ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಪ್ರಕಟಣಾ ದಿನಾಂಕ:
18 NOV 2026 5:54PM by PIB Bengaluru
ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು ವೃತ್ತದ ವತಿಯಿಂದ ರಾಷ್ಟ್ರವ್ಯಾಪಿ ಡಿಜಿಟಲ್ ಜೀವನ್ ಪ್ರಮಾಣಪತ್ರ (DLC) ಅಭಿಯಾನ–5ರ ಅಂಗವಾಗಿ, 2026ರ ನವೆಂಬರ್ 18ರಂದು ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಎಸ್.ಬಿ.ಐ ಆಡಳಿತ ಕಚೇರಿಗಳ ಸಂಕೀರ್ಣದಲ್ಲಿ ಬೃಹತ್ ಶಿಬಿರವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಧ್ರುಬಜ್ಯೋತಿ ಸೇನ್ ಗುಪ್ತ, ಎಸ್.ಬಿ.ಐ ಕಾರ್ಪೊರೇಟ್ ಕೇಂದ್ರದ ಡಿಎಂಡಿ ಶ್ರೀ ಚಂದರ್ ಶೇಖರ್ ಶರ್ಮಾ, ಎಸ್.ಬಿ.ಐ ಬೆಂಗಳೂರು ವೃತ್ತದ ಮುಖ್ಯ ಮಹಾಪ್ರಬಂಧಕ ಶ್ರೀ ದೀಪಕ್ ಕೌಶಿಕ್, ಮಹಾಪ್ರಬಂಧಕ ಶ್ರೀ ತಪನ್ ಶರ್ಮಾ, ಇಲಾಖೆಯ ನಿರ್ದೇಶಕರಾದ ಶ್ರೀ ರವಿಕಿರಣ್ ಉಬಲೆ ಹಾಗೂ ಹಿರಿಯ ಸಲಹೆಗಾರರಾದ ಶ್ರೀಮತಿ ರಮನ್ಜಿತ್ ಕೌರ್ ಅವರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರಕ್ಷಣಾ ಇಲಾಖೆ ಹಾಗೂ ಸ್ವಾಯತ್ತ ಸಂಸ್ಥೆಗಳ 250ಕ್ಕೂ ಅಧಿಕ ಪಿಂಚಣಿದಾರರು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಧ್ರುಬಜ್ಯೋತಿ ಸೇನ್ ಗುಪ್ತ ಅವರು, ಜೀವನ ಪ್ರಮಾಣಪತ್ರಗಳನ್ನು ಸುಲಭವಾಗಿ ಮತ್ತು ತೊಂದರೆಯಿಲ್ಲದೆ ಡಿಜಿಟಲ್ ಮೂಲಕ ಸಲ್ಲಿಸಲು ನೆರವಾಗುವ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಮಹತ್ವವನ್ನು ವಿವರಿಸಿ, ಡಿಜಿಟಲ್ ವಿಧಾನವನ್ನು ಅಳವಡಿಸಿಕೊಂಡಿರುವ ಪಿಂಚಣಿದಾರರನ್ನು ಶ್ಲಾಘಿಸಿದರು. ಶ್ರೀ ಚಂದರ್ ಶೇಖರ್ ಶರ್ಮಾ ಅವರು ಪಿಂಚಣಿದಾರರನ್ನು ಅಭಿನಂದಿಸಿ, ಪಿಂಚಣಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಬ್ಯಾಂಕಿನ ಎಲ್ಲಾ ಸಿಪಿಪಿಸಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಪಿಂಚಣಿ ಕುಂದುಕೊರತೆ ಪರಿಹಾರ ಘಟಕಗಳ ಕುರಿತು ಮಾಹಿತಿ ನೀಡಿದರು.

ಶಿಬಿರದಲ್ಲಿ ವಿಶೇಷ ಡಿಜಿಟಲ್ ಜೀವನ್ ಪ್ರಮಾಣಪತ್ರ ಕೌಂಟರ್ ಗಳನ್ನು ವ್ಯವಸ್ಥೆಗೊಳಿಸಲಾಗಿದ್ದು, ಸುಮಾರು 100 ಪಿಂಚಣಿದಾರರು ಯಶಸ್ವಿಯಾಗಿ ತಮ್ಮ ಡಿಜಿಟಲ್ ಜೀವನ್ ಪ್ರಮಾಣಪತ್ರಗಳನ್ನು ಸಲ್ಲಿಸಲು ಅನುಕೂಲ ಕಲ್ಪಿಸಲಾಯಿತು.

*****