ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿರುವ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಬೆಂಗಳೂರಿನಲ್ಲಿ ಆತ್ಮೀಯ ಸ್ವಾಗತ
ಪ್ರಕಟಣಾ ದಿನಾಂಕ:
04 OCT 2026 11:17AM by PIB Bengaluru
ಏಷ್ಯನ್ ಗೇಮ್ಸ್ 2026ರಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಮಹಿಳಾ ಹಾಕಿ ತಂಡವನ್ನು ಆತ್ಮೀಯವಾಗಿ ಮತ್ತು ಸಂಭ್ರಮಾಚರಣೆಯೊಂದಿಗೆ ಸ್ವಾಗತಿಸಲಾಯಿತು. ಭಾರತೀಯ ಮಹಿಳಾ ತಂಡವು 44 ವರ್ಷಗಳ ನಂತರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದು, ಈ ಗೆಲುವು ಭಾರತೀಯ ಹಾಕಿಗೆ ಹೆಗ್ಗುರುತಿನ ಕ್ಷಣವಾಗಿದೆ. ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ ಎ ಐ) ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿಷ್ಣು ಸುಧಾಕರನ್ ಅವರು ಎಸ್ ಎ ಐ ಬೆಂಗಳೂರಿನ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ವಿಜೇತ ಭಾರತೀಯ ತಂಡವನ್ನು ಬರಮಾಡಿಕೊಂಡು ಸನ್ಮಾನಿಸಿದರು.
ಏಷ್ಯನ್ ಗೇಮ್ಸ್ ಚಾಂಪಿಯನ್ ಗಳನ್ನು ಸ್ವಾಗತಿಸಿ ಅಭಿನಂದಿಸುವ ಸಂದರ್ಭದಲ್ಲಿ ಬೆಂಗಳೂರಿನ ಕಸ್ಟಮ್ಸ್ (ವಿಮಾನ ನಿಲ್ದಾಣ ಮತ್ತು ಎಸಿಸಿ) ಆಯುಕ್ತರಾದ ಶ್ರೀಮತಿ ಸುಚೇತಾ ಶ್ರೀಜೇಶ್, ಐಆರ್‌ಎಸ್; ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಇಎಸ್) ಅಡಿಯ ಹಾಕಿ ಇಂಡಿಯಾ ಹಾಗೂ ಹಾಕಿ ಕರ್ನಾಟಕದ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಹಾಜರಿದ್ದರು. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಲಾಯಿತು ಹಾಗೂ ಭಾರತೀಯ ಕ್ರೀಡೆಗೆ ಅವರ ಅಮೋಘ ಸಾಧನೆ ಮತ್ತು ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಏಷ್ಯನ್ ಗೇಮ್ಸ್ ಯಶಸ್ವಿ ಅಭಿಯಾನದ ನಂತರ ತಂಡವು ತನ್ನ ತರಬೇತಿ ನೆಲೆಯಾದ ಎಸ್ ಎ ಐ ಬೆಂಗಳೂರಿಗೆ ಮರಳಿದ್ದು, ಆಟಗಾರರು ತಮ್ಮ ತವರು ರಾಜ್ಯಗಳಿಗೆ ಕಿರು ಭೇಟಿ ನೀಡಲಿದ್ದಾರೆ. ನಂತರ ಮುಂಬರುವ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ತಯಾರಿಗಾಗಿ ಬೆಂಗಳೂರಿಗೆ ಹಿಂದಿರುಗಲಿದ್ದು, ಎಸ್ ಎ ಐ ರಾಷ್ಟ್ರೀಯ ತರಬೇತಿ ಶಿಬಿರ ಪುನರಾರಂಭಗೊಳ್ಳಲಿದೆ. ಐತಿಹಾಸಿಕ ಚಿನ್ನದ ಗೆಲುವು ಭಾರತೀಯ ಹಾಕಿ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ. ಇದು ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ದೃಢನಿಶ್ಚಯ, ಬದ್ಧತೆ ಮತ್ತು ನಿರಂತರ ಪ್ರಯತ್ನಗಳ ಪ್ರತಿಬಿಂಬವಾಗಿದೆ.

*****
(ಪ್ರಕಟಣೆ ಐ.ಡಿ.: 2318840)
ವಿಸಿಟರ್ ಕೌಂಟರ್ : 106