ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಇ20 ಇಂಧನದ ಗುಣಮಟ್ಟದ ಮಾನದಂಡಗಳನ್ನು ಪುನರುಚ್ಚರಿಸಿದ ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್; ಕರ್ನಾಟಕದ ಆರೋಪಗಳಿಗೆ ಆಧಾರವಾದ ಪರೀಕ್ಷಾ ವಿಧಾನವನ್ನು ಪ್ರಶ್ನಿಸಿದ ಸಂಸ್ಥೆಗಳು


ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುವ ಇ20 ಇಂಧನವು ಐಎಸ್ 17021 ಮಾನದಂಡಕ್ಕೆ ಅನುಗುಣವಾಗಿದೆ; ಕರ್ನಾಟಕದ 56 ಮಾದರಿಗಳು ಸೇರಿದಂತೆ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪರೀಕ್ಷಿಸಿದ 893 ಮಾದರಿಗಳು, ನಿಗದಿತ ಮಾನದಂಡಗಳನ್ನು ಪೂರೈಸಿವೆ

ಪ್ರಕಟಣಾ ದಿನಾಂಕ: 06 NOV 2026 10:36PM by PIB Bengaluru

ದೇಶದ ಮೂರು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್), ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನು ಗಮನಿಸಿವೆ. ರಾಜ್ಯದ ಕೆಲವು ಚಿಲ್ಲರೆ ಮಾರುಕಟ್ಟೆ ಮಳಿಗೆಗಳಲ್ಲಿ ಮಾರುಕಟ್ಟೆವಾಗುವ ಪೆಟ್ರೋಲ್‌ನಲ್ಲಿ ಶೇ. 26ರಿಂದ ಶೇ. 31ರಷ್ಟು ಎಥನಾಲ್ ಇದೆ ಎಂದು ಆ ಪ್ರಕಟಣೆಯಲ್ಲಿ ಹೇಳಲಾಗಿದೆ.

ವರದಿಯಾಗಿರುವ ಈ ಆರೋಪಗಳು ಕಾನೂನುಬದ್ಧ ಮತ್ತು ತಾಂತ್ರಿಕ ಪ್ರಕ್ರಿಯೆಗಳಿಗೆ ಅನುಗುಣವಾಗಿ ನಡೆಸಿದ ಪರೀಕ್ಷೆಗಳಿಂದ ಬೆಂಬಲಿತವಾಗಿಲ್ಲ ಎಂಬುದನ್ನು ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ಮೂರು ಕಂಪನಿಗಳು ಪೂರೈಸುತ್ತಿರುವ ಇ20 ಪೆಟ್ರೋಲ್, ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಎಥನಾಲ್ ಮಿಶ್ರಿತ ಮೋಟಾರ್ ಗ್ಯಾಸೋಲಿನ್‌ಗೆ ನಿಗದಿಪಡಿಸಿರುವ ಐಎಸ್ 17021 ಮಾನದಂಡಕ್ಕೆ ಅನುಗುಣವಾಗಿದೆ.

ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಕಳವಳಗಳು

2026ರ ಅಕ್ಟೋಬರ್‌ನಲ್ಲಿ ನಡೆಸಿದ ಪರೀಕ್ಷಾ ಕಾರ್ಯಾಚರಣೆಯಲ್ಲಿ ಅನುಸರಿಸಲಾದ ಮಾದರಿ ಸಂಗ್ರಹಣೆಯ ವಿಧಾನ ಮತ್ತು ಪರೀಕ್ಷಾ ಕ್ರಮದ ಬಗ್ಗೆ ತೈಲ ಮಾರುಕಟ್ಟೆ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ಅಗತ್ಯ ವಸ್ತುಗಳ ಕಾಯಿದೆ, 1955ರ ಅಡಿಯಲ್ಲಿ ಹೊರಡಿಸಲಾದ ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಪೂರೈಕೆ, ವಿತರಣೆ ಮತ್ತು ಅಕ್ರಮ ಪದ್ಧತಿಗಳ ತಡೆ) ಆದೇಶ, 2005 ಹಾಗೂ 2024ರ ಮಾರುಕಟ್ಟೆ ಶಿಸ್ತು ಮಾರ್ಗಸೂಚಿಗಳು (ಎಂಡಿಜಿ) ಮಾದರಿ ಸಂಗ್ರಹಣೆ, ಮಾದರಿಗಳನ್ನು ಸಂರಕ್ಷಿಸುವುದು, ಪರೀಕ್ಷೆ ಮತ್ತು ಫಲಿತಾಂಶಗಳ ಮಾಹಿತಿ ನೀಡುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾರ್ಯವಿಧಾನವನ್ನು ನಿಗದಿಪಡಿಸಿವೆ.

ನಿಗದಿತ ಪ್ರಕ್ರಿಯೆಯ ಪ್ರಕಾರ, ತಲಾ ಒಂದು ಲೀಟರ್‌ನ ಆರು ಮಾದರಿಗಳನ್ನು ಸಂಗ್ರಹಿಸಬೇಕು. ಇವುಗಳ ಪೈಕಿ ಎರಡು ಮಾದರಿಗಳನ್ನು ಸ್ವೀಕೃತಿ ದೃಢೀಕರಣದೊಂದಿಗೆ ಮಾರುಕಟ್ಟೆಗಾರರಿಗೆ ಹಸ್ತಾಂತರಿಸಬೇಕು. ಎರಡು ಮಾದರಿಗಳನ್ನು ತೈಲ ಕಂಪನಿ ಅಥವಾ ಇಲಾಖೆಯು ತನ್ನ ಬಳಿ ಸಂರಕ್ಷಿಸಬೇಕು. ಉಳಿದ ಎರಡು ಮಾದರಿಗಳನ್ನು ನಿಯಂತ್ರಣ ಆದೇಶದ ಅನುಸೂಚಿ IIIರಲ್ಲಿ ನಿರ್ದಿಷ್ಟಪಡಿಸಿರುವ ಅಥವಾ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚಿಸಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಮಾದರಿಗಳ ಮೇಲಿನ ಲೇಬಲ್‌ಗಳಿಗೆ ಜಂಟಿಯಾಗಿ ಸಹಿ ಮಾಡಬೇಕು. ಅಲ್ಲದೆ, ನಿಗದಿತ ಕಾಲಮಿತಿಯೊಳಗೆ ಪರೀಕ್ಷಾ ಫಲಿತಾಂಶಗಳನ್ನು ಮಾರುಕಟ್ಟೆಗಾರರಿಗೆ ಮತ್ತು ತೈಲ ಕಂಪನಿಗೆ ತಿಳಿಸಬೇಕು.

