ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಸಿಬಿಐಟಿಯಲ್ಲಿ 'ವಿಕಸಿತ ಭಾರತ ಯುವ ಸಂವಾದ' ಕಾರ್ಯಕ್ರಮ ಯಶಸ್ವಿ


ಯುವಜನತೆಯಲ್ಲಿ ಪ್ರಜಾಸತ್ತಾತ್ಮಕ ಜಾಗೃತಿ

ಪ್ರಕಟಣಾ ದಿನಾಂಕ: 03 NOV 2026 3:20PM by PIB Bengaluru

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ 'ಮೈ ಭಾರತ್' ವತಿಯಿಂದ ನಗರದ ಶ್ರೀ ಭರೈಗೌಡ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ "ವಿಕಸಿತ ಭಾರತ ಯುವ ಸಂವಾದ" ಕಾರ್ಯಕ್ರಮ ಆಯೋಜಿಸಲಾಯಿತು. ದೇಶಾದ್ಯಂತ ಅಕ್ಟೋಬರ್ 26 ರಿಂದ ನವೆಂಬರ್ 5ರ ವರೆಗೆ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮದ ಭಾಗವಾಗಿ ಯುವಜನರಲ್ಲಿ ಪ್ರಜಾಸತ್ತಾತ್ಮಕ ಹೊಣೆಗಾರಿಕೆಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮೈ ಭಾರತ್ ಕೋಲಾರ ಜಿಲ್ಲೆಯ ಜಿಲ್ಲಾ ಯುವಜನಾಧಿಕಾರಿ ಶ್ರೀ ಎ. ಮಹೇಂದರ್ ರೆಡ್ಡಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀ ಶಿವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಯೂತ್ ಐಕಾನ್ ಶ್ರೀ ಲೋಕೇಶ್, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ. ಜಗದೀಶ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು 'ಮೈ ಭಾರತ್' ಪೋರ್ಟಲ್ನಲ್ಲಿ ಅಧಿಕೃತವಾಗಿ ನೋಂದಣಿ ಮಾಡಿಸಲಾಯಿತು. ನಂತರ ಯೂತ್ ಐಕಾನ್ ಶ್ರೀ ಲೋಕೇಶ್ ಅವರು ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಮತ್ತು ಮತದಾರರ ನೋಂದಣಿಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ತದನಂತರ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿ, ಪ್ರಶ್ನೋತ್ತರ ಗೋಷ್ಠಿಯನ್ನು ನಡೆಸಿಕೊಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀ ಶಿವರಾಜು ಅವರು ಮಾತನಾಡಿ, "ಯುವಜನತೆಯೇ ಈ ದೇಶದ ಭವಿಷ್ಯ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಪ್ರತಿಯೊಬ್ಬ ಮತದಾರನ ಪಾತ್ರವೂ ಅತ್ಯಂತ ಪ್ರಮುಖವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಸರಿಯಾದ ರೀತಿಯಲ್ಲಿ ಚಲಾಯಿಸಬೇಕು" ಎಂದು ಕರೆ ನೀಡಿದರು.

ಮೈ ಭಾರತ್ ಜಿಲ್ಲಾ ಯುವಜನಾಧಿಕಾರಿ ಶ್ರೀ ಎ. ಮಹೇಂದರ್ ರೆಡ್ಡಿ ಅವರು ಮಾತನಾಡಿ, "ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾನವೇ ಅತ್ಯಂತ ಬಲವಾದ ಬುನಾದಿ. ಅರ್ಹ ಪ್ರತಿಯೊಬ್ಬ ಯುವಜನರು ಕಡ್ಡಾಯವಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು. ನಮ್ಮ ಅಮೂಲ್ಯ ಮತವನ್ನು ಸರಿಯಾಗಿ ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ" ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಅತಿಥಿಗಳು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಮತ್ತು ಜವಾಬ್ದಾರಿಯುತ ಪ್ರಜೆಗಳಾಗಿ ನಡೆದುಕೊಳ್ಳುವುದಾಗಿ 'ಲೋಕತಾಂತ್ರಿಕ ಪ್ರತಿಜ್ಞೆ' ಸ್ವೀಕರಿಸಿದರು.

 

*****


(ಪ್ರಕಟಣೆ ಐ.ಡಿ.: 2332028) ವಿಸಿಟರ್ ಕೌಂಟರ್ : 26