Farmer's Welfare
ಭಾರತದಲ್ಲಿ ಕೃಷಿ ಶಿಕ್ಷಣ ಮತ್ತು ತರಬೇತಿ
Posted On:
04 NOV 2025 10:10 AM
ಭಾರತದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರಿಗೆ ಕೃಷಿಯು ಪ್ರಧಾನ ಜೀವನೋಪಾಯವನ್ನು ಒದಗಿಸುತ್ತದೆ ಮತ್ತು ದೇಶದ ಒಟ್ಟು ಆಂತರಿಕ ಉತ್ಪನ್ನದ (GDP) ಸುಮಾರು 18 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ಉತ್ಪಾದಕತೆಯನ್ನು ಹೆಚ್ಚಿಸಲು, ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಪ್ರಾಯೋಗಿಕ ತರಬೇತಿಯ ಮೂಲಕ ಮಾನವ ಸಾಮರ್ಥ್ಯವನ್ನು ನಿರ್ಮಿಸುವುದು ಅತ್ಯಗತ್ಯ.
ಕೃಷಿ ವಲಯವು ನಿಗದಿಪಡಿಸಿದ ಶೇ. 5 ರಷ್ಟು ಕೃಷಿ ಬೆಳವಣಿಗೆಯ ದರವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಮತ್ತು "ವಿಕಸಿತ ಕೃಷಿ ಔರ್ ಸಮೃದ್ಧ ಕಿಸಾನ್" (ಅಭಿವೃದ್ಧಿ ಹೊಂದಿದ ಕೃಷಿ ಮತ್ತು ಸಮೃದ್ಧ ರೈತ) - ಇದು "ವಿಕಸಿತ ಭಾರತದ" ಮೂಲ ತತ್ವವಾಗಿದೆ - ಈ ರಾಷ್ಟ್ರೀಯ ದೃಷ್ಟಿಕೋನವನ್ನು ಸಾಧಿಸಲು ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯನ್ನು ಈ ವಲಯದ ಪ್ರಮುಖ ಆಧಾರಸ್ತಂಭಗಳೆಂದು ಗುರುತಿಸಲಾಗಿದೆ. ಈ ದೃಷ್ಟಿಕೋನವನ್ನು ಸಾಧಿಸಲು, ಈ ಮೂರು ಆಧಾರಸ್ತಂಭಗಳು “ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ” ಎಂಬ ಮಾರ್ಗದರ್ಶಿ ತತ್ವದ ಅಡಿಯಲ್ಲಿ ಸಿನರ್ಜಿಯಲ್ಲಿ (ಒಗ್ಗೂಡಿ) ಕಾರ್ಯನಿರ್ವಹಿಸಬೇಕು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು
ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಉನ್ನತ ಸಂಸ್ಥೆ: 1929 ರಲ್ಲಿ ಸ್ಥಾಪನೆಯಾದ (ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ) ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಭಾರತದ ಪ್ರಧಾನ ಸಂಸ್ಥೆಯಾಗಿದ್ದು, ಇದು ಕೃಷಿ ಸಂಶೋಧನೆ ಮತ್ತು ಉನ್ನತ ಶಿಕ್ಷಣವನ್ನು ಸಂಯೋಜಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶು ವಿಜ್ಞಾನಗಳಲ್ಲಿನ ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಮಾರ್ಗದರ್ಶನ ನೀಡುವುದು ಇದರ ಜವಾಬ್ದಾರಿಯಾಗಿದೆ.
- ರಾಷ್ಟ್ರವ್ಯಾಪಿ ಜಾಲ: 113 ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು (ವಿವರವಾದ ಪಟ್ಟಿಯನ್ನು ಇಲ್ಲಿ ಪಡೆಯಬಹುದು: https://icar.org.in/institutes) ಮತ್ತು ಭಾರತದಾದ್ಯಂತ 74 ಕೃಷಿ ವಿಶ್ವವಿದ್ಯಾಲಯಗಳ ವ್ಯಾಪಕ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತದೆ. ಇದು ವಿಶ್ವದ ಅತಿದೊಡ್ಡ ಕೃಷಿ ಸಂಶೋಧನಾ ಜಾಲಗಳಲ್ಲಿ ಒಂದಾಗಿದೆ. ICAR ಹಸಿರು ಕ್ರಾಂತಿಯನ್ನು ಮುನ್ನಡೆಸಿತು ಮತ್ತು ಹವಾಮಾನ ಸಹಿಷ್ಣು, ಹೆಚ್ಚಿನ ಇಳುವರಿ ನೀಡುವ ತಳಿಗಳು ಮತ್ತು ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿ ಮುಂದುವರೆದಿದೆ.
