ರೈಲ್ವೇ ಸಚಿವಾಲಯ
azadi ka amrit mahotsav

ಭಾರತದ ಪ್ರಪ್ರಥಮ ಹೈಡ್ರೋಜನ್ ಚಾಲಿತ ರೈಲು-ಸೆಟ್ನ ಉತ್ಪಾದನಾ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ರೈಲಿಗೆ ಇಂಧನ ಒದಗಿಸಲು ಜಿಂದ್ನಲ್ಲಿ ಎಲೆಕ್ಟ್ರೋಲಿಸಿಸ್ ತಂತ್ರಜ್ಞಾನ ಆಧಾರಿತ ಹಸಿರು ಹೈಡ್ರೋಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ


ಸ್ವದೇಶಿ ವಿನ್ಯಾಸದ ಈ ರೈಲು, ಆತ್ಮನಿರ್ಭರ ಭಾರತದ ದ್ಯೋತಕವಾಗಿದೆ. ಇದು ಬ್ರಾಡ್ ಗೇಜ್ ವಿಭಾಗದಲ್ಲಿ ವಿಶ್ವದ ಅತಿ ಉದ್ದದ ಹಾಗೂ ಅತ್ಯಂತ ಶಕ್ತಿಶಾಲಿ (2400 kW) ಹೈಡ್ರೋಜನ್ ರೈಲು ಎನಿಸಿಕೊಂಡಿದೆ

प्रविष्टि तिथि: 10 DEC 2025 4:46PM by PIB Bengaluru

ರೈಲ್ವೆಯಲ್ಲಿ ಹೈಡ್ರೋಜನ್ ಚಾಲಿತ ರೈಲು ತಂತ್ರಜ್ಞಾನದ ಬಳಕೆಯನ್ನು ಪ್ರದರ್ಶಿಸಲು, ಸಂಶೋಧನೆ, ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ (RDSO) ರೂಪಿಸಿದ ಮಾನದಂಡಗಳ ಪ್ರಕಾರ, ಭಾರತೀಯ ರೈಲ್ವೆಯು ತನ್ನ ಮೊದಲ ಹೈಡ್ರೋಜನ್ ರೈಲನ್ನು ಪ್ರಾಯೋಗಿಕವಾಗಿ ಓಡಿಸಲು ಅತ್ಯಾಧುನಿಕ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಹೈಡ್ರೋಜನ್ ರೈಲು-ಸೆಟ್ ತಯಾರಿಕೆ ಪೂರ್ಣಗೊಂಡಿದೆ. ಈ ರೈಲು-ಸೆಟ್ ಬಳಕೆಗೆ ಹೈಡ್ರೋಜನ್ ಒದಗಿಸಲು, 'ಜಿಂದ್'ನಲ್ಲಿ (Jind) ಹೈಡ್ರೋಜನ್ ಸ್ಥಾವರವನ್ನು ರೂಪಿಸಲಾಗಿದೆ. ಈ ಸ್ಥಾವರದಲ್ಲಿ, ಹಸಿರು ಹೈಡ್ರೋಜನ್ ಉತ್ಪಾದನೆಯ ಪ್ರಮುಖ ಅಂಶವಾಗಿರುವ ಎಲೆಕ್ಟ್ರೋಲಿಸಿಸ್ ('ವಿದ್ಯುದ್ವಿಭಜನೆ') ಪ್ರಕ್ರಿಯೆಯನ್ನು ಬಳಸಿಕೊಂಡು ಹೈಡ್ರೋಜನ್ ಉತ್ಪಾದಿಸಲಾಗುತ್ತಿದೆ.

