ರೈಲ್ವೇ ಸಚಿವಾಲಯ
azadi ka amrit mahotsav

ಕೋವಿಡ್-19 ನಂತರದ ಪರಿಷ್ಕರಣೆಯ ಬಳಿಕ ದೈನಂದಿನ ಸರಾಸರಿ ರೈಲು ಸೇವೆಗಳ ಸಂಖ್ಯೆ 11,740ಕ್ಕೆ ಏರಿಕೆ; ಸಾಂಕ್ರಾಮಿಕ ಪೂರ್ವದಲ್ಲಿ ಇದು 11,283 ಇತ್ತು


2,238 ಮೇಲ್ ಮತ್ತು ಎಕ್ಸ್ ಪ್ರೆಸ್ ಸೇವೆಗಳು, ಕೋವಿಡ್ ಪೂರ್ವದ ದಿನದ 1,768 ರೈಲುಗಳಿಗೆ ಹೋಲಿಸಿದರೆ 470 ರಷ್ಟು ಹೆಚ್ಚಳ

ದೀರ್ಘ ಮತ್ತು ಮಧ್ಯಮ ದೂರದ ರಾತ್ರಿ ಪ್ರಯಾಣಕ್ಕಾಗಿ ದೇಶೀಯವಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ಸ್ಲೀಪರ್ ರೈಲು ಆರಾಮದಾಯಕ ಪ್ರಯಾಣಕ್ಕೆ ಸಜ್ಜು; ಎರಡು ರೇಕ್ ಗಳು ಪ್ರಸ್ತುತ ಪರೀಕ್ಷಾರ್ಥ ಸಂಚಾರ ಮತ್ತು ಕಾರ್ಯಾರಂಭದ ಹಂತದಲ್ಲಿವೆ

प्रविष्टि तिथि: 10 DEC 2025 4:46PM by PIB Bengaluru

ಪ್ರಸ್ತುತ, ಭಾರತೀಯ ರೈಲ್ವೆ ಜಾಲದಲ್ಲಿ 'ಚೇರ್ ಕಾರ್' (ಕುಳಿತು ಪ್ರಯಾಣಿಸುವ) ಸೌಲಭ್ಯವಿರುವ 164 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ವಂದೇ ಭಾರತ್ ಎಕ್ಸ್ ಪ್ರೆಸ್ ಮತ್ತು ಅದರ ವಿವಿಧ ಮಾದರಿಗಳು ಸೇರಿದಂತೆ ಹೊಸ ರೈಲು ಸೇವೆಗಳನ್ನು ಆರಂಭಿಸುವುದು ಭಾರತೀಯ ರೈಲ್ವೆಯಲ್ಲಿ ಒಂದು ನಿರಂತರ ಪ್ರಕ್ರಿಯೆಯಾಗಿದೆ. ಇದು ಮುಖ್ಯವಾಗಿ ಈ ಕೆಳಗಿನ ಅಂಶಗಳನ್ನು ಅವಲಂಬಿಸಿದೆ:

  • ಆ ವಿಭಾಗದ ಸಾಮರ್ಥ್ಯ
  • ಸಂಚಾರ ಪಥದ ಲಭ್ಯತೆ
  • ಅಗತ್ಯವಿರುವ ರೋಲಿಂಗ್ ಸ್ಟಾಕ್ (ರೈಲು ಬೋಗಿಗಳು) ಲಭ್ಯತೆ
  • ರೋಲಿಂಗ್ ಸ್ಟಾಕ್ ಗೆ ಬೇಕಾದ ಪೂರಕ ಮೂಲಸೌಕರ್ಯಗಳ ಲಭ್ಯತೆ
  • ರೈಲು ಹಳಿಗಳು ಮತ್ತು ಇತರ ಆಸ್ತಿಗಳ ನಿರ್ವಹಣಾ ಅಗತ್ಯತೆಗಳು

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ದೃಷ್ಟಿಯಿಂದ, ಭಾರತೀಯ ರೈಲ್ವೆಯು (ಐ.ಅರ್.) ಮಾರ್ಚ್ 23, 2020 ರಿಂದ ಜಾರಿಗೆ ಬರುವಂತೆ ಎಲ್ಲಾ ಸಾಮಾನ್ಯ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು ಮತ್ತು ಕೇವಲ ವಿಶೇಷ ರೈಲು ಸೇವೆಗಳನ್ನು ಮಾತ್ರ ನಡೆಸಲಾಗುತ್ತಿತ್ತು. ಇದಲ್ಲದೆ, ಐ.ಐ.ಟಿ.-ಬಾಂಬೆ (IIT-Bombay) ಸಹಾಯದೊಂದಿಗೆ ರೈಲು ಸೇವೆಗಳು ಮತ್ತು ನಿಲುಗಡೆಗಳನ್ನು ಒಳಗೊಂಡಂತೆ ರೈಲ್ವೆ ಸಮಯಪಟ್ಟಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸುವ ಕಾರ್ಯವನ್ನು ಭಾರತೀಯ ರೈಲ್ವೆ ಕೈಗೊಂಡಿದೆ. ನಿರ್ವಹಣಾ ಕಾರಿಡಾರ್ ಬ್ಲಾಕ್ಗಳನ್ನು ನಿರ್ಮಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದು, ರೈಲುಗಳ ವೇಗವನ್ನು ಹೆಚ್ಚಿಸುವುದು ಮತ್ತು ಸಮಯಪಾಲನೆಯನ್ನು ಸುಧಾರಿಸುವುದು ಈ ಕಾರ್ಯದ ಪ್ರಮುಖ ಉದ್ದೇಶಗಳಾಗಿವೆ. ನವೆಂಬರ್ 2021 ರಿಂದ, ಎಕ್ಸ್ ಪ್ರೆಸ್ ರೈಲುಗಳು ಪರಿಷ್ಕೃತ ಸಮಯಪಟ್ಟಿ ಮತ್ತು ತಮ್ಮ ಸಾಮಾನ್ಯ ಸಂಖ್ಯೆಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಕೋವಿಡ್-19 ಗಿಂತ ಮೊದಲು ಭಾರತೀಯ ರೈಲ್ವೆ ಜಾಲದಲ್ಲಿ ಪ್ರತಿದಿನ ಸರಾಸರಿ 11,283 ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿದ್ದವು, ಆದರೆ ಈಗ (ನವೆಂಬರ್ 2025) ಈ ಸಂಖ್ಯೆ 11,740ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಕೋವಿಡ್-19 ಗಿಂತ ಮೊದಲು ಪ್ರತಿದಿನ ಸರಾಸರಿ 1,768 ಮೇಲ್/ಎಕ್ಸ್ಪ್ರೆಸ್ ರೈಲು ಸೇವೆಗಳಿದ್ದವು, ಆದರೆ ಈಗ (ನವೆಂಬರ್ 2025) ಇವುಗಳ ಸಂಖ್ಯೆ 2,238ಕ್ಕೆ ತಲುಪಿದೆ.

ವಂದೇ ಭಾರತ್ ಸ್ಲೀಪರ್ ರೈಲುಗಳು

ದೀರ್ಘ ಮತ್ತು ಮಧ್ಯಮ ದೂರದ ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ, ವಂದೇ ಭಾರತ್ ರೈಲಿನ ಸ್ಲೀಪರ್ (ಮಲಗುವ ಸೌಲಭ್ಯವಿರುವ) ಮಾದರಿಯನ್ನು ದೇಶೀಯವಾಗಿ ವಿನ್ಯಾಸಗೊಳಿಸಲಾಗಿದೆ. ಇಂತಹ ಎರಡು ರೇಕ್ ಗಳನ್ನು ಈಗಾಗಲೇ ತಯಾರಿಸಲಾಗಿದ್ದು, ಅವು ಪ್ರಸ್ತುತ ಪರೀಕ್ಷಾರ್ಥ ಸಂಚಾರ/ಕಾರ್ಯಾರಂಭದ ಹಂತದಲ್ಲಿವೆ.

ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ಅಳವಡಿಸಲಾಗಿರುವ ಪ್ರಮುಖ ತಾಂತ್ರಿಕ ಸುಧಾರಣೆಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

●   'ಕವಚ್' (KAVACH) ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

● ಗಂಟೆಗೆ 180 ಕಿ.ಮೀ ವಿನ್ಯಾಸದ ವೇಗ ಮತ್ತು 160 ಕಿ.ಮೀ ಕಾರ್ಯಾಚರಣೆಯ ವೇಗದೊಂದಿಗೆ ಹೆಚ್ಚಿನ ವೇಗವರ್ಧಕ ಸಾಮರ್ಥ್ಯ.

