ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಪ್ರಕಟಣಾ ದಿನಾಂಕ:
16 NOV 2026 3:13PM by PIB Bengaluru
ಬೆಂಗಳೂರು ಟೆಕ್ ಶೃಂಗಸಭೆ 2026ರ ಅಂಗವಾಗಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ವತಿಯಿಂದ 2025-26ನೇ ಆರ್ಥಿಕ ವರ್ಷದ ಎಸ್ಟಿಪಿಐ ಐಟಿ ರಫ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. 2026ರ ನವೆಂಬರ್ 17ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಐಟಿ, ಐಟಿಇಎಸ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ರಫ್ತು ವಲಯದ ಸಾಧನೆಗಳನ್ನು ಗುರುತಿಸಿ, ಈ ಬಾರಿ ಒಟ್ಟು 10 ಪ್ರಮುಖ ವಿಭಾಗಗಳ ಅಡಿಯಲ್ಲಿ 31 ಪ್ರಶಸ್ತಿಗಳನ್ನು ನೀಡಲಾಗುವುದು.
ಕರ್ನಾಟಕದ ಐಟಿ/ಐಟಿಇಎಸ್/ಇಎಸ್ಡಿಎಂ ರಫ್ತು ಪ್ರಮಾಣವು 1991-92ರಲ್ಲಿ ₹5.6 ಕೋಟಿ ಇದ್ದದ್ದು, 2025-26ರಲ್ಲಿ ₹5.43 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷದ ₹4.68 ಲಕ್ಷ ಕೋಟಿ ರಫ್ತಿಗೆ ಹೋಲಿಸಿದರೆ ಇದು ಸುಮಾರು ಶೇ. 16ರಷ್ಟು ಬೆಳವಣಿಗೆಯಾಗಿದೆ. ಎಸ್ಟಿಪಿಐ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ರಫ್ತಿಗೆ ಕರ್ನಾಟಕದ ಕೊಡುಗೆ ಶೇ. 43ರಷ್ಟಿದೆ. ರಾಜ್ಯದಲ್ಲಿರುವ ಎಸ್ಟಿಪಿ/ಇಎಚ್ಟಿಪಿ ಘಟಕಗಳು ಒಟ್ಟಾರೆಯಾಗಿ 11.66 ಲಕ್ಷ ವೃತ್ತಿಪರರಿಗೆ ನೇರ ಉದ್ಯೋಗ ಒದಗಿಸಿವೆ.
ಬೆಂಗಳೂರು ಟೆಕ್ ಶೃಂಗಸಭೆಯ 29ನೇ ಆವೃತ್ತಿಯಾದ ಬಿಟಿಎಸ್-2026, ‘ಎಐ ಮತ್ತು ಅದರಾಚೆಗೆ’ (AI & Beyond) ಎಂಬ ವಿಷಯವಸ್ತುವಿನೊಂದಿಗೆ 2026ರ ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಎಸ್ಟಿಪಿಐ ದೇಶದಾದ್ಯಂತ ತನ್ನ ಮತ್ತು ಶ್ರೇಷ್ಠತಾ ಕೇಂದ್ರಗಳ ವ್ಯಾಪ್ತಿಯ ಸುಮಾರು 100 ಸ್ಟಾರ್ಟ್ಅಪ್ಗಳಿಗೆ ತಮ್ಮ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಿದೆ. ಅಲ್ಲದೆ, ಸ್ಟಾರ್ಟ್ಅಪ್ಗಳು ಹೂಡಿಕೆದಾರರು, ಮಾರ್ಗದರ್ಶಕರು, ಹಣಕಾಸು ನೆರವು ನೀಡುವ ಸಂಸ್ಥೆಗಳು ಹಾಗೂ ಉದ್ಯಮ ವಲಯದ ನಾಯಕರೊಂದಿಗೆ ಸಂಪರ್ಕ ಸಾಧಿಸಲು ವಿಶೇಷ ಸಂವಾದ ಅಧಿವೇಶನವನ್ನೂ ಆಯೋಜಿಸಿದೆ.
