ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಎ ಪಿ ಇ ಡಿ ಎ (APEDA) ವತಿಯಿಂದ, ಕರ್ನಾಟಕದಿಂದ ಮಾಲ್ಡೀವ್ಸ್‌ಗೆ ಗುಲ್ಬರ್ಗಾ ತೊಗರಿ ಬೇಳೆ ರಫ್ತಿಗೆ ಚಾಲನೆ


ಕರ್ನಾಟಕದ ಜಿಐ (GI) ಟ್ಯಾಗ್ ಹೊಂದಿದ ತೊಗರಿ ಬೇಳೆಗೆ ಜಾಗತಿಕ ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುವಲ್ಲಿ ಈ ಸರಕಿನ ರಫ್ತು ಪ್ರಮುಖ ಹೆಜ್ಜೆಯಾಗಿದೆ

ಪ್ರಕಟಣಾ ದಿನಾಂಕ: 25 SEP 2026 4:24PM by PIB Bengaluru

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಸೆಪ್ಟೆಂಬರ್ 24 ರಂದು ಕರ್ನಾಟಕದಿಂದ ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಹೊಂದಿದ ಗುಲ್ಬರ್ಗಾ ತೊಗರಿ ಬೇಳೆಯ ಸರಕಿನ ರಫ್ತಿಗೆ ಚಾಲನೆ ನೀಡಿತು. ಇದು ಭಾರತದ ಜಿಐ-ಟ್ಯಾಗ್ ಹೊಂದಿದ ಕೃಷಿ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುವ ಮತ್ತು ಕೃಷಿ ರಫ್ತಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳ (FPO) ನೇತೃತ್ವದ ಬ್ರ್ಯಾಂಡ್‌ಗಳ ಭಾಗವಹಿಸುವಿಕೆಯನ್ನು ಬಲಪಡಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

ರಫ್ತು ಮೌಲ್ಯ ಸರಪಳಿಯ ಮೂಲಕ ರೈತರಿಗೆ ಸಿಗುವ ಉತ್ತಮ ಬೆಲೆ ಈ ರಫ್ತು ಸರಕಿನ ಪ್ರಮುಖ ವೈಶಿಷ್ಟ್ಯವಾಗಿದೆ. ಪ್ರಸ್ತುತ ಮಾರುಕಟ್ಟೆ ಬೆಲೆ ಕೆಜಿಗೆ ₹60 ಇರಬೇಕಾದರೆ, ಈ ರಫ್ತು-ಸಂಯೋಜಿತ ಮಾರ್ಗದ ಮೂಲಕ ರೈತರಿಗೆ ಸಿಗುವ ಬೆಲೆ ಕೆಜಿಗೆ ₹82 ಆಗಿದೆ, ಇದು ರೈತರಿಗೆ 30% ಕ್ಕಿಂತ ಹೆಚ್ಚಿನ ಬೆಲೆ ಗಳಿಕೆಯನ್ನು ಪ್ರತಿನಿಧಿಸುತ್ತದೆ. ಈ ಉಪಕ್ರಮವು ರೈತ ಉತ್ಪಾದಕ ಸಂಸ್ಥೆಗಳಿಗೆ (FPO) ರಫ್ತು ಆಧಾರಿತ ಮೌಲ್ಯ ಸರಪಳಿಗಳಲ್ಲಿ ಹೆಚ್ಚು ನಿಕಟವಾಗಿ ಭಾಗವಹಿಸಲು ಮತ್ತು ಉತ್ಪಾದಕರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಜೋಡಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಸಂಘಟಿತ ರಫ್ತು ಮಾರ್ಗಗಳು ರೈತರಿಗೆ ಮಾರುಕಟ್ಟೆ ಪ್ರವೇಶ ಮತ್ತು ಬೆಲೆ ಗಳಿಕೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಪ್ರದರ್ಶಿಸುತ್ತದೆ.