- ವಿಸ್ತರಣೆ ಮತ್ತು ಗುಣಮಟ್ಟ: ICAR ತನ್ನ ವಿಭಾಗಗಳ ಮೂಲಕ ತಂತ್ರಜ್ಞಾನಗಳನ್ನು ರೈತರಿಗೆ ವರ್ಗಾಯಿಸಲು 731 ಕೃಷಿ ವಿಜ್ಞಾನ ಕೇಂದ್ರಗಳನ್ನು ನಿರ್ವಹಿಸುತ್ತದೆ. ಇದು ‘ICAR ಮಾದರಿ ಕಾಯಿದೆ (ಪರಿಷ್ಕೃತ 2023)’ ಮತ್ತು ‘ಕೃಷಿ ಕಾಲೇಜುಗಳನ್ನು ಸ್ಥಾಪಿಸಲು ಕನಿಷ್ಠ ಅವಶ್ಯಕತೆಗಳು’ ಇವುಗಳನ್ನು ನೀಡುವುದರ ಮೂಲಕ ಶೈಕ್ಷಣಿಕ ಮಾನದಂಡಗಳನ್ನು ಸಹ ಹೊಂದಿಸುತ್ತದೆ. ಅಲ್ಲದೆ, ರಾಷ್ಟ್ರೀಯ ಕೃಷಿ ಶಿಕ್ಷಣ ಮಾನ್ಯತಾ ಮಂಡಳಿಯ ಮೂಲಕ ಸಂಸ್ಥೆಗಳಿಗೆ ಮಾನ್ಯತೆ ನೀಡುತ್ತದೆ.
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು
ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು: ಭಾರತದಲ್ಲಿ 63 ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, 3 ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳು (ಪೂಸಾ, ಇಂಫಾಲ್, ಝಾನ್ಸಿ), 4 "ಡೀಮ್ಡ್" ವಿಶ್ವವಿದ್ಯಾಲಯಗಳು (IARI-ದೆಹಲಿ, NDRI-ಕರ್ನಾಲ್, IVRI-ಇಜತ್ನಗರ್, CIFE-ಮುಂಬೈ), ಮತ್ತು ಕೃಷಿ ವಿಭಾಗಗಳೊಂದಿಗೆ 4 ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ. ICAR ಜಾಲವು 11 ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆಗಳನ್ನು ಸಹ ಒಳಗೊಂಡಿದೆ.
ಖಾಸಗಿ ವಲಯ: ಕೃಷಿ ಶಿಕ್ಷಣವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರಗಳು ಖಾಸಗಿ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಉತ್ತೇಜಿಸಲು ತಮ್ಮದೇ ಆದ ನೀತಿಗಳನ್ನು ಹೊಂದಿವೆ. ICAR ನ ಪಾತ್ರವು ವಿನಂತಿಯ ಮೇರೆಗೆ ಮಾನ್ಯತೆ ನೀಡಲು ಮಾತ್ರ ಸೀಮಿತವಾಗಿದೆ. ಕಳೆದ ಐದು ವರ್ಷಗಳಲ್ಲಿ, ICAR ನಿಂದ ಮಾನ್ಯತೆ ಪಡೆದ ಖಾಸಗಿ ಕೃಷಿ ಕಾಲೇಜುಗಳ ಸಂಖ್ಯೆಯು 2020-21 ರಲ್ಲಿ 5 ರಿಂದ 2024-25 ರ ವೇಳೆಗೆ 22 ಕ್ಕೆ ಏರಿದೆ.

ಭಾರತದಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳು
ಪ್ರಸ್ತುತ, ಭಾರತದಲ್ಲಿ ಮೂರು ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾದೇಶಿಕ ಅಗತ್ಯಗಳನ್ನು ಪೂರೈಸಲು ಸಂಸತ್ತಿನ ಕಾಯ್ದೆಗಳ ಮೂಲಕ ಸ್ಥಾಪಿಸಲಾಗಿದೆ:
1. ಡಾ. ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ, ಪೂಸಾ (ಬಿಹಾರ)
- ಸ್ಥಾಪನೆ: ಇದನ್ನು ಅಕ್ಟೋಬರ್ 2016 ರಲ್ಲಿ ಹಿಂದಿನ ರಾಜೇಂದ್ರ ಕೃಷಿ ವಿಶ್ವವಿದ್ಯಾಲಯದಿಂದ (ಸ್ಥಾಪನೆ: 1970) ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯವಾಗಿ ಪರಿವರ್ತಿಸಲಾಯಿತು.