ಎಸ್ಟಿಪಿಐ ಐಟಿ ರಫ್ತು ಪ್ರಶಸ್ತಿಗಳು – 2026
ಎಸ್ಟಿಪಿಐ ಐಟಿ ರಫ್ತು ಪ್ರಶಸ್ತಿಗಳು ಕರ್ನಾಟಕದ ಐಟಿ/ಐಟಿಇಎಸ್/ಇಎಸ್ಡಿಎಂ ಉದ್ಯಮ ವಲಯದ ಅತ್ಯಂತ ಪ್ರತಿಷ್ಠಿತ ಮನ್ನಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿವೆ. ಐಟಿ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆ ಹಾಗೂ ಸಾಧನೆಗಳನ್ನು ಗುರುತಿಸಿ, ಎಸ್ಟಿಪಿಐ ಪ್ರತಿವರ್ಷ ವಿವಿಧ ವಿಭಾಗಗಳಲ್ಲಿ ಐಟಿ ಕಂಪನಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ.
ಅದರಂತೆ, 2025-26ನೇ ಸಾಲಿನಲ್ಲಿ ರಫ್ತು, ಉದ್ಯೋಗ ಸೃಷ್ಟಿ, ಮಹಿಳಾ ಉದ್ಯೋಗಿಗಳ ನೇಮಕಾತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಂಪನಿಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ವರ್ಷದ ಪ್ರಶಸ್ತಿಗಳನ್ನು ಒಟ್ಟು 10 ಪ್ರಮುಖ ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, ಐಟಿ, ಐಟಿಇಎಸ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ರಫ್ತು ಮಾಡುವ ಕಂಪನಿಗಳ ಸಂಪೂರ್ಣ ವಲಯವನ್ನು ಒಳಗೊಂಡಂತೆ ಒಟ್ಟು 31 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಪ್ರಶಸ್ತಿಗಳ 10 ಪ್ರಮುಖ ವಿಭಾಗಗಳು:
-
ಐಟಿ/ಐಟಿಇಎಸ್ ರಫ್ತಿನಲ್ಲಿ ಅತ್ಯಧಿಕ ಬೆಳವಣಿಗೆ.
-
ಅತ್ಯುತ್ತಮ ಸಾಧನೆ – 2 ಮತ್ತು 3ನೇ ಹಂತದ ಪ್ರದೇಶಗಳ ಐಟಿ/ಐಟಿಇಎಸ್ ಕಂಪನಿಗಳು.
-
ಅತ್ಯುತ್ತಮ ಸಾಧನೆ – ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಹಾರ್ಡ್ವೇರ್ ರಫ್ತು.
-
ಅತ್ಯುತ್ತಮ ಸಾಧನೆ – 2 ಮತ್ತು 3ನೇ ಹಂತದ ಪ್ರದೇಶಗಳಿಂದ ಎಲೆಕ್ಟ್ರಾನಿಕ್ ಹಾರ್ಡ್ವೇರ್ ರಫ್ತು.
-
ಐಟಿ ಮತ್ತು ಐಟಿಇಎಸ್ ವಲಯದಲ್ಲಿ ಅತಿ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸಿದ ಸಂಸ್ಥೆ.
-
ಐಟಿ ಮತ್ತು ಐಟಿಇಎಸ್ ವಲಯದಲ್ಲಿ ಪ್ರತಿ ಉದ್ಯೋಗಿಗೆ ಅತ್ಯಧಿಕ ರಫ್ತು ಪ್ರಮಾಣ.
-
ಐಟಿ ಮತ್ತು ಐಟಿಇಎಸ್ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಅತ್ಯಧಿಕ ಬೆಳವಣಿಗೆ.
-
ವಿಶೇಷ ಚೇತನರಿಗೆ ಅತಿ ಹೆಚ್ಚು ಉದ್ಯೋಗ ಒದಗಿಸಿದ ಸಂಸ್ಥೆ.