ಈ ರಫ್ತು, ಮಾಲ್ಡೀವ್ಸ್‌ಗೆ ಗುಲ್ಬರ್ಗಾ ತೊಗರಿ ಬೇಳೆಯ ನಿಯಮಿತ ರವಾನೆಗೆ ಹಾದಿ ಮಾಡಿಕೊಡುವ ನಿರೀಕ್ಷೆಯಿದೆ, ಇದು ಕರ್ನಾಟಕದ ಉತ್ಪಾದಕರು ಮತ್ತು ರಫ್ತುದಾರರಿಗೆ ಸುಸ್ಥಿರ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಉಪಕ್ರಮವು ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುತ್ತದೆ, ರೈತರಿಗೆ ಹೆಚ್ಚಿನ ಬೆಲೆ ಸಿಗುವುದನ್ನು ಬೆಂಬಲಿಸುತ್ತದೆ ಮತ್ತು ಎಫ್‌ಪಿಒಗಳು ಹಾಗೂ ರೈತರು ರಫ್ತು ಆಧಾರಿತ ಮೌಲ್ಯ ಸರಪಳಿಗಳೊಂದಿಗೆ ಹೆಚ್ಚು ನಿಕಟವಾಗಿ ಸಂಯೋಜನೆಗೊಳ್ಳಲು ಅನುವು ಮಾಡಿಕೊಡುತ್ತದೆ, ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕರ್ನಾಟಕದ ಜಿಐ-ಟ್ಯಾಗ್ ಹೊಂದಿದ ಕೃಷಿ ಉತ್ಪನ್ನಗಳ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ.

ಕರ್ನಾಟಕದ ಕಲಬುರಗಿ ಪ್ರದೇಶಕ್ಕೆ ಸಂಬಂಧಿಸಿದ ಗುಲ್ಬರ್ಗಾ ತೊಗರಿ ಬೇಳೆಯು, 2019 ರಲ್ಲಿ ಭೌಗೋಳಿಕ ಸೂಚಕ (GI) ನೋಂದಣಿಯನ್ನು ಪಡೆಯಿತು. ಈ ಉತ್ಪನ್ನವು ತನ್ನ ವಿಶಿಷ್ಟ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ ಮತ್ತು ಈ ಪ್ರದೇಶದ ಕೃಷಿ ಆರ್ಥಿಕತೆಯ ಪ್ರಮುಖ ಭಾಗವಾಗಿದೆ. ಅಪೆಡಾ ತನ್ನ ನೋಂದಾಯಿತ ಜಿಐ ಉತ್ಪನ್ನಗಳಲ್ಲಿ ಗುಲ್ಬರ್ಗಾ ತೊಗರಿ ಬೇಳೆಯನ್ನು ಪಟ್ಟಿ ಮಾಡಿದೆ.

ಕರ್ನಾಟಕವು ಭಾರತದ ಪ್ರಮುಖ ಕೃಷಿ ರಾಜ್ಯಗಳಲ್ಲಿ ಒಂದಾಗಿದ್ದು, ಬೇಳೆಕಾಳುಗಳು ಅದರ ಒಣಭೂಮಿ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಲಬುರಗಿಯು ರಾಜ್ಯದಲ್ಲಿ ತೊಗರಿ ಬೆಳೆ ಮತ್ತು ಉತ್ಪಾದನೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಗುಲ್ಬರ್ಗಾ ತೊಗರಿ ಬೇಳೆಯು ಈ ಪ್ರದೇಶದ ವಿಶಿಷ್ಟ ಕೃಷಿ ಗುರುತನ್ನು ಪ್ರತಿನಿಧಿಸುತ್ತದೆ.

