ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರಿಂದ ಬೆಂಗಳೂರು ಉತ್ತರ ಸಂಸದ್ ಕ್ರೀಡಾ ಮಹೋತ್ಸವಕ್ಕೆ ಚಾಲನೆ


ಕ್ರೀಡೆಯ ಪ್ರೋತ್ಸಾಹಕ್ಕೆ ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ

ಪ್ರಕಟಣಾ ದಿನಾಂಕ: 15 NOV 2026 2:02PM by PIB Bengaluru

ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ‌ ಹಾಗೂ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವರಾದ ‌ಸುಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ಬೆಂಗಳೂರಿನ ಮಲ್ಲೇಶ್ವರ ಬೀಗಲ್ಸ್ ಬಾಸ್ಕೆಟ್ ಬಾಲ್‌ ಕ್ಲಬ್ ನಲ್ಲಿ ಬೆಂಗಳೂರು ಉತ್ತರ ಸಂಸದ್ ಕ್ರೀಡಾ ಮಹೋತ್ಸವಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಜನಪದ ಸಮರ ಕಲೆಗಳ ಕೇಂದ್ರದ ನಿರ್ದೇಶಕರಾದ ಪದ್ಮಶ್ರೀ ಪುರಸ್ಕೃತ ಡಾ. ಹಾಸನ ರಘು, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಅರ್ಜುನ ಪ್ರಶಸ್ತಿ ಪುರಸ್ಕೃತ ಮಮತಾ ಪೂಜಾರಿ, ಅಂತಾರಾಷ್ಟ್ರೀಯ ತ್ರೋಬಾಲ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ಟಿ. ರಾಮಣ್ಣ, 2026ರ ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ವಿಜೇತ ಕ್ರೀಡಾಪಟು ಸೌಮ್ಯ ಕುಮಾರ್ ಪಾಲ್ಗೊಂಡಿದ್ದರು. 

ಉದ್ಘಾಟನೆ ಬಳಿಕ ಮಾತನಾಡಿದ ಕೇಂದ್ರ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು, 2036ರ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಆತಿಥ್ಯವಹಿಸುತ್ತಿದ್ದು, ಅದಕ್ಕೆ ಭಾರತ ಸಜ್ಜಾಗುತ್ತಿದೆ. ದೇಶದೆಲ್ಲೆಡೆ ಕ್ರೀಡಾ ಮೂಲಸೌಕರ್ಯ, ಆಟಗಾರರ ತರಬೇತಿ, ತರಬೇತುದಾರರ ನೇಮಕ ಮುಂತಾದ ಕೆಲಸಗಳು ನಡೆಯುತ್ತಿವೆ. ಕ್ರೀಡೆಯ ಪ್ರೋತ್ಸಾಹಕ್ಕೆ‌ ಕೇಂದ್ರ ಸರ್ಕಾರ ಬದ್ಧವಾಗಿದ್ದು, ಅದರ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ‌ಮೋದಿ ಅವರ ಮಾರ್ಗದರ್ಶನದಂತೆ ಸಂಸದ ಕ್ರೀಡಾ ಮಹೋತ್ಸವ ಆಯೋಜಿಸಲಾಗುತ್ತಿದೆ. ಇದರಲ್ಲಿ ಎಲ್ಲರೂ ಭಾಗವಹಿಸುವುದರ ಜೊತೆಗೆ ಬೆಂಬಲ ನೀಡಬೇಕೆಂದು ಹೇಳಿದರು.

ಜನಪದ ಸಮರ ಕಲೆಗಳ ಕೇಂದ್ರದ ನಿರ್ದೇಶಕರಾದ ಡಾ. ಹಾಸನ ರಘು ಅವರು ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳಿಗೆ ಒಂದು ಸ್ಫೂರ್ತಿಯ ಸೆಲೆ. ಆಧುನಿಕ ಕ್ರೀಡೆಗಳ ಜೊತೆಗೆ ಗ್ರಾಮೀಣ ಕ್ರೀಡೆಗಳೂ ಸಹ ಉಳಿದು, ಬೆಳೆಯಬೇಕು ಎಂದು ಹೇಳಿದರು. ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಮಮತಾ ಪೂಜಾರಿ ಅವರು ಮಾತನಾಡಿ, ಕ್ರೀಡೆ ಅಂದರೆ ಬದ್ಧತೆ, ಕಠಿಣ ಪರಿಶ್ರಮ. ಅದು ಒಂದು ದಿನದ ಫಲ ಅಲ್ಲ. ನಿರಂತರ ಪ್ರಯತ್ನದಿಂದ ಸಾಧನೆಯಾಗುತ್ತದೆ.  ಮುಂಬರುವ ಕಾಮನವೆಲ್ತ್ ಹಾಗೂ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಆತಿಥ್ಯವಹಿಸುತ್ತಿದ್ದು, ಅದರಲ್ಲಿ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿ ದೇಶಕ್ಕೆ, ರಾಜ್ಯಕ್ಕೆ ಹೆಮ್ಮೆ ತರಲಿ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ಕ್ರೀಡಾಪಟುಗಳಿಂದ ಟ್ವೈಕೊಂಡೊ ಪ್ರದರ್ಶನ, ಪಥಸಂಚಲನ ಸಹ ನಡೆಯಿತು.

 

*****


(ಪ್ರಕಟಣೆ ಐ.ಡಿ.: 2336475) ವಿಸಿಟರ್ ಕೌಂಟರ್ : 44