ಹಣಕಾಸು ಸಚಿವಾಲಯ
azadi ka amrit mahotsav

ಕೃಷಿ ಸಂಸ್ಕರಣ ಘಟಕಗಳ ಬಳಕೆಯಿಂದ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ: ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಲಹೆ

Posted On: 16 OCT 2025 8:33PM by PIB Bengaluru

ಕೃಷಿ ಸಂಸ್ಕರಣಾ ಘಟಕಗಳನ್ನು (ಅಗ್ರೋ ಪ್ರೊಸೆಸಿಂಗ್ ಸೆಂಟರ್) ಬಳಸಿಕೊಂಡಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ. ರೈತರಿಗೆ ಮಾರುಕಟ್ಟೆ ಮತ್ತು ಸಂಪರ್ಕ ಸರಳವಾಗಲಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ರೈತರಿಗೆ ಸಲಹೆ ಮಾಡಿದರು.

ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಅಕ್ಟೋಬರ್ 16 ರಂದು, ಭಾರತ ಸರ್ಕಾರ ಮತ್ತು ನಬಾರ್ಡ್ ಇವರ ಸಹಯೋಗದಲ್ಲಿ ನಡೆದ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಡೀ ರಾಯಚೂರು ಜಿಲ್ಲೆಯಾದ್ಯಂತ ಅಂದಾಜು 40 ಕೃಷಿ ಸಂಸ್ಕರಣ ಘಟಕಗಳ ಸ್ಥಾಪನೆ ಮಾಡಿ ಸಂಸ್ಕರಣೆಗೊಳಪಡಿಸುವಷ್ಟು ರಾಯಚೂರು ಜಿಲ್ಲೆಯೊಂದರಲ್ಲಿಯೇ ಪ್ರತಿ ವರ್ಷ ಅಂದಾಜು ಸಾವಿರಾರು ಮೆಟ್ರಿಕ್ ಟನ್ ದಷ್ಟು ತೊಗರಿ ಉತ್ಪನ್ನ ಬರುತ್ತದೆ ಎನ್ನುವ ಮಾಹಿತಿ ಇದೆ. ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಮಧ್ಯೆದ ಈ ಭೂಮಿಯು ಅತ್ಯಂತ ಸಂಪದ್ಭರಿತವಾಗಿದೆ. ಈ ಪ್ರದೇಶದಲ್ಲಿ ಪ್ರತಿ ವರ್ಷ ಅಂದಾಜು 80,000 ಮೆಟ್ರಿಕ್ ಟನ್ ತೊಗರಿ ಉತ್ಪನ್ನ ಹಾಗೂ ಅಂದಾಜು 34,000 ಮೆಟ್ರಿಕ್ ಟನ್ ಕಡಲೆ ಉತ್ಪನ್ನ ಬರುತ್ತಿದ್ದು, ಯಾವುದೇ ಉತ್ಪನ್ನ ಇರಲಿ ರೈತರು ಆಯಾ ಉತ್ಪನ್ನವನ್ನು ನೇರವಾಗಿ ಮಾರುಕಟ್ಟೆಗೆ ಸಾಗಿಸದೇ ಸಂಸ್ಕರಣೆಗೊಳಪಡಿಸಿ ಪ್ಯಾಕೇಟ್ ಅಥವಾ ಬೇರೆ ಬೇರೆ ರೂಪದಲ್ಲಿ ಮಾರಾಟ ಮಾಡಿದಲ್ಲಿ ಉತ್ತಮ ಬೆಲೆ ಸಿಗಲಿದೆ. ಈ ದಿಶೆಯಲ್ಲಿ ಯೋಚಿಸಿ ಕೇಂದ್ರ ಸರ್ಕಾರವು ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಭಾಗವಾಗಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಕ್ಕೆ ಹಸಿರುನಿಸಾನೆ ತೋರಲಾಗಿದೆ. ರೈತರು ಈ ಕೃಷಿ ಸಂಸ್ಕರಣಾ ಘಟಕಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ಮಾಡಿದರು.

