ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕಾರ್ಟನ್ ಬಾಕ್ಸಿನಲ್ಲಿ ಅಡಗಿಸಿಟ್ಟ ಮೆಥಾಂಫೆಟಮೈನ್: ಉಗಾಂಡಾದ ಮಾದಕವಸ್ತು ಕಳ್ಳಸಾಗಣೆದಾರರಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಎನ್ ಸಿ ಬಿ ಗೋವಾ

ಪ್ರಕಟಣಾ ದಿನಾಂಕ: 18 NOV 2026 12:45PM by PIB Bengaluru

ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ ಸಿ ಬಿ), ಗೋವಾ ವಲಯ ಘಟಕವು, ಮಾದಕವಸ್ತು ಸಾಗಿಸುತ್ತಿದ್ದ  ಮಹಿಳೆಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದೆ. ಈ ಮಹಿಳೆಯು ತನ್ನಲ್ಲಿದ್ದ ಬಿಳಿ ಬಣ್ಣದ ಬಟ್ಟೆಯ ಚೀಲವೊಂದರಲ್ಲಿ, 'ನೆಸ್ಲೆ ಸೆರೆಲಾಕ್ ಬೇಬಿ ಸಿರಿಯಲ್ ವಿತ್ ಮಿಲ್ಕ್ ರಾಗಿ ಆಪಲ್'  ಶಿಶು ಆಹಾರದ ಎರಡು ಕಾರ್ಟನ್ ಗಳ ಒಳಗೆ 995 ಗ್ರಾಂ ಮೆಥಾಂಫೆಟಮೈನ್ ಅನ್ನು ಅಡಗಿಸಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಳು. ಕರ್ನಾಟಕದ ಧಾರವಾಡದಲ್ಲಿರುವ ಗೌರವಾನ್ವಿತ ಪ್ರಧಾನ ಸೆಷನ್ಸ್ ನ್ಯಾಯಾಲಯವು, ಎನ್ಸಿಬಿ ಗೋವಾ ದಾಖಲಿಸಿದ ಪ್ರಕರಣ ಸಂಖ್ಯೆ BZU/01/2022 ರಲ್ಲಿ, ಉಗಾಂಡಾ ಮೂಲದ ಆಗ್ನೆಸ್ ನಾಗ್ಗಾಯಿ   ಎಂಬಾಕೆಯನ್ನು ಅಪರಾಧಿ ಎಂದು ತೀರ್ಪು ನೀಡಿದೆ. ನ್ಯಾಯಾಲಯವು ಆಕೆಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು ₹ 1,00,000/- ದಂಡವನ್ನು ವಿಧಿಸಿದೆ.

ಖಚಿತ ಮಾಹಿತಿ ಮೇರೆಗೆ, ಎನ್ ಸಿಬಿ ಬೆಂಗಳೂರು ವಲಯ ಘಟಕದ ತಂಡವು 6.1.2022 ರಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ, ದೆಹಲಿಯಿಂದ ರೈಲಿನಲ್ಲಿ ಬಂದ ಉಗಾಂಡಾ ಮೂಲದ 30 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ವಶಕ್ಕೆ ತೆಗೆದುಕೊಂಡಿತು. ಆಕೆಯ ಬಳಿಯಿದ್ದ ಬಿಳಿ ಬಣ್ಣದ ಬಟ್ಟೆಯ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ 'ನೆಸ್ಲೆ ಸೆರೆಲಾಕ್ ಬೇಬಿ ಸಿರಿಯಲ್ ವಿತ್ ಮಿಲ್ಕ್ ರಾಗಿ ಆಪಲ್' ಶಿಶು ಆಹಾರದ ಎರಡು ಕಾರ್ಟನ್ ಗಳ ಒಳಗೆ ಅಡಗಿಸಿಟ್ಟಿದ್ದ 995 ಗ್ರಾಂ ಮೆಥಾಂಫೆಟಮೈನ್ ಪತ್ತೆಯಾಯಿತು. ವಶಪಡಿಸಿಕೊಳ್ಳಲಾದ ಈ ಮಾದಕವಸ್ತುವಿನ ತೂಕ 995 ಗ್ರಾಂ ಆಗಿತ್ತು. ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳ  ಕಾಯ್ದೆ, 1985' (ಎನ್ ಡಿ ಪಿ ಎಸ್)ರ ಅಡಿಯಲ್ಲಿ, ಮೆಥಾಂಫೆಟಮೈನ್ ನ ಕೇವಲ 50 ಗ್ರಾಂ ಪ್ರಮಾಣವನ್ನೇ 'ವಾಣಿಜ್ಯ ಪ್ರಮಾಣ'  ಎಂದು ಪರಿಗಣಿಸಲಾಗುತ್ತದೆ. ಈ ಕಾಯಿದೆಯ ನಿಬಂಧನೆಗಳ ಪ್ರಕಾರ ಆಕೆಯನ್ನು ಬಂಧಿಸಲಾಯಿತು. ಆ ಮಹಿಳೆ ನೀಡಿದ ಮಾಹಿತಿಯ ಆಧಾರದ ಮೇಲೆ, ವಶಪಡಿಸಿಕೊಳ್ಳಲಾದ ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಉಗಾಂಡಾ ಮೂಲದ 30 ವರ್ಷ ವಯಸ್ಸಿನ ಮತ್ತೊಬ್ಬ ಪುರುಷನನ್ನು ಸಹ ಬಂಧಿಸಲಾಯಿತು. ಕರ್ನಾಟಕದ ಧಾರವಾಡದಲ್ಲಿರುವ ಪ್ರಧಾನ ಸೆಷನ್ಸ್ ನ್ಯಾಯಾಲಯವು, ಎನ್ ಡಿಪಿಎಸ್ ಕಾಯಿದೆಯ ಕಡ್ಡಾಯ ನಿಬಂಧನೆಗಳನ್ನು ಸರಿಯಾಗಿ ಪಾಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. 12.11.2026 ರಂದು ನೀಡಿದ ತೀರ್ಪಿನಲ್ಲಿ, ಎನ್ಡಿಪಿಎಸ್ ಕಾಯಿದೆ, 1985 ರ ಸೆಕ್ಷನ್ 22(ಸಿ) ಮತ್ತು 29 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಒಬ್ಬ ಆರೋಪಿಯನ್ನು ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ.