ಹೈಡ್ರೋಜನ್ ರೈಲು-ಸೆಟ್ನ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • 'ಆತ್ಮನಿರ್ಭರ ಭಾರತ'ದ ಕಡೆಗಿನ ಭಾರತೀಯ ರೈಲ್ವೆಯ ಬದ್ಧತೆಯನ್ನು ಪ್ರದರ್ಶಿಸುವ ಇದನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ.
  • ಪ್ರಸ್ತುತ, ಇದು ಬ್ರಾಡ್ ಗೇಜ್ ವ್ಯವಸ್ಥೆಯಲ್ಲಿ ವಿಶ್ವದ ಅತಿ ಉದ್ದದ (10 ಬೋಗಿಗಳು) ಮತ್ತು ಅತ್ಯಂತ ಶಕ್ತಿಶಾಲಿ (2400 kW) ಹೈಡ್ರೋಜನ್ ರೈಲು-ಸೆಟ್ ಆಗಿದೆ.
  • ಈ ರೈಲು-ಸೆಟ್ ಎಂಟು ಪ್ರಯಾಣಿಕ ಬೋಗಿಗಳ ಜೊತೆಗೆ, ತಲಾ 1200 kW ಸಾಮರ್ಥ್ಯದ ಎರಡು ಡ್ರೈವಿಂಗ್ ಪವರ್ ಕಾರ್ ಗಳನ್ನು (DPC) ಒಳಗೊಂಡಿದ್ದು, ಒಟ್ಟು 2400 kW ಸಾಮರ್ಥ್ಯ ಹೊಂದಿದೆ.
  • ಶೂನ್ಯ CO2 ಹೊರಸೂಸುವಿಕೆ; ಇದರಿಂದ ಹೊರಬರುವುದು ಕೇವಲ ನೀರಿನ ಆವಿ ಮಾತ್ರ.
  • ರೈಲ್ವೆಯಲ್ಲಿ ಮುಂದಿನ ಪೀಳಿಗೆಯ ಇಂಧನ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಇದೊಂದು ಪ್ರಮುಖ ಹಜ್ಜೆ

ಭಾರತೀಯ ರೈಲ್ವೆಯು ಹೈಡ್ರೋಜನ್ ಟ್ರಾಕ್ಷನ್ ತಂತ್ರಜ್ಞಾನವನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸುತ್ತಿದ್ದು, ಈ ಯೋಜನೆಯು ವಿನ್ಯಾಸ ಮತ್ತು ಮಾದರಿ (Prototype) ತಯಾರಿಕೆಯಂತಹ ಆರಂಭಿಕ ಹಂತಗಳನ್ನು ಒಳಗೊಂಡಿದೆ. ಸದ್ಯಕ್ಕೆ ಹೈಡ್ರೋಜನ್ ರೈಲು ಮತ್ತು ಅದರ ಮೂಲಸೌಕರ್ಯಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದ್ದರಿಂದ, ಈ ಹಂತದಲ್ಲಿ ಇದರ ವೆಚ್ಚವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಇತರೆ ರೈಲು ವ್ಯವಸ್ಥೆಗಳ ವೆಚ್ಚದೊಂದಿಗೆ ಹೋಲಿಕೆ ಮಾಡುವುದು ಸೂಕ್ತವಾಗುವುದಿಲ್ಲ.

ಪರ್ಯಾಯ ಇಂಧನಗಳ ಬಳಕೆಯ ಮೂಲಕ ರೈಲ್ವೆ ವಲಯದಲ್ಲಿ ಪ್ರಗತಿ ಸಾಧಿಸುವ ಮತ್ತು ದೇಶದ ಸಾರಿಗೆ ವ್ಯವಸ್ಥೆಗೆ ಹಸಿರು ಹಾಗೂ ಸ್ವಚ್ಛ ಭವಿಷ್ಯವನ್ನು ರೂಪಿಸುವ ಭಾರತೀಯ ರೈಲ್ವೆಯ ಬದ್ಧತೆಯನ್ನು ಯೋಜನೆಯು ದೃಢಪಡಿಸುತ್ತದೆ.

ಈ ಮಾಹಿತಿಯನ್ನು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.

 

****


(रिलीज़ आईडी: 2201918) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , हिन्दी , Telugu