ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ರಾಮನ್ ಪರಿಣಾಮದ ಸಂಶೋಧನೆಯ 98 ವರ್ಷಗಳ ಸ್ಮರಣಾರ್ಥವಾಗಿ ‘ಸಾರ್ವಜನಿಕ ಮುಕ್ತಾವಕಾಶದ ದಿನ’ದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಿರುವ ರಾಮನ್ ಸಂಶೋಧನಾ ಸಂಸ್ಥೆ


ಪ್ರಕಟಣಾ ದಿನಾಂಕ: 25 FEB 2026 3:34PM by PIB Bengaluru

ಸರ್ ಸಿ.ವಿ. ರಾಮನ್ ಅವರ ನೋಬೆಲ್ ಪ್ರಶಸ್ತಿ ವಿಜೇತ 'ರಾಮನ್ ಪರಿಣಾಮ' ಸಂಶೋಧನೆಯ 98ನೇ ವರ್ಷದ ಸ್ಮರಣಾರ್ಥವಾಗಿ ರಾಮನ್ ಸಂಶೋಧನಾ ಸಂಸ್ಥೆಯು (ಆರ್‌ಆರ್‌ಐ) 2026ರ ಫೆಬ್ರವರಿ 28ರಂದು ವಾರ್ಷಿಕ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಿದೆ. ಈ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಲು ಮತ್ತು ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು, ಸಂಸ್ಥೆಯು ಕ್ಯಾಂಪಸ್ ನಲ್ಲಿ ಆಕರ್ಷಕ ಕಾರ್ಯಕ್ರಮಗಳು, ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳನ್ನು ಒಳಗೊಂಡ 'ಸಾರ್ವಜನಿಕ ಮುಕ್ತಾವಕಾಶದ ದಿನವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಅರ್ಥವಾಗುವ ಪರಿಸರದಲ್ಲಿ ಮೂಲಭೂತ ವಿಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಜೊತೆಗೆ, ಆಧುನಿಕ ಭೌತಶಾಸ್ತ್ರದ ಮುಂಚೂಣಿ ಸಂಶೋಧನೆಗಳನ್ನು ಅನ್ವೇಷಿಸಲು ಒಂದು ಪ್ರಮುಖ ವೇದಿಕೆಯಾಗಿದೆ.

ದಿನವಿಡೀ ನಡೆಯುವ ಈ ಆಚರಣೆಯು ಆರ್‌ಆರ್‌ಐ ಸಂಶೋಧನಾ ಗುಂಪುಗಳು ಮತ್ತು ವಿಭಾಗಗಳು ಆಯೋಜಿಸಿರುವ ವಿಶೇಷ ವೈಜ್ಞಾನಿಕ ಪ್ರದರ್ಶನ ಮಳಿಗೆಗಳ ಮೂಲಕ ಸಂಸ್ಥೆಯ ಪ್ರಸ್ತುತ ಅತ್ಯಾಧುನಿಕ ಸಂಶೋಧನೆಗಳನ್ನು ಪ್ರದರ್ಶಿಸುತ್ತದೆ. ಸಂದರ್ಶಕರಿಗೆ ಸಂಶೋಧನಾ ವಿದ್ವಾಂಸರು ಮತ್ತು ಇಂಜಿನಿಯರ್‌ಗಳೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ಕುತೂಹಲವನ್ನು ಕೆರಳಿಸುವಂತೆ ವಿನ್ಯಾಸಗೊಳಿಸಲಾದ ಪ್ರಯೋಗಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.

ಈ ವರ್ಷದ ಕಾರ್ಯಕ್ರಮಕ್ಕೆ ಈಗಾಗಲೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲಿನ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಉಪಸ್ಥಿತಿಯನ್ನು ಖಚಿತಪಡಿಸಿದ್ದಾರೆ. ಪ್ರದರ್ಶನಗಳ ಜೊತೆಗೆ, ವಿಜ್ಞಾನದ ಅದ್ಭುತಗಳನ್ನು ಅನ್ವೇಷಿಸಲು ಬಹುಮುಖಿ ವಿಧಾನವನ್ನು ನೀಡುವ ವಿಜ್ಞಾನ ರಸಪ್ರಶ್ನೆಗಳು, ಛಾಯಾಗ್ರಹಣ ಸ್ಪರ್ಧೆಗಳು ಮತ್ತು ಸೃಜನಾತ್ಮಕ ವೇಷಭೂಷಣ ಪ್ರದರ್ಶನಗಳಂತಹ ರೋಚಕ ಸ್ಪರ್ಧೆಗಳನ್ನು ಈ ಸಂಭ್ರಮಾಚರಣೆಯು ಒಳಗೊಂಡಿದೆ.

ಈ ‘ಸಾರ್ವಜನಿಕ ಮುಕ್ತಾವಕಾಶದ ದಿನ ವನ್ನು ಎರಡು ಅವಧಿಗಳಲ್ಲಿ ನಡೆಸಲಾಗುವುದು: ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ. ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸುವ ಸನ್ಮಾನ ಸಮಾರಂಭವು ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗಲಿದೆ. ಈ ಅನ್ವೇಷಣೆ ಮತ್ತು ನಾವೀನ್ಯತೆಯ ಸಂಭ್ರಮದಲ್ಲಿ ಭಾಗವಹಿಸಲು ಆರ್‌ಆರ್‌ಐ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರನ್ನು ಆಹ್ವಾನಿಸುತ್ತದೆ. ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡಲು ಮತ್ತು ವೈಜ್ಞಾನಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮಾಧ್ಯಮ ಪ್ರತಿನಿಧಿಗಳನ್ನೂ ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2232659) ವಿಸಿಟರ್ ಕೌಂಟರ್ : 68