ಶಿಕ್ಷೆಯನ್ನು ವಿಧಿಸುವಾಗ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ, ಈ ಅಪರಾಧಿಯು ಅಕ್ರಮ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಯುವ ಪೀಳಿಗೆಯ ಭವಿಷ್ಯವನ್ನೇ ಹಾಳುಮಾಡುವ ಹಂತಕ್ಕೆ ಹೋಗಿದ್ದಾಳೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅಲ್ಲದೆ, ವ್ಯಕ್ತಿಗತ ಹಿತಾಸಕ್ತಿಗಿಂತ ಸಮಾಜದ ಹಿತಾಸಕ್ತಿಯೇ ಮುಖ್ಯವಾದುದು ಎಂದು ನ್ಯಾಯಾಲಯವು ಒತ್ತಿಹೇಳಿತು. ಈ ಮಹಿಳೆ ಯಾವುದೇ ಮಾನ್ಯ ವೀಸಾ ಇಲ್ಲದೆ ಭಾರತದಲ್ಲಿ ವಾಸಿಸುತ್ತಿದ್ದಳು ಎಂಬುದನ್ನೂ ನ್ಯಾಯಾಲಯವು ಹೇಳಿತು. ಎನ್ ಡಿಪಿಎಸ್ ಕಾಯಿದೆಯ ಸೆಕ್ಷನ್ 22(ಸಿ) ಮತ್ತು 29 ರ ಅಡಿಯಲ್ಲಿ, ಈ ಮಹಿಳಾ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹1,00,000/- ದಂಡವನ್ನು ವಿಧಿಸಲಾಯಿತು.

'ಮಾದಕ ವಸ್ತು ನಿಯಂತ್ರಣಕ್ಕಾಗಿನ ವಿಷನ್ ಡಾಕ್ಯುಮೆಂಟ್ 2026–2029' ರ ಪ್ರಕಾರ, ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಗಳನ್ನು ಗುರುತಿಸಲು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಶೇಷ ಒತ್ತು ನೀಡಲಾಗುತ್ತಿದೆ. ಪ್ರಸ್ತುತ ಪ್ರಕರಣದಲ್ಲಿ, ನ್ಯಾಯಾಲಯದಿಂದ ಖುಲಾಸೆಗೊಂಡ ಮತ್ತೊಬ್ಬ ಪುರುಷ ಆರೋಪಿಯು, ನಕಲಿ ವೀಸಾವನ್ನು ಬಳಸಿಕೊಂಡು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವುದು ಪತ್ತೆಯಾಯಿತು. ಅದರ ಅನುಸಾರವಾಗಿ, ಎಫ್ ಆರ್ ಆರ್ ಒ  ಜೊತೆಗೂಡಿ, ಆ ವ್ಯಕ್ತಿಯನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ, ಭಾರತದಲ್ಲಿ ಆತ ಮತ್ತೆ ಮಾದಕ ವಸ್ತು ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದ, ಆತನನ್ನು ಅವನ ದೇಶಕ್ಕೆ ಗಡೀಪಾರು ಮಾಡುವವರೆಗೂ ಬಂಧನದಲ್ಲಿ ಇರಿಸಲಾಗಿದೆ.

'ನಶೆ ಮುಕ್ತ ಭಾರತ' ಎಂಬ ಗುರಿಯನ್ನು ಸಾಕಾರಗೊಳಿಸಲು ಎನ್ ಸಿ ಬಿ  ಸಂಪೂರ್ಣ ಬದ್ಧವಾಗಿದೆ.

 

*****


(ಪ್ರಕಟಣೆ ಐ.ಡಿ.: 2337785) ವಿಸಿಟರ್ ಕೌಂಟರ್ : 33