2026ರ ಸೆಪ್ಟೆಂಬರ್‌ನಲ್ಲಿ ಸಂಗ್ರಹಿಸಿದ ಮಾದರಿಗಳನ್ನು ರಾಜ್ಯ ಮಟ್ಟದ ಸಂಯೋಜಕರ ಮೂಲಕ ನಿಗದಿಪಡಿಸಿದ ತೈಲ ಮಾರುಕಟ್ಟೆ ಕಂಪನಿಗಳ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. 2024ರ ಮಾರುಕಟ್ಟೆ ಶಿಸ್ತು ಮಾರ್ಗಸೂಚಿಗಳಡಿ ಕೋರಲಾಗಿದ್ದ ಗುಣಮಟ್ಟದ ಮಾನದಂಡಗಳ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆದರೆ, ಅಕ್ಟೋಬರ್‌ನಲ್ಲಿ ನಡೆದ ನಂತರದ ಪರೀಕ್ಷಾ ಕಾರ್ಯಾಚರಣೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳ ಪ್ರತಿನಿಧಿಗಳ ಭಾಗವಹಿಸುವಿಕೆ ಇಲ್ಲದೆ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಯಾಗಿದೆ. ರಾಜ್ಯ ಮಟ್ಟದ ಸಂಯೋಜಕರ ಮೂಲಕ ಈ ವಿವರಗಳನ್ನು ಕೋರಿದ್ದರೂ, ತೈಲ ಮಾರುಕಟ್ಟೆ ಕಂಪನಿಗಳಿಗೆ ಸಂಬಂಧಿತ ಸಂರಕ್ಷಿತ ಮಾದರಿಗಳು, ಪ್ರತಿ ಮಾರುಕಟ್ಟೆ ಮಳಿಗೆಯ ಸಂಪೂರ್ಣ ವಿವರಗಳು ಅಥವಾ ಪ್ರಯೋಗಾಲಯದ ವರದಿಗಳು ಈವರೆಗೆ ಲಭ್ಯವಾಗಿಲ್ಲ.

ಇದಲ್ಲದೆ, ವರದಿಯಾಗಿರುವ ಪರೀಕ್ಷಾ ಫಲಿತಾಂಶಗಳು ನಿಯಂತ್ರಣ ಆದೇಶದಲ್ಲಿ ನಿರ್ದಿಷ್ಟಪಡಿಸಿರುವ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಗಳ ಬದಲಿಗೆ, ಮೂರನೇ ವ್ಯಕ್ತಿಯ ಪ್ರಯೋಗಾಲಯ ನೀಡಿರುವ ಪ್ರಮಾಣಪತ್ರಗಳನ್ನು ಆಧರಿಸಿವೆ. ವರದಿಯಲ್ಲಿ ತಿಳಿಸಿರುವ ಎಥನಾಲ್ ಪ್ರಮಾಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಅಗತ್ಯವಿರುವ ಸಂಪೂರ್ಣ ತಾಂತ್ರಿಕ ವಿವರಗಳನ್ನು ಈ ಪ್ರಮಾಣಪತ್ರಗಳು ಒಳಗೊಂಡಿಲ್ಲ. ಸಮಾನಾಂತರ ಮಾದರಿಗಳು ಮತ್ತು ನಿಗದಿತ ದಾಖಲೆಗಳು ಲಭ್ಯವಿಲ್ಲದಿರುವುದರಿಂದ, ತೈಲ ಮಾರುಕಟ್ಟೆ ಕಂಪನಿಗಳು ಹಾಗೂ ಸಂಬಂಧಿತ ಮಾರುಕಟ್ಟೆಗಾರರಿಗೆ ಈ ಫಲಿತಾಂಶಗಳ ಪರಿಶೀಲನೆ ಅಥವಾ ಮರುಪರೀಕ್ಷೆಗೆ ಕೋರಲು ಅವಕಾಶವೂ ದೊರೆತಿಲ್ಲ.

ಪರೀಕ್ಷಾ ವಿಧಾನವು ಐಎಸ್ 17021 ಮಾನದಂಡಕ್ಕೆ ಅನುಗುಣವಾಗಿರಬೇಕು

ಪ್ರಮಾಣಪತ್ರಗಳಲ್ಲಿ ಉಲ್ಲೇಖಿಸಿರುವ ಎಥನಾಲ್ ಪರೀಕ್ಷಾ ವಿಧಾನದ ಬಗ್ಗೆಯೂ ತೈಲ ಮಾರುಕಟ್ಟೆ ಕಂಪನಿಗಳ ಪ್ರಾಥಮಿಕ ತಾಂತ್ರಿಕ ಮೌಲ್ಯಮಾಪನದಲ್ಲಿ ಕಳವಳಗಳು ವ್ಯಕ್ತವಾಗಿವೆ.