- ಘಟಕ ಕಾಲೇಜುಗಳು: ಇದು 8 ಘಟಕ ಕಾಲೇಜುಗಳನ್ನು ಹೊಂದಿದೆ:
- ತಿರ್ಹಟ್ ಕೃಷಿ ಕಾಲೇಜು
- ಸ್ನಾತಕೋತ್ತರ ಕೃಷಿ ಕಾಲೇಜು
- ಕೃಷಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು
- ಸಮುದಾಯ ವಿಜ್ಞಾನ ಕಾಲೇಜು
- ಮೂಲಭೂತ ವಿಜ್ಞಾನ ಮತ್ತು ಮಾನವಿಕ ವಿಜ್ಞಾನ ಕಾಲೇಜು
- ಮೀನುಗಾರಿಕೆ ಕಾಲೇಜು
- ಪಂಡಿತ್ ದೀನದಯಾಳ್ ಉಪಾಧ್ಯಾಯ ತೋಟಗಾರಿಕೆ ಮತ್ತು ಅರಣ್ಯ ಕಾಲೇಜು
- ಕೃಷಿ ವ್ಯವಹಾರ ಮತ್ತು ಗ್ರಾಮೀಣ ನಿರ್ವಹಣೆ ಶಾಲೆ
- ಶೈಕ್ಷಣಿಕ ಕೊಡುಗೆಗಳು: ಆರ್‍ಪಿಸಿಎಯು ಕೃಷಿ, ತೋಟಗಾರಿಕೆ, ಕೃಷಿ ಎಂಜಿನಿಯರಿಂಗ್, ಸಮುದಾಯ ವಿಜ್ಞಾನ, ಮೀನುಗಾರಿಕೆ, ಜೈವಿಕ ತಂತ್ರಜ್ಞಾನ, ಅರಣ್ಯ ಮತ್ತು ಆಹಾರ ತಂತ್ರಜ್ಞಾನ ಸೇರಿದಂತೆ 8 ವಿಭಾಗಗಳಲ್ಲಿ ಪದವಿಪೂರ್ವ ಕಾರ್ಯಕ್ರಮಗಳನ್ನು ನೀಡುತ್ತದೆ. ಇದರ ಜೊತೆಗೆ, ವಿಶ್ವವಿದ್ಯಾಲಯವು ವ್ಯಾಪಕ ಶ್ರೇಣಿಯ ಸ್ನಾತಕೋತ್ತರ ಕಾರ್ಯಕ್ರಮಗಳು ಮತ್ತು ಪಿಎಚ್.ಡಿ. ಪದವಿಗಳನ್ನು ಸಹ ಒದಗಿಸುತ್ತದೆ.
- ಕಾರ್ಯವ್ಯಾಪ್ತಿ: ಈ ವಿಶ್ವವಿದ್ಯಾಲಯವು ಬಿಹಾರದ ಸಮಸ್ತಿಪುರ ಜಿಲ್ಲೆಯ ಪೂಸಾ, ಮುಜಫ್ಫರಪುರ ಜಿಲ್ಲೆಯ ಢೋಲಿ ಮತ್ತು ಪೂರ್ವ ಚಂಪಾರಣ್ ಜಿಲ್ಲೆಯ ಪಿಪ್ರಕೋಠಿಯಲ್ಲಿರುವ ಬಹು ಕ್ಯಾಂಪಸ್‌ಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು 18 ಕೃಷಿ ವಿಜ್ಞಾನ ಕೇಂದ್ರಗಳನ್ನು ನಿರ್ವಹಿಸುತ್ತದೆ.
- ಇತ್ತೀಚಿನ ಕ್ರಮಗಳು: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ, ತಳಮಟ್ಟದ ಮತ್ತು ಮಧ್ಯಮ-ನಿರ್ವಹಣಾ ಹಂತಗಳಲ್ಲಿ ಉದ್ಯಮಕ್ಕೆ ಸಿದ್ಧರಾಗಿರುವ ಪ್ರತಿಭೆಯನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಹಲವಾರು ಅಲ್ಪಾವಧಿಯ ಪ್ರಮಾಣಪತ್ರ ಮತ್ತು ಡಿಪ್ಲೋಮಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.
2. ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ, ಇಂಫಾಲ (ಮಣಿಪುರ)
- ಸ್ಥಾಪನೆ: ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಕಾಯಿದೆ, 1992 ರ ಅಡಿಯಲ್ಲಿ ಜನವರಿ 1993ರಲ್ಲಿ ಸ್ಥಾಪಿಸಲಾಯಿತು.
- ಸೇವಾ ಪ್ರದೇಶ: ಈ ವಿಶ್ವವಿದ್ಯಾಲಯವು ಏಳು ಈಶಾನ್ಯ ಬೆಟ್ಟದ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ಮತ್ತು ತ್ರಿಪುರಾಗಳಿಗೆ ಸೇವೆ ಸಲ್ಲಿಸುತ್ತದೆ.
- ಕಾರ್ಯನಿರ್ವಹಣೆ: ಸಿಎಯು, ಇಂಫಾಲ ಈ ಏಳು ಬೆಟ್ಟದ ರಾಜ್ಯಗಳಾದ್ಯಂತ ಇರುವ 13 ಘಟಕ ಕಾಲೇಜುಗಳ ಮೂಲಕ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯನ್ನು ಸಂಯೋಜಿಸುವ ಸಮಗ್ರ ವಿಧಾನವನ್ನು ಅನುಸರಿಸುತ್ತದೆ (ಸಂಪೂರ್ಣ ಪಟ್ಟಿ https://cau.ac.in/about-cau-imphal/ ನಲ್ಲಿ ಲಭ್ಯವಿದೆ).
- ಶೈಕ್ಷಣಿಕ ಕೊಡುಗೆಗಳು: ಇದು ಪ್ರಸ್ತುತ ಕೃಷಿ ಮತ್ತು ಸಂಬಂಧಿತ ವಿಭಾಗಗಳಲ್ಲಿ 10 ಪದವಿಪೂರ್ವ, 48 ಸ್ನಾತಕೋತ್ತರ ಮತ್ತು 34 ಪಿಎಚ್.ಡಿ. ಕಾರ್ಯಕ್ರಮಗಳನ್ನು ನೀಡುತ್ತಿದೆ. 2024-25ರ ಶೈಕ್ಷಣಿಕ ವರ್ಷದಲ್ಲಿ ಒಟ್ಟು 2982 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
3. ರಾಣಿ ಲಕ್ಷ್ಮಿಬಾಯಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ, ಝಾನ್ಸಿ (ಉತ್ತರ ಪ್ರದೇಶ)
- ಸ್ಥಾಪನೆ: ಸಂಸತ್ತಿನ ಕಾಯಿದೆ (ಕಾಯ್ದೆ ಸಂಖ್ಯೆ. 10, 2014) ಅಡಿಯಲ್ಲಿ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಇದನ್ನು ಸ್ಥಾಪಿಸಲಾಯಿತು.