● ಅಪಘಾತ ನಿರೋಧಕ ಮತ್ತು ಜರ್ಕ್ ರಹಿತ ಸೆಮಿ-ಪರ್ಮನೆಂಟ್ ಕಪ್ಲರ್ ಗಳು ಹಾಗೂ ಆ್ಯಂಟಿ-ಕ್ಲೈಂಬರ್ಗಳು.

● EN ಮಾನದಂಡಗಳಿಗೆ ಅನುಗುಣವಾಗಿರುವ ಅಪಘಾತ ನಿರೋಧಕ  ಕಾರ್ಬಾಡಿ ವಿನ್ಯಾಸ.

 ● EN-45545 HL3 ಅಗ್ನಿ ಸುರಕ್ಷತಾ ಮಾನದಂಡಗಳು.

● ಪ್ರತಿ ಬೋಗಿಯ ಕೊನೆಯಲ್ಲಿ ಬೆಂಕಿ ಹರಡುವುದನ್ನು ತಡೆಯುವ ಬಾಗಿಲುಗಳು.

● ಎಲೆಕ್ಟ್ರಿಕಲ್ ಕ್ಯಾಬಿನೆಟ್ ಗಳು ಮತ್ತು ಶೌಚಾಲಯಗಳಲ್ಲಿ ಸುಧಾರಿತ ಏರೋಸಾಲ್ ಆಧಾರಿತ ಬೆಂಕಿ ಪತ್ತೆ ಮತ್ತು ನಂದಿಸುವ ವ್ಯವಸ್ಥೆ.

● ಇಂಧನ ದಕ್ಷತೆಗಾಗಿ ರೀ-ಜನರೇಟಿವ್ ಬ್ರೇಕಿಂಗ್ ಸಿಸ್ಟಮ್.

● ದೇಶೀಯವಾಗಿ ಅಭಿವೃದ್ಧಿಪಡಿಸಲಾದ UV-C ಲ್ಯಾಂಪ್ ಆಧಾರಿತ ಸೋಂಕು ನಿವಾರಕ ವ್ಯವಸ್ಥೆಯನ್ನು ಹೊಂದಿರುವ ಹವಾನಿಯಂತ್ರಣ (AC) ಘಟಕಗಳು.

● ಕೇಂದ್ರೀಯವಾಗಿ ನಿಯಂತ್ರಿಸಲ್ಪಡುವ ಆಟೋಮ್ಯಾಟಿಕ್ ಪ್ಲಗ್ ಡೋರ್ ಗಳು ಮತ್ತು ಸಂಪೂರ್ಣವಾಗಿ ಸೀಲ್ ಮಾಡಲಾದ ಅಗಲವಾದ ಗ್ಯಾಂಗ್ ವೇಗಳು.

● ಎಲ್ಲಾ ಬೋಗಿಗಳಲ್ಲಿ ಸಿಸಿಟಿವಿಗಳು (CCTVs).

● ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಟ್ರೈನ್ ಮ್ಯಾನೇಜರ್/ಲೋಕೋ ಪೈಲಟ್ ನಡುವೆ ಸಂಪರ್ಕಕ್ಕಾಗಿ ಎಮರ್ಜೆನ್ಸಿ ಟಾಕ್-ಬ್ಯಾಕ್ ಘಟಕ.

● ದಿವ್ಯಾಂಗ ಪ್ರಯಾಣಿಕರಿಗಾಗಿ ಎರಡೂ ಕಡೆಯ ಡ್ರೈವಿಂಗ್ ಕೋಚ್ ಗಳಲ್ಲಿ ವಿಶೇಷ ಶೌಚಾಲಯ.

● ಹವಾನಿಯಂತ್ರಣ, ಸಲೂನ್ ಲೈಟಿಂಗ್ ಮುಂತಾದ ಪ್ರಯಾಣಿಕರ ಸೌಲಭ್ಯಗಳ ಉತ್ತಮ ಉಸ್ತುವಾರಿಗಾಗಿ ಕೇಂದ್ರೀಕೃತ ಕೋಚ್ ಮಾನಿಟರಿಂಗ್ ಸಿಸ್ಟಮ್.

● ಮೇಲಿನ ಬರ್ತ್ ಗಳಿಗೆ ಸುಲಭವಾಗಿ ಹತ್ತಲು ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿದ ಏಣಿ .

ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.

 

****


(रिलीज़ आईडी: 2201905) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Gujarati