ಐಎಸ್ 17021:2018 (ತಿದ್ದುಪಡಿ ಸಂಖ್ಯೆ 3, ಆಗಸ್ಟ್ 2025) ಪ್ರಕಾರ, ಇ20 ಇಂಧನದಲ್ಲಿನ ಎಥನಾಲ್ ಪ್ರಮಾಣವನ್ನು ನಿಗದಿತ ಪರೀಕ್ಷಾ ವಿಧಾನಗಳ ಮೂಲಕ ನಿರ್ಧರಿಸಬೇಕು. ಅವುಗಳೆಂದರೆ, ಎಎಸ್‌ಟಿಎಂ ಡಿ5845ರ ಅಡಿಯಲ್ಲಿ ಫೂರಿಯರ್ ಟ್ರಾನ್ಸ್‌ಫಾರ್ಮ್ ಇನ್‌ಫ್ರಾರೆಡ್ ಸ್ಪೆಕ್ಟ್ರೋಸ್ಕೋಪಿ (FTIR), ಅನುಬಂಧ ಸಿ ಅಡಿಯಲ್ಲಿ ನೀರಿನ ಮೂಲಕ ಹೊರತೆಗೆಯುವ ವಿಧಾನ ಅಥವಾ ಎಎಸ್‌ಟಿಎಂ ಡಿ4815/ಡಿ6839ರ ಅಡಿಯಲ್ಲಿ ಗ್ಯಾಸ್ ಕ್ರೊಮ್ಯಾಟೋಗ್ರಫಿ ವಿಧಾನ.

ಮುಖ್ಯವಾಗಿ, ಎಎಸ್‌ಟಿಎಂ ಡಿ4815/ಡಿ6839ರ ಅಡಿಯಲ್ಲಿ ಗ್ಯಾಸ್ ಕ್ರೊಮ್ಯಾಟೋಗ್ರಫಿ ವಿಧಾನವನ್ನು ಬಳಸುವಾಗ, ಮಾದರಿಯನ್ನು ಮೊದಲು ಆಕ್ಸಿಜನೇಟ್‌ಗಳಿಲ್ಲದ ಪೆಟ್ರೋಲ್‌ನೊಂದಿಗೆ 1:1 ಅನುಪಾತದಲ್ಲಿ ಬೆರೆಸಿ ದುರ್ಬಲಗೊಳಿಸಬೇಕು. ನಂತರ ಇ10 ಪ್ರಮಾಣೀಕೃತ ಉಲ್ಲೇಖ ಮಾದರಿಯ ಆಧಾರದ ಮೇಲೆ ಫಲಿತಾಂಶವನ್ನು ಸರಿಪಡಿಸಬೇಕು.

ಆದರೆ, ಕರ್ನಾಟಕದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಪ್ರಮಾಣಪತ್ರಗಳಲ್ಲಿ “Ethanol % by Gas Chromatography” (ಗ್ಯಾಸ್ ಕ್ರೊಮ್ಯಾಟೋಗ್ರಫಿ ಮೂಲಕ ಎಥನಾಲ್ ಪ್ರಮಾಣ) ಎಂದಷ್ಟೇ ನಮೂದಿಸಲಾಗಿದೆ. ಅನ್ವಯಿಸಲಾದ ನಿರ್ದಿಷ್ಟ ಪ್ರಮಾಣಿತ ಪರೀಕ್ಷಾ ವಿಧಾನ, ನಿಗದಿತ ದುರ್ಬಲೀಕರಣ ಪ್ರಕ್ರಿಯೆ ಅಥವಾ ಫಲಿತಾಂಶ ಸರಿಪಡಿಸುವಿಕೆಗೆ ಬಳಸಿದ ಉಲ್ಲೇಖ ಮಾದರಿಯ ವಿವರಗಳನ್ನು ಅವು ನೀಡಿಲ್ಲ. ಈ ಅಗತ್ಯ ವಿವರಗಳಿಲ್ಲದಿರುವುದರಿಂದ, ವರದಿಯಲ್ಲಿ ತಿಳಿಸಿರುವ ಶೇ. 26ರಿಂದ ಶೇ. 31ರಷ್ಟು ಎಥನಾಲ್ ಪ್ರಮಾಣವನ್ನು ಐಎಸ್ 17021ರಲ್ಲಿ ನಿಗದಿಪಡಿಸಿರುವ ಪರೀಕ್ಷಾ ವಿಧಾನದ ಆಧಾರದ ಮೇಲೆ ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಿಲ್ಲ.

ವರದಿಯಲ್ಲಿರುವ ಸಾಂದ್ರತೆಯ ಅಂಕಿಅಂಶಗಳ ಬಗ್ಗೆಯೂ ಪರಿಶೀಲನೆ ಅಗತ್ಯವಾಗಿದೆ. ಶೇ. 26ರಿಂದ ಶೇ. 31ರಷ್ಟು ಎಥನಾಲ್ ಹೊಂದಿವೆ ಎಂದು ಹೇಳಲಾದ ಮಾದರಿಗಳ ಸಾಂದ್ರತೆ ಪ್ರತಿ ಘನ ಸೆಂಟಿಮೀಟರ್‌ಗೆ 0.742ರಿಂದ 0.749 ಗ್ರಾಂ (g/cc) ಎಂದು ಪ್ರಮಾಣಪತ್ರಗಳಲ್ಲಿ ನಮೂದಿಸಲಾಗಿದೆ. ಆದರೆ, ಗುಣಮಟ್ಟ ಸಮನ್ವಯ ಕೋಶದ ಕ್ಯೂಸಿಸಿ-1 ಮತ್ತು ಕ್ಯೂಸಿಸಿ-2 ಸಮೀಕ್ಷೆಗಳಡಿ ತೈಲ ಮಾರುಕಟ್ಟೆ ಕಂಪನಿಗಳು ಪರೀಕ್ಷಿಸಿದ ಇ20 ಮಾದರಿಗಳಲ್ಲಿ ಪ್ರತಿ ಘನ ಸೆಂಟಿಮೀಟರ್‌ಗೆ 0.752ರಿಂದ 0.760 ಗ್ರಾಂ ಸಾಂದ್ರತೆ ದಾಖಲಾಗಿತ್ತು. ಪೆಟ್ರೋಲ್‌ಗಿಂತ ಎಥನಾಲ್‌ನ ಸಾಂದ್ರತೆ ಹೆಚ್ಚಾಗಿರುವುದರಿಂದ, ಮಿಶ್ರಣದಲ್ಲಿ ಎಥನಾಲ್ ಪ್ರಮಾಣ ಹೆಚ್ಚಾದಾಗ ಸಾಮಾನ್ಯವಾಗಿ ಅದರ ಸಾಂದ್ರತೆಯೂ ಹೆಚ್ಚಾಗಬೇಕಿದೆ. ಈ ವ್ಯತ್ಯಾಸವು ನಿಗದಿತ ಪರೀಕ್ಷಾ ವಿಧಾನವನ್ನು ಅನುಸರಿಸಿ, ಸೂಕ್ತ ಉಲ್ಲೇಖ ಮಾದರಿಗಳೊಂದಿಗೆ ಫಲಿತಾಂಶಗಳನ್ನು ಪರಿಶೀಲಿಸುವ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ.

ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಸಿಎಚ್‌ಟಿ ನಡೆಸಿದ ಗುಣಮಟ್ಟ ಮೇಲ್ವಿಚಾರಣೆಯಲ್ಲಿ ಮಾನದಂಡಗಳ ಪಾಲನೆ ದೃಢ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ (ಸಿಎಚ್‌ಟಿ), ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರುಕಟ್ಟೆ ಮಳಿಗೆಗಳಲ್ಲಿ ಎಥನಾಲ್ ಮಿಶ್ರಣ ಮತ್ತು ಇಂಧನದ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.

ತೈಲ ಮಾರುಕಟ್ಟೆ ಕಂಪನಿಗಳು/ಸಿಎಚ್‌ಟಿ ಗುಣಮಟ್ಟ ಸಮನ್ವಯ ಕೋಶದ (ಕ್ಯೂಸಿಸಿ) ಕಾರ್ಯಾಚರಣೆಯ ಭಾಗವಾಗಿ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಐಒಸಿಎಲ್ (330), ಬಿಪಿಸಿಎಲ್ (280) ಮತ್ತು ಎಚ್‌ಪಿಸಿಎಲ್ (283) ಕಂಪನಿಗಳ ಡಿಪೋಗಳು ಹಾಗೂ ಚಿಲ್ಲರೆ ಮಾರುಕಟ್ಟೆ ಮಳಿಗೆಗಳಿಂದ ಸಂಗ್ರಹಿಸಿದ ಒಟ್ಟು 893 ಇ20 ಮಾದರಿಗಳನ್ನು ಸಂಸ್ಕರಣಾಗಾರಗಳ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳಲ್ಲಿ ಐಎಸ್ 17021ರ ಅನುಬಂಧ ಸಿ ಪ್ರಕಾರ ಎಥನಾಲ್ ಪ್ರಮಾಣಕ್ಕಾಗಿ ಪರೀಕ್ಷಿಸಲಾಗಿದೆ. ಈ ಎಲ್ಲ 893 ಮಾದರಿಗಳಲ್ಲಿಯೂ ಎಥನಾಲ್ ಪ್ರಮಾಣವು ನಿಗದಿತ ಶೇ. 19ರಿಂದ ಶೇ. 21ರ ವ್ಯಾಪ್ತಿಯಲ್ಲಿರುವುದು ದೃಢಪಟ್ಟಿದೆ.

ಗಮನಾರ್ಹವಾಗಿ, ಕರ್ನಾಟಕದಲ್ಲಿ ಪರೀಕ್ಷಿಸಿದ ಎಲ್ಲ 56 ಮಾದರಿಗಳೂ ನಿಗದಿತ ಮಾನದಂಡಗಳಿಗೆ ಅನುಗುಣವಾಗಿವೆ. ರಾಜ್ಯದ ವಿವಿಧ ಸ್ಥಳಗಳಿಂದ ಹಾಗೂ ಮೂರೂ ತೈಲ ಮಾರುಕಟ್ಟೆ ಕಂಪನಿಗಳಿಂದ ಸಂಗ್ರಹಿಸಿದ ಈ ಮಾದರಿಗಳಲ್ಲಿ ಎಥನಾಲ್ ಪ್ರಮಾಣ ಶೇ. 19ರಿಂದ ಶೇ. 20ರ ನಡುವೆ ದಾಖಲಾಗಿದ್ದು, ಸರಾಸರಿ ಪ್ರಮಾಣ ಶೇ. 19.30ರಷ್ಟಿದೆ.

ತೈಲ ಮಾರುಕಟ್ಟೆ ಕಂಪನಿಗಳ ಚಿಲ್ಲರೆ ಮಾರುಕಟ್ಟೆ ಮಳಿಗೆಗಳಲ್ಲಿ ಎಥನಾಲ್ ಮಿಶ್ರಣವು ನಿಗದಿತ ಮಾನದಂಡಗಳ ವ್ಯಾಪ್ತಿಯಲ್ಲಿಯೇ ಮೇಲ್ವಿಚಾರಣೆಗೆ ಒಳಪಟ್ಟು ನಿಯಂತ್ರಣದಲ್ಲಿದೆ ಎಂಬುದನ್ನು ಈ ಫಲಿತಾಂಶಗಳು ದೃಢಪಡಿಸುತ್ತವೆ. ಕರ್ನಾಟಕದ ಪತ್ರಿಕಾ ಪ್ರಕಟಣೆಯಲ್ಲಿ ವರದಿಯಾಗಿರುವ ಅತಿಹೆಚ್ಚಿನ ಎಥನಾಲ್ ಪ್ರಮಾಣಕ್ಕೆ ಈ ಫಲಿತಾಂಶಗಳು ತಾಳೆಯಾಗುವುದಿಲ್ಲ. ಅಲ್ಲದೆ, ಪಾರದರ್ಶಕ, ತಾಂತ್ರಿಕವಾಗಿ ಸಮರ್ಪಕ ಮತ್ತು ಎಲ್ಲ ಸಂಬಂಧಿತ ಪಕ್ಷಗಳಿಂದ ಪರಿಶೀಲಿಸಲು ಸಾಧ್ಯವಾಗುವಂತಹ ಪರೀಕ್ಷಾ ಪ್ರಕ್ರಿಯೆಯ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತವೆ.