- ಧ್ಯೇಯ: ಈ ವಿಶ್ವವಿದ್ಯಾಲಯವು ಕೃಷಿ ವಿಜ್ಞಾನದಲ್ಲಿ ಉತ್ಕೃಷ್ಟತೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಇದು ಭಾರತದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳನ್ನು ಮುನ್ನಡೆಸಲು ಸಮರ್ಪಿತವಾಗಿದೆ.
- ಕೋರ್ಸ್‌ಗಳು: ಆರ್‍ಎಲ್‍ಬಿಸಿಎಯು ನ ಪಠ್ಯಕ್ರಮವು ಸಸ್ಯಶಾಸ್ತ್ರ, ತೋಟಗಾರಿಕೆ, ಪಶು ವೈದ್ಯಕೀಯ ವಿಜ್ಞಾನ ಮತ್ತು ಕೃಷಿ ಎಂಜಿನಿಯರಿಂಗ್ ಇತ್ಯಾದಿಗಳ ವಿವಿಧ ವಿಭಾಗಗಳಲ್ಲಿ ಇತ್ತೀಚಿನ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಪದವಿಪೂರ್ವ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದೆ.
- ಘಟಕ ಕಾಲೇಜುಗಳು: ಇದರ ಘಟಕ ಕಾಲೇಜುಗಳಲ್ಲಿ ಝಾನ್ಸಿಯಲ್ಲಿ (ಉತ್ತರ ಪ್ರದೇಶ) ಕೃಷಿ ಕಾಲೇಜು ಮತ್ತು ತೋಟಗಾರಿಕೆ ಮತ್ತು ಅರಣ್ಯ ಕಾಲೇಜು, ಹಾಗೂ ದತಿಯಾ (ಮಧ್ಯಪ್ರದೇಶ) ನಲ್ಲಿ ಮೀನುಗಾರಿಕೆ ಕಾಲೇಜು ಮತ್ತು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕಾಲೇಜುಗಳು ಸೇರಿವೆ.
ಕೃಷಿಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಕೃತಕ ಬುದ್ಧಿಮತ್ತೆ
ತಂತ್ರಜ್ಞಾನ ಅಳವಡಿಕೆ: ಕೃಷಿಯನ್ನು ಆಧುನೀಕರಿಸಲು ಸರ್ಕಾರವು ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಕೃತಕ ಬುದ್ಧಿಮತ್ತೆ ಬಳಕೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಇದರ ಅನ್ವಯಗಳಲ್ಲಿ ಸೂಕ್ಷ್ಮ ಕೃಷಿ (ಸೆನ್ಸಾರ್ ಆಧಾರಿತ ನೀರಾವರಿ, ಸ್ವಯಂಚಾಲಿತ ಯಂತ್ರೋಪಕರಣಗಳು), ಚಿತ್ರೀಕರಣ ಮತ್ತು ಸಿಂಪರಣೆಗಾಗಿ ಡ್ರೋನ್‌ಗಳು, ಜಾನುವಾರುಗಳ ಮೇಲ್ವಿಚಾರಣೆ, ಹವಾಮಾನ-ಸ್ಮಾರ್ಟ್ ಹಸಿರುಮನೆಗಳು, ಎಐ-ಚಾಲಿತ ಕೀಟ/ಬೆಳೆಗಳ ಮೇಲ್ವಿಚಾರಣೆ ಮತ್ತು ದೂರ ಸಂವೇದಿ ತಂತ್ರಜ್ಞಾನಗಳು ಸೇರಿವೆ.
ನಾವೀನ್ಯತೆ ಕೇಂದ್ರಗಳು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಅಂತರ-ಶಿಸ್ತೀಯ ಸೈಬರ್-ಭೌತಿಕ ವ್ಯವಸ್ಥೆಗಳ ಮಿಷನ್ ಅಡಿಯಲ್ಲಿ, 2022 ರ ಡಿಸೆಂಬರ್‌ವರೆಗೆ ದೇಶಾದ್ಯಂತ 25 ತಂತ್ರಜ್ಞಾನ ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಮೂರು, ಕೃಷಿಯಲ್ಲಿ ಐಒಟಿ ಮತ್ತು ಎಐ ಅನ್ವಯಿಕೆಗಳ ಮೇಲೆ ಕೇಂದ್ರೀಕೃತವಾಗಿವೆ. ಉದಾಹರಣೆಗೆ:
- ಐಐಟಿ ರೋಪಾರ್‍ನ ಕೃಷಿ/ಜಲ ಟಿಐಎಚ್, ಭಾರತದಾದ್ಯಂತ ಕೇಸರಿ ಉತ್ಪಾದನೆ ಮತ್ತು ಪೂರೈಕೆಗಾಗಿ ಐಒಟಿ ಸಂವೇದಕಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ.
