ಕೃಷಿ ಸಚಿವಾಲಯ
azadi ka amrit mahotsav

ಐಸಿಎಆರ್-ಐಐಎಚ್‌ಆರ್‌ನಲ್ಲಿ ತೋಟಗಾರಿಕಾ ಬೆಳೆಗಳ ಜೀನೋಮ್ ಎಡಿಟಿಂಗ್‌ಗಾಗಿ ಉತ್ಕೃಷ್ಟತಾ ಕೇಂದ್ರ ಹಾಗೂ ರೈತರ ತರಬೇತಿ ಕೇಂದ್ರ ಉದ್ಘಾಟಿಸಿದ ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಂ. ಎಲ್. ಜಾಟ್

ಪ್ರಕಟಣಾ ದಿನಾಂಕ: 15 NOV 2026 7:55PM by PIB Bengaluru

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ (ICAR) ಮಹಾನಿರ್ದೇಶಕರು ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (DARE) ಕಾರ್ಯದರ್ಶಿ ಡಾ. ಎಂ. ಎಲ್. ಜಾಟ್ ಅವರು 2026ರ ನವೆಂಬರ್ 15ರಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ (ICAR-IIHR) ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ರೈತರ ಉನ್ನತ ತರಬೇತಿ ಕೇಂದ್ರ (Advanced Training Centre – ATC) ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಜೀನೋಮ್ ಎಡಿಟಿಂಗ್‌ಗಾಗಿ ಜೈವಿಕ ಸುರಕ್ಷತಾ ಮಟ್ಟ-II (BSL-II) ಪ್ರಯೋಗಾಲಯವನ್ನು ಒಳಗೊಂಡ ಉತ್ಕೃಷ್ಟತಾ ಕೇಂದ್ರವನ್ನು ಉದ್ಘಾಟಿಸಿದರು.

ರೈತರ ಉನ್ನತ ತರಬೇತಿ ಕೇಂದ್ರದ ಉದ್ಘಾಟನೆಯ ನಂತರ, ಡಾ. ಜಾಟ್ ಅವರು ಐಸಿಎಆರ್-ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ತಳಿಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಪ್ರಗತಿಪರ ರೈತರು, ಇನ್‌ಕ್ಯುಬೇಟಿಗಳು, ಉದ್ಯಮಿಗಳು, ನರ್ಸರಿ ಮಾಲೀಕರು ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿರುವ ರೈತರೊಂದಿಗೆ ಸಂವಾದ ನಡೆಸಿದರು. ಈ ಸಂವಾದದಲ್ಲಿ ನೈಸರ್ಗಿಕ ಕೃಷಿ ಪದ್ಧತಿಗಳು, ತೋಟಗಾರಿಕೆಯಲ್ಲಿನ ನವೀನ ಆವಿಷ್ಕಾರಗಳು ಹಾಗೂ ಎಲ್‌ನಿನೊ ಮತ್ತು ಸೂಪರ್ ಎಲ್‌ನಿನೊ ಪರಿಣಾಮಗಳನ್ನು ತಗ್ಗಿಸುವ ತಂತ್ರಗಳ ಕುರಿತು ಚರ್ಚಿಸಲಾಯಿತು. ರೈತರು ಮಲ್ಚಿಂಗ್, ಸ್ಪ್ರಿಂಕ್ಲರ್ ನೀರಾವರಿ, ಗಡಿ ಬೆಳೆ ಪದ್ಧತಿ, ಅಲ್ಪಾವಧಿಯ ಹೂವು ಮತ್ತು ತರಕಾರಿ ಬೆಳೆಗಳ ಅಂತರ ಬೆಳೆ ಪದ್ಧತಿ ಹಾಗೂ ಹಸಿರೆಲೆ ಗೊಬ್ಬರ ಬಳಕೆಯಂತಹ ಹವಾಮಾನ ವೈಪರೀತ್ಯ ಎದುರಿಸುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಕ್ರಮಗಳು ಬೆಳೆ ಇಳುವರಿ, ಉತ್ಪನ್ನಗಳ ಗುಣಮಟ್ಟ ಮತ್ತು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಿವೆ.