ಎಥನಾಲ್ ಮಿಶ್ರಣವು ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ

ತೈಲ ಮಾರುಕಟ್ಟೆ ಕಂಪನಿಗಳ ಸಂಸ್ಕರಣಾಗಾರಗಳು ಮತ್ತು ಡಿಪೋಗಳಲ್ಲಿ ಎಥನಾಲ್ ಮಿಶ್ರಣವನ್ನು ಈಗಾಗಲೇ ಸ್ಥಾಪಿಸಲಾದ, ಮಾಪನಾಂಕ ಹೊಂದಿಸಲಾದ ಮತ್ತು ನಿಯಂತ್ರಿತ ವ್ಯವಸ್ಥೆಗಳ ಮೂಲಕ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಂಸ್ಕರಣಾಗಾರ ಮತ್ತು ಡಿಪೋಗಳ ಹಂತಗಳಲ್ಲಿ ಸ್ವಯಂಚಾಲಿತ ಮಾಪನಾಂಕ ಹಾಗೂ ಪ್ರಮಾಣ ನಿರ್ಧಾರ ವ್ಯವಸ್ಥೆಗಳಿರುತ್ತವೆ. ನಿಗದಿತ ಮಾನದಂಡಗಳು ಮತ್ತು ಗುಣಮಟ್ಟ ನಿಯಂತ್ರಣ ಕಾರ್ಯವಿಧಾನಗಳ ಆಧಾರದ ಮೇಲೆ ಎಥನಾಲ್ ಮಿಶ್ರಣ ನಡೆಯುತ್ತದೆ. ಇದು ಪೆಟ್ರೋಲ್‌ಗೆ ಎಥನಾಲ್ ಅನ್ನು ಕೈಯಿಂದ ಅಥವಾ ಮನಬಂದಂತೆ ಸೇರಿಸುವ ಪ್ರಕ್ರಿಯೆಯಲ್ಲ.

ಮಿಶ್ರಿತ ಇಂಧನವು ಗ್ರಾಹಕರನ್ನು ತಲುಪುವ ಮೊದಲು ಅನ್ವಯವಾಗುವ ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್) ನಿರ್ದಿಷ್ಟತೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಲು, ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಪೂರೈಕೆ ಮತ್ತು ವಿತರಣಾ ಜಾಲದಾದ್ಯಂತ ಸ್ಥಾಪಿತ ಗುಣಮಟ್ಟ ಖಾತರಿ ವ್ಯವಸ್ಥೆಗಳನ್ನು ನಿರ್ವಹಿಸುತ್ತವೆ.

ಗ್ರಾಹಕರ ಮೇಲಾಗುವ ಪರಿಣಾಮದ ಕುರಿತ ಆರೋಪಗಳಿಗೆ ವೈಜ್ಞಾನಿಕ ಮೌಲ್ಯಮಾಪನ ಅಗತ್ಯ

ಗ್ರಾಹಕರಿಗೆ ವಾರ್ಷಿಕ ಸುಮಾರು ₹62,000 ಕೋಟಿ ಮೈಲೇಜ್ ನಷ್ಟ ಮತ್ತು ಸುಮಾರು ₹39,000 ಕೋಟಿ ವಾಹನ ದುರಸ್ತಿ ವೆಚ್ಚ ಸೇರಿ ಒಟ್ಟು ₹1.01 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಆರೋಪಗಳನ್ನು ಸಹ ಸ್ಥಾಪಿತ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ.

30 ಕೋಟಿಗೂ ಅಧಿಕ ದ್ವಿಚಕ್ರ ವಾಹನಗಳು ಮತ್ತು 4 ಕೋಟಿಗೂ ಅಧಿಕ ನಾಲ್ಕು ಚಕ್ರ ವಾಹನಗಳು ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಇ20 ಇಂಧನದಲ್ಲಿ ಸಂಚರಿಸುತ್ತಿವೆ. ಪ್ರತಿದಿನ 6 ಕೋಟಿಗೂ ಅಧಿಕ ಜನರು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡುತ್ತಾರೆ. ಇ20 ಇಂಧನದ ಗುಣಮಟ್ಟದಲ್ಲಿ ವ್ಯಾಪಕ ಸಮಸ್ಯೆಯಿದ್ದರೆ, ಇಷ್ಟು ದೊಡ್ಡ ವಾಹನ ಬಳಕೆದಾರರ ಸಮೂಹದಲ್ಲಿ ವಾಹನಗಳು ಕೆಟ್ಟು ನಿಲ್ಲುವ ಘಟನೆಗಳ ರೂಪದಲ್ಲಿ ಅದು ವ್ಯಕ್ತವಾಗಬೇಕಿತ್ತು. ಆದರೆ, ಅಂತಹ ಯಾವುದೇ ವ್ಯಾಪಕ ಘಟನೆ ವರದಿಯಾಗಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ನೈಜ ಪರಿಸ್ಥಿತಿಯಲ್ಲಿ ಇ20 ಇಂಧನವನ್ನು ಬಳಸುತ್ತಿರುವುದು, ಇಂಧನದ ಗುಣಮಟ್ಟ ಮತ್ತು ವಾಹನಗಳ ಕಾರ್ಯಕ್ಷಮತೆಗೆ ಸಂಬಂಧಿಸಿದ ಆರೋಪಗಳನ್ನು ಮೌಲ್ಯಮಾಪನ ಮಾಡುವಾಗ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ.