- ಐಐಟಿ ಬಾಂಬೆ "ಇಂಟರ್ನೆಟ್ ಆಫ್ ಎವೆರಿಥಿಂಗ್" ಕುರಿತು ಟಿಐಎಚ್ ಹೊಂದಿದೆ.
- ಐಐಟಿ ಖರಗ್‌ಪುರವು ಎಐ/ಎಮ್‍ಎಲ್ ಪರಿಹಾರಗಳಿಗಾಗಿ (ಬೆಳೆ ಆರೋಗ್ಯ ಮುನ್ಸೂಚನೆ, ಇಳುವರಿ ಮುನ್ಸೂಚನೆ) AI4ICPS ಕೇಂದ್ರವನ್ನು ನಡೆಸುತ್ತಿದೆ.
ಡಿಜಿಟಲ್ ಮೂಲಸೌಕರ್ಯ: ಎಲೆಕ್ಟ್ರಾನಿಕ್ಸ್ ಸಚಿವಾಲಯವು ಬೆಂಗಳೂರು, ಗುರುಗ್ರಾಮ್, ಗಾಂಧಿನಗರ ಮತ್ತು ವಿಶಾಖಪಟ್ಟಣಂನಂತಹ ನಗರಗಳಲ್ಲಿ IoT ಮೇಲೆ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದೆ. ಉದಾಹರಣೆಗೆ, ವಿಶಾಖಪಟ್ಟಣಂ ಐಒಟಿ ಉತ್ಕೃಷ್ಟತಾ ಕೇಂದ್ರವು ಕೃಷಿ ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದ್ದು, ನಾವೀನ್ಯತೆಯನ್ನು ಪ್ರಜಾಪ್ರಭುತ್ವಗೊಳಿಸಲು ಸ್ಟಾರ್ಟ್‌ಅಪ್‌ಗಳು, ಉದ್ಯಮ, ಹೂಡಿಕೆದಾರರು ಮತ್ತು ಶಿಕ್ಷಣ ತಜ್ಞರನ್ನು ಸಂಪರ್ಕಿಸುತ್ತದೆ. ಕೃಷಿಗಾಗಿ ರಾಷ್ಟ್ರೀಯ ಇ-ಆಡಳಿತ ಯೋಜನೆ ಅಡಿಯಲ್ಲಿ, ಎಐ/ಎಮ್‍ಎಲ್, ಐಒಟಿ, ಬ್ಲಾಕ್‌ಚೈನ್ ಇತ್ಯಾದಿಗಳನ್ನು ಬಳಸಿಕೊಂಡು ಡಿಜಿಟಲ್-ಕೃಷಿ ಯೋಜನೆಗಳನ್ನು ಜಾರಿಗೊಳಿಸಲು ರಾಜ್ಯಗಳಿಗೆ ಧನಸಹಾಯ ನೀಡಲಾಗುತ್ತದೆ.
ನವೋದ್ಯಮ (ಸ್ಟಾರ್ಟ್‌ಅಪ್) ಪರಿಸರ ವ್ಯವಸ್ಥೆ: 2018–19 ರಿಂದ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿರುವ "ನಾವೀನ್ಯತೆ ಮತ್ತು ಕೃಷಿ-ಉದ್ಯಮಶೀಲತೆ ಅಭಿವೃದ್ಧಿ" ಕಾರ್ಯಕ್ರಮವು ಆರ್ಥಿಕ ನೆರವು ನೀಡುವುದರ ಮೂಲಕ ಮತ್ತು ಕೃಷಿ-ಇನ್ಕ್ಯುಬೇಷನ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ನಾವೀನ್ಯತೆ ಮತ್ತು ಕೃಷಿ ಉದ್ಯಮಶೀಲತೆಯನ್ನು ಪೋಷಿಸುತ್ತಿದೆ. ಈ ಉಪಕ್ರಮವು ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿನ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುತ್ತದೆ, ಹೊಸ ಅವಕಾಶಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಇದರ ದ್ವಿಗುಣ ಗುರಿಯಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತ ಸ್ಟಾರ್ಟ್‌ಅಪ್‌ಗಳು ಕೃಷಿ ಮತ್ತು ಸಂಬಂಧಿತ ವಲಯಗಳಾದ್ಯಂತ ಕೃಷಿ ಸಂಸ್ಕರಣೆ, ಆಹಾರ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಸೂಕ್ಷ್ಮ ಕೃಷಿ, ಡಿಜಿಟಲ್ ಕೃಷಿ, ಬ್ಲಾಕ್‌ಚೈನ್ ತಂತ್ರಜ್ಞಾನ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿವೆ.