ರೈತರನ್ನುದ್ದೇಶಿಸಿ ಮಾತನಾಡಿದ ಡಾ. ಜಾಟ್ ಅವರು, ವಿದ್ಯಾವಂತ ಯುವಜನತೆ, ಎಂಜಿನಿಯರ್‌ಗಳು ಹಾಗೂ ಕೃಷಿ ಪದವೀಧರರು ವೈಜ್ಞಾನಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಹೂಡಿಕೆ ಮಾಡಬೇಕು ಎಂದು ಒತ್ತಿಹೇಳಿದರು. ಆಧುನಿಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಸಾಂಪ್ರದಾಯಿಕ ಜ್ಞಾನದೊಂದಿಗೆ ಸಮನ್ವಯಗೊಳಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಯ ಎಲ್ಲಾ ಚಟುವಟಿಕೆಗಳಲ್ಲಿ ರೈತರೇ ಕೇಂದ್ರಬಿಂದುವಾಗಿರಬೇಕು ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಮೂಲಕ ನವೀನ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವಲ್ಲಿ ಐಸಿಎಆರ್ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು (KVKs) ಹಾಗೂ ಕೃಷಿ ತಂತ್ರಜ್ಞಾನ ಅನ್ವಯ ಸಂಶೋಧನಾ ಸಂಸ್ಥೆಗಳ (ATARIs) ಪಾತ್ರವನ್ನು ಶ್ಲಾಘಿಸಿದರು. ವಿಶೇಷವಾಗಿ ಖೇತ್ ಬಚಾವೋ ಅಭಿಯಾನ (KBA) ಕಾರ್ಯಕ್ರಮದ ಮಹತ್ವವನ್ನು ಉಲ್ಲೇಖಿಸಿದರು. ರೈತರು ಹಂಚಿಕೊಂಡ ಯಶಸ್ವಿ ಅನುಭವಗಳು ಮತ್ತು ನವೀನ ಪ್ರಯೋಗಗಳನ್ನು ದಾಖಲಿಸಿ ದೇಶದಾದ್ಯಂತ ಇತರ ರೈತರಿಗೆ ತಲುಪಿಸುವುದಾಗಿ ಭರವಸೆ ನೀಡಿದರು.

ನಂತರ, ಡಾ. ಜಾಟ್ ಅವರು ತೋಟಗಾರಿಕಾ ಬೆಳೆಗಳಲ್ಲಿ ಜೀನೋಮ್ ಎಡಿಟಿಂಗ್‌ಗಾಗಿ ಜೈವಿಕ ಸುರಕ್ಷತಾ ಮಟ್ಟ-II (BSL-II) ಪ್ರಯೋಗಾಲಯವನ್ನು ಒಳಗೊಂಡ ಉತ್ಕೃಷ್ಟತಾ ಕೇಂದ್ರವನ್ನು ಉದ್ಘಾಟಿಸಿದರು. ಇದು ತೋಟಗಾರಿಕಾ ಬೆಳೆಗಳಲ್ಲಿ ಸುಧಾರಿತ ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಜೀನೋಮ್ ಎಡಿಟಿಂಗ್ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಜ್ಞಾನಿಗಳು ಜೀನೋಮ್ ಎಡಿಟಿಂಗ್ ಸಂಶೋಧನೆಗೆ ಅಗತ್ಯವಿರುವ ಜೀನೋಮಿಕ್ ಸಂಪನ್ಮೂಲಗಳಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಅವರು ಕರೆ ನೀಡಿದರು. ಸಂಶೋಧನೆಯಲ್ಲಿ ಆದ್ಯತೆ ನಿಗದಿ, ಸೂಕ್ತ ಗುರಿ ನಿರ್ಧಾರ, ಬಲಿಷ್ಠ ದತ್ತಾಂಶ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದ ಮತ್ತು ಜಾಗತಿಕವಾಗಿ ಪ್ರಥಮವೆನಿಸುವ ಆವಿಷ್ಕಾರಗಳಿಗೆ ಅವಕಾಶವಿರುವ ಕ್ಷೇತ್ರಗಳನ್ನು ಗುರುತಿಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು.

ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ, ಯುವ ವಿಜ್ಞಾನಿಗಳ ಪ್ರತಿಭೆಯನ್ನು ಪೋಷಿಸುವುದು ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಬಲಪಡಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು. ವಿಜ್ಞಾನಿಗಳು ಸಾಂಪ್ರದಾಯಿಕ ಕಾರ್ಯವಿಧಾನಗಳನ್ನು ಮೀರಿ ಹೊಸ ಅವಕಾಶಗಳನ್ನು ಬಳಸಿಕೊಂಡು, 2047ರ ವೇಳೆಗೆ 30 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯ ಭಾರತದ ಗುರಿಯಲ್ಲಿ ಕೃಷಿ ಕ್ಷೇತ್ರದಿಂದ 6 ಟ್ರಿಲಿಯನ್ ಅಮೆರಿಕನ್ ಡಾಲರ್ ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಜೈವಿಕ ಗೊಬ್ಬರ ಸ್ಟಾರ್ಟ್‌ಅಪ್‌ಗಳು, ಸೂಕ್ಷ್ಮಜೀವಿ ತಂತ್ರಜ್ಞಾನಗಳು ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಆವಿಷ್ಕಾರಗಳಲ್ಲಿರುವ ಸಾಮರ್ಥ್ಯವನ್ನು ಅವರು ಪ್ರಸ್ತಾಪಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಶೋಧನಾ ಪ್ರಯೋಗಾಲಯಗಳ ವೀಕ್ಷಣೆ ಹಾಗೂ ಸಂಸ್ಥೆಯ ಸಂಶೋಧನಾ ಕ್ಷೇತ್ರಗಳ ಭೇಟಿ ಕಾರ್ಯಕ್ರಮಗಳೂ ನಡೆದವು. ಈ ಭೇಟಿಯು ಸಂಸ್ಥೆಯ ಸಂಶೋಧನೆ, ಆವಿಷ್ಕಾರ, ರೈತ ಸಂಪರ್ಕ ಕಾರ್ಯಕ್ರಮಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಮಹತ್ವದ ವೇದಿಕೆಯನ್ನು ಒದಗಿಸಿತು. ಸುಸ್ಥಿರ, ಹವಾಮಾನ ವೈಪರೀತ್ಯಗಳನ್ನು ಎದುರಿಸಬಲ್ಲ ಹಾಗೂ ತಂತ್ರಜ್ಞಾನ ಆಧಾರಿತ ತೋಟಗಾರಿಕಾ ಅಭಿವೃದ್ಧಿಗೆ ಐಸಿಎಆರ್-ಐಐಎಚ್‌ಆರ್‌ನ ಬದ್ಧತೆಯನ್ನು ಈ ಭೇಟಿ ಪುನರುಚ್ಚರಿಸಿತು.

ಈ ಸಂದರ್ಭದಲ್ಲಿ ಹಣ್ಣುಗಳು ಮತ್ತು ಸಾಂಬಾರ ಪದಾರ್ಥಗಳ ವಿಭಾಗದ ಎಡಿಜಿ (ADG) ಡಾ. ವಿ. ಬಿ. ಪಟೇಲ್, ಐಐಎಚ್‌ಆರ್ (IIHR) ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ, ಬೆಂಗಳೂರಿನ ಐಸಿಎಆರ್ (ICAR) ಸಂಸ್ಥೆಗಳ ನಿರ್ದೇಶಕರು ಮತ್ತು ಮುಖ್ಯಸ್ಥರು, ಸಂಸ್ಥೆಯ ವಿಜ್ಞಾನಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು, ನವೀನ ರೈತರು ಹಾಗೂ ಕೃಷಿ ಉದ್ಯಮಿಗಳು ಉಪಸ್ಥಿತರಿದ್ದರು.

 

*****

 


(ಪ್ರಕಟಣೆ ಐ.ಡಿ.: 2336681) ವಿಸಿಟರ್ ಕೌಂಟರ್ : 46