ಪ್ರಧಾನ ಮಂತ್ರಿಯವರ ಕಛೇರಿ
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ-2025 ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
19 NOV 2025 6:53PM by PIB Bengaluru
ವಣಕ್ಕಂ!
ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಎಲ್. ಮುರುಗನ್ ಜಿ, ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ರಾಮಸಾಮಿ ಜಿ, ವಿವಿಧ ಕೃಷಿ ಸಂಸ್ಥೆಗಳ ಎಲ್ಲಾ ಗಣ್ಯರೆ, ಇಲ್ಲಿ ಉಪಸ್ಥಿತರಿರುವ ಇತರೆ ಜನಪ್ರತಿನಿಧಿಗಳೆ, ನನ್ನ ಪ್ರೀತಿಯ ರೈತ ಸಹೋದರ ಸಹೋದರಿಯರೆ ಮತ್ತು ಡಿಜಿಟಲ್ ತಂತ್ರಜ್ಞಾನದ ಮೂಲಕ ನಮ್ಮೊಂದಿಗೆ ಸೇರಿಕೊಂಡಿರುವ ದೇಶಾದ್ಯಂತದ ಲಕ್ಷಾಂತರ ರೈತರೆ! ನಾನು ನಿಮ್ಮೆಲ್ಲರಿಗೂ ವಣಕ್ಕಂ ಮತ್ತು ನಮಸ್ಕಾರದೊಂದಿಗೆ ಶುಭಾಶಯ ಕೋರುತ್ತೇನೆ. ಮೊದಲನೆಯದಾಗಿ, ಇಲ್ಲಿರುವ ನಿಮ್ಮೆಲ್ಲರಿಗೂ ಮತ್ತು ದೇಶಾದ್ಯಂತದ ನನ್ನ ಎಲ್ಲಾ ರೈತ ಸಹೋದರ ಸಹೋದರಿಯರಿಗೂ ಕ್ಷಮೆ ಯಾಚಿಸಲು ಬಯಸುತ್ತೇನೆ. ಇಂದು ಬೆಳಗ್ಗೆ ನಾನು ಸತ್ಯಸಾಯಿ ಬಾಬಾ ಅವರಿಗೆ ಮೀಸಲಾದ ಪುಟ್ಟಪರ್ತಿ ಕಾರ್ಯಕ್ರಮದಲ್ಲಿದ್ದೆ, ಅಲ್ಲಿ ನಡೆದ ಕಾರ್ಯಕ್ರಮ ನಿರೀಕ್ಷೆಗಿಂತ ಹೆಚ್ಚು ಸಮಯ ನಡೆದ ಕಾರಣ ನಾನು ಇಲ್ಲಿಗೆ ತಲುಪಲು ಸುಮಾರು 1 ತಾಸು ತಡವಾಯಿತು. ಅದರಿಂದ ನಾನಿಲ್ಲಿಗೆ ಬರುವುದು ತಡವಾಯಿತು. ಇದರಿಂದ ನಿಮಗೆ ಉಂಟಾಗಿರಬಹುದಾದ ಯಾವುದೇ ಅನನುಕೂಲತೆಗಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ದೇಶಾದ್ಯಂತ ಅನೇಕ ಜನರು ಕಾಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ, ಆದ್ದರಿಂದ ನಾನು ನಿಮ್ಮ ಕ್ಷಮೆ ಕೋರುತ್ತೇನೆ.
