  ಮಾನ್ಯತೆ ಪಡೆದ ಸರ್ಕಾರೇತರ ಮತ್ತು ಸರ್ಕಾರಿ ಪ್ರಯೋಗಾಲಯಗಳೊಂದಿಗೆ, ಎಲ್ಲಾ ಪರೀಕ್ಷಾ ಸೌಲಭ್ಯಗಳಲ್ಲಿ ಡಿಜಿಟಲ್ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಬಿ.ಐ.ಎಸ್ ಅಭಿವೃದ್ಧಿಪಡಿಸಿದ  ಎಲ್‌.ಐ.ಎಂ.ಎಸ್ ಅನ್ನು ಬಳಸುತ್ತಿವೆ. ದಕ್ಷತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ, ರಾಸಾಯನಿಕ, ಯಾಂತ್ರಿಕ, ವಿದ್ಯುತ್, ಸೂಕ್ಷ್ಮ ಜೀವವಿಜ್ಞಾನ ಮತ್ತು ಆಹಾರ ಪರೀಕ್ಷೆಯನ್ನು ಒಳಗೊಂಡ 180ಕ್ಕೂ ಹೆಚ್ಚು ಉಪಕರಣಗಳು ಮತ್ತು ವಿಶ್ಲೇಷಣಾತ್ಮಕ ವ್ಯವಸ್ಥೆಗಳನ್ನು ಈಗ ಎಲ್‌ ಐ ಎಂ. ಎಸ್ ಮೂಲಕ ಡಿಜಿಟಲ್ ರೀತಿಯಲ್ಲಿ ಪರಸ್ಪರ ಜೋಡಿಸಲಾಗಿದೆ. ಈ ಕ್ರೋಡೀಕರಣವು ಉಪಕರಣಗಳಿಂದ ವ್ಯವಸ್ಥೆಗೆ ದತ್ತಾಂಶವನ್ನು ಸ್ವಯಂಚಾಲಿತವಾಗಿ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ, ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ, ಸ್ಥಿರತೆಯನ್ನು ಖಚಿತಪಡಿಸುತ್ತದೆ ಹಾಗು ಪತ್ತೆಹಚ್ಚುವಿಕೆಯನ್ನು ಹೆಚ್ಚಿಸುತ್ತದೆ. ಇದು ವಿಶ್ಲೇಷಣಾ ಸಮಯವನ್ನು ಕಡಿಮೆ ಮಾಡುತ್ತದೆ, ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ಸರ್ಕಾರದ ʻಮೇಕ್ ಇನ್ ಇಂಡಿಯಾʼ ಮತ್ತು ʻಡಿಜಿಟಲ್ ಇಂಡಿಯಾʼ ಉಪಕ್ರಮಗಳನ್ನು ಬೆಂಬಲಿಸುತ್ತಾ ಬಿ.ಐ.ಎಸ್‌ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆಗಳಲ್ಲಿ ವಿಶ್ವಾಸವನ್ನು ಬಲಪಡಿಸುತ್ತದೆ.

ಈ ಕಾರ್ಯಕ್ರಮದಲ್ಲಿ ಬಿ.ಐ.ಎಸ್‌ ನಿಂದ ಕಲಿಕಾ ನಿರ್ವಹಣಾ ವ್ಯವಸ್ಥೆ(ಎಲ್.ಎಂ.ಎಸ್.)ಗೂ ಸಹ ಚಾಲನೆ ನೀಡಲಾಯಿತು. ಡಿಜಿಟಲ್ ಕಲಿಕೆಯ ಮೂಲಕ ಉದ್ಯಮದ ವೃತ್ತಿಪರರು ಮತ್ತು ಗುಣಮಟ್ಟ ನಿಯಂತ್ರಣ ಸಿಬ್ಬಂದಿಗಳಲ್ಲಿ ಜಾಗೃತಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಭಾರತೀಯ ಮಾನದಂಡಗಳು ಮತ್ತು ಅನುಸರಣಾ ಮೌಲ್ಯಮಾಪನ ಕಾರ್ಯವಿಧಾನಗಳ ಕುರಿತು ಎಲ್.‌ಎಂ.ಎಸ್ ಆನ್‌ಲೈನ್, ಸ್ವಯಂ-ಸಮಯದ ಹೊಂದಿಸಿಕೊಂಡ ಪ್ರಮಾಣಪತ್ರ ಕೋರ್ಸ್‌ ಗಳನ್ನು ನೀಡುತ್ತದೆ. ಪ್ರತಿಯೊಂದು ಕೋರ್ಸ್, ಸಂಬಂಧಿತ ಮಾನದಂಡಗಳು, ಪರೀಕ್ಷಾ ವಿಧಾನಗಳು, ಉತ್ಪಾದನಾ ಪ್ರಕ್ರಿಯೆಗಳು ಮತ್ತು ವೈಫಲ್ಯ ವಿಶ್ಲೇಷಣೆಯನ್ನು ಒಳಗೊಂಡ ಅನುಕ್ರಮ ಮಾಡ್ಯೂಲ್‌ಗಳನ್ನು ಒಳಗೊಂಡಿದೆ. ಕಲಿಯುವವರು ವೆಬ್ ಅಥವಾ ಮೊಬೈಲ್ ಸಾಧನಗಳ ಮೂಲಕ ವೇದಿಕೆಯನ್ನು ಪ್ರವೇಶಿಸಬಹುದು ಮತ್ತು ವಿಷಯ ತಜ್ಞರೊಂದಿಗೆ ಸಂವಹನ ನಡೆಸಲು ಸ್ಪಷ್ಟೀಕರಣ ವೇದಿಕೆಯನ್ನು ಬಳಸಬಹುದು. ಮಾಡ್ಯೂಲ್ ರಸಪ್ರಶ್ನೆಗಳು ಮತ್ತು ಅಂತಿಮ ಮೌಲ್ಯಮಾಪನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಭಾಗವಹಿಸುವವರು ಪರಿಶೀಲಿಸಬಹುದಾದ, ಬಾರ್‌ ಕೋಡ್ ಹೊಂದಿದ ಡಿಜಿಟಲ್ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಎಲ್‌.ಎಂ.ಎಸ್‌ ವಿವರವಾದ ತರಬೇತಿ ದಾಖಲೆಗಳನ್ನು ನಿರ್ವಹಿಸುತ್ತದೆ ಮತ್ತು ಬೇಕಾದ ರೀತಿಯಲ್ಲಿ ವರದಿಗಳನ್ನು ಒದಗಿಸುತ್ತದೆ. ಇದು   ಪ್ರಮಾಣೀಕರಣ ಮತ್ತು ಗುಣಮಟ್ಟ ಭರವಸೆ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸುತ್ತದೆ.

 

*****


(Release ID: 2179172) Visitor Counter : 7