-
ಕರ್ನಾಟಕದ ಹೆಮ್ಮೆ – ಐಟಿ ಮತ್ತು ಇಎಚ್ಟಿಪಿ.
- ಕರ್ನಾಟಕದ ಐಟಿ ರತ್ನ.
ಎಸ್ಟಿಪಿಐ, ಸರ್ಕಾರ, ಶೈಕ್ಷಣಿಕ ವಲಯ, ಉದ್ಯಮ ಕ್ಷೇತ್ರ ಹಾಗೂ ಉದ್ಯಮ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಗಣ್ಯ ತೀರ್ಪುಗಾರರ ಸಮಿತಿ / ಪ್ರಶಸ್ತಿ ಆಯ್ಕೆ ಸಮಿತಿಯು ಐಟಿ, ಐಟಿಇಎಸ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ರಫ್ತು ಮಾಡುವ ಕಂಪನಿಗಳ ಸಂಪೂರ್ಣ ವಲಯವನ್ನು ಪರಿಗಣಿಸಿ, ಅರ್ಹ ಪ್ರಶಸ್ತಿ ಪುರಸ್ಕೃತರನ್ನು ಅಂತಿಮಗೊಳಿಸಿದೆ.
ಬೆಂಗಳೂರು ಟೆಕ್ ಶೃಂಗಸಭೆ 2026ರಲ್ಲಿ ಎಸ್ಟಿಪಿಐನ ಪ್ರಮುಖ ಕಾರ್ಯಕ್ರಮಗಳು
ಬೆಂಗಳೂರು ಟೆಕ್ ಶೃಂಗಸಭೆ 2026ರ ಸಂದರ್ಭದಲ್ಲಿ ಎಸ್ಟಿಪಿಐ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅವುಗಳ ಪ್ರಮುಖ ವಿವರಗಳು ಹೀಗಿವೆ:
1. ಎಸ್ಟಿಪಿಐ ಸಾಯುಜ್ ಸ್ಟಾರ್ಟ್ಅಪ್ ಪೆವಿಲಿಯನ್
ದೇಶದಾದ್ಯಂತ ಎಸ್ಟಿಪಿಐ ಮತ್ತು ಅದರ ಶ್ರೇಷ್ಠತಾ ಕೇಂದ್ರಗಳ ವ್ಯಾಪ್ತಿಯ ಸುಮಾರು 100 ಸ್ಟಾರ್ಟ್ಅಪ್ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಮ್ಮ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿವೆ.
ಈ ಸ್ಟಾರ್ಟ್ಅಪ್ಗಳು ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗಾಗಿ ರೂಪಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಯಾದ ಎಸ್ಟಿಪಿಐ ಸಾಯುಜ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ಟಾರ್ಟ್ಅಪ್ಗಳು, ಮಾರ್ಗದರ್ಶಕರು, ಹೂಡಿಕೆದಾರರು, ಇನ್ಕ್ಯುಬೇಟರ್ಗಳು ಹಾಗೂ ಇತರ ಪಾಲುದಾರರನ್ನು ಒಂದೇ ಡಿಜಿಟಲ್ ವೇದಿಕೆಯಡಿ ಸಂಪರ್ಕಿಸುವುದು ಮತ್ತು ಅವರಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವುದು ಈ ವೇದಿಕೆಯ ಉದ್ದೇಶವಾಗಿದೆ.
2. ಎಸ್ಟಿಪಿಐ ಹೂಡಿಕೆದಾರರು / ಮಾರ್ಗದರ್ಶಕರು / ಉದ್ಯಮ ಸಂಪರ್ಕ ಅಧಿವೇಶನ
ಎಸ್ಟಿಪಿಐ ತನ್ನ ಉದ್ಯಮಶೀಲತಾ ಕೇಂದ್ರಗಳ ಮೂಲಕ ಆಯ್ಕೆ ಮಾಡಿದ ಸ್ಟಾರ್ಟ್ಅಪ್ಗಳಿಗೆ ಪ್ರಮುಖ ಹೂಡಿಕೆದಾರರು, ವೆಂಚರ್ ಕ್ಯಾಪಿಟಲಿಸ್ಟ್ಗಳು, ಹಣಕಾಸು ನೆರವು ನೀಡುವ ಸಂಸ್ಥೆಗಳು, ಮಾರ್ಗದರ್ಶಕರು ಮತ್ತು ಉದ್ಯಮ ವಲಯದ ನಾಯಕರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಸಂವಾದ ನಡೆಸಲು ವಿಶೇಷ ವೇದಿಕೆಯನ್ನು ಒದಗಿಸುತ್ತದೆ.