ಇ20 ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಮತ್ತು ಮೈಲೇಜ್ ಮೇಲೆ ಉಂಟಾಗುವ ಪರಿಣಾಮಗಳನ್ನು ಅಂತರ್ ಸಚಿವಾಲಯ ಸಮಿತಿಯು ಪರಿಶೀಲಿಸಿದೆ. ಅಲ್ಲದೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಮತ್ತು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ಸಂಸ್ಥೆಗಳು ಒಳಗೊಂಡ ಅಧ್ಯಯನಗಳ ಮೂಲಕವೂ ಈ ಅಂಶಗಳನ್ನು ಪರಿಶೀಲಿಸಲಾಗಿದೆ.

2025ರ ಆಗಸ್ಟ್ 12ರಂದು ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (ಪಿಐಬಿ) ಪ್ರಕಟಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ “ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮತ್ತು ಅದಕ್ಕೆ ಸಂಬಂಧಿಸಿದ ಕಳವಳಗಳಿಗೆ ಸ್ಪಷ್ಟನೆ” ಎಂಬ ಶೀರ್ಷಿಕೆಯ ವರದಿಯಲ್ಲಿ ತಿಳಿಸಿರುವಂತೆ, ಇ20 ಇಂಧನಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಲಾದ ವಾಹನಗಳಲ್ಲಿ ಮೈಲೇಜ್ ಸುಮಾರು ಶೇ. 1ರಿಂದ ಶೇ. 2ರಷ್ಟು ಕಡಿಮೆಯಾಗಬಹುದು. ವಾಹನದ ವರ್ಗ ಮತ್ತು ಅದರ ತಾಂತ್ರಿಕ ಹೊಂದಾಣಿಕೆಯನ್ನು ಅವಲಂಬಿಸಿ, ಇತರ ಕೆಲವು ವಾಹನಗಳಲ್ಲಿ ಈ ಇಳಿಕೆ ಸುಮಾರು ಶೇ. 3ರಿಂದ ಶೇ. 6ರಷ್ಟಿರಬಹುದು.

ಆದ್ದರಿಂದ, ದೇಶದ ಎಲ್ಲ ವಾಹನಗಳಿಗೂ ಅನ್ವಯಿಸುವಂತೆ ಮೈಲೇಜ್‌ನಲ್ಲಿ ಶೇ. 10ರಷ್ಟು ನಷ್ಟವಾಗುತ್ತದೆ ಎಂದು ಊಹಿಸಿ, ಅದನ್ನು ₹62,000 ಕೋಟಿಯ ರಾಷ್ಟ್ರೀಯ ಗ್ರಾಹಕ ನಷ್ಟದ ಮೊತ್ತವಾಗಿ ಲೆಕ್ಕಹಾಕುವುದು ವೈಜ್ಞಾನಿಕವಾಗಿ ಸ್ಥಾಪಿತವಾದ ಮೌಲ್ಯಮಾಪನವಾಗುವುದಿಲ್ಲ. ಅದೇ ರೀತಿ, ₹39,000 ಕೋಟಿ ವಾಹನ ದುರಸ್ತಿ ವೆಚ್ಚದ ಅಂದಾಜನ್ನು ಸಮರ್ಥಿಸಲು, ವಾಹನಗಳ ನೈಜ ಕಾರ್ಯಕ್ಷಮತೆಯ ದತ್ತಾಂಶ, ವಾಹನಗಳಲ್ಲಿ ಬಳಸುವ ವಸ್ತುಗಳ ಇಂಧನದೊಂದಿಗಿನ ಹೊಂದಾಣಿಕೆಯ ಅಧ್ಯಯನಗಳು ಹಾಗೂ ದಾಖಲೆಗಳಲ್ಲಿರುವ ನೈಜ ದುರಸ್ತಿ ವೆಚ್ಚಗಳ ಆಧಾರದ ಮೇಲೆ ಪಾರದರ್ಶಕ ಮೌಲ್ಯಮಾಪನ ನಡೆಸಬೇಕಾಗಿದೆ.

ವಾಹನಗಳಲ್ಲಿ ಬಳಸುವ ವಸ್ತುಗಳ ಹೊಂದಾಣಿಕೆ ಮತ್ತು ವಾಹನಗಳ ಕಾರ್ಯಕ್ಷಮತೆಗೆ ಸಂಬಂಧಿಸಿದ ಕಳವಳಗಳನ್ನು ತಾಂತ್ರಿಕ ಸಂಸ್ಥೆಗಳು ಹಾಗೂ ವಾಹನೋದ್ಯಮದ ಸಹಯೋಗದೊಂದಿಗೆ ಈಗಾಗಲೇ ಅಧ್ಯಯನಗಳ ಮೂಲಕ ಪರಿಶೀಲಿಸಲಾಗಿದೆ. ಆದ್ದರಿಂದ, ಈ ಕಾರ್ಯಕ್ರಮದ ಪರಿಣಾಮವನ್ನು ಮೌಲ್ಯಮಾಪನ ಮಾಡುವಾಗ ವಾಹನಗಳ ವರ್ಗ, ತಯಾರಿಕಾ ನಿರ್ದಿಷ್ಟತೆಗಳು, ಇಂಧನದೊಂದಿಗಿನ ಹೊಂದಾಣಿಕೆ ಹಾಗೂ ಈ ತಾಂತ್ರಿಕ ಅಧ್ಯಯನಗಳ ಫಲಿತಾಂಶಗಳನ್ನು ಪರಿಗಣಿಸಬೇಕು. ಎಲ್ಲ ವಾಹನಗಳಿಗೂ ಒಂದೇ ರೀತಿಯ ಊಹೆಗಳನ್ನು ಅನ್ವಯಿಸುವುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಬಾರದು.

