ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪ್ರಕಟಣಾ ದಿನಾಂಕ:
19 NOV 2026 7:53PM by PIB Bengaluru
ಇಂಡಿಯಾ ಎನರ್ಜಿ ವೀಕ್ನ (ಇಂಡಿಯಾ ಇಂಧನ ಸಪ್ತಾಹ) ಐದನೇ ಆವೃತ್ತಿಯು 2027ರ ಜನವರಿ 28ರಿಂದ 31ರವರೆಗೆ ಕೋಲ್ಕತ್ತಾದ ನ್ಯೂ ಟೌನ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಇಂಧನ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಜಗತ್ತಿನಾದ್ಯಂತದ ಇಂಧನ ಕ್ಷೇತ್ರದ ನಾಯಕರು, ನೀತಿ ನಿರೂಪಕರು, ಹೂಡಿಕೆದಾರರು, ಎಂಜಿನಿಯರ್ಗಳು, ಸಂಶೋಧಕರು ಮತ್ತು ತಂತ್ರಜ್ಞಾನ ಕ್ಷೇತ್ರದ ನಾವೀನ್ಯತೆಯ ರೂವಾರಿಗಳು ಈ ಸಮಾವೇಶದಲ್ಲಿ ಒಂದೆಡೆ ಸೇರಲಿದ್ದಾರೆ. ‘ನಾವೀನ್ಯತೆಗೆ ಹೊಸ ಅವಕಾಶ, ಇಂಧನ ಭದ್ರತೆ ಮತ್ತು ಭವಿಷ್ಯದ ನಿರ್ಮಾಣ’ ಎಂಬ ಧ್ಯೇಯದೊಂದಿಗೆ ನಡೆಯಲಿರುವ ಇಂಡಿಯಾ ಎನರ್ಜಿ ವೀಕ್ 2027, ಜಾಗತಿಕ ಇಂಧನ ಮೌಲ್ಯ ಸರಪಳಿಯಾದ್ಯಂತ ಸಂವಾದ, ಉದ್ಯಮ ವಲಯದೊಂದಿಗೆ ಸಂಪರ್ಕ ಮತ್ತು ಸಹಯೋಗಕ್ಕೆ ವೇದಿಕೆ ಕಲ್ಪಿಸಲಿದೆ. ಖರೀದಿದಾರರು, ಯೋಜನೆಗಳ ಮಾಲೀಕರು, ನೀತಿ ನಿರೂಪಕರು, ಹೂಡಿಕೆದಾರರು, ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (ಇಪಿಸಿ) ಕಂಪನಿಗಳು ಹಾಗೂ ಸಂಭಾವ್ಯ ಉದ್ಯಮ ಪಾಲುದಾರರೊಂದಿಗೆ ಸಂಸ್ಥೆಗಳು ಸಂಪರ್ಕ ಸಾಧಿಸಲು ಈ ವೇದಿಕೆ ನೆರವಾಗಲಿದೆ.
2023ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆರಂಭವಾದ ಇಂಡಿಯಾ ಎನರ್ಜಿ ವೀಕ್, ತನ್ನ ವ್ಯಾಪ್ತಿ, ಅಂತರರಾಷ್ಟ್ರೀಯ ಭಾಗವಹಿಸುವಿಕೆ ಮತ್ತು ಚರ್ಚೆಯಾಗುವ ವಿಷಯಗಳ ವೈವಿಧ್ಯತೆಯನ್ನು ಗಣನೀಯವಾಗಿ ವಿಸ್ತರಿಸಿದೆ. ನಾಲ್ಕು ದಿನಗಳ ಕಾಲ ನಡೆದ 2026ರ ಇಂಡಿಯಾ ಎನರ್ಜಿ ವೀಕ್ನಲ್ಲಿ 120ಕ್ಕೂ ಹೆಚ್ಚು ದೇಶಗಳಿಂದ 75,000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 26 ರಾಷ್ಟ್ರೀಯ ತೈಲ ಕಂಪನಿಗಳು (ಎನ್ಒಸಿಗಳು), ಅಂತರರಾಷ್ಟ್ರೀಯ ತೈಲ ಕಂಪನಿಗಳು (ಐಒಸಿಗಳು) ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್ಯುಗಳು) ಸೇರಿದಂತೆ 700ಕ್ಕೂ ಹೆಚ್ಚು ಪ್ರದರ್ಶಕ ಕಂಪನಿಗಳು ಪಾಲ್ಗೊಂಡಿದ್ದವು. ಹಿಂದಿನ ಆವೃತ್ತಿಯಲ್ಲಿ 12 ದೇಶಗಳ ಪೆವಿಲಿಯನ್ಗಳೂ ಇದ್ದವು. ಏಷ್ಯಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಅಮೆರಿಕ ಖಂಡಗಳ ವಿವಿಧ ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಇದು ಈ ಕಾರ್ಯಕ್ರಮದ ವ್ಯಾಪಕ ಅಂತರರಾಷ್ಟ್ರೀಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. 2026ರ ಇಂಡಿಯಾ ಎನರ್ಜಿ ವೀಕ್ನಲ್ಲಿ ಯುಎಇ, ಕೆನಡಾ, ನೆದರ್ಲ್ಯಾಂಡ್ಸ್, ಓಮನ್, ಬ್ರೂನಿ, ಮ್ಯಾನ್ಮಾರ್ ಮತ್ತು ತಾಂಜಾನಿಯಾ ಸೇರಿದಂತೆ ವಿವಿಧ ದೇಶಗಳ 17 ಸಚಿವರು ಮತ್ತು ಉಪಸಚಿವರು ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಇಂಧನ ವೇದಿಕೆ, ಬಿಮ್ಸ್ಟೆಕ್ ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟದಂತಹ ಅಂತರರಾಷ್ಟ್ರೀಯ ಸಂಸ್ಥೆಗಳೂ ಪಾಲ್ಗೊಂಡಿದ್ದವು.
ಇಂಡಿಯಾ ಎನರ್ಜಿ ವೀಕ್ ಕುರಿತು
ಇಂಡಿಯಾ ಎನರ್ಜಿ ವೀಕ್ ದೇಶದ ಪ್ರಮುಖ ಜಾಗತಿಕ ಇಂಧನ ವೇದಿಕೆಯಾಗಿದ್ದು, ಇಂಧನ ಭದ್ರತೆ, ಸುಸ್ಥಿರತೆ ಮತ್ತು ಕೈಗೆಟುಕುವ ದರದಲ್ಲಿ ಇಂಧನ ಲಭ್ಯತೆಯನ್ನು ಖಚಿತಪಡಿಸುವ ಭವಿಷ್ಯದತ್ತ ಪ್ರಗತಿಯನ್ನು ವೇಗಗೊಳಿಸಲು ಸರ್ಕಾರದ ನಾಯಕರು, ಉದ್ಯಮ ವಲಯದ ಪ್ರಮುಖರು ಮತ್ತು ನಾವೀನ್ಯತೆಯ ರೂವಾರಿಗಳನ್ನು ಒಂದೆಡೆ ಸೇರಿಸುತ್ತದೆ. ಯಾವುದೇ ಒಂದು ನಿರ್ದಿಷ್ಟ ಹಿತಾಸಕ್ತಿಗೆ ಸೀಮಿತವಾಗಿರದ ಮುಕ್ತ ವೇದಿಕೆಯಾಗಿ, ಜಾಗತಿಕ ಇಂಧನ ಕ್ಷೇತ್ರದ ಸ್ವರೂಪವನ್ನು ರೂಪಿಸುವ ನಿಟ್ಟಿನಲ್ಲಿ ಹೂಡಿಕೆ, ನೀತಿಗಳ ಸಮನ್ವಯ ಮತ್ತು ತಂತ್ರಜ್ಞಾನ ಸಹಯೋಗಕ್ಕೆ ಇಂಡಿಯಾ ಎನರ್ಜಿ ವೀಕ್ ಉತ್ತೇಜನ ನೀಡುತ್ತದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ನಡೆಯಲಿರುವ ಇಂಡಿಯಾ ಎನರ್ಜಿ ವೀಕ್ 2027 ಅನ್ನು ಭಾರತೀಯ ಪೆಟ್ರೋಲಿಯಂ ಉದ್ಯಮಗಳ ಒಕ್ಕೂಟ (ಫಿಪಿ) ಆಯೋಜಿಸುತ್ತಿದ್ದು, ಇನ್ಫಾರ್ಮಾ ಮಾರ್ಕೆಟ್ಸ್ ಸಮ್ಮೇಳನದ ಆಯೋಜಕರಾಗಿ ಕಾರ್ಯನಿರ್ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://www.indiaenergyweek.com/
*************