ಅರ್ಥಪೂರ್ಣ ಸಂವಾದಕ್ಕೆ ಅವಕಾಶ ಕಲ್ಪಿಸುವುದು, ಕಾರ್ಯತಂತ್ರದ ಸಹಯೋಗವನ್ನು ಉತ್ತೇಜಿಸುವುದು, ಉದ್ಯಮದೊಂದಿಗಿನ ಸಂಪರ್ಕವನ್ನು ಬಲಪಡಿಸುವುದು ಹಾಗೂ ಹೂಡಿಕೆ ಮತ್ತು ಹಣಕಾಸು ನೆರವಿನ ಅವಕಾಶಗಳನ್ನು ಸೃಷ್ಟಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಈ ಮೂಲಕ ಹೊಸದಾಗಿ ಬೆಳೆಯುತ್ತಿರುವ ಸ್ಟಾರ್ಟ್ಅಪ್ಗಳ ಬೆಳವಣಿಗೆ ಮತ್ತು ವಿಸ್ತರಣೆಗೆ ಬೆಂಬಲ ನೀಡಲಾಗುತ್ತದೆ.
‘ಎಸ್ಟಿಪಿಐ ಹೂಡಿಕೆದಾರರು / ಮಾರ್ಗದರ್ಶಕರು / ಉದ್ಯಮ ಸಂಪರ್ಕ ಅಧಿವೇಶನ’ವು 2026ರ ನವೆಂಬರ್ 18ರಂದು ಬಿಐಇಸಿಯ ಹಾಲ್-2ರಲ್ಲಿರುವ ‘ಎಸ್ಟಿಪಿಐ ಪೆವಿಲಿಯನ್’ನಲ್ಲಿ ನಡೆಯಲಿದೆ.
ಈ ಅಧಿವೇಶನದ ಪ್ರಮುಖ ಅಂಶಗಳು:
- ಹೂಡಿಕೆದಾರರು / ಮಾರ್ಗದರ್ಶಕರು / ಉದ್ಯಮ ಸಂಪರ್ಕ: ಎಸ್ಟಿಪಿಐ ಆಯ್ಕೆ ಮಾಡಿದ ಸ್ಟಾರ್ಟ್ಅಪ್ಗಳು, ಹೂಡಿಕೆದಾರರು, ಮಾರ್ಗದರ್ಶಕರು ಮತ್ತು ಉದ್ಯಮ ಪ್ರತಿನಿಧಿಗಳ ನಡುವೆ ವಿಶೇಷವಾಗಿ ಏರ್ಪಡಿಸಲಾದ ವೈಯಕ್ತಿಕ ಸಂವಾದದ (ಒನ್-ಟು-ಒನ್) ಅವಕಾಶ. ಇದರ ಮೂಲಕ ಸಂಭಾವ್ಯ ಸಹಯೋಗ, ಮಾರ್ಗದರ್ಶನ ಮತ್ತು ಹಣಕಾಸು ನೆರವಿನ ಅವಕಾಶಗಳನ್ನು ಅನ್ವೇಷಿಸಲಾಗುತ್ತದೆ.
