ಇಂಧನ ಸಚಿವಾಲಯ
azadi ka amrit mahotsav

ಬೆಂಗಳೂರಿನ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯಲ್ಲಿ ‘ಸ್ವಚ್ಛತಾ ದಿನ’ ಆಚರಣೆ


ಮುಖ್ಯ ಅತಿಥಿಯಾಗಿ ರಾಜ್ಯಸಭಾ ಸಂಸದರಾದ ಶ್ರೀ ಲೆಹರ್ ಸಿಂಗ್ ಸಿರೋಯಾ ಭಾಗಿ

ಪ್ರಕಟಣಾ ದಿನಾಂಕ: 03 OCT 2026 7:20PM by PIB Bengaluru

ಬೆಂಗಳೂರಿನ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆಯು 2026ರ ಅಕ್ಟೋಬರ್ 2ರಂದು ‘ಸ್ವಚ್ಛತಾ ದಿನ' ಆಯೋಜಿಸಿತ್ತು. 2026ರ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರ ವರೆಗೆ ಆಚರಿಸಲಾದ ‘ಸ್ವಚ್ಛತಾ ಹೀ ಸೇವಾ 2026’ ಅಭಿಯಾನದ ಸಮಾರೋಪ ಅಂಗವಾಗಿ ಅಶ್ವತ್ಥನಗರದಲ್ಲಿ ಆರ್‌ಎಂವಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪೂಜಾರಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಳಾಗಿ ರಾಜ್ಯಸಭಾ ಸಂಸದರಾದ ಶ್ರೀ ಲೆಹರ್ ಸಿಂಗ್ ಸಿರೋಯಾ ಹಾಗೂ ಮಾಜಿ ವಾರ್ಡ್ ಕೌನ್ಸಿಲರ್ ಶ್ರೀಮತಿ ಸುಮಂಗಲಾ ಅವರು ಉಪಸ್ಥಿತರಿದ್ದರು. ಸಿಪಿಆರ್‌ಐ ಮಹಾನಿರ್ದೇಶಕಿ ಡಾ. ಜೆ. ಶ್ರೀದೇವಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಆರ್‌ಐ ನಿರ್ದೇಶಕ ಡಾ. ಮಲ್ಲಿಕಾರ್ಜುನ ರಾವ್, ಜಂಟಿ ನಿರ್ದೇಶಕ ಶ್ರೀ ಸೂರ್ಯನಾರಾಯಣ ಕೆ., ಪೂಜಾರಿ ಲೇಔಟ್ ಆರ್‌ಡಬ್ಲ್ಯೂಎ ಅಧ್ಯಕ್ಷ ಶ್ರೀ ಕೆ.ವಿ. ರಾಜು, ಸಮಾಜ ಸೇವಕರಾದ ಶ್ರೀ ಶಿವಣ್ಣ, ಶ್ರೀ ಕೇಶವಮೂರ್ತಿ ಮತ್ತು ಪೂಜಾರಿ ಲೇಔಟ್ ಆರ್‌ಡಬ್ಲ್ಯೂಎ ಕಾರ್ಯದರ್ಶಿ ಶ್ರೀ ಎಸ್.ಎಂ. ಕೃಷ್ಣ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

‘ಸ್ವಚ್ಛತಾ ಹೀ ಸೇವಾ 2026’ ಅಭಿಯಾನದ ಅಂಗವಾಗಿ ಸಿಪಿಆರ್‌ಐ ಕೈಗೊಂಡ ವಿವಿಧ ಚಟುವಟಿಕೆಗಳ ಮುಖ್ಯಾಂಶಗಳನ್ನು ಸಿಪಿಆರ್‌ಐ ಜಂಟಿ ನಿರ್ದೇಶಕ ಶ್ರೀ ಸೂರ್ಯನಾರಾಯಣ ಕೆ. ಅವರು ವಿವರಿಸಿದರು. ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಮತ್ತು ನವೀಕರಣ, ಸ್ವಚ್ಛ ಪಾಠಶಾಲಾ - ಸ್ವಚ್ಛತೆಗಾಗಿ ಯುವಜನತೆ, ಪೌರ ಕಾರ್ಮಿಕರ ಸುರಕ್ಷಾ ಸೇವೆ ಮತ್ತು ಸನ್ಮಾನ ಶಿಬಿರ ಹಾಗೂ ಸಾರ್ವಜನಿಕ ಸಹಭಾಗಿತ್ವ ಎಂಬ ಪ್ರಮುಖ ಧ್ಯೇಯಗಳ ಅಡಿಯಲ್ಲಿ ಈ ಚಟುವಟಿಕೆಗಳು ನಡೆದವು ಎಂದು ಅವರು ತಿಳಿಸಿದರು.