ರೈತರಿಗೆ ಕೌಶಲ್ಯ ಮತ್ತು ತರಬೇತಿ
ರೈತರಿಗೆ ಕೌಶಲ್ಯ ಮತ್ತು ತರಬೇತಿ ನೀಡುವುದು ಭಾರತದ ಕೃಷಿ ಪರಿವರ್ತನೆಯ ಕೇಂದ್ರಬಿಂದುವಾಗಿದೆ. ಆಧುನಿಕ ಕೃಷಿ ಅಗತ್ಯಗಳನ್ನು ಅರಿತುಕೊಂಡು, ತಾಂತ್ರಿಕ ನಾವೀನ್ಯತೆಗಳು, ಹವಾಮಾನ ಮತ್ತು ಮಾರುಕಟ್ಟೆ ಪರಿವರ್ತನೆಗಳಿಗೆ ಹೊಂದಿಕೊಳ್ಳಲು ರೈತರಿಗೆ ಸಹಾಯ ಮಾಡಲು ಸಾಮರ್ಥ್ಯ ನಿರ್ಮಾಣಕ್ಕೆ ಸರ್ಕಾರವು ಆದ್ಯತೆ ನೀಡಿದೆ.
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ, ಕೃಷಿ ಯಾಂತ್ರೀಕರಣದ ಉಪ-ಮಿಷನ್, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಮೂಲಕ ಕೈಗೊಳ್ಳಲಾದ ಉಪಕ್ರಮಗಳಂತಹ ಕಾರ್ಯಕ್ರಮಗಳು ಸುಸ್ಥಿರ ಕೃಷಿ ಪದ್ಧತಿಗಳಿಗಾಗಿ ರೈತರಿಗೆ ಪ್ರಾಯೋಗಿಕ ಜ್ಞಾನ ಮತ್ತು ವೃತ್ತಿಪರ ಪರಿಣತಿಯನ್ನು ಒದಗಿಸುತ್ತಿವೆ.

ಕೃಷಿ ವಿಜ್ಞಾನ ಕೇಂದ್ರಗಳು: ಈ ಐಸಿಎಆರ್‌ನಿಂದ ನಿರ್ವಹಿಸಲ್ಪಡುವ ಕೇಂದ್ರಗಳು ರೈತರ ತರಬೇತಿಯ ಮುಂಚೂಣಿ ಘಟಕಗಳಾಗಿವೆ. 2021-22 ಮತ್ತು 2023-24 ರ ನಡುವೆ, ಕೆವಿಎಸ್‌ಗಳು ಒಟ್ಟು 58.02 ಲಕ್ಷ ರೈತರಿಗೆ ತರಬೇತಿ ನೀಡಿದ್ದು, ಪ್ರತಿ ವರ್ಷವೂ ಸಂಖ್ಯೆ ಸ್ಥಿರವಾಗಿ ಏರಿಕೆಯಾಗುತ್ತಿದೆ. 2024-25 ರ ಮೊದಲ ಹತ್ತು ತಿಂಗಳುಗಳಲ್ಲಿ, ಈಗಾಗಲೇ ಹೆಚ್ಚುವರಿಯಾಗಿ 18.56 ಲಕ್ಷ ರೈತರಿಗೆ ತರಬೇತಿ ನೀಡಲಾಗಿದೆ. ಕೆವಿಎಸ್ ಕೋರ್ಸ್‌ಗಳು ಸುಧಾರಿತ ಸಸ್ಯಾಧ್ಯಯನ, ಜಾನುವಾರು ಆರೈಕೆ, ಮಣ್ಣಿನ ಆರೋಗ್ಯ, ಫಸಲಿನ ನಂತರದ ತಂತ್ರಜ್ಞಾನ (ಪೋಸ್ಟ್-ಹಾರ್ವೆಸ್ಟ್ ಟೆಕ್) ಇತ್ಯಾದಿಗಳನ್ನು ಒಳಗೊಂಡಿದ್ದು, ಇವುಗಳನ್ನು ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.
ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ವಿಸ್ತರಣಾ ಸುಧಾರಣಾ ಯೋಜನೆ): ಆತ್ಮ ಯೋಜನೆಯು ವಿಕೇಂದ್ರೀಕೃತ ಕೃಷಿ ವಿಸ್ತರಣೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಉಪಕ್ರಮಗಳ ಅಡಿಯಲ್ಲಿ, 2021-22 ರಲ್ಲಿ 32.38 ಲಕ್ಷ ರೈತರಿಗೆ, ನಂತರ 2022-23 ರಲ್ಲಿ 40.11 ಲಕ್ಷ ಮತ್ತು 2023-24 ರಲ್ಲಿ 36.60 ಲಕ್ಷ ರೈತರಿಗೆ ತರಬೇತಿ ನೀಡಲಾಯಿತು. ಜನವರಿ 2025 ರ ಹೊತ್ತಿಗೆ, ಸುಮಾರು 18.30 ಲಕ್ಷ ರೈತರಿಗೆ ತರಬೇತಿ ನೀಡಲಾಗಿದೆ. ಒಟ್ಟಾರೆಯಾಗಿ, 2021-25ರ ಅವಧಿಯಲ್ಲಿ ಆತ್ಮ ಮೂಲಕ ಸುಮಾರು 1.27 ಕೋಟಿ ರೈತರಿಗೆ ತರಬೇತಿ ನೀಡಲಾಗಿದೆ.