ಪಾಂಡಿಯನ್ ಅವರ ಭಾಷಣ ಕೇಳುತ್ತಿದ್ದಾಗ, ನನ್ನ ಬಾಲ್ಯದಲ್ಲಿ ಯಾರಾದರೂ ನನಗೆ ತಮಿಳು ಕಲಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಅವರ ಭಾಷಣವನ್ನು ಇನ್ನಷ್ಟು ಆನಂದಿಸಬಹುದಿತ್ತು ಎಂದು ನನಗೆ ಅನಿಸಿತು. ಆದರೆ ನನಗೆ ಆ ಅದೃಷ್ಟ ಸಿಗಲಿಲ್ಲ. ಆದರೂ, ನನಗೆ ಅರ್ಥವಾಗುತ್ತಿತ್ತು. ಅವರು ಜಲ್ಲಿಕಟ್ಟು ಬಗ್ಗೆ ಮಾತನಾಡುತ್ತಿದ್ದರು, ಕೋವಿಡ್ ಅವಧಿಯಲ್ಲಿ ಎದುರಿಸಿದ ತೊಂದರೆಗಳನ್ನು ಉಲ್ಲೇಖಿಸುತ್ತಿದರು ಎಂಬುದು ನನಗೆ ಅರ್ಥವಾಗುತ್ತಿತ್ತು. ಪಾಂಡಿಯನ್ ಜಿ ಅವರ ಭಾಷಣವನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಅನುವಾದಿಸಿ ಕಳುಹಿಸುವಂತೆ ನಾನು ರವಿ ಅವರನ್ನು ವಿನಂತಿಸಿದ್ದೇನೆ. ನಾನು ಅದನ್ನು ಓದಲು ಬಯಸುತ್ತೇನೆ. ಆದರೆ ನಾನು ಅವರ ಭಾವನೆಗಳನ್ನು ಸಂಪೂರ್ಣವಾಗಿ ಅನುಭವಿಸಲು ಮತ್ತು ಗ್ರಹಿಸಲು ಸಾಧ್ಯವಾಯಿತು, ಅದು ನನಗೆ ಬಹಳ ವಿಶೇಷವಾದ ಕ್ಷಣವಾಗಿತ್ತು. ನಾನು ಇಲ್ಲಿ ವೇದಿಕೆಗೆ ಬಂದಾಗ, ಅನೇಕ ರೈತ ಸಹೋದರ ಸಹೋದರಿಯರು ತಮ್ಮ ಗಮ್ಚಾಗಳನ್ನು ಬೀಸುತ್ತಿರುವುದನ್ನು ಗಮನಿಸಿದೆ. ನಾನು ಬರುವ ಮೊದಲೇ ಬಿಹಾರದ ತಂಗಾಳಿ ಇಲ್ಲಿಗೆ ತಲುಪಿದಂತೆ ಭಾಸವಾಯಿತು.
ನನ್ನ ಪ್ರೀತಿಯ ರೈತ ಸಹೋದರ ಸಹೋದರಿಯರೆ,
ಕೊಯಮತ್ತೂರಿನ ಈ ಪವಿತ್ರ ಭೂಮಿಯಲ್ಲಿ, ಮೊದಲನೆಯದಾಗಿ, ನಾನು ಮರುಧಮಲೈನ ಮುರುಗನಿಗೆ ನಮಸ್ಕರಿಸುತ್ತೇನೆ. ಕೊಯಮತ್ತೂರು ಸಂಸ್ಕೃತಿ, ಕರುಣೆ ಮತ್ತು ಸೃಜನಶೀಲತೆಯ ನಾಡು. ಈ ನಗರವು ದಕ್ಷಿಣ ಭಾರತದ ಉದ್ಯಮಶೀಲ ಶಕ್ತಿಯ ಚೈತನ್ಯ ಕೇಂದ್ರವಾಗಿದೆ. ಇಲ್ಲಿನ ಜವಳಿ ವಲಯವು ನಮ್ಮ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡಿದೆ. ಈಗ ಕೊಯಮತ್ತೂರು ಇನ್ನಷ್ಟು ವಿಶೇಷವಾಗಿದೆ, ಏಕೆಂದರೆ ಮಾಜಿ ಸಂಸದ ಸಿ.ಪಿ. ರಾಧಾಕೃಷ್ಣನ್ ಜಿ, ಈಗ ನಮಗೆಲ್ಲರಿಗೂ ಉಪರಾಷ್ಟ್ರಪತಿ ಪಾತ್ರದಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಸ್ನೇಹಿತರೆ,
ನೈಸರ್ಗಿಕ ಅಥವಾ ಸಾವಯವ ಕೃಷಿ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ವಿಷಯ. ಈ ಅಸಾಧಾರಣವಾದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ತಮಿಳುನಾಡಿನ ಎಲ್ಲಾ ರೈತ ಸಹೋದರ ಸಹೋದರಿಯರನ್ನು ನಾನು ಅಭಿನಂದಿಸುತ್ತೇನೆ. ನನಗೆ ಇದೀಗ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಅನೇಕ ರೈತರೊಂದಿಗೆ ಸಂವಹನ ನಡೆಸುವ ಅವಕಾಶ ಸಿಕ್ಕಿತು. ಕೆಲವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಪಿಎಚ್‌ಡಿಗಳನ್ನು ಪೂರ್ಣಗೊಳಿಸಿ ನಂತರ ಕೃಷಿ ಆರಿಸಿಕೊಂಡಿದ್ದಾರೆ. ಕೆಲವರು