ಎಥನಾಲ್ ಮಿಶ್ರಣ ಕಾರ್ಯಕ್ರಮದಿಂದ ವ್ಯಾಪಕ ಆರ್ಥಿಕ ಮತ್ತು ಪರಿಸರ ಪ್ರಯೋಜನಗಳು

ಭಾರತದಲ್ಲಿ ಎಥನಾಲ್ ಮಿಶ್ರಣದ ಪ್ರಯಾಣ ಎರಡು ದಶಕಗಳಿಗೂ ಹಿಂದಿನದು. 2001ರಲ್ಲಿ ಪ್ರಾಯೋಗಿಕ ಕಾರ್ಯಕ್ರಮದ ಮೂಲಕ ಆರಂಭವಾದ ಈ ಪ್ರಯತ್ನವು, 2018ರ ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ ಮತ್ತು ವಿವಿಧ ಪಾಲುದಾರರ ಸಮಾಲೋಚನೆಯೊಂದಿಗೆ ಸಿದ್ಧಪಡಿಸಲಾದ ಭಾರತದಲ್ಲಿ 2025ರ ವೇಳೆಗೆ ಎಥನಾಲ್ ಮಿಶ್ರಣದ ಕುರಿತ ನೀತಿ ಆಯೋಗದ ಮಾರ್ಗಸೂಚಿ ಸೇರಿದಂತೆ, ಹಂತ ಹಂತವಾಗಿ ಕೈಗೊಂಡ ವಿವಿಧ ನೀತಿ ಕ್ರಮಗಳ ಮೂಲಕ ಮುನ್ನಡೆದಿದೆ.

ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು, ದೇಶೀಯ ಕೃಷಿ ಮೌಲ್ಯ ಸರಪಳಿಗಳನ್ನು ಬಲಪಡಿಸುವುದು ಮತ್ತು ಇಂಧನ ಭದ್ರತೆಯನ್ನು ಹೆಚ್ಚಿಸುವ ಭಾರತದ ಪ್ರಯತ್ನಗಳಲ್ಲಿ ಎಥನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವು ಪ್ರಮುಖ ಭಾಗವಾಗಿದೆ.

2026ರ ಜುಲೈ 10ರಂದು ಪ್ರಕಟಿಸಲಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ “ಎಥನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮ – ಪದೇಪದೇ ಕೇಳಲಾಗುವ ಪ್ರಶ್ನೆಗಳು” ಎಂಬ ಪ್ರಕಟಣೆಯ ಪ್ರಕಾರ, 2014-15ರ ಎಥನಾಲ್ ಪೂರೈಕೆ ವರ್ಷದಿಂದ (ESY) ಈ ಕಾರ್ಯಕ್ರಮದ ಮೂಲಕ ಕೆಳಗಿನ ಸಾಧನೆಗಳಾಗಿವೆ:

  • ₹1.97 ಲಕ್ಷ ಕೋಟಿಗೂ ಅಧಿಕ ವಿದೇಶಿ ವಿನಿಮಯ ಉಳಿತಾಯವಾಗಿದೆ.
  • ಸುಮಾರು 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲದ ಬಳಕೆಯನ್ನು ಪರ್ಯಾಯವಾಗಿ ಭರಿಸಲಾಗಿದೆ.
  • ಸುಮಾರು 952 ಲಕ್ಷ ಮೆಟ್ರಿಕ್ ಟನ್ CO₂ ಹೊರಸೂಸುವಿಕೆ ಕಡಿಮೆಯಾಗಿದೆ.
  • ರೈತರಿಗೆ ₹1.66 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಪಾವತಿಸಲಾಗಿದೆ.

ಈ ಫಲಿತಾಂಶಗಳು ಕಾರ್ಯಕ್ರಮದಿಂದ ದೊರೆಯುತ್ತಿರುವ ವ್ಯಾಪಕ ಆರ್ಥಿಕ, ಪರಿಸರ ಮತ್ತು ಕೃಷಿ ಪ್ರಯೋಜನಗಳನ್ನು ಸ್ಪಷ್ಟಪಡಿಸುತ್ತವೆ. ತೈಲ ಮಾರುಕಟ್ಟೆ ಕಂಪನಿಗಳ ಲಾಭದಾಯಕತೆ ಮತ್ತು ಗ್ರಾಹಕರಿಗೆ ಉಂಟಾಗಿದೆ ಎನ್ನಲಾದ ವೆಚ್ಚಗಳನ್ನು ಮಾತ್ರ ಆಯ್ದುಕೊಂಡು ಹೋಲಿಸುವ ಮೂಲಕ ಈ ಕಾರ್ಯಕ್ರಮದ ಪ್ರಯೋಜನಗಳನ್ನು ಅಳೆಯಲು ಸಾಧ್ಯವಿಲ್ಲ.

2026ರ ಅಕ್ಟೋಬರ್ 31ರಂದು ಮುಕ್ತಾಯಗೊಂಡ 2025-26ನೇ ಎಥನಾಲ್ ಪೂರೈಕೆ ವರ್ಷದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್‌ಗೆ ಶೇ. 20ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು 1,089 ಕೋಟಿ ಲೀಟರ್ ಎಥನಾಲ್ ಖರೀದಿಸಿವೆ. ಇದೇ ಅವಧಿಯಲ್ಲಿ ಸುಮಾರು 5,673 ಕೋಟಿ ಲೀಟರ್ ಪೆಟ್ರೋಲ್ ಮಾರಾಟವಾಗಿದ್ದು, ಅದಕ್ಕೆ 1,134 ಕೋಟಿ ಲೀಟರ್ ಎಥನಾಲ್ ಮಿಶ್ರಣ ಮಾಡಲಾಗಿದೆ. ಈ ಕಾರ್ಯಕ್ರಮವು ನಿರ್ದಿಷ್ಟ ರಾಷ್ಟ್ರೀಯ ಚೌಕಟ್ಟಿನಡಿ ಕಾರ್ಯನಿರ್ವಹಿಸುತ್ತಿದ್ದು, ಪೂರೈಕೆ ಸರಪಳಿಯಾದ್ಯಂತ ಎಥನಾಲ್ ಮಿಶ್ರಣದ ಪ್ರಮಾಣ ಮತ್ತು ಗುಣಮಟ್ಟದ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಎಥನಾಲ್ ಮಿಶ್ರಣದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂಬ ದೃಢೀಕರಿಸದ ಆರೋಪಗಳು ಕಾರ್ಯಕ್ರಮದ ಒಟ್ಟಾರೆ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಅರ್ಥಪೂರ್ಣ ಆಧಾರವಾಗುವುದಿಲ್ಲ.