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ: ಸ್ಟ್ರೈ ಕೃಷಿ/ಸಂಬಂಧಿತ ವಹಿವಾಟುಗಳಲ್ಲಿ (ತೋಟಗಾರಿಕೆ, ಡೈರಿ, ಮೀನುಗಾರಿಕೆ ಇತ್ಯಾದಿ) ಅಲ್ಪಾವಧಿಯ ವೃತ್ತಿಪರ ಕೋರ್ಸ್‌ಗಳನ್ನು (ಸುಮಾರು ಏಳು ದಿನಗಳು) ಒದಗಿಸುತ್ತದೆ. ಇದು 2021-22 ರಲ್ಲಿ 10,456 ಗ್ರಾಮೀಣ ಯುವಕರಿಗೆ, 2022-23 ರಲ್ಲಿ 11,634 ಮತ್ತು 2023-24 ರಲ್ಲಿ 20,940 ಯುವಕರಿಗೆ ತರಬೇತಿ ನೀಡಿದೆ. ಡಿಸೆಂಬರ್ 2024 ರ ಹೊತ್ತಿಗೆ, 2021 ರಿಂದ 51,000 ಕ್ಕೂ ಹೆಚ್ಚು ಗ್ರಾಮೀಣ ಯುವಕರಿಗೆ ತರಬೇತಿ ನೀಡಲಾಗಿದೆ. ಸ್ವಯಂ ಉದ್ಯೋಗವನ್ನು ಹೆಚ್ಚಿಸುವುದು ಮತ್ತು ಹಳ್ಳಿಗಳಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.
ಕೃಷಿ ಯಾಂತ್ರೀಕರಣ: ಕೃಷಿ ಯಾಂತ್ರೀಕರಣದ ಉಪ-ಮಿಷನ್ ಕೃಷಿ ಯಂತ್ರೋಪಕರಣಗಳ ಬಳಕೆಯ ಕುರಿತು ತರಬೇತಿಯನ್ನು ನೀಡುತ್ತದೆ. 2021-25ರ ಅವಧಿಯಲ್ಲಿ, ಎಸ್‌ಎಂಎಎಂ ಪ್ರಾತ್ಯಕ್ಷಿಕೆಗಳು ಮತ್ತು ಬಾಡಿಗೆ ಆಧಾರದ ವ್ಯವಸ್ಥೆಯ ಕುರಿತು ಅರಿವಿನ ಮೂಲಕ 57,139 ರೈತರಿಗೆ ಯಾಂತ್ರೀಕರಣದಲ್ಲಿ ನೇರವಾಗಿ ತರಬೇತಿ ನೀಡಿದೆ.
ಮಣ್ಣಿನ ಆರೋಗ್ಯ ಚೀಟಿ ಯೋಜನೆ: ಈ ಕಾರ್ಯಕ್ರಮವು ಮಣ್ಣಿನ ಆರೋಗ್ಯ ಚೀಟಿಗಳನ್ನು ವಿತರಿಸುತ್ತದೆ ಮತ್ತು ಸಮತೋಲಿತ ಗೊಬ್ಬರಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡುತ್ತದೆ. ಜುಲೈ 2025 ರ ಹೊತ್ತಿಗೆ, ದೇಶಾದ್ಯಂತ 25.17 ಕೋಟಿಗೂ ಹೆಚ್ಚು ಚೀಟಿಗಳನ್ನು ವಿತರಿಸಲಾಗಿದೆ. ಸಮಾನಾಂತರ ಪ್ರಯತ್ನಗಳಲ್ಲಿ, ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ಕಲಿಸಲು 93,000 ಕ್ಕೂ ಹೆಚ್ಚು ಮಣ್ಣಿನ-ಆರೋಗ್ಯ ತರಬೇತಿಗಳು ಮತ್ತು 6.8 ಲಕ್ಷ ಹೊಲದಲ್ಲಿನ ಪ್ರಯೋಗ ಪ್ರದರ್ಶನಗಳನ್ನು ಸಹ ಆಯೋಜಿಸಲಾಗಿದೆ.
ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಓಗಳು): ಮಾರುಕಟ್ಟೆ-ಆಧಾರಿತ ಸಾಮರ್ಥ್ಯವನ್ನು ನಿರ್ಮಿಸಲು, ಸರ್ಕಾರವು 10,000 ಕ್ಕೂ ಹೆಚ್ಚು ಎಫ್‌ಪಿಓಗಳನ್ನು ನೋಂದಾಯಿಸಿದೆ. ಡಿಜಿಟಲ್ ಸಾಧನಗಳು ಮತ್ತು ಅಂತರಜಾಲ ಸಭೆಗಳ (ವೆಬ್‌ನಾರ್‌ಗಳು) ಮೂಲಕ, ಎಫ್‌ಪಿಓಗಳಲ್ಲಿನ ರೈತರು ಕೃಷಿ-ವ್ಯವಹಾರ ನಿರ್ವಹಣೆ, ಮೌಲ್ಯ ಸರಪಳಿಗಳು ಮತ್ತು ಮಾರುಕಟ್ಟೆ ಕುರಿತು ತರಬೇತಿ ಪಡೆಯುತ್ತಾರೆ. (ಸಣ್ಣ ಹಿಡುವಳಿದಾರರನ್ನು ಒಗ್ಗೂಡಿಸುವುದರ ಮೂಲಕ, ಎಫ್‌ಪಿಓಗಳು ಗ್ರಾಮೀಣ ಪ್ರದೇಶಗಳಲ್ಲಿ ನಿರ್ದಿಷ್ಟ ಕೌಶಲ್ಯ ಮತ್ತು ವಿಸ್ತರಣೆಯನ್ನು ತಲುಪಿಸಲು ಸಹಾಯ ಮಾಡುತ್ತವೆ).