ಕೃಷಿ ಸಂಸ್ಕರಣಾ ಘಟಕಗಳ ಸ್ಥಾಪನಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಮ್ಮೊಂದಿಗೆ ಕೈಜೋಡಿಸಿರುವುದು ಉತ್ತಮ ಬೆಳೆವಣಿಗೆಯಾಗಿದೆ. ರಾಜ್ಯ ಕೇಂದ್ರದಲ್ಲಿನ ಉನ್ನತ ಮಟ್ಟದ ಅಧಿಕಾರಿಗಳು, ಜಿಲ್ಲಾ ಕೇಂದ್ರದಲ್ಲಿನ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಕೃಷಿ ಅಧಿಕಾರಿಗಳು ಇಂತಹ ಕೃಷಿ ಸಂಸ್ಕರಣಾ ಘಟಕಗಳ ಬಲವರ್ಧನೆಯ ಬಗ್ಗೆ ಗಮನ ಹರಿಸಬೇಕು ಎಂದು ಅವರು ಸಲಹೆ ಮಾಡಿದರು.

ಕೇಂದ್ರ ಸರ್ಕಾರವು ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ ನೀಡುವುದಕ್ಕೆ ಆದ್ಯತೆ ನೀಡಿದ್ದೇವೆ. 24.74 ಕೋಟಿ ರೈತರಿಗೆ ಕಿಸಾನ್ ಕಾರ್ಡ್ ನೀಡಿದ್ದೇವೆ. 8000 ಕೋಟಿಯಷ್ಟು ಮಣ್ಣಿನ ಪರೀಕ್ಷೆ ನಡೆಸಿದ್ದೇವೆ. ಕೃಷಿ ಸಿಂಚಾಯಿ ಯೋಜನೆಯಡಿ 93,000 ಕೋಟಿ ರೂ.ನಷ್ಟು ಅನುದಾನವನ್ನು 2021 ರಿಂದ 2026 ರವರೆಗೆ ನೀರಾವರಿ ಯೋಜನೆಗಳಿಗೆ ನೀಡಿದ್ದೇವೆ. ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆಯಡಿ 1.74 ಲಕ್ಷ ಕೋಟಿ ರೂ. ಪರಿಹಾರವನ್ನು ಅನ್ನದಾತರಿಗೆ ನೀಡಿದ್ದೇವೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಲಾ ಒಬ್ಬ ರೈತರಿಗೆ ವಾರ್ಷಿಕ 6 ಸಾವಿರ ರೂ.ನಂತೆ ಇದುವರೆಗೆ 3.69 ಲಕ್ಷ ಕೋಟಿ ರೂ.ನಷ್ಟು ಮೊತ್ತವನ್ನು ಕಿಸಾನ್ ಸಮ್ಮಾನ್ ನಿದಿಗೆ ಬಳಸಿದ್ದೇವೆ ಎಂದು ಅವರು ತಿಳಿಸಿದರು.

ರೈತರ ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ತೊಗರಿ ಬೆಳೆಗೆ 2013-14ರಲ್ಲಿ ಪ್ರತಿ ಹೆಕ್ಟೇಟರಗೆ 4,300ರಷ್ಟು ಬೆಂಬಲ ಬೆಲೆ ನೀಡಿದ್ದು, 2025-26ನೇ ಸಾಲಿನಲ್ಲಿ ಬೆಂಬಲ ಬೆಲೆಯ ಮೊತ್ತವನ್ನು ಶೇ.84ರಷ್ಟು ಹೆಚ್ಚಿಸಿ ಪ್ರತಿ ಹೆಕ್ಟರಗೆ 8000 ರೂ. ನಿಗದಿ ಮಾಡಿದ್ದೇವೆ. ಹೆಸರು ಬೆಳೆಗೆ ಬೆಂಬಲ ಬೆಲೆಯ ಮೊತ್ತವನ್ನು ಶೇ.81ರಷ್ಟು ಹೆಚ್ಚಿಸಿ ಪ್ರತಿ ಹೆಕ್ಟರಗೆ 8800 ರೂ.ನಿಗದಿ ಮಾಡಿದ್ದೇವೆ. ಈ ಬೆಳೆಗೆ ಈ ಹಿಂದೆ ಪ್ರತಿ ಹೆಕ್ಟರಗೆ 4500 ನಿಗದಿಪಡಿಸಲಾಗಿತ್ತು ಎಂದು ಅವರು ವಿವರಿಸಿದರು.