ನಾಸಾದಲ್ಲಿ ಚಂದ್ರಯಾನಕ್ಕೆ ಸಂಬಂಧಿಸಿದ ಪ್ರತಿಷ್ಠಿತ ಕೆಲನ್ನು ಬಿಟ್ಟು ಕೃಷಿಗೆ ಮರಳಿದ್ದಾರೆ. ಅವರು ಕೃಷಿ ಮಾಡುವುದಲ್ಲದೆ, ಇತರೆ ಅನೇಕ ರೈತರು ಮತ್ತು ಯುವಜನರಿಗೆ ತರಬೇತಿ ನೀಡುತ್ತಿದ್ದಾರೆ. ಇಂದು ನಾನು ಈ ಕಾರ್ಯಕ್ರಮಕ್ಕೆ ಬರದಿದ್ದರೆ, ನನ್ನ ಜೀವನದಲ್ಲಿ ಬಹಳ ಮುಖ್ಯವಾದದ್ದನ್ನು ಕಳೆದುಕೊಳ್ಳುತ್ತಿದ್ದೆ ಎಂದು ನಾನು ಸಾರ್ವಜನಿಕವಾಗಿ ಒಪ್ಪಿಕೊಳ್ಳಬೇಕು. ನಾನು ಇಂದು ಇಲ್ಲಿ ಬಹಳಷ್ಟು ಕಲಿತಿದ್ದೇನೆ. ತಮಿಳುನಾಡಿನ ರೈತರ ಧೈರ್ಯ ಮತ್ತು ಬದಲಾವಣೆಯನ್ನು ಸ್ವೀಕರಿಸುವ ಅವರ ಶಕ್ತಿಯನ್ನು ನಾನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇನೆ. ಇಲ್ಲಿ, ರೈತ ಸಹೋದರ ಸಹೋದರಿಯರು, ಕೃಷಿ ವಿಜ್ಞಾನಿಗಳು, ಉದ್ಯಮ ಪಾಲುದಾರರು, ನವೋದ್ಯಮಗಳು ಮತ್ತು ನಾವೀನ್ಯಕಾರರು ಎಲ್ಲರೂ ಒಟ್ಟಿಗೆ ಬಂದಿದ್ದಾರೆ. ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೆ,
ಮುಂಬರುವ ವರ್ಷಗಳಲ್ಲಿ ಭಾರತೀಯ ಕೃಷಿಯಲ್ಲಿ ಅನೇಕ ಪ್ರಮುಖ ಬದಲಾವಣೆಗಳು ನಡೆಯುತ್ತಿರುವುದನ್ನು ನಾನು ನೋಡುತ್ತೇನೆ. ಭಾರತದ ನೈಸರ್ಗಿಕ ಕೃಷಿಯು ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ. ನಮ್ಮ ಜೀವವೈವಿಧ್ಯವು ಹೊಸ ರೂಪ ಪಡೆಯುತ್ತಿದೆ, ನಮ್ಮ ದೇಶದ ಯುವಕರು ಈಗ ಕೃಷಿಯನ್ನು ಆಧುನಿಕ, ವಿಸ್ತರಿಸಬಹುದಾದ ಅವಕಾಶವಾಗಿ ನೋಡುತ್ತಿದ್ದಾರೆ. ಇದು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಗೆ ಅಗಾಧವಾದ ಶಕ್ತಿಯನ್ನು ನೀಡಲಿದೆ.
ನನ್ನ ರೈತ ಸಹೋದರ ಸಹೋದರಿಯರೆ,
ಕಳೆದ 11 ವರ್ಷಗಳಲ್ಲಿ ದೇಶದ ಸಂಪೂರ್ಣ ಕೃಷಿ ವಲಯವು ಬೃಹತ್ ಪರಿವರ್ತನೆಗೆ ಒಳಗಾಗಿದೆ. ನಮ್ಮ ಕೃಷಿ ರಫ್ತು ಬಹುತೇಕ ದ್ವಿಗುಣಗೊಂಡಿದೆ. ಕೃಷಿಯನ್ನು ಆಧುನೀಕರಿಸಲು, ಸರ್ಕಾರವು ರೈತರನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ತೆರೆದಿದೆ. ರೈತರು ಈ ವರ್ಷವಷ್ಟೇ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 10 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಹಾಯ ಪಡೆದಿದ್ದಾರೆ. 10 ಲಕ್ಷ ಕೋಟಿ ರೂಪಾಯಿಗಳ ಈ ಅಂಕಿಅಂಶ ಅತ್ಯಂತ ಮಹತ್ವದ್ದಾಗಿದೆ. 7 ವರ್ಷಗಳ ಹಿಂದೆ ಹೈನುಗಾರರು ಮತ್ತು ಮೀನುಗಾರರನ್ನು ಕೆಸಿಸಿ ಯೋಜನೆಯಡಿ ಸೇರಿಸಿದ ನಂತರ, ಅವರು ಸಹ ಅದರಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ಜೈವಿಕ ಗೊಬ್ಬರಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವುದರಿಂದ ರೈತರಿಗೆ ಗಣನೀಯ ಪ್ರಯೋಜನಗಳನ್ನು ತಂದಿದೆ.