- ಸ್ಟಾರ್ಟ್ಅಪ್ಗಳೊಂದಿಗೆ ಎಸ್ಟಿಪಿಐ ಮಹಾನಿರ್ದೇಶಕರ ಸಂವಾದ: ಎಸ್ಟಿಪಿಐ ಮಹಾನಿರ್ದೇಶಕರೊಂದಿಗೆ ಸ್ಟಾರ್ಟ್ಅಪ್ಗಳು ನೇರವಾಗಿ ಸಂವಾದ ನಡೆಸಲು ಈ ಅಧಿವೇಶನ ಅವಕಾಶ ಕಲ್ಪಿಸಲಿದೆ. ತಮ್ಮ ಉದ್ಯಮಶೀಲತೆಯ ಪಯಣವನ್ನು ಹಂಚಿಕೊಳ್ಳಲು, ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಹಾಗೂ ಮುಂದಿನ ಬೆಳವಣಿಗೆ ಮತ್ತು ಬೆಂಬಲದ ಅವಕಾಶಗಳನ್ನು ಅನ್ವೇಷಿಸಲು ಇದರಿಂದ ಅನುಕೂಲವಾಗಲಿದೆ.
ಬೆಂಗಳೂರು ಟೆಕ್ ಶೃಂಗಸಭೆ 2026
ಬೆಂಗಳೂರು ಟೆಕ್ ಶೃಂಗಸಭೆ 2026 ಭಾರತದಲ್ಲಿ ನಡೆಯುವ ಪ್ರಮುಖ ವಾರ್ಷಿಕ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಬಿಟಿ) ಕಾರ್ಯಕ್ರಮವಾಗಿದೆ. ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು 1998ರಿಂದ ಈ ಶೃಂಗಸಭೆಯನ್ನು ಆಯೋಜಿಸುತ್ತಿದೆ.ಆರಂಭದಿಂದಲೂ ಈ ಪ್ರತಿಷ್ಠಿತ ಕಾರ್ಯಕ್ರಮದ ಸಹ-ಆಯೋಜಕ ಸಂಸ್ಥೆಯಾಗಿರುವ ಎಸ್ಟಿಪಿಐ, ಕಳೆದ 28 ವರ್ಷಗಳಲ್ಲಿ ಶೃಂಗಸಭೆಯ ಬೆಳವಣಿಗೆ ಮತ್ತು ಜಾಗತಿಕ ಮನ್ನಣೆ ಹೆಚ್ಚಿಸುವಲ್ಲಿ ಕೊಡುಗೆ ನೀಡಿದೆ.
ಬೆಂಗಳೂರು ಟೆಕ್ ಶೃಂಗಸಭೆಯ 29ನೇ ಆವೃತ್ತಿಯಾದ ಬಿಟಿಎಸ್-2026, ‘ಎಐ ಮತ್ತು ಅದರಾಚೆಗೆ’ (AI & Beyond) ಎಂಬ ವಿಷಯವಸ್ತುವಿನೊಂದಿಗೆ, 2026ರ ನವೆಂಬರ್ 17ರಿಂದ 19ರವರೆಗೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಡೆಯಲಿದೆ.
ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಕುರಿತು
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ 1991ರಲ್ಲಿ ಸ್ಥಾಪನೆಯಾದ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ), ದೇಶದಿಂದ ಸಾಫ್ಟ್ವೇರ್ ಮತ್ತು ಎಲೆಕ್ಟ್ರಾನಿಕ್ ಹಾರ್ಡ್ವೇರ್ ಉತ್ಪನ್ನಗಳ ರಫ್ತನ್ನು ಉತ್ತೇಜಿಸುವುದು ಹಾಗೂ ಹೆಚ್ಚಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. ದೇಶದಾದ್ಯಂತ ಎಸ್ಟಿಪಿಐ 73 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ಇದರ ಮುಖ್ಯ ಕೇಂದ್ರವಿದ್ದು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಮಣಿಪಾಲ ಮತ್ತು ದಾವಣಗೆರೆಗಳಲ್ಲಿ ಉಪಕೇಂದ್ರಗಳಿವೆ.