ಪ್ರಕಟಣಾ ದಿನಾಂಕ:
10 NOV 2026 5:05PM by PIB Bengaluru
ಭಾರತದ ಪ್ರಸಿದ್ಧ ನೋಬೆಲ್ ಪುರಸ್ಕೃತರು ಹಾಗೂ ರಾಮನ್ ಸಂಶೋಧನಾ ಸಂಸ್ಥೆಯ (ಆರ್ ಆರ್ ಐ) ಸಂಸ್ಥಾಪಕರಾದ ಪ್ರೊಫೆಸರ್ ಸಿ. ವಿ. ರಾಮನ್ ಅವರ 138ನೇ ಜಯಂತಿಯ ಅಂಗವಾಗಿ, ಸಂಸ್ಥೆಯ ಸಭಾಂಗಣದಲ್ಲಿ ಇಂದು 'ಸಂಸ್ಥಾಪಕರ ದಿನದ ಉಪನ್ಯಾಸ 2026' ಸಂಭ್ರಮಾಚರಣೆಯಿಂದ ನಡೆಯಿತು.

ಆರ್ ಆರ್ ಐ ನಿರ್ದೇಶಕರಾದ ಪ್ರೊಫೆಸರ್ ತರುಣ್ ಸೌರದೀಪ್ ಅವರು ನೆರೆದಿದ್ದ ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಪ್ರೊಫೆಸರ್ ರಂಜಿನಿ ಬಂಡೋಪಾಧ್ಯಾಯ ಅವರು ಗೌರವಾನ್ವಿತ ಭಾಷಣಕಾರರಾದ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿ.ಎಸ್.ಟಿ.) ಕಾರ್ಯದರ್ಶಿ ಪ್ರೊ. ಉಮೇಶ್ ವಾಘಮರೆ ಅವರನ್ನು ಸಭೆಗೆ ಪರಿಚಯಿಸಿದರು.

ಪ್ರೊ. ಉಮೇಶ್ ವಾಘಮರೆ ಅವರು ಈ ವರ್ಷ 'ಮೆಟಾವ್ಯಾಲೆಂಟ್ ಬಾಂಡ್ಗಳು: ಅಸ್ಥಿರತೆಯನ್ನು ಇಷ್ಟಪಡುವ ಸ್ಪಟಿಕಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ತಮ್ಮ ಭಾಷಣದ ಆರಂಭದಲ್ಲಿ, 1989ರಲ್ಲಿ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಬೇಸಿಗೆಯ ಸಂಶೋಧನಾ ವಿದ್ಯಾರ್ಥಿಯಾಗಿ ಕಳೆದ ಅನುಭವವನ್ನು ನೆನಪಿಸಿಕೊಂಡ ಅವರು, ಅಲ್ಲಿ ಕಳೆದ ಎರಡು ತಿಂಗಳುಗಳು ಭಾರತದಲ್ಲಿಯೇ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧಾರ ಕೈಗೊಳ್ಳುವಲ್ಲಿ ಪ್ರಮುಖ ಪ್ರಭಾವ ಬೀರಿದವು ಎಂದು ತಿಳಿಸಿದರು.

ತಮ್ಮ ಉಪನ್ಯಾಸದಲ್ಲಿ 'ರಾಮನ್ ಪರಿಣಾಮ'ದ ಬಗ್ಗೆ ಆಕರ್ಷಕ ವಿವರಣೆ ನೀಡಿದ ಪ್ರೊ. ವಾಘಮರೆ, ವಸ್ತುವಿನ ಪರಮಾಣು ಬಂಧಗಳ ಬಗ್ಗೆ ಅರಿಯಲು ವಿಜ್ಞಾನಿಗಳು ಬೆಳಕನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿದರು. ತದನಂತರ ಅವರು 'ಮೆಟಾವ್ಯಾಲೆಂಟ್ ಬಾಂಡಿಂಗ್' ಕುರಿತು ಪರಿಚಯಿಸಿದರು. ಇದು ಕೆಲವು ವಸ್ತುಗಳಿಗೆ ವಿಶಿಷ್ಟ ಗುಣಲಕ್ಷಣಗಳನ್ನು ನೀಡುವ ಜೊತೆಗೆ ಅವುಗಳ ರಚನೆ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುವ ವಿಶೇಷ ಮಾದರಿಯ ಬಂಧವಾಗಿದೆ ಎಂದು ತಿಳಿಸಿದರು.

ಈ ಮಾದರಿಯ ವಸ್ತುಗಳನ್ನು ಅರಿತುಕೊಳ್ಳುವುದರಿಂದ ಮೂಲಭೂತ ಭೌತಶಾಸ್ತ್ರದ ಒಳನೋಟಗಳು ಸಿಗುವುದಲ್ಲದೆ, ಭವಿಷ್ಯದ ತಾಂತ್ರಿಕ ಅನ್ವಯಿಕೆಗಳಿಗೆ ಹೊಸ ಸಾಧ್ಯತೆಗಳು ತೆರೆದುಕೊಳ್ಳಲಿವೆ ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಆರ್ ಆರ್ ಐ ಕಾರ್ಯಕ್ರಮಗಳಲ್ಲಿ ಒಂದಾದ ಪ್ರಮುಖ ಕಾರ್ಯಕ್ರಮವನ್ನು ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಮಾಡಲಾಯಿತು.
*****