ಸ್ವಲ್ಪ ಸಮಯದ ಹಿಂದೆ, ನಾವು ದೇಶದ ರೈತರಿಗಾಗಿ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತನ್ನು ಇಲ್ಲಿಂದಲೇ ಬಿಡುಗಡೆ ಮಾಡಿದ್ದೇವೆ. ದೇಶಾದ್ಯಂತ ರೈತರು 18,000 ಕೋಟಿ ರೂಪಾಯಿಗಳನ್ನು ನೇರವಾಗಿ ತಮ್ಮ ಖಾತೆಗಳಿಗೆ ಪಡೆದಿದ್ದಾರೆ. ತಮಿಳುನಾಡಿನಲ್ಲಿಯೂ ಸಹ, ಲಕ್ಷಾಂತರ ರೈತರು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆದಿದ್ದಾರೆ.
ಸ್ನೇಹಿತರೆ,
ಈ ಯೋಜನೆಯಡಿ ದೇಶಾದ್ಯಂತ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ಇಲ್ಲಿಯವರೆಗೆ 4 ಲಕ್ಷ ಕೋಟಿ ರೂಪಾಯಿ ನೇರವಾಗಿ ವರ್ಗಾಯಿಸಲಾಗಿದೆ. ಈ ಮೊತ್ತವು ರೈತರು ವಿವಿಧ ಕೃಷಿ ಸಂಬಂಧಿತ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಿದೆ. ಈ ಯೋಜನೆಯ ಫಲಾನುಭವಿಗಳಾದ ಕೋಟ್ಯಂತರ ರೈತ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಬ್ಬರು ಯುವತಿಯರು ಬಹಳ ಸಮಯದಿಂದ ಫಲಕಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಅವರ ಕೈಗಳು ಸೋತಿರುತ್ತವೆ. ಭದ್ರತಾ ಸಿಬ್ಬಂದಿ ಅವರಿಂದ ಫಲಕಗಳನ್ನು ಸಂಗ್ರಹಿಸಿ ನನಗೆ ನೀಡುವಂತೆ ವಿನಂತಿಸುತ್ತೇನೆ. ಅವರು ಯಾವುದೇ ಸಂದೇಶ ಹೊಂದಿದ್ದರೂ, ನಾನು ಅದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇನೆ. ದಯವಿಟ್ಟು ಅದನ್ನು ಸಂಗ್ರಹಿಸಿ ನನ್ನ ಬಳಿಗೆ ತನ್ನಿ.
ಸ್ನೇಹಿತರೆ,
ಧನ್ಯವಾದಗಳು ಮಗಳೆ. ನೀವು ಬಹಳ ಸಮಯದಿಂದ ನಿಮ್ಮ ಕೈ ಎತ್ತಿಕೊಂಡು ನಿಂತಿದ್ದೀರಿ.
ಸ್ನೇಹಿತರೆ,
ನೈಸರ್ಗಿಕ ಕೃಷಿಯ ವಿಸ್ತರಣೆಯು 21ನೇ ಶತಮಾನದ ಕೃಷಿಯ ಅಗತ್ಯವಾಗಿದೆ. ಅನೇಕ ವರ್ಷಗಳಲ್ಲಿ, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಹೊಲಗಳಲ್ಲಿ ಮತ್ತು ಅನೇಕ ಕೃಷಿ ಸಂಬಂಧಿತ ವಲಯಗಳಲ್ಲಿ ರಾಸಾಯನಿಕಗಳ ಬಳಕೆ ವೇಗವಾಗಿ ಹೆಚ್ಚಾಗಿದೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ, ಮಣ್ಣಿನ ತೇವಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಈ ಎಲ್ಲದರ ಜೊತೆಗೆ, ಕೃಷಿ ವೆಚ್ಚವು ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಇದಕ್ಕೆ ಪರಿಹಾರ ಬೆಳೆ ವೈವಿಧ್ಯತೆ ಮತ್ತು ನೈಸರ್ಗಿಕ ಕೃಷಿಯಲ್ಲಿದೆ.
