ಕೃಷಿ ಸಚಿವಾಲಯ
azadi ka amrit mahotsav

ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದಲ್ಲಿ ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆಯ ನೇರ ಪ್ರಸಾರ ಕಾರ್ಯಕ್ರಮ

प्रविष्टि तिथि: 19 NOV 2025 5:26PM by PIB Bengaluru

ಭೂ ಹಿಡುವಳಿದಾರ ರೈತರ ಆರ್ಥಿಕ ಅಗತ್ಯಗಳನ್ನು ಬೆಂಬಲಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 21ನೇ ಕಂತನ್ನು ಇಂದು ಬೆಂಗಳೂರಿನ ಯಲಹಂಕದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಲೋಕಸಭಾ (ಚಿಕ್ಕಬಳ್ಳಾಪುರ ಕ್ಷೇತ್ರ)ದ ಗೌರವಾನ್ವಿತ ಸಂಸದರಾದ ಡಾ. ಕೆ. ಸುಧಾಕರ್ ಮತ್ತು ಗೌರವಾನ್ವಿತ ಅತಿಥಿಯಾಗಿ ಲೋಕಸಭಾ (ಕೋಲಾರ ಕ್ಷೇತ್ರ)ದ ಮಾಜಿ ಸಂಸದರಾದ ಶ್ರೀ ಎಸ್. ಮುನಿಸ್ವಾಮಿ ಭಾಗವಹಿಸಿದ್ದರು.  

ಫೆಬ್ರವರಿ 2019ರಲ್ಲಿ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಪ್ರಾರಂಭಿಸಿದ ನಂತರ, ₹3.69 ಲಕ್ಷ ಕೋಟಿಗಳನ್ನು ನೇರ ಲಾಭ ವರ್ಗಾವಣೆಯ ಮೂಲಕ ವಿತರಿಸಲಾಗಿದೆ, ಇದು ಕೃಷಿ ಸುಸ್ಥಿರತೆ ಮತ್ತು ರೈತರ ಕಲ್ಯಾಣಕ್ಕೆ ಸರ್ಕಾರದ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ. 21ನೇ ಕಂತಿನ ಬಿಡುಗಡೆಯಲ್ಲಿ, ದೇಶಾದ್ಯಂತ 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ₹18,000 ಕೋಟಿಗಳನ್ನು ನೇರವಾಗಿ ವರ್ಗಾಯಿಸಲಾಯಿತು. ಮುಖ್ಯ ಅತಿಥಿ ಡಾ. ಕೆ. ಸುಧಾಕರ್ ತಮ್ಮ ಭಾಷಣದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರ ಪರಿಚಯಿಸಿದ ವಿವಿಧ ರೈತ ಕಲ್ಯಾಣ ಯೋಜನೆಗಳ ಮಹತ್ವವನ್ನು ತಿಳಿಸಿದರು ಮತ್ತು ಸುರಕ್ಷಿತ ಆಹಾರ, ಮೇವು ಉತ್ಪಾದಿಸಲು ನೈಸರ್ಗಿಕ ಕೃಷಿ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಉತ್ತೇಜಿಸುವಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಪ್ರಯತ್ನಗಳನ್ನು ಶ್ಲಾಘಿಸಿದರು. ಹೆಚ್ಚಿನ ರೈತರಿಗೆ ಅನುಕೂಲವಾಗುವಂತೆ ಸಂಸ್ಥೆಯು ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಅವರು ಪ್ರೋತ್ಸಾಹಿಸಿದರು. ಗೌರವ ಅತಿಥಿಯಾಗಿದ್ದ ಮಾಜಿ ಸಂಸದ ಶ್ರೀ ಎಸ್. ಮುನಿಸ್ವಾಮಿ ಅವರು ತಮ್ಮ ಭಾಷಣದಲ್ಲಿ ರೈತ ಸಮುದಾಯದ ಉನ್ನತಿಗಾಗಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಪರಿಚಯಿಸಿದ ಹಲವಾರು ಪ್ರಮುಖ ಉಪಕ್ರಮಗಳನ್ನು ವಿವರಿಸಿದರು. ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಮತ್ತು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವಲ್ಲಿ ರೈತ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒ) ನಿರ್ಣಾಯಕ ಪಾತ್ರದ ಬಗ್ಗೆ ಅವರು ವಿವರಿಸಿದರು.

ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಪ್ರಭಾರಿ ನಿರ್ದೇಶಕರಾದ  ಡಾ. ಟಿ. ವೆಂಕಟೇಶನ್ ರವರು  ಜೈವಿಕ ಕೀಟ ನಿರ್ವಹಣೆಗೆ ಪರಿವರ್ತನೆಯ ತುರ್ತುಸ್ಥಿತಿಯನ್ನು ವಿವರಿಸಿದರು. ಕೃಷಿಗೆ ಹಾನಿಕಾರಕವಾದ ಕೀಟಗಳನ್ನು ಪರಿಸರಕ್ಕೆ ಹಾನಿಕರವಲ್ಲದ ರೀತಿಯಲ್ಲಿ ನಿರ್ವಹಿಸಲು ರೈತರು ನವೀನ ಜೈವಿಕ ನಿಯಂತ್ರಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ರಾಸಾಯನಿಕ ಕೀಟನಾಶಕಗಳ ಅನಿಯಂತ್ರಿತ ಬಳಕೆಯನ್ನು ಕಡಿಮೆ ಮಾಡುವುದರಿಂದ ನಮ್ಮ ಪರಿಸರದ ಆರೋಗ್ಯ ವೃದ್ಧಿಸಲಿದೆ. ಸುಸ್ಥಿರ ಕೃಷಿಗಾಗಿ ಅತ್ಯಾಧುನಿಕ, ರೈತ ಸ್ನೇಹಿ ತಂತ್ರಜ್ಞಾನಗಳನ್ನು ಬಳಸಬೇಕೆಂದು  ಅವರು ಪುನರುಚ್ಚರಿಸಿದರು.

ಕಾರ್ಯಕ್ರಮದ ಭಾಗವಾಗಿ, ಪರಿಶಿಷ್ಟ ಜಾತಿ ಉಪ ಯೋಜನೆ ಅಡಿಯಲ್ಲಿ ಕೋಲಾರ ಜಿಲ್ಲೆಯ ಸುಮಾರು 100 ರೈತರಿಗೆ ಜೈವಿಕ ಕೀಟ ನಿಯಂತ್ರಣ ಪರಿಕರಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವು ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಜೈವಿಕ ಕೀಟ ನಿಯಂತ್ರಣ ವಿಧಾನಗಳ ಸಂಶೋಧನೆ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು.

 

*****

 


(रिलीज़ आईडी: 2191730) आगंतुक पटल : 55