ಉಪಸಂಹಾರ
ಭಾರತದ ಕೃಷಿ ಶಿಕ್ಷಣ ಮತ್ತು ತರಬೇತಿ ವ್ಯವಸ್ಥೆಯು ಇಂದು ಶಿಕ್ಷಣ, ಸಂಶೋಧನೆ, ತಂತ್ರಜ್ಞಾನ ಮತ್ತು ಕ್ಷೇತ್ರ ಮಟ್ಟದ ಕೌಶಲ್ಯ ಅಭಿವೃದ್ಧಿಯನ್ನು ಸಂಪರ್ಕಿಸುವ ಒಂದುಗೂಡಿದ ವಿಧಾನವನ್ನು ಪ್ರತಿಬಿಂಬಿಸುತ್ತದೆ.
"ಒಂದು ರಾಷ್ಟ್ರ – ಒಂದು ಕೃಷಿ – ಒಂದು ತಂಡ" ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಐಸಿಎಆರ್, ಕೇಂದ್ರೀಯ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಮತ್ತು ಕೃಷಿ ವಿಜ್ಞಾನ ಕೇಂದ್ರಗಳಂತಹ ಸಂಸ್ಥೆಗಳು ಕೃಷಿಯನ್ನು ಹೆಚ್ಚು ಉತ್ಪಾದಕ, ಸುಸ್ಥಿರ ಮತ್ತು ಜ್ಞಾನ-ಆಧಾರಿತವನ್ನಾಗಿ ಮಾಡಲು ಬಲವಾದ ಅಡಿಪಾಯವನ್ನು ಸೃಷ್ಟಿಸಿವೆ. ಗುಣಮಟ್ಟದ ಶಿಕ್ಷಣ, ಮಾನ್ಯತಾ ಸುಧಾರಣೆಗಳು ಮತ್ತು ರೈತ-ಕೇಂದ್ರಿತ ತರಬೇತಿಯ ಮೇಲೆ ನಿರಂತರ ಒತ್ತು ನೀಡುವುದು ವೈಜ್ಞಾನಿಕ ಸಂಶೋಧನೆ ಮತ್ತು ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ.
ವಸ್ತುಗಳ ಅಂತರ್ಜಾಲ ಐಒಟಿ, ಕೃತಕ ಬುದ್ಧಿಮತ್ತೆ ಎಐ, ಮತ್ತು ಸೂಕ್ಷ್ಮ ಕೃಷಿ ಸಾಧನಗಳಂತಹ ತಂತ್ರಜ್ಞಾನಗಳ ಸೇರ್ಪಡೆಯು ಆಧುನಿಕ ಮತ್ತು ದತ್ತಾಂಶ-ಆಧಾರಿತ ಕೃಷಿಯತ್ತ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಆತ್ಮ, ಸ್ಟ್ರೈ, ಮತ್ತು ಎಸ್‌ಎಂಎಎಂ ನಂತಹ ಉಪಕ್ರಮಗಳ ಮೂಲಕ, ರೈತರು ಮತ್ತು ಗ್ರಾಮೀಣ ಯುವಕರು ಅಗತ್ಯ ತಾಂತ್ರಿಕ ಮತ್ತು ಉದ್ಯಮಶೀಲ ಕೌಶಲ್ಯಗಳನ್ನು ಪಡೆದುಕೊಳ್ಳುತ್ತಿದ್ದು, ಹಳ್ಳಿಗಳಲ್ಲಿ ಉದ್ಯೋಗ ಮತ್ತು ಸ್ವಾವಲಂಬನೆಯನ್ನು ಪೋಷಿಸುತ್ತಿದ್ದಾರೆ. ಒಟ್ಟಾಗಿ, ಈ ಪ್ರಯತ್ನಗಳು ಹೆಚ್ಚಿನ ಉತ್ಪಾದಕತೆ, ಉತ್ತಮ ಆದಾಯ ಮತ್ತು ಸಂಪನ್ಮೂಲಗಳ ಸುಸ್ಥಿರ ಬಳಕೆಗೆ ಕೊಡುಗೆ ನೀಡುತ್ತಿವೆ. ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಸ್ಥಿತಿಸ್ಥಾಪಕ ಗ್ರಾಮೀಣ ಆರ್ಥಿಕತೆಯನ್ನು ಗುರಿಯಾಗಿರಿಸಿಕೊಂಡಿರುವಾಗ, ಶಿಕ್ಷಣ, ನಾವೀನ್ಯತೆ ಮತ್ತು ಕೌಶಲ್ಯಗಳ ನಡುವಿನ ಈ ಸಮನ್ವಯತೆ ಬಲಪಡಿಸುವುದು ರಾಷ್ಟ್ರದ ಕೃಷಿ ಪ್ರಗತಿಯ ಕೇಂದ್ರಬಿಂದುವಾಗಿ ಉಳಿಯಲಿದೆ.
References:
PIB:
ICAR:
CAU
Click here to see pdf
*****
(Factsheet ID: 150453)
Visitor Counter : 8
Provide suggestions / comments