ಸ್ನೇಹಿತರೆ,
ನಮ್ಮ ಮಣ್ಣಿನ ಫಲವತ್ತತೆ ಮತ್ತು ನಮ್ಮ ಬೆಳೆಗಳ ಪೌಷ್ಟಿಕಾಂಶದ ಮೌಲ್ಯವನ್ನು ಮರುಸ್ಥಾಪಿಸಲು ನಾವು ನೈಸರ್ಗಿಕ ಕೃಷಿಯ ಹಾದಿಯಲ್ಲಿ ಮುಂದುವರಿಯಬೇಕು. ಇದು ನಮ್ಮ ದೃಷ್ಟಿಕೋನ ಮತ್ತು ನಮ್ಮ ಅವಶ್ಯಕತೆ ಎರಡೂ ಆಗಿದೆ. ಆಗ ಮಾತ್ರ ಭವಿಷ್ಯದ ಪೀಳಿಗೆಗೆ ನಮ್ಮ ಜೀವವೈವಿಧ್ಯತೆಯನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ. ನೈಸರ್ಗಿಕ ಕೃಷಿಯು ಹವಾಮಾನ ಬದಲಾವಣೆ ಮತ್ತು ಹವಾಮಾನ ಮಾದರಿಗಳಲ್ಲಿನ ಬದಲಾವಣೆಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ. ಇದು ನಮ್ಮ ಮಣ್ಣನ್ನು ಆರೋಗ್ಯಕರವಾಗಿರಿಸುತ್ತದೆ, ಹಾನಿಕಾರಕ ರಾಸಾಯನಿಕಗಳಿಂದ ಜನರನ್ನು ರಕ್ಷಿಸುತ್ತದೆ. ಇಂದಿನ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಸ್ನೇಹಿತರೆ,
ನಮ್ಮ ಸರ್ಕಾರವು ಭಾರತದ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಒಂದು ವರ್ಷದ ಹಿಂದೆ, ಕೇಂದ್ರ ಸರ್ಕಾರವು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಪ್ರಾರಂಭಿಸಿತು. ಲಕ್ಷಾಂತರ ರೈತರು ಈಗಾಗಲೇ ಇದಕ್ಕೆ ಸೇರಿದ್ದಾರೆ. ಇದರ ಸಕಾರಾತ್ಮಕ ಪರಿಣಾಮವು ದಕ್ಷಿಣ ಭಾರತದಾದ್ಯಂತ ವಿಶೇಷವಾಗಿ ಗೋಚರಿಸುತ್ತಿದೆ. ಇಲ್ಲಿ ತಮಿಳುನಾಡಿನಲ್ಲೇ ಸುಮಾರು 35,000 ಹೆಕ್ಟೇರ್ ಭೂಮಿ ಸಾವಯವ ಮತ್ತು ನೈಸರ್ಗಿಕ ಕೃಷಿಯ ಅಡಿಯಲ್ಲಿದೆ.
ಸ್ನೇಹಿತರೆ,
ನೈಸರ್ಗಿಕ ಕೃಷಿ ಭಾರತದ ಸ್ಥಳೀಯ ಪರಿಕಲ್ಪನೆಯಾಗಿದೆ. ನಾವು ಅದನ್ನು ಎಲ್ಲಿಂದಲೂ ಆಮದು ಮಾಡಿಕೊಂಡಿಲ್ಲ. ಇದು ನಮ್ಮ ಸ್ವಂತ ಸಂಪ್ರದಾಯಗಳಿಂದ ಹುಟ್ಟಿಕೊಂಡಿದೆ. ನಮ್ಮ ಪೂರ್ವಜರು ಇದನ್ನು ಬಹಳ ಸಮರ್ಪಣೆಯೊಂದಿಗೆ ಅಭಿವೃದ್ಧಿಪಡಿಸಿದರು, ಇದು ನಮ್ಮ ಪರಿಸರದೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದೆ. ದಕ್ಷಿಣ ಭಾರತದ ರೈತರು ಪಂಚಗವ್ಯ, ಜೀವಾಮೃತ, ಬೀಜಾಮೃತ, ಆಚಾದನ್ ಮುಂತಾದ ಸಾಂಪ್ರದಾಯಿಕ ನೈಸರ್ಗಿಕ ಕೃಷಿ ವಿಧಾನಗಳನ್ನು ಅನುಸರಿಸುವುದನ್ನು ಮುಂದುವರಿಸುತ್ತಿರುವುದು ನನಗೆ ಸಂತೋಷ ತಂದಿದೆ. ಈ ಪದ್ಧತಿಗಳು ಮಣ್ಣಿನ ಆರೋಗ್ಯ ಸುಧಾರಿಸುತ್ತವೆ, ಬೆಳೆಗಳನ್ನು ರಾಸಾಯನಿಕ ಮುಕ್ತವಾಗಿರಿಸುತ್ತವೆ ಮತ್ತು ಉತ್ಪಾದನಾ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ.