ರಾಜ್ಯಸಭಾ ಸಂಸದರಾದ ಶ್ರೀ ಲೆಹರ್ ಸಿಂಗ್ ಸಿರೋಯಾ ಅವರು ತಮ್ಮ ಭಾಷಣದಲ್ಲಿ, ಇಂತಹ ಅಭಿಯಾನಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಹೇಳಿದರು. ಸ್ವಚ್ಛತೆಯು ಕೇವಲ ಭೌತಿಕ ಸ್ವಚ್ಛತೆಗೆ ಸೀಮಿತವಾಗಿರದೆ, ಭ್ರಷ್ಟಾಚಾರ ಮತ್ತು ಅನೈತಿಕ ಚಟುವಟಿಕೆಗಳನ್ನು ನಿರ್ಮೂಲನೆ ಮಾಡುವ ನೈತಿಕ ಸ್ವಚ್ಛತೆಗೂ ವಿಸ್ತರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಭಿಯಾನದ ಅವಧಿಯಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಸ್ವಚ್ಛತಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ದೇಶದ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಹಾಗೂ ಪ್ರಧಾನಮಂತ್ರಿಯವರ ‘ಸ್ವಚ್ಛ ಭಾರತ’ದ ಕನಸನ್ನು ಸಾಕಾರಗೊಳಿಸುವಲ್ಲಿ ಇದರ ಮಹತ್ವವನ್ನು ಅವರು ಹೇಳಿದರು.

ಶ್ರೀಮತಿ ಸುಮಂಗಲಾ ಅವರು ತಮ್ಮ ಭಾಷಣದಲ್ಲಿ, ಸಿಪಿಆರ್‌ಐ ಕೈಗೊಂಡ ವಿವಿಧ ಸ್ವಚ್ಛತಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಎಲ್ಲಾ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಮಾನ್ಯ ಶಾಸಕರಾದ ಡಾ. ಅಶ್ವತ್ಥನಾರಾಯಣ ಅವರ ಬೆಂಬಲ ಮತ್ತು ಸಹಭಾಗಿತ್ವವನ್ನು ಸ್ಮರಿಸಿದ ಅವರು, ಸಫಾಯಿ ಮಿತ್ರರು ಸಲ್ಲಿಸುತ್ತಿರುವ ಅಮೂಲ್ಯ ಸೇವೆಯನ್ನು ಪ್ರಶಂಸಿಸಿದರು.

ಡಾ. ಜೆ. ಶ್ರೀದೇವಿ ಅವರು ತಮ್ಮ ಭಾಷಣದಲ್ಲಿ, ನಗರಗಳನ್ನು ಸ್ವಚ್ಛವಾಗಿಡುವಲ್ಲಿ ಇಂತಹ ಅಭಿಯಾನಗಳ ಮಹತ್ವವನ್ನು ತಿಳಿಸಿದರು ಮತ್ತು ಸ್ವಚ್ಛತಾ ಅಭಿಯಾನಗಳಲ್ಲಿ ವಿವಿಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಿಪಿಆರ್‌ಐ ಹೊಂದಿರುವ ಸಹಯೋಗವನ್ನು ಪ್ರಸ್ತಾಪಿಸಿದರು. ಇದೇ ವೇಳೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಶೌಚಾಲಯಗಳ ನವೀಕರಣ ಸೇರಿದಂತೆ ಸಿಪಿಆರ್‌ಐ ಕೈಗೊಂಡಿರುವ ಪ್ರಮುಖ ಸಾರ್ವಜನಿಕ ಸ್ವಚ್ಛತಾ ಕಾಮಗಾರಿಗಳ ವಿವರಗಳನ್ನು ಅವರು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಹಾಗೂ ಗಣ್ಯರು ಬಿಬಿಎಂಪಿ ಮತ್ತು ಸಿಪಿಆರ್‌ಐನ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಅವರಿಗೆ ಸ್ವಚ್ಛತಾ ಕಿಟ್‌ಗಳನ್ನು ವಿತರಿಸಿದರು.

 

*****


(ಪ್ರಕಟಣೆ ಐ.ಡಿ.: 2318738) ವಿಸಿಟರ್ ಕೌಂಟರ್ : 75