ನೀತಿ ಆಯೋಗದಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಹತ್ವಾಕಾಂಕ್ಷಿ ಜಿಲ್ಲಾ ಕಾರ್ಯಕ್ರಮಗಳು ಜಾರಿಯಲ್ಲಿವೆ. ಈ ಭಾಗದಲ್ಲಿನ ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ಇತರೆ ವಿಷಯಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರಸ್ತೆ, ಕುಡಿಯುವ ನೀರು, ಬೀದಿ ದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಾರ್ಯವು ಅಚ್ಚುಕಟ್ಟಾಗಿ ಆಗಬೇಕಿದೆ. ನೀತಿ ಆಯೋಗ ನಡೆಸಿದ ಆ್ಯಸ್ಪೈರೇಷನಲ್ ಜಿಲ್ಲಾ ರ‍್ಯಾಂಕಿಂಗ್‌ನಲ್ಲಿ 2020-23ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಗೆ ಟಾಪ್ ಒನ್ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ ಮಸ್ಕಿ ತಾಲೂಕಿಗೆ ಟಾಪ್ 8ನೇ ಸ್ಥಾನ ಲಭಿಸಿದೆ ಎಂದು ಅವರು ತಿಳಿಸಿದರು.

ಈ ವೇಳೆ ಐ.ಟಿ.ಸಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ್ ಪೂರಿ ಅವರು ಮಾತನಾಡಿ, ಪ್ರತಿ ಆಯವ್ಯದಲ್ಲಿ ಕೇಂದ್ರ ಸರ್ಕಾರವು ರೈತರು ಮತ್ತು ಕೃಷಿ ಹಾಗೂ ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳಿಗೆ ಸೂಕ್ತ ಅನುದಾನ ಮೀಸಲಿರಿಸುತ್ತಿದೆ ಎಂದು ತಿಳಿಸಿದರು. ಕೃಷಿ ಹಾಗೂ ಕೃಷಿ ಕ್ಷೇತ್ರಗಳ ಬೆಳವಣಿಗೆಗಾಗಿ ಐಟಿಸಿ ಜೊತೆಗೆ ನಬಾರ್ಡ ಕೈಜೋಡಿಸಿದ್ದಕ್ಕೆ ಸಾಕಷ್ಟು ಅನುಕೂಲವಾಗಲಿದೆ. ಇದು ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಇನ್ನು ಉತ್ತಮ ಕಾರ್ಯಗಳನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ ನಾಗರಾಜ್ ಅವರು ಮಾತನಾಡಿ, ಕೇಂದ್ರ ಹಣಕಾಸು ಸಚಿವರ ಸಂಸದರ ನಿಧಿಯ ಮೊತ್ತವನ್ನು ಬಳಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ತಲಾ 2.54 ಕೋಟಿ ರೂ ವೆಚ್ಚದಲ್ಲಿ, ನಬಾರ್ಡ್ ಜೊತೆಗೆ ಜಂಟಿಯಾಗಿ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಯಡಿ ಕೃಷಿ ಸಂಸ್ಕರಣೆಗಾಗಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ನಬಾರ್ಡ ಅಧ್ಯಕ್ಷರಾದ ಶಾಜಿ ಕೆ.ವಿ., ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ.

 

****


(Release ID: 2180127) Visitor Counter : 55