ಸ್ನೇಹಿತರೆ,
ನಾವು ನೈಸರ್ಗಿಕ ಕೃಷಿಯನ್ನು ಶ್ರೀ ಅನ್ನ-ಸಿರಿಧಾನ್ಯ ಕೃಷಿಯೊಂದಿಗೆ ಸಂಯೋಜಿಸಿದಾಗ, ಅದು ಭೂಮಿ ತಾಯಿಯನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ತಮಿಳುನಾಡಿನಲ್ಲಿ, ಮುರುಗನ್ ದೇವರಿಗೂ ಜೇನುತುಪ್ಪ ಮತ್ತು ರಾಗಿಗಳಿಂದ ಮಾಡಿದ ಪವಿತ್ರ ನೈವೇದ್ಯವಾದ ತೇನಮ್ ತಿನೈ ಮಾವುಮ್ ಅನ್ನು ಅರ್ಪಿಸಲಾಗುತ್ತದೆ. ತಮಿಳು ಪ್ರದೇಶಗಳಲ್ಲಿ ಕಂಬು ಮತ್ತು ಸಮಯೈ, ಕೇರಳ ಮತ್ತು ಕರ್ನಾಟಕದಲ್ಲಿ ರಾಗಿ ಮತ್ತು ತೆಲುಗು ಮಾತನಾಡುವ ರಾಜ್ಯಗಳಲ್ಲಿ ಸಜ್ಜೆ ಮತ್ತು ಜೊನ್ನಾ ತಲೆಮಾರುಗಳಿಂದ ನಮ್ಮ ಆಹಾರದ ಭಾಗವಾಗಿದೆ. ಈ ಉತ್ಕೃಷ್ಟ ಆಹಾರ(ಸೂಪರ್‌ಫುಡ್) ಜಾಗತಿಕ ಮಾರುಕಟ್ಟೆಗಳನ್ನು ತಲುಪುವಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ನೈಸರ್ಗಿಕ ಕೃಷಿ ಮತ್ತು ರಾಸಾಯನಿಕ ಮುಕ್ತ ಕೃಷಿಯು ಅವುಗಳ ಜಾಗತಿಕ ಸ್ವೀಕಾರವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ, ಈ ವಿಷಯಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಈ ಶೃಂಗಸಭೆಯಲ್ಲಿ ಖಂಡಿತವಾಗಿಯೂ ಚರ್ಚಿಸಬೇಕು ಎಂದು ನಾನು ನಂಬುತ್ತೇನೆ.
ಸ್ನೇಹಿತರೆ,
ನಾನು ಯಾವಾಗಲೂ ಏಕಸಂಸ್ಕೃತಿಯ ಬದಲು ಬಹುಸಂಸ್ಕೃತಿಯ ಕೃಷಿಯನ್ನು ಪ್ರೋತ್ಸಾಹಿಸಿದ್ದೇನೆ. ದಕ್ಷಿಣ ಭಾರತದ ಹಲವು ಪ್ರದೇಶಗಳಿಂದ ನಮಗೆ ಇದಕ್ಕಾಗಿ ಹೆಚ್ಚಿನ ಸ್ಫೂರ್ತಿ ಸಿಗುತ್ತದೆ. ನಾವು ಕೇರಳ ಅಥವಾ ಕರ್ನಾಟಕದ ಗುಡ್ಡಗಾಡು ಪ್ರದೇಶಗಳಿಗೆ ಹೋದರೆ, ಬಹುಮಹಡಿ ಕೃಷಿಯ ಉದಾಹರಣೆಗಳನ್ನು ನಾವು ನೋಡಬಹುದು. ಒಂದೇ ಹೊಲದಲ್ಲಿ ತೆಂಗಿನ ಮರಗಳು, ಅಡಿಕೆ ಮರಗಳು ಮತ್ತು ಹಣ್ಣಿನ ಸಸ್ಯಗಳಿವೆ. ಅವುಗಳ ಕೆಳಗೆ ಮಸಾಲೆ ಮತ್ತು ಕರಿಮೆಣಸು ಬೆಳೆಸಲಾಗುತ್ತದೆ. ಇದರರ್ಥ ಸರಿಯಾದ ಯೋಜನೆಯೊಂದಿಗೆ ಸಣ್ಣ ಪ್ರದೇಶದಲ್ಲೂ ಬಹು ಬೆಳೆಗಳನ್ನು ಬೆಳೆಯಬಹುದು. ಇದು ನೈಸರ್ಗಿಕ ಕೃಷಿಯ ಮೂಲಭೂತ ತತ್ವಶಾಸ್ತ್ರ. ನಾವು ಈ ಕೃಷಿ ಮಾದರಿಯನ್ನು ಪ್ಯಾನ್-ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯಬೇಕು. ದೇಶದ ವಿವಿಧ ಪ್ರದೇಶಗಳಲ್ಲಿ ಈ ಪದ್ಧತಿಗಳನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಪರಿಗಣಿಸಲು ನಾನು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೆ,