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಎಸ್ಟಿಪಿಐ, ಭಾರತದಿಂದ ಸಾಫ್ಟ್ವೇರ್ ಮತ್ತು ಎಲೆಕ್ಟ್ರಾನಿಕ್ ಹಾರ್ಡ್ವೇರ್ ರಫ್ತನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಐಟಿ/ಐಟಿಇಎಸ್/ಇಎಸ್ಡಿಎಂ ಉದ್ಯಮಕ್ಕೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವಲಯವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ದೇಶದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಕಳೆದ ಮೂರು ದಶಕಗಳಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಹಾರ್ಡ್ವೇರ್ ಉದ್ಯಮಗಳ ಬೆಳವಣಿಗೆಗೆ ಎಸ್ಟಿಪಿಐ ಪ್ರಮುಖ ಚಾಲಕಶಕ್ತಿಯಾಗಿದೆ. ಭಾರತ ಸರ್ಕಾರದ ಯೋಜನೆಗಳು, ನೀತಿಗಳು ಮತ್ತು ಪ್ರೋತ್ಸಾಹಕ ಕ್ರಮಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ, ಉನ್ನತ ಗುಣಮಟ್ಟದ ದತ್ತಾಂಶ ಸಂವಹನ ಸೇವೆಗಳು, ದತ್ತಾಂಶ ಕೇಂದ್ರ ಸೇವೆಗಳು, ಕ್ಲೌಡ್ ಸೇವೆಗಳು ಹಾಗೂ ಇನ್ಕ್ಯುಬೇಷನ್ ಸೌಲಭ್ಯಗಳಂತಹ ಬಲಿಷ್ಠ ಮೂಲಸೌಕರ್ಯ ಬೆಂಬಲವನ್ನು ಒದಗಿಸುವ ಮೂಲಕ ಉದ್ಯಮದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಎಸ್ಟಿಪಿಐ ಮಹತ್ವದ ಕೊಡುಗೆ ನೀಡಿದೆ. ಉದ್ಯಮದ ಉತ್ತೇಜಕ ಸಂಸ್ಥೆ ಹಾಗೂ ಸೇವಾ ಪೂರೈಕೆದಾರ ಸಂಸ್ಥೆ ಎಂಬ ಎರಡೂ ಪಾತ್ರಗಳನ್ನು ನಿರ್ವಹಿಸುತ್ತಿರುವುದು ಭಾರತದ ಐಟಿ ಸೇವೆಗಳ ಹೊರಗುತ್ತಿಗೆ ವಲಯದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಕರ್ನಾಟಕದಲ್ಲಿ ಐಟಿ/ಐಟಿಇಎಸ್/ಇಎಸ್ಡಿಎಂ ಉತ್ಪನ್ನಗಳನ್ನು ರಫ್ತು ಮಾಡುವ ಅತಿ ಹೆಚ್ಚು ಕಂಪನಿಗಳು ಎಸ್ಟಿಪಿಐ ಬೆಂಗಳೂರು ವ್ಯಾಪ್ತಿಯಲ್ಲಿವೆ. ಪ್ರಸ್ತುತ, ಎಸ್ಟಿಪಿಐ ವ್ಯಾಪ್ತಿಯಲ್ಲಿ ಬೆಂಗಳೂರಿನ ಪ್ರಾದೇಶಿಕ ಕೇಂದ್ರದ ಅಡಿಯಲ್ಲಿ 1,800ಕ್ಕೂ ಹೆಚ್ಚು ಐಟಿ/ಐಟಿಇಎಸ್ ಕಂಪನಿಗಳು ಮತ್ತು 32 ಎಲೆಕ್ಟ್ರಾನಿಕ್ ಹಾರ್ಡ್ವೇರ್ ಕಂಪನಿಗಳು ನೋಂದಣಿಯಾಗಿವೆ. ಕರ್ನಾಟಕದಲ್ಲಿರುವ ಎಸ್ಟಿಪಿ/ಇಎಚ್ಟಿಪಿ ಘಟಕಗಳು ಒಟ್ಟಾರೆಯಾಗಿ 11.66 ಲಕ್ಷ ವೃತ್ತಿಪರರಿಗೆ ನೇರ ಉದ್ಯೋಗ ಒದಗಿಸಿವೆ.
*****