ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತ ನವೀಕರಿಸಬಹುದಾದ ಇಂಧನ (BRE) ಶೃಂಗಸಭೆ ಮತ್ತು ಎಕ್ಸ್ಪೋ 2026 ರೋಡ್‌ಶೋ: ಕರ್ನಾಟಕ ಮತ್ತು ದಕ್ಷಿಣ ಭಾರತದ ಶುದ್ಧ ಇಂಧನ ಸಮಗ್ರ ವ್ಯವಸ್ಥೆಯ ಸಕ್ರಿಯ ಭಾಗಿತ್ವ


ನವದೆಹಲಿಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಪ್ರಮುಖ ಕಾರ್ಯಕ್ರಮ ಭಾಗವಾಗಿ ನಡೆದ ಬೆಂಗಳೂರು ಆವೃತ್ತಿಯ ಐದನೇ ಪ್ರಾದೇಶಿಕ ಕಾರ್ಯಕ್ರಮ

ಪ್ರಕಟಣಾ ದಿನಾಂಕ: 08 SEP 2026 7:54PM by PIB Bengaluru

ಜೈಪುರ, ಮುಂಬೈ, ಹೈದರಾಬಾದ್ ಮತ್ತು ಅಹಮದಾಬಾದ್‌ಗಳಲ್ಲಿ ಯಶಸ್ವಿಯಾಗಿ ನಡೆದ ಪ್ರಾದೇಶಿಕ ಸರಣಿಗಳ ಸತತ ಯಶಸ್ಸಿನ ನಂತರ, ನವದೆಹಲಿಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ 'ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ (BRE Summit) 2026'ರ ಐದನೇ ರೋಡ್‌ಶೋ ಅನ್ನು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಇಂದು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಭಾರತೀಯ ಉದ್ಯಮ ಒಕ್ಕೂಟ (CII) ಹಾಗೂ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ISA) ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು, ಕರ್ನಾಟಕದ ಶುದ್ಧ ಇಂಧನ ಸಾಮರ್ಥ್ಯ, ತಾಂತ್ರಿಕ ಆವಿಷ್ಕಾರ ಮತ್ತು ಕೈಗಾರಿಕಾ ನಾಯಕತ್ವವನ್ನು ರಾಷ್ಟ್ರೀಯ ಮಟ್ಟದಲ್ಲಿ ಮುನ್ನೆಲೆಗೆ ತಂದಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಶ್ರೀ ಕೆ.ಜೆ. ಜಾರ್ಜ್ ಅವರು, ಭಾರತದ ನವೀಕರಿಸಬಹುದಾದ ಇಂಧನ ವಲಯದ ಪರಿವರ್ತನೆಯು ಕೇವಲ ಪರಿಸರ ಕಾಳಜಿಗೆ ಸೀಮಿತವಾಗದೆ, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಇಂಧನ ಭದ್ರತೆಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. ದೇಶವು 300 ಗಿಗಾವ್ಯಾಟ್ ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ದಾಟಿ, 2030ರ ವೇಳೆಗೆ 500 ಗಿಗಾವ್ಯಾಟ್ ಗುರಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕವು ಪ್ರಮುಖ ಪಾಲುದಾರನಾಗಿದೆ ಎಂದು ಅವರು ತಿಳಿಸಿದರು. ಪಾವಗಡ ಸೌರಶಕ್ತಿ ಉದ್ಯಾನವನವು ಸಮುದಾಯಗಳನ್ನು ಒಳಗೊಂಡ ಅಂತರ್ಗತ ಅಭಿವೃದ್ಧಿಗೆ ಮಾದರಿಯಾಗಿದೆ ಎಂದ ಅವರು, ರಾಜ್ಯದ ಶುದ್ಧ ಇಂಧನದ ಮುಂದಿನ ಹಂತದ ಬೆಳವಣಿಗೆಗೆ ಜಾಗತಿಕ ಹೂಡಿಕೆದಾರರು, ತಯಾರಕರು ಮತ್ತು ನಾವೀನ್ಯಕಾರರಿಗೆ ಆಹ್ವಾನ ನೀಡಿದರು.

ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತಾ ಅವರು ಮಾತನಾಡಿ, ವೇಗದ ಯೋಜನೆ ಅನುಷ್ಠಾನ, ಸರಳೀಕೃತ ಜಮೀನು ಗುತ್ತಿಗೆ ಪ್ರಕ್ರಿಯೆ, ಪ್ರಸರಣ ಮೂಲಸೌಕರ್ಯ ಬಲವರ್ಧನೆ ಮತ್ತು ಉದ್ಯಮ ಸ್ನೇಹಿ ನೀತಿಗಳ ಮೇಲೆ ರಾಜ್ಯ ಸರ್ಕಾರ ಗಮನಹರಿಸಿದೆ ಎಂದು ವಿವರಣೆ ನೀಡಿದರು. 'ಸಂಯೋಜಿತ ನವೀಕರಿಸಬಹುದಾದ ಇಂಧನ ನೀತಿ 2025'ರ ಅಡಿಯಲ್ಲಿ ರಾಜ್ಯದ 155 ಗಿಗಾವ್ಯಾಟ್ ಸಾಮರ್ಥ್ಯವನ್ನು ಬಳಸಿಕೊಂಡು, 2027ರ ವೇಳೆಗೆ ಹೆಚ್ಚುವರಿಯಾಗಿ 10 ಗಿಗಾವ್ಯಾಟ್ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ. ಇದಲ್ಲದೆ, ಪಿಪಿಪಿ (PPP) ಮಾದರಿಯಲ್ಲಿ ಗ್ರೀನ್ ಎನರ್ಜಿ ಕಾರಿಡಾರ್‌ಗಳು ಮತ್ತು 'ಕೈಗಾರಿಕಾ ನೀತಿ 2025-30'ರ ಅಡಿಯಲ್ಲಿ ₹7.5 ಲಕ್ಷ ಕೋಟಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ರಾಜ್ಯ ಹೊಂದಿದೆ. 'ಇಂಧನ ಸಂರಕ್ಷಣಾ ನೀತಿ'ಯಡಿ ಹಣಕಾಸು ವರ್ಷ 2027ರ ವೇಳೆಗೆ 744 MU ಇಂಧನ ಉಳಿತಾಯ ಮತ್ತು 'ಕ್ಲೀನ್ ಮೊಬಿಲಿಟಿ ನೀತಿ 2025-30'ರ ಅಡಿಯಲ್ಲಿ ಸುಮಾರು ₹50,000 ಕೋಟಿ ಹೂಡಿಕೆಯನ್ನು ಆಕರ್ಷಿಸಲು ಉದ್ದೇಶಿಸಲಾಗಿದೆ ಎಂದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಸಂತೋಷ್ ಕುಮಾರ್ ಸಾರಂಗಿ ಅವರು ಮಾತನಾಡಿ, ಭಾರತದ ಇಂಧನ ಪಥವು ಈಗ ಸುಸ್ಥಿರ, ಸಮಗ್ರ ಮತ್ತು ಹೂಡಿಕೆ-ಸ್ನೇಹಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಅಭಿಪ್ರಾಯಪಟ್ಟರು. ಮುಂಬರುವ ಶೃಂಗಸಭೆಯು ಗ್ರಿಡ್ ಸಂಯೋಜನೆ, ಸೌರ ಉಪಕರಣಗಳ ದೇಶೀಯ ತಯಾರಿಕೆ, 24x7 ನವೀಕರಿಸಬಹುದಾದ ವಿದ್ಯುತ್ ಪೂರೈಕೆ ಮತ್ತು ದೀರ್ಘಕಾಲೀನ ಬಂಡವಾಳ ಲಭ್ಯತೆಯ ಮೇಲೆ ಬೆಳಕು ಚೆಲ್ಲಲಿದೆ ಎಂದು ಅವರು ಹೇಳಿದರು.

ಎಂ ಎನ್ ಆರ್ ಇ  ನಿರ್ದೇಶಕರಾದ ಶ್ರೀ ಮೀರ್ ಮೊಹಮ್ಮದ್ ಅಲಿ, ಹಿಟಾಚಿ ಎನರ್ಜಿ ಇಂಡಿಯಾದ ಶ್ರೀ ಅಖಿಲೂರ್ ರೆಹಮಾನ್, ಎನ್‌ವಿಷನ್ ಎನರ್ಜಿ ಇಂಡಿಯಾದ ಶ್ರೀ ಪಟ್ಟಿಯಂಪಲ್ಲಿ ಗೋಪನ್ ಮತ್ತು ಇಎಂಎಂವಿಇ (EMMVEE) ಸಮೂಹದ ಸಂಸ್ಥಾಪಕ ಶ್ರೀ ಮಂಜುನಾಥ್ ಡಿ.ವಿ. ಅವರು ಶೃಂಗಸಭೆಯ ಕಾರ್ಯತಂತ್ರದ ಉದ್ದೇಶಗಳು ಮತ್ತು ವಾಣಿಜ್ಯ ಅವಕಾಶಗಳ ಕುರಿತು ಮಾಹಿತಿ ನೀಡಿದರು.

'ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026' ನವದೆಹಲಿಯ ಭಾರತ ಮಂಟಪದಲ್ಲಿ 2026ರ ನವೆಂಬರ್ 2 ರಿಂದ 5 ರವರೆಗೆ ನಡೆಯಲಿದೆ. - ಹೂಡಿಕೆ • ನಾವೀನ್ಯತೆ • ಪ್ರೇರಣೆ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಈ ಜಾಗತಿಕ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 400ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ರೋಡ್‌ಶೋ ನಂತರ, ಈ ರಾಷ್ಟ್ರವ್ಯಾಪಿ ಅಭಿಯಾನವು ಮುಂಬರುವ ವಾರಗಳಲ್ಲಿ ಲಕ್ನೋ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಎಂ ಎನ್ ಆರ್ ಇ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಮಯಾಂಕ್ ತಿವಾರಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (KREDL) ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ದಿವ್ಯಾ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

******


(ಪ್ರಕಟಣೆ ಐ.ಡಿ.: 2307998) ವಿಸಿಟರ್ ಕೌಂಟರ್ : 112