ಈ ರಫ್ತು ಕಾರ್ಯಕ್ರಮಕ್ಕೆ ಅಪೆಡಾ ಅಧ್ಯಕ್ಷರಾದ ಶ್ರೀ ಅಭಿಷೇಕ್ ದೇವ್, ಐಎಎಸ್ ಅವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅಪೆಡಾದ ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಭಾಗವಹಿಸಿದ್ದರು, ಅವರಲ್ಲಿ ಅಪೆಡಾದ ಹಿರಿಯ ಸಲಹೆಗಾರರಾದ ಡಾ. ತರುಣ್ ಬಜಾಜ್; ಅಪೆಡಾದ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ವಿನೀತಾ ಸುಧಾಂಶು; ಕೆಎಸ್‌ಪಿಎಎಮ್‌ಎಲ್‌ (KSPAML) ಗುಲ್ಬರ್ಗಾದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿ. ಸದಾಶಿವ; ಮತ್ತು ಮೈಸೂರಿನ ಎಮ್/ಎಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್‌ನ ಶ್ರೀ ಇಮ್ರಾನ್ ಪಾಷಾ ಸೇರಿದ್ದಾರೆ. ಮೈಸೂರಿನ ಎಮ್/ಎಸ್ ಸಿಲ್ಕನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯು ತನ್ನ ಎಫ್‌ಪಿಒ ನೇತೃತ್ವದ ಬ್ರ್ಯಾಂಡ್ ಮೂಲಕ ರಫ್ತು ಮಾಡಿದ ಈ ಸರಕನ್ನು ಸಮುದ್ರ ಮಾರ್ಗದ ಮೂಲಕ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತದೆ.

ಭಾರತದ ಜಿಐ-ಟ್ಯಾಗ್ ಹೊಂದಿದ ಕೃಷಿ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಮತ್ತು ರೈತರಿಗೆ ಬಲವಾದ ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸುವ ಮಹತ್ವವನ್ನು ಶ್ರೀ ಅಭಿಷೇಕ್ ದೇವ್ ಉಲ್ಲೇಖಿಸಿದರು. ಮಾಲ್ಡೀವ್ಸ್‌ಗೆ ಗುಲ್ಬರ್ಗಾ ತೊಗರಿ ಬೇಳೆಯ ರಫ್ತು ಉತ್ಪನ್ನದ ಜಾಗತಿಕ ಗುರುತನ್ನು ನಿರ್ಮಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಹೆಚ್ಚಿನ ಮಾರುಕಟ್ಟೆ ವಿಸ್ತರಣೆಗೆ ಮಾರ್ಗಗಳನ್ನು ತೆರೆಯುತ್ತದೆ.

ಮಾಲ್ಡೀವ್ಸ್‌ಗೆ ಮಾಡಿದ ಈ ರಫ್ತು, ಗುಲ್ಬರ್ಗಾ ತೊಗರಿ ಬೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ದಾಪುಗಾಲಿಡಲು ಅವಕಾಶವನ್ನು ಒದಗಿಸುತ್ತದೆ, ಜೊತೆಗೆ ಮೌಲ್ಯ ಸರಪಳಿಯುದ್ದಕ್ಕೂ ಇರುವ ರೈತರು ಮತ್ತು ಇತರ ಭಾಗಿದಾರರಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಸೃಷ್ಟಿಸುತ್ತದೆ. ಈ ಉಪಕ್ರಮವು ಜಿಐ-ಟ್ಯಾಗ್ ಹೊಂದಿದ ಮತ್ತು ಇತರ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತನ್ನ ಸುಲಭಗೊಳಿಸುವ ಅಪೆಡಾದ ಶ್ರಮಕ್ಕೆ ಅನುಗುಣವಾಗಿದೆ. ಈ ರಫ್ತು ಸರಕು ಅಂತಾರಾಷ್ಟ್ರೀಯ ವ್ಯಾಪಾರದ ಮೂಲಕ ಪ್ರಾದೇಶಿಕ-ವಿಶಿಷ್ಟ ಕೃಷಿ ಉತ್ಪನ್ನಗಳನ್ನು ಉತ್ತೇಜಿಸುವ ಬೆಳೆಯುತ್ತಿರುವ ವ್ಯಾಪ್ತಿಯನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2314885) ವಿಸಿಟರ್ ಕೌಂಟರ್ : 49