ದಕ್ಷಿಣ ಭಾರತವು ಕೃಷಿಯ ಜೀವಂತ ವಿಶ್ವವಿದ್ಯಾಲಯವಾಗಿದೆ. ವಿಶ್ವದ ಅತ್ಯಂತ ಹಳೆಯ ಕಾರ್ಯನಿ ರ್ವಹಿಸುವ ಅಣೆಕಟ್ಟುಗಳನ್ನು ಈ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಕಾಳಿಂಗರಾಯನ ಕಾಲುವೆಯನ್ನು 13ನೇ ಶತಮಾನದಲ್ಲೇ ಇಲ್ಲಿ ನಿರ್ಮಿಸಲಾಯಿತು. ಇಲ್ಲಿನ ದೇವಾಲಯದ ಕೊಳಗಳು ವಿಕೇಂದ್ರೀಕೃತ ನೀರಿನ ಸಂರಕ್ಷಣಾ ವ್ಯವಸ್ಥೆಗಳ ಮಾದರಿಗಳಾಗಿವೆ. ಈ ಭೂಮಿ ನದಿ ನೀರನ್ನು ನಿಯಂತ್ರಿಸುವ ಮತ್ತು ಅದನ್ನು ಕೃಷಿಗೆ ಬಳಸುವ ವೈಜ್ಞಾನಿಕ ಮಾದರಿಯನ್ನು ಅಭಿವೃದ್ಧಿಪಡಿಸಿತು. ಈ ಪ್ರದೇಶವು ಸಾವಿರಾರು ವರ್ಷಗಳ ಹಿಂದೆ ಮುಂದುವರಿದ ನೀರಿನ ಎಂಜಿನಿಯರಿಂಗ್ ಅನ್ನು ಪ್ರದರ್ಶಿಸಿತು. ಆದ್ದರಿಂದ, ದೇಶ ಮತ್ತು ಪ್ರಪಂಚಕ್ಕೆ ನೈಸರ್ಗಿಕ ಕೃಷಿಯ ನಾಯಕತ್ವವು ಈ ಪ್ರದೇಶದಿಂದಲೇ ಹೊರಹೊಮ್ಮುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ.
ಸ್ನೇಹಿತರೆ,
‘ವಿಕಸಿತ ಭಾರತ’(ಅಭಿವೃದ್ಧಿ ಹೊಂದಿದ ಭಾರತ)ಕ್ಕಾಗಿ ಭವಿಷ್ಯದ ಕೃಷಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ದೇಶಾದ್ಯಂತದ ನನ್ನ ರೈತ ಸಹೋದರ ಸಹೋದರಿಯರು, ವಿಶೇಷವಾಗಿ ತಮಿಳುನಾಡಿನಲ್ಲಿರುವ ನನ್ನ ರೈತ ಸ್ನೇಹಿತರು, ಒಂದು ಋತುವಿನಲ್ಲಿ ಒಂದು ಎಕರೆಯಿಂದ ಪ್ರಾರಂಭಿಸುವಂತೆ ನಾನು ಒತ್ತಾಯಿಸುತ್ತೇನೆ. ಅಂದರೆ, ಒಂದು ಋತುವಿನಲ್ಲಿ ಕೇವಲ 1 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡಿ. ನೀವು ನಿಮ್ಮ ಕ್ಷೇತ್ರದ ಒಂದು ಮೂಲೆಯನ್ನು ಆರಿಸಿಕೊಂಡು ಪ್ರಯೋಗ ಮಾಡಿ. ಫಲಿತಾಂಶಗಳ ಆಧಾರದ ಮೇಲೆ, ಮುಂದಿನ ವರ್ಷ ಅದನ್ನು ವಿಸ್ತರಿಸಿ, 3ನೇ ವರ್ಷ ಅದನ್ನು ಮತ್ತಷ್ಟು ವಿಸ್ತರಿಸಿ ಮತ್ತು ಮುಂದುವರಿಯಿರಿ. ನೈಸರ್ಗಿಕ ಕೃಷಿಯನ್ನು ಕೃಷಿ ಪಠ್ಯಕ್ರಮದ ಪ್ರಮುಖ ಭಾಗವನ್ನಾಗಿ ಮಾಡಲು ನಾನು ಎಲ್ಲಾ ವಿಜ್ಞಾನಿಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ವಿನಂತಿಸುತ್ತೇನೆ. ಹಳ್ಳಿಗಳಿಗೆ ಹೋಗಿ, ರೈತರ ಹೊಲಗಳನ್ನು ನಿಮ್ಮ ಪ್ರಯೋಗಾಲಯಗಳನ್ನಾಗಿ ಮಾಡಿಕೊಳ್ಳಿ. ನಾವು ನೈಸರ್ಗಿಕ ಕೃಷಿಯನ್ನು ವಿಜ್ಞಾನ ಬೆಂಬಲಿತ ಚಳುವಳಿಯನ್ನಾಗಿ ಪರಿವರ್ತಿಸಬೇಕು. ನೈಸರ್ಗಿಕ ಕೃಷಿಯ ಈ ಅಭಿಯಾನದಲ್ಲಿ ರಾಜ್ಯ ಸರ್ಕಾರಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಪಾತ್ರವು ಅತ್ಯಂತ ಮುಖ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ 10,000 ರೈತ ಉತ್ಪಾದಕ ಸಂಸ್ಥೆಗಳು(ಎಫ್‌ಪಿಒಗಳು) ರಚನೆಯಾಗಿವೆ. ಎಫ್‌ಪಿಒಗಳ ಸಹಾಯದಿಂದ, ನಾವು ರೈತರ ಸಣ್ಣ ಸಮೂಹಗಳನ್ನು ರಚಿಸಬಹುದು. ನಾವು ಸ್ಥಳೀಯವಾಗಿ ಸ್ವಚ್ಛಗೊಳಿಸುವಿಕೆ, ಪ್ಯಾಕೇಜಿಂಗ್ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸಬೇಕು. ನಾವು ಅವುಗಳನ್ನು ಇ-ನ್ಯಾಮ್ ನಂತಹ ಆನ್‌ಲೈನ್ ಮಾರುಕಟ್ಟೆಗಳಿಗೆ ನೇರವಾಗಿ ಸಂಪರ್ಕಿಸಬೇಕು. ಇದು ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರಿಗೆ ಪ್ರಯೋಜನಗಳನ್ನು ಹೆಚ್ಚಿಸುತ್ತದೆ. ನಮ್ಮ ರೈತರ ಸಾಂಪ್ರದಾಯಿಕ ಜ್ಞಾನ, ವಿಜ್ಞಾನದ ಶಕ್ತಿ ಮತ್ತು ಸರ್ಕಾರದ ಬೆಂಬಲ ಒಟ್ಟಿಗೆ ಸೇರಿದಾಗ, ನಮ್ಮ ರೈತರು ಸಮೃದ್ಧಿಯಾಗುವುದಲ್ಲದೆ, ನಮ್ಮ ತಾಯಿ ಭೂಮಿಯೂ ಸಹ ಆರೋಗ್ಯವಾಗಿ ಉಳಿಯುತ್ತದೆ.
ಸ್ನೇಹಿತರೆ,
ಈ ಶೃಂಗಸಭೆ ಮತ್ತು ವಿಶೇಷವಾಗಿ ನಮ್ಮ ರೈತ ಸಹೋದರ ಸಹೋದರಿಯರು ತೋರಿದ ನಾಯಕತ್ವವು ದೇಶದಲ್ಲಿ ನೈಸರ್ಗಿಕ ಕೃಷಿಗೆ ಹೊಸ ದಿಕ್ಕು ನೀಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಹೊಸ ಆಲೋಚನೆಗಳು ಮತ್ತು ಹೊಸ ಪರಿಹಾರಗಳು ಇಲ್ಲಿಂದ ಹೊರಹೊಮ್ಮುತ್ತವೆ. ಈ ಆಶಯದೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ತುಂಬು ಧನ್ಯವಾದಗಳು!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ತುಂಬು ಧನ್ಯವಾದಗಳು!
*****
(Release ID: 2192016)
Visitor Counter : 7
Read this release in:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu
,
Malayalam