ನಿಗದಿತ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥನಾಲ್ ಮಿಶ್ರಣ ಮಾಡುವುದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ವಾಣಿಜ್ಯಿಕ ಲಾಭವಿದೆ ಎಂಬ ವಾದವೂ ಆಧಾರರಹಿತವಾಗಿದೆ. ಎಥನಾಲ್ ಖರೀದಿಗೆ ಗಣನೀಯ ವೆಚ್ಚವಾಗುತ್ತದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಮಿಶ್ರಣ ಮಾಡುವ ಪ್ರತಿಯೊಂದು ಲೀಟರ್ ಎಥನಾಲ್ ಕೂಡ ತೈಲ ಮಾರುಕಟ್ಟೆ ಕಂಪನಿಗಳ ಖರೀದಿ ವೆಚ್ಚವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮನಬಂದಂತೆ ಅಥವಾ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಮಾಡಲು ತೈಲ ಮಾರುಕಟ್ಟೆ ಕಂಪನಿಗಳಿಗೆ ಯಾವುದೇ ವಾಣಿಜ್ಯಿಕ ಸಮರ್ಥನೆ ಇಲ್ಲ.

ಪಾರದರ್ಶಕತೆ ಮತ್ತು ಸ್ವತಂತ್ರ ಪರಿಶೀಲನೆಗೆ ತೈಲ ಮಾರುಕಟ್ಟೆ ಕಂಪನಿಗಳ ಆಗ್ರಹ

ವ್ಯಕ್ತವಾಗಿರುವ ಕಳವಳಗಳ ಹಿನ್ನೆಲೆಯಲ್ಲಿ, ವರದಿಯಾಗಿರುವ ಫಲಿತಾಂಶಗಳಿಗೆ ಸಂಬಂಧಿಸಿದ ಸಂಪೂರ್ಣ ಮಾದರಿ ಸಂಗ್ರಹಣೆಯ ದಾಖಲೆಗಳು, ಪ್ರತಿ ಮಾರಾಟ ಮಳಿಗೆಯ ಪ್ರಯೋಗಾಲಯ ವರದಿಗಳು ಮತ್ತು ಅನುಸರಿಸಿದ ಪರೀಕ್ಷಾ ವಿಧಾನದ ವಿವರಗಳನ್ನು ಹಂಚಿಕೊಳ್ಳುವಂತೆ ಮೂರು ತೈಲ ಮಾರುಕಟ್ಟೆ ಕಂಪನಿಗಳು ಕರ್ನಾಟಕ ಸರ್ಕಾರವನ್ನು ಕೋರಿವೆ. ಅಲ್ಲದೆ, ರಾಜ್ಯ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ, ಅಧಿಕೃತ ಪ್ರಯೋಗಾಲಯದಲ್ಲಿ ನಿಗದಿತ ಉಲ್ಲೇಖ ಪರೀಕ್ಷಾ ವಿಧಾನವನ್ನು ಬಳಸಿಕೊಂಡು ಸ್ವತಂತ್ರ ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಸಮಾನಾಂತರ ಮಾದರಿಗಳನ್ನು ಒದಗಿಸುವಂತೆಯೂ ಕೋರಿವೆ.

ನಿಯಂತ್ರಣ ಆದೇಶ ಮತ್ತು 2024ರ ಮಾರುಕಟ್ಟೆ ಶಿಸ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಂಟಿ ಮಾದರಿ ಸಂಗ್ರಹಣೆ ಮತ್ತು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹಾಗೂ ಇತರ ಸಕ್ಷಮ ಪ್ರಾಧಿಕಾರಗಳೊಂದಿಗೆ ಸಹಕರಿಸಲು ತೈಲ ಮಾರುಕಟ್ಟೆ ಕಂಪನಿಗಳು ಬದ್ಧವಾಗಿವೆ. ನಿಗದಿತ ಕಾರ್ಯವಿಧಾನದ ಮೂಲಕ ಯಾವುದೇ ಉಲ್ಲಂಘನೆ ದೃಢಪಟ್ಟಲ್ಲಿ, ಅನ್ವಯವಾಗುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು.

ದೇಶಾದ್ಯಂತ ವ್ಯಾಪಿಸಿರುವ ತಮ್ಮ ಪೂರೈಕೆ ಮತ್ತು ವಿತರಣಾ ಜಾಲದಾದ್ಯಂತ ಸ್ಥಾಪಿತ ಗುಣಮಟ್ಟ ಖಾತರಿ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳ ಬೆಂಬಲದೊಂದಿಗೆ, ಉತ್ಪನ್ನಗಳ ಗುಣಮಟ್ಟ, ನಿಯಂತ್ರಕ ಮಾನದಂಡಗಳ ಪಾಲನೆ ಮತ್ತು ಗ್ರಾಹಕರ ರಕ್ಷಣೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ತಮ್ಮ ಬದ್ಧತೆಯನ್ನು ಮೂರು ತೈಲ ಮಾರುಕಟ್ಟೆ ಕಂಪನಿಗಳು ಮತ್ತೊಮ್ಮೆ ಪುನರುಚ್ಚರಿಸಿವೆ.

 

*****

 


(ಪ್ರಕಟಣೆ ಐ.ಡಿ.: 2333853) ವಿಸಿಟರ್ ಕೌಂಟರ್ : 36