ರೈಲ್ವೇ ಸಚಿವಾಲಯ
azadi ka amrit mahotsav

ಸನ್ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣನವರಿಂದ ಯಶವಂತಪುರದ ಕೋಚಿಂಗ್‌ ಡಿಪೋ ಪರಿಶೀಲನೆ

Posted On: 30 OCT 2025 6:16PM by PIB Bengaluru

ಶ್ರೀ ವಿ. ಸೋಮಣ್ಣ, ಸನ್ಮಾನ್ಯ ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರು ಇಂದು ಯಶವಂತಪುರದ ಕೋಚಿಂಗ್‌ ಡಿಪೋಗೆ ಭೇಟಿ ನೀಡಿದರು. ಈ ವೇಳೆ ಅವರು ಕೋಚಿಂಗ್‌ ಡಿಪೋನಲ್ಲಿ ಲಭ್ಯವಿರುವ ವಿವಿಧ ನಿರ್ವಹಣಾ ಸೌಲಭ್ಯಗಳು, ಕೋಚಿಂಗ್‌ ಡಿಪೋನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.  ಈ ಸಂದರ್ಭದಲ್ಲಿ ಅವರು ವಿಶೇಷ ಸ್ವಚ್ಛತಾ ಅಭಿಯಾನದಡಿ ಕೈಗೊಳ್ಳಲಾದ ಚಟುವಟಿಕೆಗಳನ್ನು ಸಹಾ ಪರಿಶೀಲಿಸಿದರು.

ಯಶವಂತಪುರ ಕೋಚಿಂಗ್‌ ಡಿಪೋ ನೈರುತ್ಯ ರೈಲ್ವೆಯ ಒಂದು ಪ್ರಮುಖ ಕೋಚ್‌ ನಿರ್ವಹಣಾ ಘಟಕವಾಗಿದೆ.  ಈ ಡಿಪೋನಲ್ಲಿ 41 ರೇಕ್‌ ಗಳು, 909 ಕೋಚ್‌ಗಳ ನಿರ್ವಹಣೆಯನ್ನು ಮಾಡಲಾಗುತ್ತದೆ.  ರೈಲುಗಳ ಪ್ರಾಥಮಿಕ ಮತ್ತು ದ್ವಿತೀಯ ಹಂತದ ನಿರ್ವಹಣೆಗಳನ್ನು ಸಹಾ ಮಾಡಲಾಗುತ್ತದೆ.  ಜೊತೆಗೆ  ಐ.ಸಿ.ಎಫ್‌. ಮತ್ತು ಎಲ್‌.ಎಚ್‌.ಬಿ. ಕೋಚ್‌ಗಳ ಇಂಟರ್‌ ಮೀಡಿಯೇಟ್‌ ಓವರ್‌ಹಾಲಿಂಗ್‌ ಅನ್ನು ಸಹಾ ನಿರ್ವಹಿಸುತ್ತದೆ. 

ಶ್ರೀ ವಿ. ಸೋಮಣ್ಣನವರು ಕೋಚಿಂಗ್‌ ಡಿಪೋನ ಉದ್ಯಾನವನದಲ್ಲಿ ಸ್ವಚ್ಛತಾ ಅಭಿಯಾನ ಅಂಗವಾಗಿ ʼತ್ಯಾಜ್ಯದಿಂದ ಕಲೆʼ ಉಪಕ್ರಮದಡಿಯಲ್ಲಿ ನಿರ್ಮಿಸಲಾಗಿರುವ  ಕುದುರೆಯ ಶಿಲ್ಪವನ್ನು ಸಹಾ ವೀಕ್ಷಿಸಿದರು.  11 ಅಡಿ ಎತ್ತರವಿರುವ ಈ ಕುದುರೆಯ ಶಿಲ್ಪವನ್ನು ಕೋಚಿಂಗ್‌ ಡಿಪೋನ ಸಿಬ್ಬಂದಿಗಳು ನಿರುಪಯುಕ್ತ ನಟ್‌, ಬೋಲ್ಟ್‌, ವಾಷರ್‌, ಲೋಹದ ಹಗ್ಗಗಳು, ಸ್ಪ್ರಿಂಗ್‌ಗಳು ಮೊದಲಾದವುಗಳನ್ನು ಬಳಸಿ ತಯಾರಿಸಿದ್ದಾರೆ.  ಸನ್ಮಾನ್ಯ ಸಚಿವರು ಸ್ಕ್ರ್ಯಾಪ್‌ ನಿಂದ ಕುದುರೆಯ ಕಲಾಕೃತಿಯನ್ನು ನಿರ್ಮಿಸಿದ  ಸಿಬ್ಬಂದಿಗಳ ಸೃಜನಶೀಲತೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀ ವಿ. ಸೋಮಣ್ಣನವರು ಭಾರತೀಯ ರೈಲ್ವೆಯಾದ್ಯಂತ ಅಕ್ಟೋಬರ್‌ 2ರಿಂದ ಅಕ್ಟೋಬರ್‌ 31ರವರೆಗೆ ಸ್ವಚ್ಛತೆಗಾಗಿ ವಿಶೇಷ ಅಭಿಯಾನ ಜಾರಿಯಲ್ಲಿದ್ದು ಕಾರ್ಯಾಲಯಗಳು, ನಿಲ್ದಾಣಗಳು, ರೈಲುಗಳಲ್ಲಿ ಸ್ವಚ್ಛತೆಯನ್ನು ಸುನಿಶ್ಚಿತಗೊಳಿಸಲು ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.  ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.  ಉತ್ತಮವಾಗಿ ಕೋಚ್‌ ಗಳನ್ನು ನಿರ್ವಹಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಸುರಕ್ಷಿತ, ಸ್ವಚ್ಛ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತಿರುವ ಕೋಚಿಂಗ್‌ ಡಿಪೋನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಆಶುತೋಷ್‌ ಕುಮಾರ್‌ ಸಿಂಗ್‌, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಶ್ರೀ ಪರೀಕ್ಷಿತ್‌ ಮೋಹನ್‌ಪೂರಿಯಾ ಮತ್ತು ಶ್ರೀ ಪ್ರವೀಣ್‌ ಕಾತರಕಿ, ಯಶವಂತಪುರ ಕೋಚಿಂಗ್‌ ಡಿಪೋನ ಹಿರಿಯ ಕೋಚಿಂಗ್‌ ಡಿಪೋ ಅಧಿಕಾರಿ ಶ್ರೀ ಧರ್ಮೇಂದ್ರ ಸೀರ್ವಿ, ಹಿರಿಯ ವಿಭಾಗೀಯ ಯಾಂತ್ರಿಕ ಇಂಜಿನಿಯರ್‌ ಮತ್ತು ಹಿರಿಯ ವಿಭಾಗೀಯ ಪರಿಸರ ಮತ್ತು ಹೌಸ್‌ಕೀಪಿಂಗ್‌ ವ್ಯವಸ್ಥಾಪಕ ಶ್ರೀ ಅನುರಾಗ್‌ ಸಿಂಗ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

****


(Release ID: 2184275) Visitor Counter : 9